ಸೌಲಭ್ಯ ಕಲ್ಪಿಸುವಲ್ಲಿ ನಗರಸಭೆ ವೈಫಲ್ಯಕ್ಕೆ ಆಕ್ರೋಶ
ಕ.ಪ್ರ.ವಾರ್ತೆ , ರಾಮನಗರ , ಡಿ.16
ಕುಡಿಯುವ ನೀರು ಸಹಿತ ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ವಿಫಲತೆ ಹಾಗೂ ಮಿತಿ ಮೀರಿದ ಲಂಚಗುಳಿತನದಿಂದ ಬೇಸತ್ತು ನಗರಸಭೆ ವಿರುದ್ಧ ನಗರದ ವಿವಿಧ ಬಡಾವಣೆ ನಿವಾಸಿಗಳು ಸೋಮವಾರ ಪ್ರತಿಭಟನೆ ನಡೆಸಿದರು.
ಅರ್ಕೇಶ್ವರ ಕಾಲೋನಿ ರುದ್ರಭೂಮಿ ಬಳಿ ರಸ್ತೆಯಲ್ಲಿ ಟೈರ್ಗಳಿಗೆ ಬೆಂಕಿ ಹಚ್ಚಿ ಸುಮಾರು 2 ತಾಸು ವಾಹನ ಸಂಚಾರಕ್ಕೆ ತಡೆಯೊಡ್ಡಿದ ಪ್ರತಿಭಟನಾಕಾರರು ನಗರಸಭೆ, ಆಯುಕ್ತರು, ಜಿಲ್ಲಾಡಳಿತ, ಶಾಸಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಟ್ರೂಪ್ಲೇನ್, ಅರ್ಕೇಶ್ವರ ಕಾಲೋನಿ, ರೆಹಮಾನಿಯಾ ನಗರ, ಟಿಪ್ಪುನಗರ, ಯಾರಬ್ನಗರ ಸೇರಿದಂತೆ 20 ರಿಂದ 24ರವರೆಗಿನ ಐದು ವಾರ್ಡ್ಗಳ ನಾಗರಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ತಮ್ಮ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಸಿಗದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದರು.
ಶುದ್ಧ ನೀರು ಕೊಡಿ: ಬೇಸಿಗೆಗೆ ಮುನ್ನವೇ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ. 7-8 ದಿನಕ್ಕೊಮ್ಮೆ ಸರಾಸರಿ 30 ನಿಮಿಷವಷ್ಟೇ ನೀರು ಸರಬರಾಜು ಮಾಡಲಾಗುತ್ತಿದೆ. ಶುದ್ಧೀಕರಿಸದ ಈ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಅಶುದ್ಧ ನೀರು ಕುಡಿದು ಜನರು ನಾನಾ ರೋಗಗಳಿಗೆ ತುತ್ತಾಗುತ್ತಿದ್ದಾರೆ. ನಗರಸಭೆ, ಜಿಲ್ಲಾಡಳಿತ ಮತ್ತು ನಗರ ನೀರು ಸರಬರಾಜು ಮಂಡಳಿಯು ತಕ್ಷಣವೇ ಶುದ್ಧ ಮತ್ತು ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಯುಜಿಡಿ ದುರಸ್ತಿಪಡಿಸಿ : ರಾಮನಗರದಾದ್ಯಂತ ಒಳ ಚರಂಡಿ ವ್ಯವಸ್ಥೆಯು ತೀರಾ ಅದ್ವಾನಗೊಂಡಿದೆ. ಅಲ್ಲಲ್ಲಿ ಮ್ಯಾನ್ಹೋಲ್ಗಳು ಬಾಯಿ ತೆರೆದುಕೊಂಡು, ಕೊಳಚೆ ನೀರು ರಸ್ತೆಯಲ್ಲೆಲ್ಲಾ ಉಕ್ಕಿ ಹರಿಯುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಇತರೆ ಬೇಡಿಕೆಗಳು: ರಸ್ತೆಗಳ ಮೇಲಿನ ಕಸವನ್ನು ಆಗಾಗ್ಗೆ ವಿಲೇವಾರಿ ಮಾಡಬೇಕು. ರಸ್ತೆಗಳ ನಿರ್ಮಾಣಕ್ಕೆ ಕಲ್ಲು ಮತ್ತು ಜಲ್ಲಿ ಹಾಕಿದ್ದು, ಈವರೆಗೆ ಡಾಂಬರು ಹಾಕಲಾಗಿಲ್ಲ. ಈ ರಸ್ತೆಯಲ್ಲಿ ವಾಹನಗಳು ಸಾಗುವಾಗ ಅದರ ಟೈರ್ಗಳಿಗೆ ಸಿಕ್ಕ ಕಲ್ಲುಗಳು ಸಿಡಿದು ಆಸುಪಾಸಿನ ನಿವಾಸಿಗಳು, ಪಾದಚಾರಿಗಳಿಗೆ ತಗುಲಿ ಗಾಯವಾಗಿದೆ ಎಂದರು.
ಇದೇ ರಸ್ತೆಯಲ್ಲಿ ವಾಹನವೊಂದು ಆಯತಪ್ಪಿ ಬಿದ್ದು, ಮಗು ಸಾವನ್ನಪ್ಪಿದೆ. ಈ ಬಲಿಗೆ ನಗರಸಭೆ ದಿವ್ಯ ನಿರ್ಲಕ್ಷ್ಯವೇ ಕಾರಣವಾಗಿದೆ. ತಕ್ಷಣವೇ ರಸ್ತೆಯನ್ನು ಡಾಂಬರೀಕರಣಗೊಳಿಸಬೇಕು. ಅಲ್ಲಿವರೆಗೆ ಜಲ್ಲಿ ಕಲ್ಲುಗಳನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.
ಬಿಪಿಎಲ್ ಗೊಂದಲ: ಬಹುತೇಕ ಬಡವರೇ ವಾಸಿಸುತ್ತಿರುವ ಈ 5 ವಾರ್ಡ್ಗಳಲ್ಲಿ ಅರ್ಹ ಫಲಾನುಭವಿಗಳಿಗೆ ಬಿಪಿಎಲಲ್ಕಾರ್ಡ್ ಸೌಲಭ್ಯ ಕಲ್ಪಿಸಲಾಗಿಲ್ಲ. ಪಡಿತರ ಚೀಟಿಗಾಗಿ ಫಲಾನುಭವಿಗಳು ನಗರಸಭೆ, ತಾಲೂಕು ಕಚೇರಿಗೆ ಅಲೆದು ಸುಸ್ತಾಗಿದ್ದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಅವರು ಆರೋಪಿಸಿದರು.
ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ನಗರಸಭೆ ಅಧಿಕಾರಿಗಳು ಬೇಡಿಕೆಗಳನ್ನು ಆಡಳಿತಾಧಿಕಾರಿ ಮತ್ತು ಆಯುಕ್ತರ ಗಮನಕ್ಕೆ ತಂದು, ಸಾಧ್ಯವಾದಷ್ಟು ಜರೂರಾಗಿ ಪರಿಹರಿಸುವ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಅಮ್ಜದ್ ಷರೀಫ್, ಜುಬೇದ್, ಮುನ್ನಾ, ಆಖಿಲ್, ಮುಜೀಬ್, ಸಮಿ, ಅಸ್ಗರ್ ಇತರರು ಭಾಗವಹಿಸಿದ್ದರು.
ಲಂಚ ಕೊಟ್ಟರಷ್ಟೇ ಕೆಲಸ
ರಾಮನಗರ ನಗರಸಭೆಯಲ್ಲಿ ಲಂಚ ಇಲ್ಲದಿದ್ದರೆ ಯಾವುದೇ ಕೆಲಸ ನಡೆಯೋದಿಲ್ಲ. ಸಣ್ಣಪುಟ್ಟ ಕೆಲಸಕ್ಕೂ ಲಂಚ ನೀಡಲೇಬೇಕಾದ ಪರಿಸ್ಥಿತಿಯನ್ನು ನಾವಿಲ್ಲಿ ಕಾಣಬಹುದು. ಇಲ್ಲಿರೋ ಅಧಿಕಾರಿಗಳು, ಸಿಬ್ಬಂದಿಯು ಲಂಚ ಪಡೆಯುವ ಕೋರ್ಸ್ ಓದಿ ಬಂದವರಂತೆ ವರ್ತಿಸುತ್ತಾರೆ ಎನ್ನುವುದು ಪ್ರತಿಭಟನಾಕಾರರ ನೇರ ಆರೋಪ.
ಜನನ ಮತ್ತು ಮರಣ ಪ್ರಮಾಣ ಪತ್ರ, ಖಾತೆ ಬದಲಾವಣೆ, ಪರವಾನಗಿ ನೀಡಿಕೆ ಸಹಿತ ಪ್ರತಿಯೊಂದು ಕೆಲಸಕ್ಕೂ ಇಂತಿಷ್ಟು ಲಂಚ ನಿಗದಿಯಾಗಿದೆ. ನಗರಸಭೆಯಲ್ಲಿ ಕಾಸಿದ್ದೋನೇ ಬಾಸು. ಬಡಬಗ್ಗರು ಹೋದ್ರೆ ಕೂರಲು ಆಸನವನ್ನೂ ಇರಿಸುವುದಿಲ್ಲ. ಮುಖ ನೋಡಿ ಮಣೆ ಹಾಕುವ ವ್ಯವಸ್ಥೆ ಇಲ್ಲಿದೆ ಎಂದು ಅವರು ದೂರಿದರು.
ಸಕಾಲ ಯೋಜನೆಯಡಿ ಸಲ್ಲಿಸಿದ ಅರ್ಜಿಗಳ ವಿಲೇವಾರಿ ಇಲ್ಲಿ ಅಕಾಲವಾಗಿದೆ. ಖಾತೆ ಬದಲಾವಣೆ ಪ್ರಕರಣ ಇತ್ಯರ್ಥಕ್ಕೆ ಆರೇಳು ತಿಂಗಳು ಕಾಲ ದೂಡುತ್ತಾರೆ. ಸಾರ್ವಜನಿಕ ಸಮಸ್ಯೆಗಳಿಗೆ ನಗರಸಭೆಯಿಂದ ಸ್ಪಂದನೆ ಇಲ್ಲ. ಸಹಾಯವಾಣಿ, ದೂರವಾಣಿ ಕರೆಗಳನ್ನು ಸ್ವೀಕರಿಸುವುದೇ ಇಲ್ಲ ಎಂದು ಸುದ್ದಿಗಾರರೆದುರು ಪ್ರತಿಭಟನಾಕಾರರು ಆರೋಪಗಳ ಸುರಿಮಳೆಗರೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

