ಬೆಂಗಳೂರು ಗ್ರಾಮಾಂತರ

ನಕಲಿ ದಾಖಲೆ ಸೃಷ್ಟಿಸಿ ಜಾಮೀನು ನೀಡುವ ಜಾಲ

Published On :

ಕ.ಪ್ರ.ವಾರ್ತೆ ರಾಮನಗರ  ಡಿ.10
ನಕಲಿ ದಾಖಲೆಗಳನ್ನು ಸೃಷ್ಟಿಸಿ ಬೆಂಗಳೂರು ಸಹಿತ ನಾನಾ ಕಡೆ ನ್ಯಾಯಾಲಯಗಳಲ್ಲಿ ಆರೋಪಿಗಳಿಗೆ ಜಾಮೀನು ನೀಡುವ ಜಾಲದ ಕಬಂದಬಾಹು ರಾಮನಗರ ಜಿಲ್ಲೆಗೂ ಚಾಚಿದೆ. ವಂಚಕರ ಜಾಲದ ಕೃತ್ಯದಿಂದ ಅಮಾಯಕ ರೈತರು ಕೋರ್ಟ್ ಕಟಕಟೆ ಏರುವಂತಾಗಿದೆ.
ಗೊತ್ತು ಗುರಿ ಇಲ್ಲದ ಖದೀಮರು, ಗಂಭೀರ ಪ್ರಕರಣಗಳಲ್ಲಿ ಸಿಕ್ಕಿಬಿದ್ದವರು, ರಾಜ್ಯದ ಹೊರಗಿನ ಆರೋಪಿಗಳಿಗೆ ಜಾಮೀನು ನೀಡುವುದಕ್ಕೆ ಸಾಮಾನ್ಯವಾಗಿ ಯಾರೂ ಮುಂದೆ ಬರುವುದಿಲ್ಲ. ಅಂತಹವರಿಗೆ ನಕಲಿ ದಾಖಲೆಗಳೊಂದಿಗೆ ಜಾಮೀನು ನೀಡಿ, ಹಣ ಗಳಿಸುವ ದೊಡ್ಡ ಜಾಲವೇ ಇದೆ.   
ಬೆಂಗಳೂರು, ರಾಮನಗರ, ಮಂಡ್ಯ, ತುಮಕೂರು ಸೇರಿದಂತೆ ನಾನಾ ಕಡೆ ನಕಲಿ ದಾಖಲೆಗಳನ್ನು ಬಳಸಿಕೊಂಡು ಜಾಮೀನು ನೀಡುವ ಮೂಲಕ ನ್ಯಾಯದೇವತೆಯ ಕಣ್ಣಿಗೇ ಮಣ್ಣೆರೆಚಿರುವ ವಂಚಕರ ಜಾಲವನ್ನು ಪತ್ತೆ ಹಚ್ಚಿರುವ ಪೊಲೀಸರು ಅಮಾಯಕ ರೈತರಿಗೆ ಎದುರಾಗಿದ್ದ ಆತಂಕ ನಿವಾರಿಸಿದ್ದಾರೆ.
ದೂರು ನೀಡಿದ ರೈತ: ರಾಮನಗರ ತಾಲೂಕಿನ ಆನುಮಾನಹಳ್ಳಿಯ ಕೃಷ್ಣಪ್ಪ ಬಿನ್ ಬೋರೇಗೌಡ ಎಂಬುವರ ಹೆಸರಿನಲ್ಲಿ ಬೆಂಗಳೂರಿನ ವಂಚಕರ ಜಾಲ ನಕಲಿ ಮತದಾರರ ಗುರುತಿನ ಚೀಟಿ ಮಾಡಿಸಿತ್ತು. ಅದರಲ್ಲಿ ಬೆಂಗಳೂರು ವಾಸಿ ಶ್ರೀನಿವಾಸ ಎಂಬಾತನ ಭಾವಚಿತ್ರವನ್ನು ಅಳವಡಿಸಲಾಗಿತ್ತು.
ವಂಚಕರ ಜಾಲದ ರೂವಾರಿ ಕುಮಾರನು ಶ್ರೀನಿವಾಸನನ್ನು ಬಳಸಿಕೊಂಡು ಬೆಂಗಳೂರು ತ್ವರಿತ ನ್ಯಾಯಾಲಯ, ಸಿವಿಲ್ ನ್ಯಾಯಾಲಯ, ಮಂಡ್ಯ, ನಾಗಮಂಗಲ ಮತ್ತಿತರೆ ನ್ಯಾಯಾಲಯ, ವಿವಿಧ ಪೊಲೀಸ್ ಠಾಣೆ ಹಂತದಲ್ಲೂ ಆರೋಪಿಗಳಿಗೆ ಜಾಮೀನು ಕೊಡಿಸಿದ್ದನು.
ವಂಚಕರ ಜಾಲದ ಸಹಾಯದಿಂದ ಜಾಮೀನು ಪಡೆದ ಆರೋಪಿಗಳಲ್ಲಿ ಕೆಲವರು ನ್ಯಾಯಾಲಯಕ್ಕೆ ನಿರಂತರ ಗೈರಾದರು. ಆಗ ಕೋರ್ಟ್ ಅಸಲಿ ರೈತ ಆನುಮಾನಹಳ್ಳಿಯ ಕೃಷ್ಣಪ್ಪ ಅವರಿಗೆ ನೊಟೀಸ್ ಜಾರಿಗೊಳಿಸಿತ್ತು. ಇದರಿಂದ ಆತಂಕಗೊಂಡ ರೈತ ಕೃಷ್ಣಪ್ಪ ಪೊಲೀಸ್ ಮತ್ತು ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು.
ಬೆನ್ನತ್ತಿದ ಪೊಲೀಸರು: ಜಾಮೀನುದಾರನ ವಿಳಾಸ ದೃಢೀಕರಣದಲ್ಲಿರುವ ಫೋಟೋವನ್ನಾಧರಿಸಿ ವಂಚಕರ ಜಾಲದ ಬೆನ್ನು ಹತ್ತಿದ ಬೆಂಗಳೂರಿನ ಕಾಮಾಕ್ಷಿಪಾಳ್ಯದ ಪೊಲೀಸರಿಗೆ ಕಳೆದ ಜುಲೈನಲ್ಲಿ  ಶ್ರೀನಿವಾಸ ಬಿನ್ ವಿಜಿಕುಮಾರ್ ಎಂಬಾತ ಸಿಕ್ಕಿಬಿದ್ದನು. ವಿಚಾರಣೆ ವೇಳೆ ಆತ ಜಾಲದ ವಂಚನೆ ಬಿಚ್ಚಿಟ್ಟನು.
ಬೆಂಗಳೂರಿನಲ್ಲಿ ಮರಳು ಲಾರಿ ಅನ್ ಲೋಡ್ ಕೆಲಸದಲ್ಲಿ ತೊಡಗಿದ್ದ ತನಗೆ ಕುಮಾರ ಎಂಬಾತ ಆಮಿಷವೊಡ್ಡಿ, ಈ ಕೃತ್ಯದಲ್ಲಿ ಬಳಸಿಕೊಂಡನು. ಪ್ರತಿ ಪ್ರಕರಣಕ್ಕೆ ನನಗೆ ರು.1 ಸಾವಿರ ನೀಡುತ್ತಿದ್ದ. ಹಣ ಪಡೆದು ಹತ್ತಾರು ಪ್ರಕರಣಗಳಲ್ಲಿ ಕಣಷ್ಣಪ್ಪ ಹೆಸರಿನಲ್ಲಿ ಜಾಮೀನು ನೀಡಿರುವೆ ಎಂದು ಶ್ರೀನಿವಾಸ ಬಾಯಿ ಬಿಟ್ಟಿದ್ದಾನೆ.  
ಶ್ರೀನಿವಾಸನ ಬಂಧನದ ನಂತರ ರೈತ ಕೃಷ್ಣಪ್ಪನ ಆತಂಕ ನಿವಾರಣೆಯಾಗಿದೆ. ಆದರೆ, ಇದೇ ರೀತಿ ಹಲವಾರು ರೈತರಿಗೆ ಕೋರ್ಟ್‌ನಿಂದ ಸಮನ್ಸ್ ಜಾರಿ ಆಗುತ್ತಲೇ ಇವೆ. ಹೀಗಾಗಿ ಇಡೀ ಜಾಲವನ್ನು ಪತ್ತೆ ಹಚ್ಚಿ, ಶಿಕ್ಷೆಗೆ ಗುರಿಪಡಿಸುವ ಕೆಲಸ ಆಗಬೇಕೆನ್ನುವ ಆಗ್ರಹ ರೈತರದ್ದಾಗಿದೆ.
ವಂಚಕರ ಕಾರ್ಯಾಚರಣೆ
ನ್ಯಾಯಾಲಯಗಳಲ್ಲಿ ಆರೋಪಿಗಳಿಗೆ ಜಾಮೀನು ನೀಡುವುದಕ್ಕೆ ಜಾಮೀನುದಾರನು ತನ್ನ ಹೆಸರಿನಲ್ಲಿರುವ ಮತದಾರರ ಗುರುತಿನ ಚೀಟಿಯ ದೃಢೀಕೃತ ಪ್ರತಿ, ಜಮೀನಿನ ಪಹಣಿ (ಆರ್.ಟಿ.ಸಿ.)ಯೊಂದಿಗೆ ಖುದ್ದು ಹಾಜರಾಗಬೇಕು. ಅಲ್ಲಿ ಆರೋಪಿಗಳನ್ನು ಗುರುತಿಸಿ, ತನಗೆ ಪರಿಚಿತರೆಂದು ಪ್ರಮಾಣೀಕರಿಸಬೇಕು.  ದಂಧೆಕೋರರು ಬೆಂಗಳೂರು ಆಸುಪಾಸಿನಲ್ಲಿರುವ ಜಮೀನುಗಳ ಪಹಣಿ ಪಡೆದುಕೊಂಡು, ಅದರ ಮಾಲೀಕನ ಹೆಸರಿನಲ್ಲೇ ನಕಲಿ ಮತದಾರರ ಗುರುತಿನ ಚೀಟಿ ಸಿದ್ಧಪಡಿಸಿಕೊಳ್ಳುತ್ತಾರೆ. ಆ ಗುರುತಿನ  ಚೀಟಿಯಲ್ಲಿ ಜಾಲದ ಸದಸ್ಯನೊಬ್ಬನ ಭಾವಚಿತ್ರವನ್ನು ಅಳವಡಿಸುತ್ತಾರೆ.  ಹೀಗೆ ಸಿದ್ಧವಾದ ನಕಲಿ ದಾಖಲೆಗಳಿಗೆ ಆಯಾ ಕೋರ್ಟ್‌ನಲ್ಲಿ ನೋಟರಿ ದೃಢೀಕರಣ ಮಾಡಿಸಿಕೊಂಡು, ಆರೋಪಿಗಳ ಜಾಮೀನು ಮಂಜೂರು ಕೋರಿಕೆ ಅರ್ಜಿಯೊಂದಿಗೆ ಸಲ್ಲಿಸಲಾಗುತ್ತದೆ. ಇಂತಹ ಬೋಗಸ್ ದಾಖಲೆಗಳ ಸಲ್ಲಿಕೆಯೊಂದಿಗೆ ಸಾಕಷ್ಟು ಆರೋಪಿಗಳಿಗೆ ಜಾಮೀನು ಮಂಜೂರಾಗಿದೆ.
ಗೈರಾದರಷ್ಟೇ ಬಯಲಿಗೆ
ವಂಚಕರ ಜಾಲದ ನೆರವಿನೊಂದಿಗೆ ಜಾಮೀನು ಪಡೆದ ಆರೋಪಿಯು ನ್ಯಾಯಾಲಯದ ವಿಚಾರಣೆಗೆ ಸರಿಯಾಗಿ ಹಾಜರಾದರೆ ನಕಲಿ ದಾಖಲೆಗಳ ಪ್ರಕರಣ ಮುಚ್ಚಿ ಹೋಗುತ್ತದೆ. ಒಂದೊಮ್ಮೆ ಆರೋಪಿ ನಿರಂತರವಾಗಿ ಗೈರಾದಾಗಷ್ಟೇ ಅಸಲಿ ಸಂಗತಿ ಬಯಲಾಗುತ್ತದೆ.   ಸಮನ್ಸ್ ನೀಡಿದ ಪೊಲೀಸರು ಅರ್ಜಿಯಲ್ಲಿರುವ ಜಾಮೀನುದಾರನ ವಿಳಾಸ ಹುಡುಕಿಕೊಂಡು ಬರುತ್ತಾರೆ. ಸಮನ್ಸ್ ಜಾರಿ ಆಗುತ್ತಿದ್ದಂತೆಯೇ ಸಂಬಂಧಿಸಿದ ರೈತನಿಗೆ ದೊಡ್ಡ ಶಾಕ್ ಆಗುತ್ತದೆ. ಸಮನ್ಸ್‌ನಲ್ಲಿ ಗುರುತಿನ ಚೀಟಿ ನಕಲಿ ಆಗಿರುವುದೂ ಸೇರಿದಂತೆ ಯಾವುದೇ ವಿವರ ಇರುವುದಿಲ್ಲ.  ರೈತರು ಇಂತಹ ಪ್ರಕರಣಗಳಲ್ಲಿ ಪೊಲೀಸ್ ಮತ್ತು ಸಂಬಂಧಿಸಿದ ನ್ಯಾಯಾಲಯಕ್ಕೆ ದೂರು ಸಲ್ಲಿಸಿ, ತಾವು  ತಪ್ಪಿತಸ್ಥರಲ್ಲ ಎನ್ನುವುದನ್ನು ರುಜುವಾತುಪಡಿಸಿಕೊಳ್ಳುವುದೊಂದೇ ಮಾರ್ಗ.
ಬೆಂಗಳೂರು ಹಾಗೂ ರಾಮನಗರದ ನ್ಯಾಯಾಲಯಗಳಲ್ಲಿ ನಕಲಿ ದಾಖಲೆಗಳ ವಿಷಯದಲ್ಲಿ ಸಾಕಷ್ಟು ಪ್ರಕರಣ ದಾಖಲಾಗಿವೆ. ಜಾಮೀನಿಗೆ ಒದಗಿಸಲಾದ ಜಮೀನಿನ ಪಹಣಿ ಜತೆಗೆ ಸೇಲ್ ಡೀಡ್, ವಿಭಾಗ ಪತ್ರ, ಮ್ಯುಟೇಷನ್, ಜಾಮೀನುದಾರನ ಇತ್ತೀಚಿನ ಭಾವಚಿತ್ರ ಪರಿಗಣಿಸುವ ಮೂಲಕ ರಾಮನಗರದಲ್ಲಿ ದಂಧೆ ನಿಯಂತ್ರಿಸಲಾಗಿದೆ. ಇದೇ ಮಾದರಿ ಇತರೆಡೆಯೂ ಜಾರಿ ಸೂಕ್ತ.  
- ಆರ್.ವಿ.ದೇವರಾಜು, ವಕೀಲ



-ಮತ್ತೀಕೆರೆ ಜಯರಾಮ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.