ಅರ್ಹ ಫಲಾನುಭವಿಗೆ ತಲುಪಿದಾಗಷ್ಟೇ ಕಾರ್ಯಕ್ರಮ ಸಾರ್ಥಕ
ಕ.ಪ್ರ.ವಾರ್ತೆ , ರಾಮನಗರ , ಡಿ. 9
ಸರ್ಕಾರಿ ಕಾರ್ಯಕ್ರಮಗಳು ಅರ್ಹ ಫಲಾನುಭವಿಗಳನ್ನು ತಲುಪಿದಾಗಷ್ಟೇ ಸಾರ್ಥಕವಾಗುತ್ತವೆ. ಇಲ್ಲವಾದರೆ ಅವು ವಿಫಲವಾದಂತೆಯೇ ಎಂದು ಕೇಂದ್ರ ಸಮಾಚಾರ ಮತ್ತು ಪ್ರಸಾರ ಸಚಿವಾಲಯದ ಮೈಸೂರು ವಿಭಾಗದ ಕ್ಷೇತ್ರ ಪ್ರಚಾರ ಅಧಿಕಾರಿ ಎನ್.ಡಿ.ಪ್ರಸಾದ್ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಕೇಂದ್ರ ಸರ್ಕಾರದ ವಾರ್ತಾ ಶಾಖೆ, ಕೇಂದ್ರ ಸಮಾಚಾರ ಮತ್ತು ಪ್ರಸಾರ ಸಚಿವಾಲಯದ ಅನ್ಯ ಮಾಧ್ಯಮ ಘಟಕಗಳು, ರಾಮನಗರ ಜಿಲ್ಲಾಡಳಿತ, ಜಿ.ಪಂ.ನಿಂದ ನಡೆದ 3 ದಿನಗಳ ಭಾರತ ನಿರ್ಮಾಣ ಸಾರ್ವಜನಿಕ ಮಾಹಿತಿ ಆಂದೋಲನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಕೇಂದ್ರ ಸರ್ಕಾರವು ಮೂಲ ಸೌಲಭ್ಯ ವಂಚಿತ ಗ್ರಾಮೀಣರಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿದೆ. ಈ ಮಾಹಿತಿ ಆಂದೋಲನದ ಮೂಲಕ ಜನಸಾಮಾನ್ಯರ ಮನೆ ಬಾಗಿಲಿಗೆ ಸೇವೆ ಒದಗಿಸುವ ಮತ್ತು ಮಾಹಿತಿ ನೀಡುವ ಉದ್ದೇಶವನ್ನು ಹೊಂದಲಾಗಿದೆ. ಇದನ್ನು ಜನರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಹಸಿದ ಹೊಟ್ಟೆಗೆ ಅನ್ನ: ಕಡುಬಡವರ ಹಸಿವನ್ನು ನೀಗಿಸಲು ಕೇಂದ್ರ ಸರ್ಕಾರ ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೆ ತಂದಿದೆ. ಹಸಿದ ಹೊಟ್ಟೆಗೆ ಅನ್ನ ನೀಡುವುದೇ ಈ ಯೋಜನೆಯ ಪ್ರಮುಖ ಗುರಿ. ಈ ಯೋಜನೆಯಡಿ ಕೇಂದ್ರದ ಅನುದಾನವನ್ನು ಬಳಸಿಕೊಂಡು, ಅರ್ಹ ಫಲಾನುಭವಿಗಳಿಗೆ ಸವಲತ್ತು ನೀಡಲಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ವ್ಯವಸ್ಥಾಪಕ ವೇಣುಗೋಪಾಲ್ ಹೇಳಿದರು.
ಮನೆ ಮನೆಗೆ ಭೇಟಿ ನೀಡಿ ಬಡ ಕುಟುಂಬಗಳನ್ನು ಗುರುತಿಸಿ, ಕಾನೂನು ಪ್ರಕಾರವಾಗಿಯೇ ಬಿಪಿಎಲ್ ಕಾರ್ಡ್ ಹಂಚಿಕೆ ಮಾಡಲಾಗುತ್ತಿದೆ. ಈ ಯೋಜನೆಯಲ್ಲಿ ನೇರ ನಗದು ವರ್ಗಾವಣೆಯ ಮೂಲಕ ಮಧ್ಯವರ್ತಿಗಳ ತೊಂದರೆಯನ್ನು ತಪ್ಪಿಸಲು ಸರ್ಕಾರ ನಿರ್ಧರಿಸಿದೆ. ಇದು ಮಹತ್ತರ ನಿರ್ಣಯ ಎಂದು ಅವರು ಬಣ್ಣಿಸಿದರು.
2019ರವರೆಗೆ ಮುಂದುವರಿಕೆ: ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ 2005ರಲ್ಲಿ ಕಾರ್ಯರೂಪಕ್ಕೆ ಬಂದಿದ್ದು, 2019 ರವರೆಗೂ ಮುಂದುವರೆಲಿದೆ. ತಾಯಿ ಹಾಗೂ ಶಿಶು ಮರಣ ಪ್ರಮಾಣವನ್ನು ಕಡಿಮೆಗೊಳಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ರಾಮನಗರದ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎನ್.ರಘುನಾಥ್ ತಿಳಿಸಿದರು.
ಪ್ರಸ್ತುತ ಒಂದು ಲಕ್ಷಕ್ಕೆ 220 ತಾಯಂದಿರು ಪ್ರಸವ ಸಮಯದಲ್ಲಿ ಸಾವನ್ನಪ್ಪುತ್ತಿದ್ದಾರೆ. ಇದನ್ನು 150ಕ್ಕೆ ಇಳಿಸಲು ಹಾಗೂ ಶಿಶು ಮರಣ ಪ್ರಮಾಣವನ್ನು ಈಗ ಇರುವ ರಾಷ್ಟ್ರೀಯ ಸರಾಸರಿ 48 ರಿಂದ ಸಾಧ್ಯವಾದಷ್ಟು ಕಡಿಮೆಗೊಳಿಸುವುದು ಯೋಜನೆಯ ಪ್ರಮುಖ ಉದ್ದೇಶ. ರಾಜ್ಯದಲ್ಲಿ ಶಿಶು ಮರಣ ಪ್ರಮಾಣ ಪ್ರಸ್ತುತ 30 ಮಾತ್ರ ಇದ್ದು, 1985ರಲ್ಲಿ 120ರಷ್ಟಿತ್ತು ಎಂದು ವಿವರಿಸಿದರು. ಜನನಿ ಸುರಕ್ಷಾ, ಮಡಿಲು, ಪ್ರಸೂತಿ ಆರೈಕೆ, ತಾಯಿ ಭಾಗ್ಯ ಪ್ಲಸ್, ಜನನಿ ಶಿಶು ಸುರಕ್ಷಾ, ಆಶಾ ಕಾರ್ಯಕರ್ತೆ, ಪಿಪಿಟಿಸಿಟಿ, ಸುವರ್ಣ ಆರೋಗ್ಯ ಚೈತನ್ಯ, ಪರಿಷ್ಕೃತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ, ಆರೋಗ್ಯ ಕವಚ -108, ಹದಿಹರೆಯದವರ ಸಂತಾನೋತ್ಪತ್ತಿ ಹಾಗೂ ಲೈಂಗಿಕ ಆರೋಗ್ಯ ಕಾರ್ಯಕ್ರಮ ಯೋಜನೆಗಳು ಬಡ ಕುಟುಂಬದವರಿಗೆ ಸಹಕಾರಿಯಾಗಿವೆ ಎಂದು ಹೇಳಿದರು.
ಭೂ ಮಾಲೀಕತ್ವ ರಕ್ಷಣೆ : ಭೂಸ್ವಾಧೀನ ಕಾಯ್ದೆ, ಸಕಾಲ, ಸಾಮಾಜಿಕ ಭದ್ರತೆ, ಮತದಾರರ ಗುರುತಿನ ಚೀಟಿ ಹಾಗೂ ಆಧಾರ್ ಕುರಿತು ಮಾತನಾಡಿದ ವಿಶೇಷ ಭೂಸ್ವಾಧೀನಾಧಿಕಾರಿ ಜಯಮಾದವ್, ಭೂ ಮಾಲೀಕರಿಗೆ ಅವರ ಮಾಲೀಕತ್ವವನ್ನು ರಕ್ಷಿಸಲು ಸೂಕ್ತ ಪರಿಹಾರವನ್ನು ಕಾನೂನು ಸಮ್ಮತವಾಗಿ ನೀಡುವುದೇ ಭೂ ಸ್ವಾಧೀನ ಕಾಯ್ದೆಯ ಮುಖ್ಯ ಉದ್ದೇಶವಾಗಿದೆ. ಇದರಿಂದ ಯಾವುದೇ ಭೂ ಮಾಲೀಕರು ಸಂತ್ರಸ್ತರಾಗುವುದು ತಪ್ಪಲಿದೆ ಎಂದರು.
ರಾಜ್ಯ ಸರ್ಕಾರದ 42 ಇಲಾಖೆ ಹಾಗೂ 419 ಸೇವೆಗಳು ಸಕಾಲ ಯೋಜನೆಯಡಿ ಸೇರಿವೆ. ಸಕಾಲ ಕಾಯ್ದೆಯಲ್ಲಿ ಪ್ರತಿಯೊಂದು ಕೆಲಸವನ್ನು ಯಾವುದೇ ಅರ್ಜಿ ಸ್ವೀಕರಿಸಿದ ನಿಗದಿತ ಅವಧಿಯಲ್ಲಿ ಮಾಡಿಕೊಡಲಾಗುತ್ತದೆ. ಇದರಿಂದ ಸರ್ಕಾರಿ ಸೇವೆಯಲ್ಲಿ ಲಂಚ ಪ್ರಕರಣಗಳು, ಸಾರ್ವಜನಿಕರಿಗೆ ಅನಗತ್ಯ ಕಿರುಕುಳಕ್ಕೆ ಆಸ್ಪದ ಇಲ್ಲದಂತಾಗಲಿದೆ ಎಂದು ತಿಳಿಸಿದರು.
ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮಗಳನ್ನು ಕುರಿತು ಪ್ರೊ.ಮಾಳಿಗೆಗೌಡ, ಮೂರ್ಚೆ ರೋಗದ ಬಗ್ಗೆ ವೈದ್ಯ ಡಾ.ದಾಮೋದರ್ ಮಾತನಾಡಿದರು. ಕೇಂದ್ರ ವಾರ್ತಾ ಶಾಖೆಯ ಹೆಚ್ಚುವರಿ ಮಹಾ ನಿರ್ದೇಶಕ ಎಸ್. ವೆಂಕಟೇಶ್ವರ್, ಕ್ಷೇತ್ರ ಪ್ರಚಾರಾಧಿಕಾರಿ ಜಿ. ತುಕಾರಾಂ ಗೌಡ, ಪಿಐಬಿ ಅಧಿಕಾರಿ ಶ್ರೀನಿವಾಸ್ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

