ಶಂಕುಸ್ಥಾಪನೆಗೊಂಡು 6 ತಿಂಗಳಾದರೂ ಇನ್ನೂ ಡಾಂಬರೀಕರಣ ಭಾಗ್ಯವಿಲ್ಲ
ಕ.ಪ್ರ.ವಾರ್ತೆ ಸೂಲಿಬೆಲೆ ಡಿ.20
ಹೋಬಳಿಯ ನಗರೇನಹಳ್ಳಿ ಮೂಲಕ ಗಿಡ್ಡಪ್ಪನಹಳ್ಳಿ ಮಾರ್ಗವಾಗಿ ಸೂಲಿಬೆಲೆಗೆ ಸಂಪರ್ಕಿಸುವ ರಸ್ತೆಯ ಅಭಿವೃದ್ಧಿಗೆ ಶಂಕುಸ್ಥಾಪನೆಗೊಂಡು ಆರು ತಿಂಗಳಾದರೂ ಇನ್ನೂ ಡಾಂಬರೀಕರಣ ಭಾಗ್ಯವಿಲ್ಲದಂತಾಗಿದ್ದು, ಈ ರಸ್ತೆಯಲ್ಲಿ ಪ್ರಯಾಣ ದುಸ್ತರವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಜಂಗಮಕೋಟೆ, ಹೊಸಕೋಟೆ ಹೆದ್ದಾರಿಯಲ್ಲಿ ಬರುವ ನಗರೇನಹಳ್ಳಿಯಿಂದ ಗಿಡ್ಡಪ್ಪನಹಳ್ಳಿ ಮಾರ್ಗವಾಗಿ ಸೂಲಿಬೆಲೆ ಸಂಪರ್ಕಿಸುವ 6 ಕಿ.ಮೀ.ರಸ್ತೆಯಿದ್ದು, ಈ ಹಿಂದೆ ಇದಕ್ಕೆ ಡಾಂಬರೀಕರಣ ಹಾಕಲಾಗಿತ್ತು. ನಂತರ ದಿನಗಳಲ್ಲಿ ರಸ್ತೆ ಹಾಳಾಗಿದ್ದು, ಅಂದಾಜು ರು.73 ಲಕ್ಷ ವೆಚ್ಚದಲ್ಲಿ ರಸ್ತೆಯ ಡಾಂಬರೀಕರಣ ಕಾಮಗಾರಿಗೆ ಕಳೆದ 6 ತಿಂಗಳಿಂದೆ ಜನಪ್ರತಿನಿಧಿಗಳಿಂದ ಶಂಕುಸ್ಥಾಪನೆಯಾಗಿತ್ತು. ಇದಾಗಿ 6 ತಿಂಗಳಾದರೂ ರಸ್ತೆಗೆ ಡಾಂಬರೀಕರಣವಾಗದೆ ಬರೀ ಜಲ್ಲಿ ಕಲ್ಲುಗಳು ಮಾತ್ರ ರಸ್ತೆಯ ಮೇಲೆದ್ದು ಕುಂತಿವೆ. ಹೊಸ ರಸ್ತೆಯ ಕನಸು ಕಂಡಿದ್ದ ಈ ಭಾಗದ ಜನ ನಿತ್ಯ ಈ ರಸ್ತೆಯಲ್ಲಿ ಪ್ರಯಾಣ ಮಾಡಲು ಯಾತನೆ ಅನುಭವಿಸುವಂತಾಗಿದೆ.ಅಷ್ಟೋ, ಇಷ್ಟೋ ಇರೋದರಲ್ಲಿ ಚನ್ನಾಗಿದ್ದ ರಸ್ತೆಯನ್ನು ಕಿತ್ತು ಹಾಕಿದ್ದು ಇತ್ತ ಹಳೇ ರಸ್ತೆಯೂ ಇಲ್ಲ, ಹೊಸ ರಸ್ತೆಯೂ ಆಗಿಲ್ಲ ಎಂದು ಸ್ಥಳೀಯ ಗ್ರಾಮಸ್ಥರು ಆರೋಪಿಸಿದ್ದಾರೆ.
ರಸ್ತೆಪೂರ್ತಿ ಜಲ್ಲಿಕಲ್ಲುಗಳದ್ದೇ ಕಾರುಬಾರು: ಹಾಲಿ ನಿರ್ಮಾಣಕ್ಕೆ ಸಿದ್ದಗೊಂಡಿರುವ 6 ಕಿ.ಮಿ ರಸ್ತೆಯನ್ನು ಸಮತಟ್ಟು ಮಾಡಿ ಡಾಂಬರೀಕರಣ ಮಾಡಲೆಂದು ಸಿದ್ಧಪಡಿಸಿದ್ದು, ಈಗ ಎಲ್ಲಡೆ ಜಲ್ಲಿಕಲ್ಲುಗಳದ್ದೇ ಕಾರುಬಾರಾಗಿದೆ. ವಾಹನಗಳನ್ನು ಚಲಾಯಿಸಲು ಸರ್ಕಸ್ ಮಾಡುವಂತ ದುಃಸ್ಥಿತಿ ನಿತ್ಯ ಎದುರಿಸುವಂತಾಗಿದೆ. ಈ ಮಾರ್ಗದಲ್ಲಿ ಹೆಚ್ಚು ವಾಹನಗಳ ಒಡಾಟವಿದೆ. ಹೊಸಕೋಟೆ ಮಾರ್ಗದ ಪಿಲ್ಲಗುಂಪೆ ಕೈಗಾರಿಕೆ ಪ್ರದೇಶದಲ್ಲಿ ನಾನಾ ಕಾರ್ಖಾನೆಗಳಲ್ಲಿ ಕೆಲಸಮಾಡುತ್ತಿರುವ ನೌಕರರು ಇದೇ ಮಾರ್ಗದಲ್ಲಿ ಪ್ರಯಾಣಿಸುತ್ತಾರೆ. ನಗರೇನಹಳ್ಳಿ,ದೊಡ್ಡಕೂಲಿಗ, ಚಿಕ್ಕಕೋಲಿಗ, ಗುಳ್ಳಹಳ್ಳಿ, ಮುತ್ಸಂದ್ರ ಇತ್ಯಾದಿ ಗ್ರಾಮಗಳಿಂದ ಜನರು ಸೂಲಿಬೆಲೆಗೆ ಬರಲು ಇದೇ ರಸ್ತೆಯನ್ನು ಬಳಿಸುತ್ತಿದ್ದಾರೆ.ಇದಲ್ಲದೇ ರೈತರು, ವಿದ್ಯಾರ್ಥಿಗಳು ಸ್ಡ್ಕಲ್ ತುಳಿದುಕೊಂಡು ಕಲ್ಲುಗಳ ಮಧ್ಯ ಸರ್ಕಸ್ ನಡೆಸುತ್ತಾ ಪ್ರಯಾಸ ಪಟ್ಟು ಪ್ರಯಾಣಿಸುವಂತಾಗಿದೆ. ಕೂಡಲೇ ರಸ್ತೆಗೆ ಡಾಂಬರೀಕರಣ ಮಾಡಿ ಜನರ ಸಮಸ್ಯೆಗೆ ಮುಕ್ತಿ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

