ಸಮಾಜದಲ್ಲಿ ಸತ್ಯ, ಪ್ರಾಮಾಣಿಕತೆ ಕಣ್ಮರೆ
ಕ.ಪ್ರ.ವಾರ್ತೆ , ರಾಮನಗರ , ಡಿ.10
ಸಮಾಜದಲ್ಲಿ ಸತ್ಯ, ನಿಷ್ಠೆ, ಪ್ರಾಮಾಣಿಕತೆ ದಿನೇ ದಿನೇ ಕಣ್ಮರೆಯಾಗುತ್ತಿದೆ. ಹಣ ಗಳಿಸುವುದನ್ನೇ ಮುಖ್ಯ ಧ್ಯೇಯವನ್ನಾಗಿಸಿಕೊಂಡಿರುವ ಇಂದಿನ ಯುವಜನತೆ ಮಾನವೀಯ ಮೌಲ್ಯಗಳನ್ನು ಕಡೆಗಣಿಸುತ್ತಿದ್ದಾರೆ ಎಂದು ಸಾಹಿತಿ ಡಾ.ಹಿ.ಶಿ.ರಾಮಚಂದ್ರೇಗೌಡ ವಿಷಾದಿಸಿದರು.
ಜಾನಪದ ಲೋಕದಲ್ಲಿ ಯುವ ಸಬಲೀಕರಣ, ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಜಾನಪದ ಪರಿಷತ್ತಿನ ಸಹಯೋಗದಲ್ಲಿ ನಡೆದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಟ್ಟದ ಯುವ ಸಮ್ಮೇಳನ, ಕಾರ್ಯಾಗಾರ ಹಾಗೂ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬದಲಾಗುತ್ತಿರುವ ಜೀವನ ಕ್ರಮಕ್ಕನುಗುಣವಾಗಿ ಶಿಕ್ಷಣ ಕ್ರಮವನ್ನು ಬದಲಾಯಿಸಬೇಕು. ಅದರೆ, ಇಂದಿಗೂ ಹಳೆಯ ಶಿಕ್ಷಣ ಪದ್ಧತಿಯನ್ನೇ ಅನುಸರಿಸಲಾಗುತ್ತಿದೆ. ಹೀಗಾಗಿ ಇಂದಿನ ಪೀಳಿಗೆಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ. ಕೇವಲ ಅಂಕ ಗಳಿಕೆಯ ಶಿಕ್ಷಣ ಕ್ರಮವನ್ನು ಬದಲಿಸಿ, ಬದುಕು ಕಟ್ಟಿಕೊಳ್ಳಲು ಅನುಕೂಲವಾಗುವಂತ ಶಿಕ್ಷಣ ನೀಡಬೇಕು ಎಂದರು.
ಜಾನಪದದಲ್ಲಿ ಸಂಸ್ಕಾರ: ಜಾನಪದ ಕಲೆಗಳಲ್ಲಿ ಕನ್ನಡ ನಾಡಿನ ವಿಶಿಷ್ಟ ಸಂಸ್ಕೃತಿ-ಸಂಸ್ಕಾರಗಳನ್ನು ಕಾಣಬಹುದು. ಇಂತಹ ಅಮೂಲ್ಯ ಕಲೆಗಳನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಸರ್ಕಾರದ ಸಂಕಲ್ಪ ಶಕ್ತಿ, ರಾಜಕಾರಣಿಗಳ ಇಚ್ಛಾಶಕ್ತಿ ಮತ್ತು ಸಾರ್ವಜನಿಕರ ಸಹಕಾರದ ಅವಶ್ಯಕತೆಯಿದೆ ಎಂದು ಉಪನ್ಯಾಸಕ ಭೂಹಳ್ಳಿ ಪುಟ್ಟಸ್ವಾಮಿ ತಿಳಿಸಿದರು.
ಜಾಗತೀಕರಣ, ಖಾಸಗೀಕರಣದತ್ತ ಆಕರ್ಷಿತರಾದ ಯುವಜನತೆ ಜಾನಪದ ಕಲೆಗಳನ್ನು ಕಡೆಗಣಿಸಿದ್ದಾರೆ. ಅಧಿಕಾರಿಗಳು ಇಚ್ಛಾಶಕ್ತಿಯನ್ನು ಪ್ರದರ್ಶಿಸುವ ಜತೆಗೆ ರಾಜಕಾರಣಿಗಳು ಇತ್ತ ಗಮನ ಹರಿಸಿ, ಅಳಿವಿನಂಚಿನಲ್ಲಿರುವ ಜನಪದ ಕಲೆಗಳನ್ನು ಉಳಿಸಿ, ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸ ಮಾಡಬೇಕು ಎಂದರು.
ನಿರಂತರ ಕಾರ್ಯಕ್ರಮ: ಜನಪದ ಕಲೆಗಳ ಸಂರಕ್ಷಣೆ ಸಂವರ್ಧನೆ ಮತ್ತು ಸಂಘಟನೆಗಾಗಿ ಜಾನಪದ ಕಲಾ ಪರಿಷತ್ತು ನಿರಂತರವಾಗಿ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಕ್ರೀಡಾಪಟುಗಳು ಪ್ರತಿ ದಿನ ಅಭ್ಯಾಸ ಮಾಡುವ ರೀತಿಯಲ್ಲಿ ಕಲಾವಿದರೂ ಪ್ರತಿದಿನ ಅಭ್ಯಾಸ ಮಾಡುವುದನ್ನು ಹವ್ಯಾಸವನ್ನಾಗಿ ಮಾಡಿಕೊಂಡು ಗುರಿ ಸಾಧಿಸಬೇಕು ಎಂದು ಜಾನಪದ ಲೋಕದ ಕ್ಯುರೇಟರ್ ಕುರುವ ಬಸವರಾಜು ಕರೆ ನೀಡಿದರು.
ಜಾನಪದ ಲೋಕದಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ಕಲಾ ತಂಡಗಳನ್ನು ರಚಡಿಕೊಂಡು, ಪ್ರದರ್ಶನವನ್ನೇ ವೃತ್ತಿಯನ್ನಾಗಿಸಿಕೊಂಡಲ್ಲಿ ಆರ್ಥಿಕ ಉನ್ನತಿಯ ಜತೆಗೆ ಕಲೆಯನ್ನೂ ಉಳಿಸಲು ಸಾಧ್ಯವಾಗುತ್ತದೆ. ಕರಾವಳಿ ಭಾಗದಲ್ಲಿ ಯಕ್ಷಗಾನ ಕಲಾವಿದರು ಈ ನಿಟ್ಟಿನಲ್ಲಿ ಯಶಸ್ಸು ಕಂಡಿದ್ದಾರೆ ಎಂದರು.
ಬೆಂಗಳೂರು ಗ್ರಾಮಾಂತರ ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಕೆ.ಗೌಡ, ರಾಮನಗರದ ಸಹಾಯಕ ನಿರ್ದೇಶಕಿ ಡಿ.ನವಜ್ಯೋತಿ ಮತ್ತಿತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

