ಭೂ ಸ್ವಾಧೀನ ಕೈ ಬಿಡಿ: ಅಶೋಕ್ಕುಮಾರ್
ಆನೇಕಲ್ಲು: ಆನೇಕಲ್ ತಾಲೂಕು ಕೈಗಾರಿಕಾ ನಗರವಾಗಿ ಪರಿಸರ ಮಾಲಿನ್ಯದಿಂದ ಹಾಳಾಗಿದೆ. ಕರ್ನಾಟಕ ಗೃಹ ನಿರ್ಮಾಣ ಸಂಸ್ಥೆಯವರು ಸೂರ್ಯ ನಗರ ಬಡಾವಣೆ ಅಭಿವೃದ್ಧಿ ನೆಪದಲ್ಲಿ ರೈತರ ಫಲವತ್ತಾದ ಸಾವಿರಾರು ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗಿರುವುದು ದುರದೃಷ್ಣಕರ ಎಂದು ಪ್ರಾಂತ ರೈತ ಸಂಘದ ಅಧ್ಯಕ್ಷ ಅಶೋಕ್ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ಪಟ್ಟಣದ ದೇವರ ಕೊಂಡಪ್ಪ ವೃತ್ತದಲ್ಲಿ ಹಮ್ಮಿಕೊಂಡಿದ್ದ ಭೂ ಸ್ವಾಧೀನ ವಿರೋಧಿ ರಸ್ತೆ ತಡೆ ಚಳವಳಿಯಲ್ಲಿ ಮಾತನಾಡಿ, ಸರ್ಕಾರವು ರೈತ ವಿರೋಧಿ ನೀತಿ ಹಾಗೂ ನಿಲುವುಗಳನ್ನು ಅನುಸರಿಸುತ್ತಿದೆ. ಸೂರ್ಯ ನಗರದ 3 ಹಂತಗಳಲ್ಲಿನ ನಿವೇಶನಗಳೇ ಅಭಿವೃದ್ಧಿಯಾಗಿಲ್ಲ. ಮೂರೂ ಬಡಾವಣೆಗಳಲ್ಲಿ ಮೂಲ ಭೂತ ಸೌಕರ್ಯಗಳ ಕೊರತೆ ಇದೆ. ಹೀಗಿರುವಾಗಿ 4ನೇ ಹಂತ ನಿರ್ಮಾಣ ಕಾರ್ಯಕ್ಕೆ ಕರ್ನಾಟಕ ಗೃಹ ಮಂಡಳಿ ಕೈ ಹಾಕಿರುವುದು ಹಾಸ್ಯಾಸ್ಪದ ಎಂದರು.
ಸರ್ಕಾರ ಹಾಗೂ ಮಂಡಳಿ ರೈತರ ಜಮೀನು ವಶಪಡಿಸಿಕೊಂಡು ರೈತರನ್ನು ದಿವಾಳಿ ಮಾಡಲು ಸಂಚು ಮಾಡಿದೆ ಎಂದು ಆರೋಪಿಸಿದ ಅವರು ಮಂಡಳಿ ಎಷ್ಟು ಜನ ಸ್ಥಳೀಯರಿಗೆ ನಿವೇಶನ ನೀಡಿದೆ ಎಂದು ಪ್ರಶ್ನಿಸಿದರು. ಹಣವಂತರಿಗೆ ಮಾರಾಟ ಮಾಡಿ ಸ್ಥಳೀಯರನ್ನು ಗುಲಾಮರನ್ನಾಗಿಸುವ ದ್ವಿಮುಖ ನೀತಿಗೆ ಧಿಕ್ಕಾರ ಎಂದರು.
ಎಚ್ಡಿಕೆ ಹುಟ್ಟುಹಬ್ಬ: ಜಿಲ್ಲಾಸ್ಪತ್ರೆ ಒಳ ರೋಗಿಗಳಿಗೆ ಹಣ್ಣು ವಿತರಣೆ
ರಾಮನಗರ: ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆ ವಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರ ಹುಟ್ಟು ಹಬ್ಬದ ಪ್ರಯುಕ್ತ ರಾಮನಗರ ಜಿಲ್ಲಾಸ್ಪತ್ರೆ ಒಳ ರೋಗಿಗಳಿಗೆ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಹಣ್ಣು ಹಂಪಲು ವಿತರಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ರಾಜು ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಈ ವೇಳೆ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವಿಜಯ ನರಸಿಂಹ, ಜೆಡಿಎಸ್ ಮುಖಂಡರಾದ ಬಿ.ಉಮೇಶ್ ಸೇರಿದಂತೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.
ಯುವ ಕಾಂಗ್ರೆಸ್ ಚುನಾವಣೆಗೆ ನಾಮಪತ್ರ
ದೊಡ್ಡಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ದೊಡ್ಡಬಳ್ಳಾಪುರದ ರಮ್ಯ ಲಕ್ಷ್ಮೀಪತಿ ನಾಮಪತ್ರ ಸಲ್ಲಿಸಿದ್ದಾರೆ. ಚಿಕ್ಕಬಳ್ಳಾಪುರದ ಕಾಂಗ್ರೆಸ್ ಕಚೇರಿಯಲ್ಲಿ ಅವರು ಯುವ ಕಾಂಗ್ರೆಸ್ ಚುನಾವಣಾ ಪ್ರಾಧಿಕಾರದ ಚುನಾವಣಾಧಿಕಾರಿ ದೊರೈ ಅವರಿಗೆ ನಾಮಪತ್ರ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ವೆಂಕಟರಾಮು, ಉಪಾಧ್ಯಕ್ಷ ಸ್ಥಾನಕ್ಕೆ ಜವಾಜಿ ರಾಜೇಶ್, ಮಹಿಳಾ ಮೀಸಲು ಸ್ಥಾನಕ್ಕೆ ಆಶಾರಾಣಿ, ಸದಸ್ಯ ಸ್ಥಾನಕ್ಕೆ ರಮೇಶ್, ಶಿಲ್ಪ ಸೇರಿದಂತೆ ಒಟ್ಟು 10 ಮಂದಿ ನಾಮಪತ್ರಗಳನ್ನು ಸಲ್ಲಿಸಿದರು. ಮುಖಂಡರಾದ ಜಿ.ಲಕ್ಷ್ಮೀಪತಿ, ದೊಡ್ಡಬೆಳವಂಗಲ ಮಹೇಶ್, ವೆಂಕಟೇಶ್(ಅಪ್ಪಿ) ಮತ್ತಿತರರು ಇದ್ದರು.
ಶಾಸಕ ಟಿ.ವೆಂಕಟರಮಣಯ್ಯ, ಮಾಜಿ ಶಾಸಕ ಆರ್.ಜಿ. ವೆಂಕಟಾಚಲಯ್ಯ, ಕೆಪಿಸಿಸಿ ಸದಸ್ಯ ಎಂ.ಜಿ.ಶ್ರೀನಿವಾಸ್, ಜಿ.ಪಂ ಮಾಜಿ ಅಧ್ಯಕ್ಷ ಸಿ.ಡಿ.ಸತ್ಯನಾರಾಯಣಗೌಡ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತಿ.ರಂಗರಾಜು ಮತ್ತಿತರರ ಬೆಂಬಲದೊಂದಿಗೆ ಇವರು ನಾಮಪತ್ರ ಸಲ್ಲಿಸಿದ್ದಾರೆ.
ಸಾರ್ವಜನಿಕರಿಂದ ಅಹವಾಲು ಸ್ವೀಕಾರ
ರಾಮನಗರ: ರಾಮನಗರದ ಲೋಕಾಯುಕ್ತ ಡಿವೈಎಸ್ಪಿ ಅವರು ಡಿ.18ರಂದು ತಾಲೂಕು ಕಚೇರಿ ಸಭಾಂಗಣದಲ್ಲಿ ಬೆಳಗ್ಗೆ 11ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ. ರಾಮನಗರ ತಾಲೂಕಿನ ಸರ್ಕಾರಿ ಅಧಿಕಾರಿಗಳು ಸಾರ್ವಜನಿಕರ ಕೆಲಸ ಮಾಡಿಕೊಡಲು ಹಣ ಕೇಳಿದ್ದಲ್ಲಿ ಅಥವಾ ಉದ್ದೇಶಪೂರ್ವಕ ವಿಳಂಬ ಮಾಡಿದ್ದಲ್ಲಿ ಅಂತಹ ದೂರುಗಳನ್ನು ಸಾರ್ವಜನಿಕರು ಖುದ್ದಾಗಿ ಸಲ್ಲಿಸಬಹುದು.
19ರಂದು ತಾಪಂ ಸಾಮಾನ್ಯ ಸಭೆ
ರಾಮನಗರ: ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯು ಡಿ.19ರ ಬೆಳಗ್ಗೆ 11ಕ್ಕೆ ಅಧ್ಯಕ್ಷೆ ಲಕ್ಷ್ಮೀಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಈ ಸಭೆಗೆ ತಾ.ಪಂ. ಚುನಾಯಿತ ಹಾಗೂ ನಾಮ ನಿರ್ದೇಶಿತ ಸದಸ್ಯರು ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಹಾಜರಾಗಬೇಕೆಂದು ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ವೆಂಕಟೇಶ್ ತಿಳಿಸಿದ್ದಾರೆ.
ಆಟೋ ಡಿಕ್ಕಿ: ವ್ಯಕ್ತಿ ಸಾವು
ಚನ್ನಪಟ್ಟಣ: ಪಾದಚಾರಿಗೆ ಲಗೇಜ್ ಆಟೋ ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ ತಾಲೂಕಿನ ಹೊಂಗನೂರು ಗ್ರಾಮದಲ್ಲಿ ಸೋಮುವಾರ ಬೆಳಿಗ್ಗೆ ಸಂಭವಿಸಿದೆ. ಇದೇ ಗ್ರಾಮದ ವೈರಮುಡಿ (45) ಮೃತ ದುರ್ದೈವಿಯಾಗಿದ್ದು, ಚನ್ನಪಟ್ಟಣ ಹಲುಗೂರು ರಸ್ತೆ ಬದಿಯಲ್ಲಿ ಮನೆಗೆ ನಡೆದು ಹೋಗುತ್ತಿದ್ದಾಗ ಹಿಂದಿನಿಂದ ಬಂದ ಆಟೋ ಡಿಕ್ಕಿ ಹೊಡೆದಿದೆ. ತೀವ್ರ ರಕ್ತಸ್ರಾವ ವಾದ ಹಿನ್ನೆಲೆಯಲ್ಲಿ ವೈರಮುಡಿ ಸ್ಥಳದಲ್ಲೇ ಮಣತಪಟ್ಟಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಉಪನ್ಯಾಸ
ರಾಮನಗರ: ಪದವಿ ಪೂರ್ವ ಶಿಕ್ಷಣ ಇಲಾಖೆ, ನಗರದ ಎಂ.ಎಚ್. ಕಾಲೇಜು, ಕೂಟಗಲ್ನ ಪಂಡಿತ್ ನೆಹರು ಸಂಯುಕ್ತ ಪದವಿ ಪೂರ್ವ ಕಾಲೇಜು, ಭಾರತೀಯ ಸಂಸ್ಕೃತಿ ವಿದ್ಯಾಪೀಠ ಕಾಲೇಜಿನ ಇಕೊ ಕ್ಲ್ಲಬ್ ಘಟಕದಿಂದ ಪರಿಸರ ಸಂರಕ್ಷಣೆಯಲ್ಲಿ ಯುವಜನರ ಪಾಲ್ಗೊಳ್ಳುವಿಕೆ ವಿಷಯ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮವು ಡಿ.17ರ ಬೆಳಗ್ಗೆ 10ಕ್ಕೆ ಎಂ.ಎಚ್. ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಚ್.ಡಿ.ಲಿಂಗರಾಜು ಉದ್ಘಾಟಿಸುವರು. ಪ್ರಾಂಶುಪಾಲರ ಸಂಘದ ಅಧ್ಯಕ್ಷ ಎಸ್.ಎಲ್.ವನರಾಜು ಅಧ್ಯಕ್ಷತೆ ವಹಿಸುವರು. ಉಪನ್ಯಾಸಕ ಜಿ.ಶಿವಣ್ಣ ಪ್ರಾಸ್ತಾವಿಕ ನುಡಿಗಳನ್ನಾಡುವರು. ಎಂ.ಎಚ್. ಕಾಲೇಜಿನ ಪ್ರಾಂಶುಪಾಲ ಗುರುರಾಜು ಭಾಗವಹಿಸುವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

