ನಮ್ಮೂರಿಗೆ ಮೂಲಸೌಕರ್ಯ ಕೊಡಿ ಸ್ವಾಮೀ...
ಕ.ಪ್ರ.ವಾರ್ತೆ , ದೊಡ್ಡಬಳ್ಳಾಪುರ , ಡಿ.12
ನಮ್ಮೂರಿಗೆ ಮೂಲಸೌಕರ್ಯಗಳನ್ನು ಕೊಡಿ ಸ್ವಾಮೀ, ರಸ್ತೆ ಸರಿಯಿಲ್ಲ. ಚರಂಡಿಗಳಿಲ್ಲ. ಬೀದಿ ದೀಪ ಉರಿಯೋದಿಲ್ಲ. ನಲ್ಲಿಯಲ್ಲಿ ನೀರು ಬರೊಲ್ಲ. ಮನೆಗಳು ಈಗಲೋ ಆಗಲೋ ಬೀಳುವಂತಿವೆ. ಕಾಲೋನಿ ಜನ ಅಂತ ತಿರಸ್ಕಾರ ಮಾಡ್ಬೋಡಿ. ನಾವೂ ಓಟು ಕೊಟ್ಟಿದ್ದೇವೆ. ನಮ್ಮ ಮೊರೆ ಕೇಳಿ...
-ಇದು ದೊಡ್ಡಬಳ್ಳಾಪುರ ತಾಲೂಕು ಮಧುರೆ ಹೋಬಳಿಯ ಹೊನ್ನಾದೇವಿಪುರ ಕಾಲೋನಿಯ ಜನ ಸ್ಥಳೀಯ ಜನಪ್ರತಿನಿಧಿಗಳ ಮುಂದಿಡುತ್ತಿರುವ ದಯನೀಯ ಮೊರೆ.
ಮಧುರೆ ಹೋಬಳಿ ವ್ಯಾಪ್ತಿಯ ಹೊನ್ನಾವರ ಪಂಚಾಯಿತಿಗೆ ಸೇರುವ ಈ ಕಾಲೋನಿಯಲ್ಲಿ ಇರುವುದು ಕೆಲವೇ ಮನೆಗಳು. ಹೊನ್ನಾವರ-ಇಸ್ತೂರು-ಗಂಡರಗೂಳಿಪುರ ಮುಖಾಂತರ ಈ ಕಾಲೋನಿಗೆ ರಸ್ತೆ ಸಂಪರ್ಕವಿದೆ. ಡಾಂಬರು ಹಾಕಿ ಸುಮಾರು 15 ವರ್ಷಗಳೇ ಸಂದಿವೆ. ಅಲ್ಲಿ ಉಳಿದಿರುವುದು ಡಾಂಬರಿನ ಕೆಲ ಅವಶೇಷಗಳಷ್ಟೇ-ರಸ್ತೆಯಲ್ಲ. ಇನ್ನು ಊರಿನ ಜನರ ಸಂಕಷ್ಟ ಕೇಳೋರೇ ಇಲ್ಲ. ಊರಿಗೆ ಬಸ್ಸೂ ಬರಲ್ಲ. ದೊಡ್ಡ ವಾಹನಗಳು ಬರೋಕೆ ರಸ್ತೆನೂ ಇಲ್ಲ. ಒಟ್ಟಾರೆಯಾಗಿ ಜನರ ಸಂಕಷ್ಟ ಕೇಳೋರಿಲ್ಲದಾಗಿದೆ.
ಶಾಸಕರೇ ಇತ್ತ ನೋಡಿ: ನಮ್ಮ ಮೊರೆ ಕೇಳಿ ಶಾಸಕರೇ... ನಮ್ಮೂರಿನತ್ತ ಒಮ್ಮೆಯಾದರೂ ಬನ್ನಿ. ದಲಿತ-ಹರಿಜನ ಕಾಲೋನಿಗಳ ಸ್ಥಿತಿಗತಿ ಹೇಗಿದೆ ನೋಡಿ.
ಕೈಮರದ ರಸ್ತೆಯಿಂದ ಹೊನ್ನಾದೇವಿಪುರ, ಕಾರೇಪುರಕ್ಕೆ ದ್ವಿಚಕ್ರವಾಹನದಲ್ಲೂ ಹೋಗುವ ಪರಿಸ್ಥಿತಿ ಇಲ್ಲ. ಗುಂಡಿಗಳಲ್ಲೇ ರಸ್ತೆ ಇದೆಯೋ ರಸ್ತೆಯೇ ಗುಂಡಿಯೊಳಗಿದೆಯೋ ಗೊತ್ತಾಗೋದಿಲ್ಲ. ಇನ್ನು ಇಲ್ಲಿರೋರೆಲ್ಲ ಕೂಲಿ ಕಾರ್ಮಿಕರು. ಇವರ ಸ್ಥಿತಿಗತಿ ಕೇಳೋರ್ಯಾರು ಎಂಬುದು ಇಲ್ಲಿನ ಜನರ ಪ್ರಶ್ನೆ. ಈ ಕುರಿತು ಕನ್ನಡಪ್ರಭಕ್ಕೆ ಮಾಹಿತಿ ನೀಡಿರುವ ಕಾಲೋನಿಯ ಅಂಬೇಡ್ಕರ್ ಹಿಂದುಳಿದ ವರ್ಗಗಳ ಸಂಘದ ಸತ್ಯನಾರಾಯಣ್, ನಮ್ಮ ಕಾಲೋನಿ ಜನರ ಓಟು ಪಡೆದು ಹೋದ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಸದಸ್ಯರಾದಿ ಶಾಸಕರೂ ಕೂಡ ಒಮ್ಮೆಯಾದರೂ ಇತ್ತ ಸುಳಿದಿಲ್ಲ. ಜನರ ಸಮಸ್ಯೆ ಕೇಳಿಲ್ಲ. ಹತ್ತಾರು ದಲಿತ ಕುಟುಂಬಗಳು ಇಲ್ಲಿ ವಾಸಿಸುತ್ತಿವೆ. ಕಾಲೋನಿಗಳ ಅಭಿವೃದ್ಧಿಗಾಗಿಯೇ ಸರ್ಕಾರದಲ್ಲಿ ಅನೇಕ ಯೋಜನೆಗಳಿರುತ್ತವೆ. ಅದಾವ ಯೋಜನೆಯನ್ನು ನಮ್ಮ ಕಾಲೋನಿಗೆ ಕೊಟ್ಟಿಲ್ಲ. ಇಲ್ಲಿನ ಜನ ಮೂಲಸೌಕರ್ಯಗಳ ಕೊರತೆಯಿಂದ ಕಂಗಾಲಾಗಿದ್ದಾರೆ. ಕನಿಷ್ಠ ಮೂಲಭೂತ ನಾಗರೀಕ ಸೌಲಭ್ಯಗಳನ್ನಾದರೂ ಒದಗಿಸಿಕೊಡುವ ಕೆಲಸವನ್ನು ಮಾಡಬೇಕು.ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಗಮನ ಹರಿಸಬೇಕು. ತಪ್ಪಿದಲ್ಲಿ ಜನ ಹೋರಾಟಕ್ಕಿಳಿಯುವುದು ಅನಿವಾರ್ಯವಾದೀತು ಎಂದು ಎಚ್ಚರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

