ಹಣ ವಸೂಲಿ ಯತ್ನಿಸಿದ ಕರವೇ ಕಾರ್ಯಕರ್ತರು ಪೊಲೀಸ್ ವಶಕ್ಕೆ
ದೇವನಹಳ್ಳಿ: ದೇವನಹಳ್ಳಿ ತಾಲೂಕು ಮುದ್ದನಾಯಕನಹಳ್ಳಿ ಮತ್ತು ತೈಲಗೆರೆ ಗ್ರಾಮಗಳ ಬಳಿ ಮಂಗಳವಾರ ರಾತ್ರಿ ಏಳು ಕಾರುಗಳಲ್ಲಿ ಆಗಮಿಸಿದ್ದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಲಾರಿಗಳಲ್ಲಿ ಜಲ್ಲಿ ಮತ್ತು ಮರಳನ್ನು ಸಾಗಿಸುವ ಚಾಲಕರನ್ನು ಅಡ್ಡಗಟ್ಟಿ ಬೆದರಿಸಿ, ಹಲ್ಲೆ ನಡೆಸಿ ಹಣ ವಸೂಲಿ ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ 22 ಮಂದಿಯನ್ನು ವಿಶ್ವನಾಥಪುರ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಮೂರು ಸ್ವಿಫ್ಟ್, ಒಂದು ಇನೋವ, ಎರಡು ಸ್ಕಾರ್ಪಿಯೋ ಹಾಗೂ ಒಂದು ಎಂಡೋವರ್ ಸೇರಿ ಒಟ್ಟು ಏಳು ಕಾರುಗಳಲ್ಲಿ ಸುಮಾರು 40 ಮಂದಿ ತೈಲಗೆರೆ ಸಮೀಪ ಆಗಮಿಸಿ ಲಾರಿ ಚಾಲಕರನ್ನು ಬೆದರಿಸಿದರು. ಹಣ ನೀಡಲು ನಿರಾಕರಿಸಿದ ಒಂದು ಲಾರಿ ಚಾಲಕನ್ನು ಕೆಳಗೆ ಬಲವಂತವಾಗಿ ಇಳಿಸಿ ತಾವೇ ಲಾರಿಯನ್ನು ತೆಗೆದುಕೊಂಡು ಹೋದರು. ಕೂಡಲೇ ವಿಷಯ ತಿಳಿದ ತೈಲಗೆರೆ ಗ್ರಾಮಸ್ಥರು ರಸ್ತೆಗೆ ಅಡ್ಡವಾಗಿ ಕಲ್ಲುಗಳನ್ನಿಟ್ಟು ಎಲ್ಲ ಕಾರುಗಳನ್ನು ನಿಲ್ಲುವಂತೆ ಮಾಡಿದರು, ಗ್ರಾಮಸ್ಥರ ಮತ್ತು ಕಾರ್ಯಕರ್ತರ ನಡುವೆ ಮಾತಿಗೆ ಮಾತು ಬೆಳೆಯಿತು. ಅಷ್ಟರಲ್ಲಿ ಸುದ್ದಿ ತಿಳಿದ ಪೊಲೀಸ್ ಇನ್ಸ್ಪೆಕ್ಟರ್ ಎಸ್.ಮಹೇಶ್ ಕುಮಾರ್ ಅವರು ವಿಶ್ವನಾಥಪುರ ಪೊಲೀಸರೊಂದಿಗೆ ಆಗಮಿಸಿದಾಗ ಸುಮಾರು 20 ಮಂದಿ ಕಾರ್ಯಕರ್ತರು ಕತ್ತಲಲ್ಲೇ ಪರಾರಿಯಾದರು. ಉಳಿದ 22 ಮಂದಿಯನ್ನು ಹಾಗೂ ಅವರು ತಂದಿದ್ದ ಏಳು ಕಾರುಗಳನ್ನು ಪೊಲೀಸ್ ಠಾಣೆಗೆ ತಂದರು. ಘಟನೆ ನಡೆದ ಸ್ಥಳಕ್ಕೆ ಡಿವೈಎಸ್ಪಿ ಶ್ರೀಧರ್, ಇನ್ಸ್ಪೆಕ್ಟರ್ ಎಸ್. ಮಹೇಶ್ಕುಮಾರ್ ಹಾಗೂ ಎಸೈ ರಾಘವೇಂದ್ರ ಇಂಬ್ರಾಪುರ, ಚನ್ನರಾಯಪಟ್ಟಣ ಎಸೈ ಮಧುಕರ್ ಭೇಟಿ ನೀಡಿದರು.
ದೇವನಹಳ್ಳಿ ತಾಲೂಕು ನೀಲೇರಿ ಗ್ರಾಮದ ಕರವೇ ಜಿಲ್ಲಾಧ್ಯಕ್ಷ ಅಂಬರೀಶಗೌಡ, ಹರೀಶ್, ಭುವನೇಶ್ವರ್, ನಿರೂಪ್ ಗೌಡ, ಸುದೀಪ್, ಸೀತಾರಾಮ್, ಶಿವಕುಮಾರ್, ಪವನ್ಕುಮಾರ್, ನವೀನ್ಕುಮಾರ್, ನಾಗೇಂದ್ರ, ಚಂದ್ರಶೇಖರ್, ಸೂರ್ಯ, ಶ್ರೀಧರಮೂರ್ತಿ, ಸುಮನ್, ಸತೀಶ್, ಕಿಶನ್, ಮುತ್ತುರಾಜ್, ಶ್ರೀಧರ್, ಅಶ್ವಿನ್, ಕಿರಣ್, ಸಂಜಯ್ ಎಂಬ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಿದ್ದಾರೆ.
ಈ ಸಂದರ್ಭದಲ್ಲಿ ದೇವನಹಳ್ಳಿ ತಾಲೂಕು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಉಮೇಶ್ ಮಾತನಾಡಿ ಯಾವುದೇ ಲಾರಿಯವರು ಅಕ್ರಮವಾಗಿ ಸಾಗಣೆ ಮಾಡಿದರೆ ಅದನ್ನು ಕೇಳಲು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಪೊಲೀಸರು ಇರುತ್ತಾರೆ. ಈ ಕರವೇ ಕಾರ್ಯಕರ್ತರು ಹಣ ವಸೂಲಿ ದಂಧೆಗಾಗಿ ಏಕೆ ಕಾನೂನು ಕೈಗೆ ತೆದುಕೊಳ್ಳಬೇಕು. ಬೇಕಾದರೆ ಹಿರಿಯ ಅಧಿಕಾರಿಗಳಿಗೆ ತಿಳಿಸಲಿ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

