ಬೆಂಗಳೂರು ಗ್ರಾಮಾಂತರ

ಲೋಡ್ ಶೆಡ್ಡಿಂಗ್ ವಿರುದ್ಧ ಪ್ರತಿಭಟನೆ

Published On :

ಕ.ಪ್ರ.ವಾರ್ತೆ ,  ದೊಡ್ಡಬಳ್ಳಾಪುರ ,  ಡಿ.20
ತೀವ್ರಗೊಂಡಿರುವ ಅನಿಯಮಿತ ಲೋಡ್‌ಶೆಡ್ಡಿಂಗ್ ವಿರುದ್ಧ ಇಲ್ಲಿನ ನೇಕಾರರು ತಿರುಗಿ ಬಿದ್ದಿದ್ದಾರೆ. ಬೆಸ್ಕಾಂ ವಿರುದ್ಧ ಬೀದಿಗಿಳಿದಿರುವ ನೇಕಾರ ಸಂಘಟನೆಗಳು ಶುಕ್ರವಾರ ಬೆಳಗ್ಗೆ ಇಲ್ಲಿನ ಪ್ರವಾಸಿ ಮಂದಿರ ವೃತ್ತದಲ್ಲಿರುವ ಬೆಸ್ಕಾಂ ಕಚೇರಿ ಮುತ್ತಿಗೆ ಹಾಕಿ ಪ್ರತಿಭಟಿಸಿದವು.
ನೇಕಾರರ ಹೋರಾಟ ಸಮಿತಿ ನೇತೃತ್ವದಲ್ಲಿ ಕರೆಯಲಾಗಿದ್ದ ಪ್ರತಿಭಟನಾ ಧರಣಿಯಲ್ಲಿ ನೂರಾರು ಸಂಖ್ಯೆಯಲ್ಲಿ ನೇಕಾರರು ಭಾಗವಹಿಸಿದ್ದರು. ಪ್ರತಿಭಟನೆಯಲ್ಲಿ ಮಾತನಾಡಿದ ಮುಖಂಡರು, ಲೋಡ್‌ಶೆಡ್ಡಿಂಗ್‌ನಿಂದಾಗಿ ದೊಡ್ಡಬಳ್ಳಾಪುರದ ಜೀವನಾಡಿ ನೇಕಾರಿಕೆ ಬಹುತೇಕ ಸಂಕಷ್ಟಕ್ಕೆ ಸಿಲುಕಿದೆ. ದಿನದಲ್ಲಿ 4 ಗಂಟೆ ಕಾಲವೂ ಸರಿಯಾಗಿ ವಿದ್ಯುತ್ ಸರಬರಾಜು ಇಲ್ಲದ ಕಾರಣ ನೇಕಾರಿಕೆಯನ್ನೇ ನಂಬಿರುವ ಸಾವಿರಾರು ಕುಟುಂಬಗಳು ತೀವ್ರ ಪರಿತಪಿಸುವಂತಾಗಿದೆ. ಕಳೆದ ತಿಂಗಳಿನಿಂದ ನಿರಂತರವಾಗಿ ನಡೆಯುತ್ತಿರುವ ಪವರ್ ಕಟ್‌ನಿಂದಾಗಿ ಜನ ಪರಿತಪಿಸುವಂತಾಗಿದೆ. ಇರುವ ವಿದ್ಯುತ್ ಅನ್ನು ಕೈಗಾರಿಕಾ ಪ್ರದೇಶದ ಬಂಡವಾಳಶಾಹಿಗಳಿಗೆ ಪೂರೈಕೆ ಮಾಡಿ, ಬಡ ನೇಕಾರರು ವಾಸಿಸುವ ಬಡಾವಣೆಗಳಲ್ಲೇ ವಿದ್ಯುತ್ ಸರಬರಾಜು ಸ್ಥಗಿತ ಮಾಡುವ ಕುತಂತ್ರ ನಡೆಯುತ್ತಿದೆ. ಕೈಗಾರಿಕೋದ್ಯಮಿಗಳಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡುವ ಬೆಸ್ಕಾಂ ಸಾರ್ವಜನಿಕರ ಬಳಕೆ ವಿದ್ಯುತ್ ನೀಡಲು ಕುಂಟು ನೆಪ ಹೇಳುತ್ತಿದೆ. ಲಭ್ಯವಿರುವ ವಿದ್ಯುತ್ ಅನ್ನು ಸಾರ್ವಜನಿಕರಿಗೆ, ನೇಕಾರರ ಬಳಕೆ ನೀಡಿ ಬೇಕಾದರೆ ಉಳಿದದ್ದನ್ನು ಕೈಗಾರಿಕೆಗಳಿಗೆ ಸರಬರಾಜು ಮಾಡಲಿ ಎಂದು ಆಗ್ರಹಿಸಿದರು.
ಸಮಯ ನಿಗದಿ ಮಾಡಿ: ವಿದ್ಯುತ್ ಸರಬರಾಜು ಮಾಡಲು ತೀವ್ರ ಸಮಸ್ಯೆ ಇದ್ದದ್ದೇ ನಿಜವಾದಲ್ಲಿ ದಿನಕ್ಕೆ ಇಂತಿಷ್ಟು ಅವಧಿ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಪ್ರಕಟಿಸಲಿ. ವಿದ್ಯುತ್ ಸರಬರಾಜು ನಡೆಯುವ ಸಮಯವನ್ನು ಪಾರದರ್ಶಕವಾಗಿ ಸಾರ್ವಜನಿಕರಿಗೆ ನೀಡಲಿ. ಬೇಕಾದಾಗ ಸರಬರಾಜು ಮಾಡುವುದು, ಬೇಕಾದಾಗ ಸ್ಥಗಿತಗೊಳಿಸುವ ಅವೈಜ್ಞಾನಿಕ ಧೋರಣೆ ಅನುಸರಿಸಲಾಗುತ್ತಿದೆ. ಅದನ್ನು ಬಿಟ್ಟು ಅರ್ಧ ಗಂಟೆ ವಿದ್ಯುತ್ ಕೊಟ್ಟು 3 ಗಂಟೆ ತೆಗೆಯುವುದು, ಪ್ರತಿ ಅರ್ಧಗಂಟೆಗೊಮ್ಮೆ ಲೋಡ್‌ಶೆಡ್ಡಿಂಗ್ ಮಾಡುವುದು ಸರಿಯಲ್ಲಿ ಎಂದರು.
ತೀವ್ರ ಪ್ರತಿಭಟನೆ ಎಚ್ಚರಿಕೆ: ಈ ಕೂಡಲೇ ಮೇಲಧಿಕಾರಿಗಳು ನೇಕಾರರ ಸಂಕಷ್ಟವನ್ನು ಅರ್ಥ ಮಾಡಿಕೊಂಡು ಅವೈಜ್ಞಾನಿಕ ಲೋಡ್‌ಶೆಡ್‌ಡಿಂಗ್ ನಿಲ್ಲಿಸಬೇಕು. ತಪ್ಪಿದಲ್ಲಿ ವ್ಯಾಪಕ ಹೋರಾಟ ರೂಪಿಸಬೇಕಾದೀತು ಎಂದು ಎಚ್ಚರಿಸಿದ ಪ್ರತಿಭಟನಾಕಾರರು ಸ್ಥಳಕ್ಕೆ ಬೆಸ್ಕಾಂ ಅಧಿಕಾರಿಗಳು ಬಂದು ಸ್ಪಷ್ಟನೆ ನೀಡಲಿ ಎಂದು ಆಗ್ರಹಿಸಿದರು.
ಮನವಿ ಪತ್ರ ಸ್ವೀಕರಿಸಿದ ಬೆಸ್ಕಾಂ ಅಧಿಕಾರಿ ಮಾತನಾಡಿ, ವಿದ್ಯುತ್ ಅಭಾವ ತೀವ್ರವಿರುವುದರಿಂದ ಈ ರೀತಿಯ ಅನಿಯಮಿತ ಲೋಡ್‌ಶೆಡ್ಡಿಂಗ್ ನಡೆಯುತ್ತಿದೆ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ನೇಕಾರ ಹೋರಾಟ ಸಮಿತಿ ಅಧ್ಯಕ್ಷ ಬಿ.ಜಿ.ಹೇಮಂತರಾಜು, ಉಪಾಧ್ಯಕ್ಷ ಕೆ.ಜಿ.ಗೋಪಾಲ್, ಎಸ್.ಪಿ.ಸತ್ಯನಾರಾಯಣ್, ಕಾರ್ಯದರ್ಶಿ ಕೆ.ಎ.ರಾಘವೇಂದ್ರ ಮತ್ತಿತರರು ಸೇರಿದಂತೆ ಅನೇಕ ನೇಕಾರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.