ಬೆಂಗಳೂರು ಗ್ರಾಮಾಂತರ

ಒಕ್ಕಲಿಗರ ಸಂಘ ಚುನಾವಣೆ: ಗೌಡ್ರ ಗದ್ಲ ಶುರು

Published On :

-ಮತ್ತೀಕೆರೆ ಜಯರಾಮ್
ರಾಮನಗರ:
ಒಕ್ಕಲಿಗರ ಸಂಘದ ಚುನಾವಣೆ ಹೆಸರಲ್ಲಿ ಗೌಡ್ರ ಗದ್ದಲ ನಡೆಯುತ್ತಿದೆ. ಶತಾಯ ಗತಾಯ ಗೆಲ್ಲಲೇಬೇಕೆಂದು ಪಣತೊಟ್ಟ ಅಭ್ಯರ್ಥಿಗಳ ಕಾರುಬಾರು ಜೋರಾಗಿದೆ. ಸಾರ್ವತ್ರಿಕ ಚುನಾವಣೆಯನ್ನೂ ನಾಚಿಸುವಂತಿರುವ ಈ ಸಂಘದ ಚುನಾವಣೆ ವ್ಯವಸ್ಥೆ ಗಬ್ಬೆದ್ದು ನಾರುತ್ತಿದೆ.
ಬೆಳಗಾಗುತ್ತಲೇ ಅಭ್ಯರ್ಥಿಗಳು ದಂಡು ಕಟ್ಟಿಕೊಂಡು ಕಾರುಗಳಲ್ಲಿ ಧೂಳೆಬ್ಬಿಸಿಸುತ್ತಾ ಊರೂರು ಅಲೆದು ಮತಯಾಚಿಸುತ್ತಾರೆ. ಹೊತ್ತು ಮುಳುಗುತ್ತಲೇ ಔತಣ ಕೂಟಗಳಿಗೆ ಸದಸ್ಯರನ್ನು ಗುಂಪುಗೂಡಿಸಿ ಕುಡಿಸಿ, ಮಾಂಸದೂಟ ಉಣಬಡಿಸುವ ಮೂಲಕ ಮತಬೇಟೆ ನಡೆಸಲಾಗುತ್ತಿದೆ.
ಜ.5ಕ್ಕೆ ನಡೆಯುವ ಚುನಾವಣೆಗೆ ಕಳೆದ ನಾಲ್ಕೈದು ತಿಂಗಳಿಂದಲೇ ತಾಲೀಮು ಪ್ರಾರಂಭಗೊಂಡಿದೆ. ಚುನಾವಣೆಗೆ ದಿನ ಗಣನೆ ಪ್ರಾರಂಭವಾಗುತ್ತಲೇ ಅಭ್ಯರ್ಥಿಗಳ ತರಾವರಿ ಕಸರತ್ತು ತೀವ್ರಗೊಂಡಿದೆ. ಔತಣದ ಬೆನ್ನಲ್ಲೇ ಹಣ, ಬಳುವಳಿಯ ಹೊಳೆ ಹರಿಸಲು ಹಲವರು ಸಜ್ಜಾಗಿದ್ದಾರೆ.
ಪ್ರತ್ಯೇಕ ತಂಡ ರಚನೆ: ಸಂಘದಲ್ಲಿ ಮೊದಲಿಂದಲೂ ಬೆಂಗಳೂರು ಕ್ಷೇತ್ರದವರೇ ಹಿಡಿತ ಸಾಧಿಸಿಕೊಂಡು ಬಂದಿದ್ದಾರೆ. ಸಂಘದ ಚುಕ್ಕಾಣಿಗಾಗಿ ಹಂಬಲಿಸುತ್ತಿರುವ ಪ್ರಮುಖರು ಪ್ರದೇಶವಾರು ಖ್ಯಾತನಾಮರು, ಆರ್ಥಿಕ ಬಲಾಢ್ಯರು, ರಾಜಕಾರಣಿಗಳು, ಪ್ರಭಾವಿಗಳ ನಿಕಟವರ್ತಿಗಳು ಇಲ್ಲವೇ ಸಂಬಂಧಿಕರನ್ನು ತಂಡಕ್ಕೆ ಸೇರಿಸಿಕೊಂಡಿದ್ದಾರೆ.
ಈ ಸಂಘದಲ್ಲಿ ಕಾಸಿದ್ದವನೇ ಬಾಸು ಎನ್ನುವ ಸ್ಥಿತಿ ಮೊದಲಿಂದಲೂ ಇದೆ. ಸಾಕಷ್ಟು ಹಣ, ಆಮಿಷ ಒಡ್‌ಡದೇ ಗೆದ್ದವರು ತೀರಾ ವಿರಳ. ಕಳೆದ ಬಾರಿ ಪ್ರತಿ ಮತಕ್ಕೆ ಸರಾಸರಿ ರು.5-6 ಸಾವಿರ ತಲುಪಿಸಿದ್ದ ನಿದರ್ಶನವಿದೆ. ಈ ಬಾರಿ ಮತದಾರರು ಹೆಚ್ಚಾಗಿದ್ದರೂ ಮತ ಮೌಲ್ಯವೇನೂ ಕುಸಿದಿಲ್ಲ.
ಹಾಲಿ-ಮಾಜಿ ಶಾಸಕರು ಸಹಿತ ಅನೇಕರು ಕಣದಲ್ಲಿದ್ದಾರೆ. ಖ್ಯಾತ ವೈದ್ಯರು, ವಿವಿಧ ವೃತ್ತಿಗಳಲ್ಲಿ ಹೆಸರು ಮಾಡಿದವರ ಜತೆಗೆ ಕುಖ್ಯಾತರೂ ಕಣದಲ್ಲುಂಟು. ಬೆಂಗಳೂರು, ಮಂಡ್ಯ, ಹಾಸನ, ತುಮಕೂರು, ಶಿವಮೊಗ್ಗದಂತಹ ಕಡೆ ಮತ ಖರೀದಿ ಭರಾಟೆ ಹೆಚ್ಚಾಗಿದೆ.
ಹನ್ನೊಂದು ಪಟ್ಟು ಅಧಿಕ: ಕಳೆದ ಚುನಾವಣೆವರೆಗೂ ಒಕ್ಕಲಿಗರ ಸಂಘ ಕೆಲವೇ ಮಂದಿಯ ಮುಷ್ಟಿಯಲ್ಲಿತ್ತು. ಮತದಾರರ ಸಂಖ್ಯೆ ಕೆಲವೇ ಸಾವಿರ ಇತ್ತು. ಇದೀಗ ಆಂಧ್ರದ ಅನಂತಪುರ, ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯೂ ಸೇರಿದಂತೆ ಸಂಘದ ಒಟ್ಟು ಸದಸ್ಯರ ಸಂಖ್ಯೆ 2.96 ಲಕ್ಷಕ್ಕೇರಿದೆ.  ಸಂಘದ 35 ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಅತಿ ದೊಡ್ಡ ಕ್ಷೇತ್ರವಾಗಿರುವ ಬೆಂಗಳೂರಿನತ್ತ ಎಲ್ಲರ ಚಿತ್ತ ನೆಟ್ಟಿದೆ. ಅವಿಭಜಿತ ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ನಗರ ಜಿಲ್ಲೆಗಳಿಂದ 15 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, 140 ಮಂದಿ ಕಣದಲ್ಲಿದ್ದಾರೆ.  
ಬೆಂಗಳೂರು ಕ್ಷೇತ್ರದಲ್ಲಿ ಕಳೆದ ಬಾರಿಯ ಚುನಾವಣೆ ವೇಳೆಗೆ 11 ಸಾವಿರದಷ್ಟಿದ್ದ ಮತದಾರರ ಸಂಖ್ಯೆ ಇದೀಗ 1.15 ಲಕ್ಷಕ್ಕೇರಿದೆ. ಈ ಪೈಕಿ ಬೆಂಗಳೂರು ಗ್ರಾಮಾಂತರದಲ್ಲಿ 19 ಸಾವಿರ, ರಾಮನಗರ ಜಿಲ್ಲೆಯಲ್ಲಿ 20 ಸಾವಿರ ಮತದಾರರಿದ್ದಾರೆ. ಚನ್ನಪಟ್ಟಣದಲ್ಲೇ 3150 ಮತದಾರರಿದ್ದಾರೆ.
ರಾಮನಗರ ಜಿಲ್ಲೆ ಇಲ್ಲ: ರಾಜ್ಯದಲ್ಲಿ ಎರಡನೇ ಅತಿ ದೊಡ್ಡ ಸಮುದಾಯ ಎನಿಸಿರುವ ಒಕ್ಕಲಿಗರ ಪ್ರಾತಿನಿಧಿಕ ಸಂಸ್ಥೆಯಾದ ಈ ಸಂಘದ ನಕ್ಷೆಯಲ್ಲಿ ಇರುವುದು ರಾಜ್ಯದ 13 ಹಾಗೂ ಹೊರ ರಾಜ್ಯದ 2 ಸೇರಿದಂತೆ ಒಟ್ಟಾರೆ 15 ಜಿಲ್ಲೆಗಳು ಮಾತ್ರ ಇವೆ. ಸಾಕಷ್ಟು ಜಿಲ್ಲೆಗಳಿಗೆ ಸಂಘದಲ್ಲಿ ಪ್ರತ್ಯೇಕ ಅಸ್ತಿತ್ವವನ್ನೇ ನೀಡಲಾಗಿಲ್ಲ.
ಬೆಂಗಳೂರು ಗ್ರಾಮಾಂತರದ ಹೆಸರಿದ್ದರೂ ಆ ಜಿಲ್ಲೆಯವರೂ ಬೆಂಗಳೂರು ಕ್ಷೇತ್ರದಲ್ಲೇ ಸೆಣೆಸಬೇಕಿದೆ. ಇನ್ನು ರಾಮನಗರದ ಕತೆ ಇನ್ನೂ ವಿಚಿತ್ರ. ರಾಜಧಾನಿ ಮಗ್ಗುಲಲ್ಲೇ ಇದ್ದರೂ ಈ ಜಿಲ್ಲೆಗೆ ಸಂಘದಲ್ಲಿ ಅಸ್ತಿತ್ವವಿಲ್ಲ. ಗ್ರಾಮಾಂತರದಂತೆಯೇ ಇಲ್ಲಿನವರೂ ಬೆಂಗಳೂರಿನಲ್ಲೇ ಅಖಾಡಕ್ಕೆ ಇಳಿಯಬೇಕಿದೆ.  
ಆರೋಪ-ಪ್ರತ್ಯಾರೋಪ: ಈ ಚುನಾವಣೆಯಲ್ಲಿ ಪ್ರಮುಖ ತಂಡಗಳು, ಅಭ್ಯರ್ಥಿಗಳ ನಡುವೆ ಆರೋಪ  ಪ್ರತ್ಯಾರೋಪಗಳ ಸುರಿಮಳೆಯೂ ನಡೆಯುತ್ತಿದೆ. ಪ್ರಚಾರದ ವೈಖರಿ ಎಲ್ಲೆ ಮೀರಿದಂತೆ ಕಾಣುತ್ತಿದ್ದು, ಸಮುದಾಯವನ್ನು ಬೆಸೆಯುವ ಬದಲು ದ್ವೇಷಾಸೂಯೆಯನ್ನು ಹೆಚ್ಚಿಸುತ್ತಿರುವುದು ಸ್ಪಷ್ಟ.  ಸಂಘದ ಲೆಕ್ಕ ಪರಿಶೋಧನೆ ಲೋಪ, ಆದಾಯ ಮತ್ತು ಖರ್ಚಿನಲ್ಲಿ ದೋಖಾ, ಸಜ್ಜೆಪಾಳ್ಯ ಮತ್ತು ಮಾಳಗಾಳದ ಜಮೀನುಗಳು ಸಹಿತ ವಿವಿಧ ವ್ಯಾಜ್ಯಗಳು, ಸೀಮಿತವಾಗಿರುವ ಸಂಘದ ಚಟುವಟಿಕೆ ಸಹಿತ ನಾನಾ ವಿಷಯಗಳ ಬಗ್ಗೆ ಪರಸ್ಪರರ ನಡುವೆ ಕೆಸರೆರೆಚಾಟ ನಡೆಯುತ್ತಿದೆ.
ವೀರಶೈವ ಮಹಾಸಭಾ ಮತ್ತು ಕುರುಬ ಸಮುದಾಯಕ್ಕೆ ಹೋಲಿಸಿದರೆ ಒಕ್ಕಲಿಗರ ಸಂಘದಲ್ಲಿ ಜನಾಂಗದವರಿಗೆ ಸಿಕ್ಕ ಪ್ರಾತಿನಿಧ್ಯ ತೀರಾ ಕಡಿಮೆ. ಬೇರೆ ಜನಾಂಗದಂತೆಯೇ ಸಮುದಾಯದ ಎಲ್ಲರೂ ಸಂಘದ ಸದಸ್ಯರಾಗುವಂತಹ ವ್ಯವಸ್ಥೆ ಇಲ್ಲಿಗೂ ಬೇಕೆನ್ನುವ ಕೂಗು ಇದೆ.

ಜನಾಂಗದ ಹಿತ ಕಡೆಗಣನೆ

ರಾಜ್ಯದಲ್ಲಿ ವಂತಿಗೆ ಶಿಕ್ಷಣ ಬೆಳೆದಂತೆಲ್ಲಾ ವ್ಯಕ್ತಿಗತವಾಗಿ ಶಿಕ್ಷಣ ಸಂಸ್ಥೆ ಸ್ಥಾಪಿಸಿದವರು ಶ್ರೀಮಂತರಾಗಿದ್ದಾರೆ. ಆದರೆ, ದಾನ ಮತ್ತು ದತ್ತಿ ಮೂಲಕ ಬಂದ ಆಸ್ತಿ, ಸಂಪನ್ಮೂಲದಿಂದ ಶಿಕ್ಷಣ ಸಂಸ್ಥೆ ತೆರೆದ ಒಕ್ಕಲಿಗರ ಸಂಘದ ಹೆಸರಿನಲ್ಲಿ ಕೆಲವೇ ಪಟ್ಟಭದ್ರರು ಸಿರಿವಂತರಾಗಿದ್ದಾರೆ. ವಾಣಿಜ್ಯ ವಹಿವಾಟು ಹೆಚ್ಚಿದಂತೆಲ್ಲಾ ಸಂಘದ ಆಡಳಿತ ಮಂಡಳಿ ಜನಾಂಗದಿಂದ ದೂರವಾಗುತ್ತಿದೆ.
-ಅಬ್ಬೂರು ರಾಜಶೇಖರ್, ಹಿರಿಯ ಪತ್ರಕರ್ತ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.