ಜಿಲ್ಲೆಗೆ ಜವಾಹರ್ ನವೋದಯ ವಿದ್ಯಾಲಯ ಭಾಗ್ಯವಿಲ್ಲ
ಕ.ಪ್ರ.ವಾರ್ತೆ , ರಾಮನಗರ , 9
ಪ್ರತಿಭಾವಂತ ಮಕ್ಕಳಿಗಾಗಿ ಪ್ರತಿ ಜಿಲ್ಲೆಯಲ್ಲೂ ಕೇಂದ್ರ ಪಠ್ಯಕ್ರಮದ ವಸತಿ ಶಿಕ್ಷಣ ಸೌಲಭ್ಯವುಳ್ಳ ಜವಾಹರ್ ನವೋದಯ ವಿದ್ಯಾಲಯವಿದೆ. ಆದರೆ, ಜಿಲ್ಲೆಯಾಗಿ ಏಳು ವರ್ಷ ತುಂಬಿದ್ದರೂ ರಾಮನಗರದ ಪಾಲಿಗೆ ಆ ಶಾಲೆ ಸ್ಥಾಪನೆ ಭಾಗ್ಯ ಕೂಡಿ ಬಂದಿಲ್ಲ.
ರಾಮನಗರದ ಜತೆಯಲ್ಲೇ ಜಿಲ್ಲೆಯಾಗಿ ರಚನೆಗೊಂಡ ನೆರೆಯ ಚಿಕ್ಕಬಳ್ಳಾಪುರದಲ್ಲಿ ಈಗಾಗಲೇ ನವೋದಯ ಶಾಲೆ ತೆರೆಯಲಾಗಿದೆ. ಆದರೆ, ರಾಮನಗರದಲ್ಲಿ ನವೋದಯ ಶಾಲೆ ಸ್ಥಾಪನೆ ಸಂಬಂಧ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಕಾಳಜಿ ಇಲ್ಲದಾಗಿದೆ.
ಜಿಲ್ಲೆಗೊಂದು ಶಾಲೆ: ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ ಜವಾಹರ್ ನವೋದಯ ವಿದ್ಯಾಲಯವನ್ನು ಜಿಲ್ಲೆಗೊಂದರಂತೆ ಮಂಜೂರು ಮಾಡಲು ಅವಕಾಶವಿದೆ. ರಾಜ್ಯದ 27 ಜಿಲ್ಲೆಗಳಲ್ಲಿ ಈ ಶಾಲೆ ನಡೆಯುತ್ತಿದೆ.
ರಾಮನಗದಂತೆಯೇ ಯಾದಗಿರಿ, ಗಂಗಾವತಿ ಜಿಲ್ಲೆಗಳಿಗೂ ನವೋದಯ ಶಾಲೆ ಮಂಜೂರಾಗಿಲ್ಲ. ಪ್ರತಿ ವರ್ಷ 6ನೇ ತರಗತಿಗೆ ತಲಾ 80 ಮಕ್ಕಳನ್ನು ಪ್ರವೇಶ ಪರೀಕ್ಷೆ ಮೂಲಕ ಆಯ್ಕೆ ಮಾಡಿಕೊಂಡು, ಈ ಶಾಲೆಗಳಲ್ಲಿ 12ನೇ ತರಗತಿವರೆಗೂ ಕೇಂದ್ರ ಪಠ್ಯಕ್ರಮದ ಉಚಿತ ಶಿಕ್ಷಣ ನೀಡಲಾಗುತ್ತಿದೆ.
ಪ್ರಸ್ತಾವನೆ ಕಡತ ಕಾಣೆ: ನವೋದಯ ಶಾಲೆ ಪ್ರಾರಂಭಿಸುವ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಆದರೆ, ಜಿಲ್ಲಾಡಳಿತದಿಂದ ಆ ಕಡತ ದೆಹಲಿಯ ಮಾನವ ಸಂಪನ್ಮೂಲ ಇಲಾಖೆಗೆ ತಲುಪಿಯೇ ಇಲ್ಲವೆನ್ನುವುದು ವಿಪರ್ಯಾಸದ ಸಂಗತಿ. ಕಾಣೆಯಾಗಿರುವ ಕಡತಕ್ಕಾಗಿ ಸಿಬ್ಬಂದಿ ಹುಡುಕಿ ತೆಪ್ಪಗಾಗುತ್ತಿದ್ದಾರೆ. ಹೋದದ್ದು ಹೋಯಿತೆಂದು ಹೊಸದೊಂದು ಕಡತ ಸಿದ್ಧಪಡಿಸಿ, ಪ್ರಸ್ತಾವನೆ ಸಲ್ಲಿಸುವ ಗೋಜಿಗೆ ಜಿಲ್ಲಾಡಳಿತ ಮುಂದಾಗಿಲ್ಲ. ಪದೇ ಪದೇ ಆಗುತ್ತಿರುವ ಜಿಲ್ಲಾಧಿಕಾರಿಗಳ ಬದಲಾವಣೆ ಇದಕ್ಕೆ ಕಾರಣವಾಗಿದೆ.
ಜಾಗದ ಸಮಸ್ಯೆ ಇಲ್ಲ: ಚನ್ನಪಟ್ಟಣ ತಾಲೂಕಿನ ಹೊನ್ನಾಯ್ಕನಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಂತೆ ನೂರಾರು ಎಕರೆ ಸರ್ಕಾರಿ ಜಮೀನಿದೆ. ಅದರಲ್ಲಿ ಜವಾಹರ್ ನವೋದಯ ವಿದ್ಯಾಲಯ ಸ್ಥಾಪಿಸುವುದು ಸೂಕ್ತವಾಗಿದೆ. ಸದರಿ ಸ್ಥಳವನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ಪರಿಶೀಲಿಸಿ, ಶಿಫಾರಸು ಮಾಡಿದ್ದರು.
ಆ ಜಾಗವೇ ಸೂಕ್ತವೆನ್ನುವ ಶಿಫಾರಸಿಗೂ ಶಾಲೆ ಮಂಜೂರು ಕೋರಿಕೆ ಪ್ರಸ್ತಾವನೆ ಕಡತ ನಾಪತ್ತೆಗೂ ಸಂಬಂಧವಿದ್ದಂತಿದೆ. ಸದರಿ ಜಾಗವನ್ನು ಭೂ ಮಾಫಿಯಾಕ್ಕೆ ಪರಭಾರೆ ಮಾಡುವ ಅಥವಾ ಅನ್ಯ ಉದ್ದೇಶಕ್ಕೆ ಬಳಸುವ ಇರಾದೆಯಿಂದಲೇ ಅಧಿಕಾರಿಗಳು ಈ ನಾಟಕವಾಡುತ್ತಿರುವ ಶಂಕೆಯಿದೆ.
ಹೆಚ್ಚಿರುವ ಪೈಪೋಟಿ: ಶಾಲೆ ಇರುವೆಡೆ ಪ್ರತಿ ಜಿಲ್ಲೆಯ 80 ಮಕ್ಕಳ ಆಯ್ಕೆಗೆ ಅವಕಾಶವಿದೆ. ರಾಮನಗರ ಜಿಲ್ಲೆಗೆ ಪ್ರತ್ಯೇಕ ಶಾಲೆ ಮಂಜೂರಾಗದ ಕಾರಣ ಇಲ್ಲಿನ ಮಕ್ಕಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿರುವ ಜವಾಹರ್ ನವೋದಯ ಶಾಲೆಗೆ ಪರಿಗಣಿಸಲಾಗುತ್ತಿದೆ.
ಉಭಯ ಜಿಲ್ಲೆಗಳಿಂದ ಲಭ್ಯವಿರುವ ಒಟ್ಟಾರೆ ಸೀಟುಗಳು 80 ಮಾತ್ರವೇ. ರಾಮನಗರ ಜಿಲ್ಲೆಯಲ್ಲಿ ಈ ಶಾಲೆ ಸೌಲಭ್ಯ ಇಲ್ಲದ ಪರಿಣಾಮ ಬೆಂಗಳೂರು ಗ್ರಾಮಾಂತರ ಜಿಲ್ಲೆಗೂ ನಷ್ಟವಾಗಿದೆ. ರಾಮನಗರ ಜಿಲ್ಲೆಯ ಮಕ್ಕಳು ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೀಟುಗಳಿಗೆ ಲಗ್ಗೆ ಹಾಕುತ್ತಿದ್ದಾರೆ.
ತಕ್ಷಣಕ್ಕೆ ಮಂಜೂರಾದರೆ
2014-15ನೇ ಸಾಲಿನಿಂದಲೇ ರಾಮನಗರಕ್ಕೆ ಪ್ರತ್ಯೇಕ ಶಾಲೆ ಮಂಜೂರು ಮಾಡಲು ಯಾವುದೇ ಅಡ್ಡಿಯಿಲ್ಲ. ಶಾಶ್ವತ ವ್ಯವಸ್ಥೆ ಆಗುವವರೆಗೆ ದೊಡ್ಡಬಳ್ಳಾಪುರ ಶಾಲೆಯಲ್ಲೇ ಈ ಜಿಲ್ಲೆ ಶಾಲೆ ಮುಂದುವರೆಸಬಹುದು. ವಂದಾರಗುಪ್ಪೆ ಸಿಲ್ಕ್ಫಾರಂ ಇಲ್ಲವೇ ಜಿಲ್ಲೆಯ ಸೂಕ್ತ ಸ್ಥಳದಲ್ಲಿ ತಾತ್ಕಾಲಿಕ ಸೌಲಭ್ಯ ಕಲ್ಪಿಸಬಹುದು.
ಶಾಲೆಯಿಂದ ಅನುಕೂಲತೆ
ಈ ಜಿಲ್ಲೆಯಲ್ಲೇ ಶಾಲೆ ತೆರೆದರೆ, ಮಕ್ಕಳು ಮತ್ತು ಅವರ ಪೋಷಕರಿಗೂ ಅನುಕೂಲವಾಗಲಿದೆ. ರಾಮನಗರ ಜಿಲ್ಲೆಯ 80 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ದೊರಕುತ್ತದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಗೂ ಪೂರ್ಣ 80 ಸೀಟುಗಳು ಲಭ್ಯವಾದಂತಾಗುತ್ತದೆ.
ಸಚಿವರ ಜತೆ ಚರ್ಚೆ
ರಾಮನಗರ ಜಿಲ್ಲೆಗೆ ಜವಾಹರ್ ನವೋದಯ ವಿದ್ಯಾಲಯ ಮಂಜೂರಾಗಿಲ್ಲ ಎನ್ನುವ ಕೊರಗು ನಿವಾರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು. ಈ ನಿಟ್ಟಿನಲ್ಲಿ ಕೇಂದ್ರ ಮಾನವ ಸಂಪನ್ಮೂಲ ಸಚಿವರನ್ನು ಶೀಘ್ರ ಭೇಟಿಯಾಗಿ ಮಾತುಕತೆ ನಡೆಸಲಾಗುವುದು.
- ಡಿ.ಕೆ.ಸುರೇಶ್, ಸಂಸದ.
ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದೇವೆ
ರಾಮನಗರ ಜಿಲ್ಲೆಯಲ್ಲಿ ಜವಾಹರ್ ನವೋದಯ ವಿದ್ಯಾಲಯ ಸ್ಥಾಪಿಸಲು ಚನ್ನಪಟ್ಟಣ ತಾಲೂಕಿನ ಹೊನ್ನಾಯಕನಹಳ್ಳಿ ಬಳಿ ಜಾಗ ಪರಿಶೀಲಿಸಿ, ಈ ಸಂಬಂಧ ಪ್ರಸ್ತಾವನೆ ಕಡತವನ್ನು ಶಿಕ್ಷಣ ಇಲಾಖೆಯಿಂದ ಜಿಲ್ಲಾಡಳಿತಕ್ಕೆ ಸಲ್ಲಿಸಲಾಗಿದೆ.
-ಪ್ರಹ್ಲಾದಗೌಡ, ಡಿಡಿಪಿಐ.
-ಮತ್ತೀಕೆರೆ ಜಯರಾಮ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

