ಬೆಂಗಳೂರು ಗ್ರಾಮಾಂತರ

ಕಚೇರಿ ಕೆಲಸಕ್ಕಾಗಿ ಆಗಮಿಸಿದ ನಾಗರಿಕರ ಪರದಾಟ

Published On :

ಕ.ಪ್ರ.ವಾರ್ತೆ ,  ರಾಮನಗರ ,  ಡಿ.10
ಹಲವು ಅವ್ಯವಹಾರ, ಅಕ್ರಮಗಳಿಂದ ಕುಖ್ಯಾತಿಗೆ ಪಾತ್ರವಾದ ರಾಮನಗರ ನಗರಸಭೆಯು ಜನಸ್ನೇಹಿ ಕೆಲಸದಿಂದ ವಿಮುಖವಾಗಿದೆ. ಇಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮಂಗಳವಾರ ನಡೆದ ಕಾರ್ಯಾಗಾರದ ಪರಿಣಾಮ ತಮ್ಮ ಕೆಲಸ ಕಾರ್ಯಕ್ಕಾಗಿ ಕಚೇರಿಗೆ ಆಗಮಿಸಿದ ನಾಗರಿಕರು ಇಡೀ ದಿನ ಪರದಾಡಿದರು.
ನಗರಸಭೆ ಕಚೇರಿಯ ನೂತನ ಕಟ್ಟಡದಲ್ಲಿರುವ ಸಭಾಂಗಣದಲ್ಲಿ ಪೌರಾಯುಕ್ತ ಯಶವಂತ್ ತಮ್ಮ ಅಧೀನದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತರಬೇತಿ ಕಾರ್ಯಾಗಾರ ನಡೆಸಿದರು. ಪೂರ್ವ ನಿಯೋಜಿತ ಕಾರ್ಯಕ್ರಮ ಇದಾದರೂ ಸಾರ್ವಜನಿಕರಿಗೆ ಯಾವುದೇ ಮಾಹಿತಿ ಇಲ್ಲದ ಕಾರಣ ಕಚೇರಿಗೆ ಬಂದವರು ಕಾದು ಬಸವಳಿಯುವಂತಾಯಿತು.
ಬೆಳಗ್ಗೆ 11ಕ್ಕೆ ಪ್ರಾರಂಭವಾದ ಈ ಕಾರ್ಯಾಗಾರವು ಸಂಜೆ 4 ಆದರೂ ಮುಕ್ತಾಯವಾಗಿರಲಿಲ್ಲ. ಇಡೀ ಕಚೇರಿಯಲ್ಲಿ ಟಪಾಲು ಸ್ವೀಕರಿಸುವ ಗುಮಾಸ್ತರು, ಡಿ ದರ್ಜೆ ನೌಕರರೂ ಸಾರ್ವಜನಿಕರ ಸೇವೆಗೆ ಲಭ್ಯರಿರಲಿಲ್ಲ. ಎಲ್ಲರೂ ಮೀಟಿಂಗ್ ಹೆಸರಿನಲ್ಲಿ ಸಭಾಂಗಣ ಹೊಕ್ಕವರು, ಹೊರಗೆ ಸುಳಿಯಲೇ ಇಲ್ಲವೆನ್ನುವುದು ವಿಶೇಷ.
ಪ್ರಕಟಣೆ ನೀಡಲಿಲ್ಲ: ಅಷ್ಟಕ್ಕೂ ಆ ಕಾರ್ಯಾಗಾರದ ಅಜೆಂಡಾವಾದರೂ ಏನು ಇಡೀ ದಿನ ಅಲ್ಲಿ ನಡೆದಿದ್ದಾದರೂ ಏನು ಎನ್ನುವುದೂ ತಿಳಿಯದಾಗಿತ್ತು. ಸಾಮಾನ್ಯವಾಗಿ ಇಂತಹ ವಿಶೇಷ ಸಂದರ್ಭವಿದ್ದರೆ, ಒಂದು ದಿನ ಮುಂಚಿತವಾಗಿ ಸ್ಥಳೀಯ ಮಾಧ್ಯಮಗಳಲ್ಲಿ ಸಾರ್ವಜನಿಕ ಪ್ರಕಟಣೆ ನೀಡುವುದು ಸೂಕ್ತ. ಆ ಬಗ್ಗೆ ಪೌರಾಯುಕ್ತರು ಕನಿಷ್ಠ ಕಾಳಜಿಯನ್ನೂ ತೋರಿಲ್ಲ.
ಕಡೇ ಪಕ್ಷ ನಗರಸಭೆ ಕಟ್ಟಡದ ಸೂಚನಾ ಫಲಕದಲ್ಲೂ ಕಾರ್ಯಕ್ರಮದ ಪ್ರಯುಕ್ತ ಸಾರ್ವಜನಿಕ ಸೇವೆಗಳು ಲಭ್ಯವಿಲ್ಲ ಎನ್ನುವ ಸೂಚನೆ ನೀಡುವ ಕೆಲಸವೂ ಆಗಿರಲಿಲ್ಲ. ಒಂದೊಮ್ಮೆ ಸೂಚನಾ ಫಲಕದಲ್ಲಾದರೂ ನಮೂದಿಸಿದ್ದರೆ ಸಾರ್ವಜನಿಕರು ತಾಸುಗಟ್ಟಲೆ ಕಾಯುವ ಗೋಜಿಗೆ ಹೋಗುತ್ತಿರಲಿಲ್ಲ.
ಹಿಡಿ ಶಾಪ ಹಾಕಿದರು: ಮರಣ-ಜನನ ಪ್ರಮಾಣ ಪತ್ರ, ಖಾತಾ ಬದಲಾವಣೆ, ಖಾತಾ ಎಕ್ಸ್‌ಟ್ರಾಕ್ಟ್, ಮನೆ, ಅಂಗಡಿ ಪಡೆಯುವುದಕ್ಕೆ ಬಂದ ನೂರಾರು ಜನರು ದಿನವಿಡೀ ನಗರಸಭೆ ಕಚೇರಿಯಲ್ಲಿ ಸಮಯ ವ್ಯರ್ಥ ಮಾಡಿದರು. ಕಡೆಗೆ ಅಧಿಕಾರಿಗಳಿಗೆ ಹಿಡಿ ಶಾಪ ಹಾಕಿ ಬಂದ ದಾರಿಗೆ ಸುಂಕವಿಲ್ಲದಂತೆ ಮನೆ ಕಡೆ ನಡೆದರು.
ಸರ್ಕಾರಿ ಮತ್ತು ಖಾಸಗಿ ಸಿಬ್ಬಂದಿ ಕೆಲಸಕ್ಕೆ ರಜೆ ಹಾಕಿ ತಮ್ಮ ಕೆಲಸಕ್ಕಾಗಿ ಬಂದು, ಬರಿಗೈಲಿ ವಾಪಸ್ಸಾದ  ನಿದರ್ಶನವೂ ಇತ್ತು. ಹೀಗೆ ತಮ್ಮ ಕೆಲಸಕ್ಕಾಗಿ ಕಾದು ಕುಳಿತವರಲ್ಲಿ ಮಕ್ಕಳೊಂದಿಗೆ ಆಗಮಿಸಿದ್ದ ಮಹಿಳೆಯರೂ ಇದ್ದರು. ಕನಿಷ್ಠ ಸೌಜನ್ಯಕ್ಕಾದರೂ ಅವರಿಗೆ ಮಾಹಿತಿ ನೀಡಿ ಕಳುಹಿಸಿಕೊಡುವ ಕೆಲಸವಾಗಲೇ ಇಲ್ಲ.
ಸಕಾಲವೂ ಅಕಾಲ: ನಗರಸಭೆಯಲ್ಲಿ ಕೆಲವೊಂದು ಸೇವೆಗಳಿಗೆ ಸಕಾಲ ಯೋಜನೆಯಡಿ ಅರ್ಜಿ ಸಲ್ಲಿಸಿದ್ದ ನಾಗರಿಕರು ಸ್ವೀಕೃತಿ ಪತ್ರವನ್ನಿಡಿದು ಕಚೇರಿಯ ಹೊರಗೆ ಕಾದು ಕುಳಿತಿದ್ದರು. ಆ ಪೈಕಿ ಕೆಲವರು ತಮ್ಮ ಅರ್ಜಿಗೆ  ಸಕಾಲ ಅವಧಿ ಮುಗಿದು 3-4 ದಿನವಾಗಿದ್ದರೂ ಸೇವೆ ಲಭ್ಯವಾಗಿಲ್ಲ ಎನ್ನುವ ಆರೋಪಗಳ ಸುರಿಮಳೆಗರೆದರು.
ಸಮರ್ಪಕ ಆಸನಗಳಿಲ್ಲ: ನಗರಸಭೆ ಕಚೇರಿ ಆವರಣದಲ್ಲಿ ಸಾರ್ವಜನಿಕರಿಗೆ ಕೂರಲು ಸಮರ್ಪಕವಾಗಿ ಆಸನಗಳಿಲ್ಲ. ಬೆರಳೆಣಿಕ ಮಂದಿಯಷ್ಟೇ ಆಸನಗಳಲ್ಲಿ ಕುಳಿತಿದ್ದರು. ಕೆಲವರು ಮಹಡಿ ಮೆಟ್ಟಿಲು, ಕಚೇರಿ ಹೊರಗಿನ ಮರದ ನೆರಳನ್ನೇ ಆಶ್ರಯಿಸಿದ್ದರು. ಮತ್ತೆ ಕೆಲವರು ಕೆಲ ಹೊತ್ತು ಇದ್ದು, ಹೊರಗೆಲ್ಲೋ ಹೋಗಿ ಮತ್ತೆ ಬರುತ್ತಿದ್ದರು.
ಅರಾಜಕತೆಗೆ ಪೌರ ಸಂಸ್ಥೆ: ರಾಮನಗರ ನಗರಸಭೆಯು ಕುಖ್ಯಾತಿಯ ಜತೆಗೆ ಅರಾಜಕತೆಯಿಂದ ಕೂಡಿದ ಹಣೆಪಟ್ಟಿಯನ್ನೂ ಕಟ್ಟಿಕೊಂಡಿದೆ. ಚುನಾಯಿತ ವ್ಯವಸ್ಥೆ ಇದ್ದಾಗಲೇ ಈ ಸಂಸ್ಥೆಯಲ್ಲಿ ನಾಗರಿಕರ ಹಿತ ಕಡೆಗಣಿಸಲ್ಪಟ್ಟಿತ್ತು.  ಕಳೆದ 9 ತಿಂಗಳಿಂದ ಆಡಳಿತಾಧಿಕಾರಿ ದರ್ಬಾರಿನಲ್ಲಿರುವ ಇಲ್ಲಿ ಅಧಿಕಾರಿಗಳು, ಸಿಬ್ಬಂದಿಯ ಕಾರುಬಾರು ಬಲು ಜೋರಾಗಿದೆ.
ನಿರ್ಮಲ ನಗರ ಯೋಜನೆ ಜಾರಿ ಬಳಿಕವೂ ಈ ನಗರದಲ್ಲಿ ಅನೈರ್ಮಲ್ಯ ತಾಂಡವಾಡುತ್ತಿದೆ. ಎಲ್ಲೆಂದರಲ್ಲಿ ಕಸದ ರಾಶಿಯೇ ಆವರಿಸಿದೆ. ನಗರದ ಕಸವನ್ನು ಗುರ್ತಿಸಲ್ಪಟ್ಟ ಸ್ಥಳದ ಬದಲು ಗಡಿಯಂಚಿನಲ್ಲೇ ವಿಲೇವಾರಿ ಮಾಡಲಾಗುತ್ತಿದೆ. ಖರೀದಿ ಭರಾಟೆ, ಗುತ್ತಿಗೆ ಕಾಮಗಾರಿಗಳ ಹೊರತಾಗಿ ಇಲ್ಲಿ ನಾಗರಿಕ ಸೌಲಭ್ಯಗಳು ಸಮರ್ಪಕವಾಗಿಲ್ಲ.
ರೋಸಿ ಹೋದ ಜನತೆ
ರಾಮನಗರ ನಗರಸಭೆಯಲ್ಲಿ ಅಧಿಕಾರಿಗಳ ದರ್ಪ, ಜನ ವಿರೋಧಿ ಕೆಲಸಗಳಿಂದ ನಾಗರಿಕರು ರೋಸಿ ಹೋಗಿದ್ದಾರೆ. ಹೇಳುವಷ್ಟೆಲ್ಲಾ ನೀತಿಪಾಠ ಹೇಳಿ ಆಗಿದೆ. ಇನ್ನೇನಿದ್ದರೂ ತಕ್ಕಪಾಠ ಕಲಿಸುವ ಕೆಲಸ ಮಾಡಬೇಕಾಗುತ್ತದೆ. ಆಗಾಗ್ಗೆ ಸಭೆ ನಡೆಸಿದ್ದರೆ ಹೀಗೆ ದಿನವಿಡೀ ಸಭೆ ನಡೆಸುವ ಅಗತ್ಯವಿರುತ್ತಿರಲಿಲ್ಲ.
- ಬಿ.ನಾಗೇಶ್, ಸದಸ್ಯ, ರಾಮನಗರ ನಗರಸಭೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.