ಬೆಂಗಳೂರು ಗ್ರಾಮಾಂತರ

ಫುಟ್‌ಪಾತ್ ಅಗೆತಕ್ಕೆ ಕೊನೆಯಿಲ್ಲವೇ?

Published On :

ರಾಮನಗರದಲ್ಲಿ ನಗರಸಭೆಯಿಂದ ನಗರದಾದ್ಯಂತ ಹೆದ್ದಾರಿ, ಪ್ರಮುಖ ರಸ್ತೆಗಳಲ್ಲಿ  ಲಕ್ಷಾಂತರ ರು.ವೆಚ್ಚ ಮಾಡಿ ಫುಟ್‌ಪಾತ್ ನಿರ್ಮಾಣವಾಗಿದೆ. ರಸ್ತೆ ಬದಿ ವ್ಯಾಪಾರಿಗಳು, ಅಂಗಡಿ ಮಾಲೀಕರು, ಮನೆ ಮಾಲೀಕರಿಂದ ರಸ್ತೆ ಮತ್ತು ಫುಟ್‌ಪಾತ್ ಅಗೆತ ನಿರಂತರವಾಗಿದೆ.
ಇಷ್ಟು ಮಾತ್ರವಲ್ಲದೆ, ಇದೀಗ ರಾಮನಗರ ನಗರದಲ್ಲಿ ಭಾರತ ಸಂಚಾರ ನಿಗಮ ಮತ್ತು ಖಾಸಗಿ ಟೆಲಿಫೋನ್ ಸಂಸ್ಥೆಯವರು ಕೇಬಲ್ ಅಳವಡಿಕೆಗಾಗಿ ಫುಟ್‌ಪಾತ್ ಅನ್ನು ಬೇಕಾಬಿಟ್ಟಿಯಾಗಿ ಅಗೆದು, ಅದ್ವಾನಗೊಳಿಸುತ್ತಿದ್ದಾರೆ.
ಹೀಗೆ ಫುಟ್‌ಪಾತ್, ರಸ್ತೆ ಅಗೆಯಲು ನಗರಸಭೆಯಿಂದ ಅನುಮತಿ ಕಡ್ಡಾಯವಾಗಿದೆ. ಅಗೆದ ಬಳಿಕ ಸರಿಪಡಿಸುವ ಹೊಣೆಯೂ ಸಂಬಂಧಿಸಿದ ಸಂಸ್ಥೆಯವರದ್ದೇ. ಆದರೆ, ತಮ್ಮ ಕೆಲಸವಾದ ನಂತರ ಸಂಸ್ಥೆಯವರು ನಗರಸಭೆ ಸಿಬ್ಬಂದಿಗೆ ಒಂದಿಷ್ಟು ಲಂಚ ಕೊಟ್ಟು ಕೈತೊಳೆದುಕೊಳ್ಳುವುದು ಮಾಮೂಲಾಗಿದೆ.
ಹೀಗೆ ಅಗೆದ ಫುಟ್‌ಪಾತ್ ಮತ್ತು ರಸ್ತೆಯಲ್ಲಿ ಸಂಚಾರ ವ್ಯವಸ್ಥೆಗೆ ಅಡ್ಡಿಯಾಗುತ್ತಿದೆ. ಕೆಲವೆಡೆ ಗುಂಡಿ ಬಿದ್ದು, ಸಾಕಷ್ಟು ಅನಾಹುತಗಳೂ ಸಂಭವಿಸಿವೆ. ಇನ್ನಾದರೂ ಈ ಅಗೆತದ ವಿರುದ್ಧ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ರಾಮನಗರವನ್ನು ನಿರ್ಮಲ ನಗರವನ್ನಾಗಿಸಬೇಕು.
-ಸೋಮಶೇಖರ್, ರಾಮನಗರ.

ರಸ್ತೆಯಲ್ಲಿ ಮಣ್ಣು ಗುಡ್ಡೆ ತೆರವುಗೊಳಿಸಿ

ರಾಮನಗರದ ಟಿಪ್ಪು ವೃತ್ತದಲ್ಲಿ ಖಾಸಗಿಯವರು ಮಣ್ಣನ್ನು ಮಧ್ಯ ರಸ್ತೆಗೆ ಸುರಿದಿದ್ದಾರೆ. ಈ ಪರಿಣಾಮ ಸದರಿ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಗಾಳಿಯಿಂದ ಧೂಳೆದ್ದು, ಸುತ್ತಮುತ್ತಲಿನವರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ.
ನಗರ ಪರಿಮಿತಿಯಲ್ಲಿ ಹಳೆಯ ಮನೆ ತೆರವು ಮಾಡಿದಾಗ ತ್ಯಾಜ್ಯ ಮತ್ತು ಹೊಸದಾಗಿ ಮನೆ ಕಟ್ಟಲು ತೆಗೆದ ಪಾಯದ ಮಣ್ಣನ್ನು ಹೀಗೆ ಬೇಕಾಬಿಟ್ಟಿಯಾಗಿ ವಿಲೇವಾರಿ ಮಾಡಲಾಗುತ್ತಿದೆ. 23ನೇ ವಾರ್ಡಿನ ಟಿಪ್ಪು ವೃತ್ತದಲ್ಲಿ ಸುರಿದಿರುವುದೂ ಅಂಥದ್ದೇ ಮಣ್ಣು.
ಮಣ್ಣು ಗುಡ್ಡೆಯು ಸಂಚಾರಕ್ಕೆ ಅಡ್‌ಡಿಯಾಗಿ ಕೆಲ ದ್ವಿಚಕ್ರ ಮತ್ತು ಸೈಕಲ್ ಸವಾರರು ನಿಯಂತ್ರಣ ಸಿಗದೆ, ಆಯ ತಪ್ಪಿ ಬಿದ್ದಿರುವುದೂ ಉಂಟು. ತಕ್ಷಣವೇ ನಗರಸಭೆ ಅಧಿಕಾರಿಗಳು ಮಣ್ಣು ಗುಡ್ಡೆ ತೆರವುಗೊಳಿಸಬೇಕು. ನಗರದಾದ್ಯಂತ ಹೀಗೆ ಮಣ್ಣು ವಿಲೇವಾರಿ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು.
-ಚಂದ್ರಶೇಖರ್, ಕೊತ್ತೀಪುರ.

ಬೇಕಾಬಿಟ್ಟಿ ತ್ಯಾಜ್ಯ ವಿಲೇವಾರಿ ತಪ್ಪಿಸಿ

ಚನ್ನಪಟ್ಟಣದ ಕಣ್ವ ಚಾನಲ್ ರಸ್ತೆಯಲ್ಲಿ ಬೇಕಾಬಿಟ್ಟಿ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದು, ಇದರಿಂದಾಗಿ  ಸುತ್ತಮುತ್ತಲ ನಿವಾಸಿಗಳಿಗೆ ಹಾಗೂ ರಸ್ತೆಯಲ್ಲಿ ತಿರುಗಾಡುವ ಪ್ರಯಾಣಿಕರು ಕಿರಿಕಿರಿ ಅನುಭವಿಸುವಂತಾಗಿದೆ. ಚರ್ಚ್ ರಸ್ತೆ, ರಾಜಾ ಕೆಂಪೇಗೌಡ ಬಡಾವಣೆ, ಆವರ್ತಪುರ, ಮಂಜುನಾಥ ಬಡಾವಣೆಯ ಬಹುಪಾಲು ಮನೆಗಳ ತ್ಯಾಜ್ಯವನ್ನು ಈ ಭಾಗದಲ್ಲಿ ಬಿಸಾಡುತ್ತಿದ್ದಾರೆ. ನಗಸಭೆ ಸಿಬ್ಬಂದಿ ಸಕಾಲದಲ್ಲಿ  ಅದನ್ನು ವಿಲೇವಾರಿ ಮಾಡುವ ಗೋಜಿಗೆ ಹೋಗುತ್ತಿಲ್ಲ.  ಹೀಗಾಗಿ ಕಸದ ರಾಶಿಯು ದಿನ ಕಳೆಯುವುದರೊಳಗೆ ಸಾಕಷ್ಟು ಅಗಲಕ್ಕೆ ಆವರಿಸಿಕೊಂಡಿರುತ್ತದೆ. ಈ ಹಿಂದೆ  ಇದೇ ಸ್ಥಳದಲ್ಲಿ ಕಸದ ಕಂಟೇನರ್ ಇರಿಸಿ ವಾರಕ್ಕೊಮ್ಮೆ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿತ್ತು. ಆದರೆ, ಕೆಲ ದಿನಗಳಿಂದ ಕಂಟೇನರ್ ಅನ್ನು ಇರಿಸದಿರುವ ಪರಿಣಾಮ ಜನತೆ ಕಸವನ್ನು ಚಾನಲ್ ಬಳಿಯೇ  ಬಿಸಾಡಿ ಹೋಗುತ್ತಿದ್ದಾರೆ.  ತ್ಯಾಜ್ಯವನ್ನು ಸಕಾಲದಲ್ಲಿ ನಗರಸಭೆ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಕೆಲ ಸ್ಥಳೀಯರು ಕಸದ ರಾಶಿಗೆ ಬೆಂಕಿ ಹಚ್ಚುತ್ತಿದ್ದು, ಇದರಿಂದಾಗಿ ಕಸದೊಳಗಿನ ಪ್ಲಾಸ್ಟಿಕ್ ಸಹಿತ ನಾನಾ ತ್ಯಾಜ್ಯಗಳ ಹೊಗೆಯು ದುರ್ನಾತ ಬೀರುತ್ತಿದೆ. ಸುತ್ತಮುತ್ತಲ ನಿವಾಸಿಗಳು, ಪಾದಚಾರಿಗಳು ಮೂಗುಮಚ್ಚಿಕೊಂಡಿರಬೇಕಾದ ಸ್ಥಿತಿ ಎದುರಾಗಿದೆ. ಇನ್ನಾದರೂ ಅಧಿಕಾರಿಗಳು ಇತ್ತ ಗಮನಿಸಬೇಕು.
-ಸಂಜಯ್, ಚನ್ನಪಟ್ಟಣ.

ಶೌಚಾಲಯದಲ್ಲಿ ನೈರ್ಮಲ್ಯದ ಕೊರತೆ

ಮಾಗಡಿ ತಾಲೂಕಿನಲ್ಲಿ ಸ್ವಚ್ಛತಾ ಅಭಿಯಾನವನ್ನು ಅಧಿಕಾರಿಗಳು ನಡೆಸುತ್ತಿದ್ದಾರೆ. ದೀಪದ ಕೆಳಗೆ ಕತ್ತಲು ಎಂಬಂತೆ ತಾಲೂಕು ಕಚೇರಿ ಕಾರ್ಯ ನಿರ್ವಹಿಸುತ್ತಿರುವ ಮಿನಿ ವಿಧಾನಸೌಧದಲ್ಲೇ ಅನೈರ್ಮಲ್ಯ ತಾಂಡವಾಡುತ್ತಿದೆ.  ನಿರ್ವಹಣೆ ಕೊರತೆಯಿಂದಾಗಿ ಮಿನಿ ವಿಧಾನಸೌಧದ  ಶೌಚಾಲಯ ಬಳಕೆಗೆ ಬಾರದಂತಾಗಿದೆ. ಒಳ ಹೊಕ್ಕರೆ ಮೂಗು ಮುಚ್ಚಿಕೊಳ್ಳಲೇಬೇಕು. ಅಷ್ಟೊಂದು ಗಬ್ಬು ನಾರುವ ಸ್ಥಿತಿಯ ಶೌಚಾಲಯದಲ್ಲಿ ಮಲ, ಮೂತ್ರ ವಿಸರ್ಜನೆ ಮಾಡಿದರೆ ಖಂಡಿತ ಕಾಯಿಲೆಗೆ ತುತ್ತಾಗಲೇಬೇಕು.  ಇಡೀ ತಾಲೂಕಿಗೆ ಸ್ವಚ್ಛತೆ, ನೈರ್ಮಲ್ಯದ ಅರಿವು ಮೂಡಿಸಲು ಹೊರಟಿರುವ ಅಧಿಕಾರಿಗಳಿಗೆ ತಮ್ಮದೇ  ಅವ್ಯವಸ್ಥೆ ಕಾಣದಾಗಿರುವುದು ವಿಪರ್ಯಾಸದ ಸಂಗತಿ. ರೈತರು, ನಾಗರಿಕರು ಅದೆಷ್ಟೇ ಬಾರಿ ದೂರಿದ್ದರೂ ಸರಿಪಡಿಸುವ ಗೋಜಿಗೆ ಯಾವೊಬ್ಬ ಅಧಿಕಾರಿಯೂ ಮುಂದಾಗಿಲ್ಲ.   ಹವಾನಿಯಂತ್ರಿತ ಕೊಠಡಿಗಳಲ್ಲಿ ಕೆಲಸ ಮಾಡುವ ಅಧಿಕಾರಿಗಳು, ಸಿಬ್ಬಂದಿ ಮತ್ತು ಜನಪ್ರತಿನಿಧಿಗಳೂ ತಮ್ಮ ಕಚೇರಿಯ ಶೌಚಾಲಯದ ಬದಲು ಇಂತಹ ಶೌಚಾಲಯವನ್ನು ಬಳಸಿದರಷ್ಟೇ ಸಮಸ್ಯೆ ಅರಿವಾಗುತ್ತದೆ. ತಮ್ಮದೇ ಕಚೇರಿಯಲ್ಲಿರುವ ಶೌಚಾಲಯ ಶುಚಿಗೆ ಕ್ರಮ ಕೈಗೊಳ್ಳದ ಅಧಿಕಾರಿಗಳಿಗೆ ಜನರಿಗೆ ನೀತಿಪಾಠ ಹೇಳಲು ಯಾವ ನೈತಿಕತೆ ಇದೆ
-ನಾಗರಾಜು, ಮಾಗಡಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.