ಅವ್ಯವಸ್ಥೆಯ ಆಗರ ದೊಡ್ಡಬಳ್ಳಾಪುರ ಬಸ್ ನಿಲ್ದಾಣ
-ಕೆ.ಆರ್.ರವಿಕಿರಣ್
ಕ.ಪ್ರ.ವಾರ್ತೆ ದೊಡ್ಡಬಳ್ಳಾಪುರ ಡಿ.15
ಅವ್ಯವಸ್ಥೆಯ ಆಗರ ಎಂಬುದಕ್ಕೆ ದೊಡ್ಡಬಳ್ಳಾಪುರ ಬಸ್ನಿಲ್ದಾಣ ಸ್ಪಷ್ಟ ಉದಾಹರಣೆ ಎನ್ನುವಂತಾಗಿದೆ.
ನಗರದ ಹೃದಯ ಭಾಗದಲ್ಲಿರುವ ನಗರಸಭೆ ಬಸ್ ನಿಲ್ದಾಣ (ಕೊಂಗಾಡಿಯಪ್ಪ ಕೇಂದ್ರ ಬಸ್ ನಿಲ್ದಾಣ)ದಲ್ಲಿ ಬಸ್ಸುಗಳೂ ನಿಲ್ಲಲೂ ಸ್ಥಳವಿಲ್ಲದ ಸ್ಥಿತಿ ನಿರ್ಮಾಣವಾಗಿದೆ.
ದಿನನಿತ್ಯ ನಿಲ್ದಾಣಕ್ಕೆ ಬರುವ ಬಸ್ಸುಗಳ ಸಂಖ್ಯೆ ಹೆಚ್ಚುತ್ತಿದೆ. ಮತ್ತೊಂದೆಡೆ ಆಟೋಗಳ ಕೆಲ ಅನಧಿಕೃತ ನಿಲ್ದಾಣಗಳೂ ಈ ಪ್ರದೇಶದಲ್ಲಿ ಟ್ರಾಫಿಕ್ ಸಮಸ್ಯೆ ಸೃಷ್ಟಿಸುತ್ತಿವೆ. ಜನ ಓಡಾಡಲೂ ಸಾಧ್ಯವಾಗದ ಕಿಷ್ಕಿಂದ ಪರಿಸ್ಥಿತಿ ಉಂಟಾಗಿದೆ.
ಫುಟ್ಪಾತ್ ಅತಿಕ್ರಮಣ: ಬಸ್ ನಿಲ್ದಾಣದಲ್ಲಿ ಫುಟ್ಪಾತ್ ಸಂಪೂರ್ಣ ಅತಿಕ್ರಮಣವಾಗಿದೆ. ಬಸ್ ನಿಲ್ಲಿಸುವ ವ್ಯವಸ್ಥೆ ಬದಲಿಸುವ ಪ್ರಜ್ಞಾವಂತಿಕೆ ತೋರಿರುವ ಪೊಲೀಸರು ಅಂಬೇಡ್ಕರ್ ಪುತ್ಥಳಿ ಮುಂಭಾಗದ ಫುಟ್ಪಾತ್ ಅನ್ನು ಸಂಪೂರ್ಣವಾಗಿ ಹಣ್ಣಿನ ಅಂಗಡಿಗಳ ತಾಣವಾಗಿ ಮಾಡಿದ್ದಾರೆ. ಅದೇ ರೀತಿ ಪುರಭವನ ಮಳಿಗೆ ಮುಂಭಾಗದ ಫುಟ್ಪಾತ್ ಕೂಡಾ ಬೀದಿ ಬದಿ ವ್ಯಾಪಾರಿಗಳ ತಾಣವಾಗಿದೆ. ಬಸ್ಸಿಗಾಗಿ ಬರುವ ಸಾವಿರಾರು ಜನ ನಿಲ್ಲಲೂ ಇಲ್ಲಿ ಸ್ಥಳವಿಲ್ಲ. ಇನ್ನು ನಗರಸಭೆ ಬಸ್ ತಂಗುದಾಣ ಕೆಲ ಕುಡುಕರ ಆವಾಸ ಸ್ಥಾನವಾಗಿದೆ. ಇಲ್ಲಿನ ಮಹಿಳೆಯರು ಮಕ್ಕಳು ಸುಳಿಯಲೂ ಸಾಧ್ಯವಾಗದ ಪರಿಸ್ಥಿತಿ ಇದೆ.
ಆಟೋಗಳ ಆಟಾಟೋಪ: ಇಡೀ ಬಸ್ ನಿಲ್ದಾಣವನ್ನು ಆಕ್ರಮಿಸಿಕೊಂಡಿರುವುದು ಆಟೋಗಳು ಎಂದರೆ ತಪ್ಪಲ್ಲ. ವಾಸ್ತವವಾಗಿ ಬಸ್ ನಿಲ್ದಾಣದಿಂದ 200 ಮೀಟರ್ ಹೊರಗೆ ಆಟೋ, ಟೆಂಪೋ ಸೇರಿದಂತೆ ಇತರೆ ಸರಕು ಸಾಗಾಣಿಕೆ ವಾಹನಗಳ ನಿಲ್ದಾಣ ಇರಬೇಕು ಎಂಬುದು ನಿಯಮ. ಆದರೆ ದೊಡ್ಡಬಳ್ಳಾಪುರ ಬಸ್ ನಿಲ್ದಾಣದಲ್ಲಿ ಬರೋಬ್ಬರಿ 6 ಆಟೋ ನಿಲ್ದಾಣಗಳಿವೆ. ನಗರಸಭಾ ವಾಣಿಜ್ಯ ಮಳಿಗೆ ಮುಂಭಾಗ ಸಂಪೂರ್ಣವಾಗಿ ಆಟೋ ನಿಲ್ದಾಣಕ್ಕೆ ಇತ್ತೀಚೆಗೆ ಅವಕಾಶ ಕೊಡಲಾಗಿದೆ. ಮಹಿಳಾ ಸಮಾಜದ ಪಕ್ಕ, 16 ಕಣ್ಣಿನ ಬಾವಿ ಸಮೀಪ ಹಿಂದಿನಿಂದಲೂ ಆಟೋ ನಿಲ್ದಾಣ ಇದೆ. ಅದೂ ಸಾಲದೆಂಬಂತೆ ಹೇಮಾವತಿಪೇಟೆ ಮುಖ್ಯರಸ್ತೆಯಲ್ಲೂ ಆಟೋಗಳೇ ಅವ್ಯಾಹತ. ಎಸ್ಬಿಐ ಮುಂಭಾಗ ಲಗೇಜ್ ಆಟೋಗಳ ಅನಧಿಕೃತ ನಿಲ್ದಾಣ, ಅಲ್ಲದೆ ಸೌಂದರ್ಯ ಮಹಲ್ ವೃತ್ತವೂ ಕೂಡ ಆಟೋ ನಿಲ್ದಾಣವಾಗಿ ಮಾರ್ಪಟ್ಟಿದೆ.
ಆಟೋಗಳ ಕೆಲ ಚಾಲಕರಿಂದ ಇಷ್ಟಾಗಿಯೂ ರಸ್ತೆಯ ಮಧ್ಯದಲ್ಲೇ ವಾಹನಗಳನ್ನು ನಿಲ್ಲಿಸುವ, ಬರುವ-ಹೋಗುವ ಬಸ್ಸುಗಳಿಗೆ ತೊಂದರೆಯಾಗುವ ರೀತಿಯಲ್ಲಿ ವರ್ತಿಸುವ ಕೆಲಸ ನಿರಂತರ ನಡೆಯುತ್ತಿದೆ. ಅಲ್ಲದೆ ಓವರ್ಲೋಡ್ ತುಂಬಿಕೊಂಡು ರಸ್ತೆಯಲ್ಲಿ ಇತರ ವಾಹನಗಳಿಗೂ ತೊಂದರೆಯಾಗುತ್ತಿದೆ. ಇವುಗಳನ್ನು ನಿಯಂತ್ರಿಸಲು ಇಲ್ಲಿನ ಪೊಲೀಸರೂ ತಲೆಕೆಡಿಸಿಕೊಂಡಿಲ್ಲ ಎಂಬುದು ಜನರ ಆರೋಪ.
ದಿನಕ್ಕೆ 600 ಬಸ್: ಈ ಬಸ್ ನಿಲ್ದಾಣದಲ್ಲಿ ದಿನಕ್ಕೆ ಕನಿಷ್ಠ 750 ಬಸ್ಸುಗಳು ಬಂದು ಹೋಗುತ್ತವೆ. 200 ಸರ್ಕಾರಿ ಮತ್ತು 80 ಖಾಸಗಿ ಬಸ್ಸುಗಳು ದಿನನಿತ್ಯ ಐದಾರು ಬಾರಿ ನಿಲ್ದಾಣ ಪ್ರವೇಶಿಸಿ ಹೊರಹೋಗುತ್ತಿವೆ. ತೀರಾ ಕಿಷ್ಕಿಂದವಾಗಿರುವ ಈ ಪ್ರದೇಶದಲ್ಲಿ ಸಮರ್ಪಕ ವ್ಯವಸ್ಥೆ ನಿಯಂತ್ರಿಸಬೇಕಾದರೆ ಕೂಡಲೇ ಪೊಲೀಸರು ಕ್ರಮ ಕೈಗೊಳ್ಳಬೇಕು. ಅನಧಿಕೃತ ಆಟೋ ನಿಲ್ದಾಣಗಳನ್ನು ಎತ್ತಂಗಡಿ ಮಾಡಬೇಕು. ಬಸ್ಸುಗಳು ನಿಲ್ಲುವ ಸ್ಥಳಾವಕಾಶವನ್ನು ಮುಕ್ತವಾಗಿಸಬೇಕು. ಈಗಿರುವ ಬಸ್ನಿಲ್ದಾಣವನ್ನು ಬಿಎಂಟಿಸಿ ಮತ್ತು ಖಾಸಗಿ ಬಸ್ಸುಗಳಿಗೆ ಮಾತ್ರ ಸೀಮಿತಗೊಳಿಸಿ, ಹೊಸ ಬಸ್ ನಿಲ್ದಾಣದಲ್ಲಿ ಕೆಎಸ್ಆರ್ಟಿಸಿ ಬಸ್ಸುಗಳಿಗೆ ಅವಕಾಶ ಕೊಡಬೇಕು.ಬರುವ ಪ್ರಯಾಣಿಕರು ಕುಳಿತುಕೊಳ್ಳಲು ಸಮರ್ಪಕ ಪ್ಲಾಟ್ಫಾರಂ ನಿರ್ಮಾಣ ಮಾಡಬೇಕು ಎಂಬುದು ಜನರ ಆಗ್ರಹ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

