ಬೆಂಗಳೂರು ಗ್ರಾಮಾಂತರ

ಸಿಇಟಿ ಕಾಯ್ದೆ ಬಡ ವಿದ್ಯಾರ್ಥಿ ಪಾಲಿಗೆ ಕಂಟಕ

Published On :

ಕ.ಪ್ರ.ವಾರ್ತೆ ,  ದೊಡ್ಡಬಳ್ಳಾಪುರ ,  ಡಿ.20
ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಸಿಇಟಿ ಕಾಯ್ದೆ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸಿಗೆ ಕಂಟಕವಾಗಿದೆ. ಕೂಡಲೇ ಸರ್ಕಾರ ತನ್ನ ನಿಲುವು ಬದಲಿಸಬೇಕು ಎಂದು ಆಗ್ರಹಿಸಿ ಪಟ್ಟಣದಲ್ಲಿ ಸಾವಿರಾರು ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದರು.
ಇಲ್ಲಿನ ವಿವಿಧ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ಶುಕ್ರವಾರ ಬೆಳಗ್ಗೆ ತರಗತಿಗಳನ್ನು ಬಹಿಷ್ಕರಿಸಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಯ ಕಹಳೆ ಮೊಳಗಿಸಿದರು. ಕಾಲೇಜುಗಳಿಂದ ಸಂಘಟಿತರಾಗಿ ವಿವಿಧ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಸರ್ಕಾರದ ನಿಲುವನ್ನು ಧಿಕ್ಕರಿಸಿದರು. ಈ ಕೂಡಲೇ ಪ್ರಸ್ತಾಪವನ್ನು ಹಿಂತೆಗೆದುಕೊಳ್ಳುವಂತೆ ಆಗ್ರಹಿಸಿದರು.
ನಂತರ ತಾಲೂಕು ಕಚೇರಿ ಮುಂದೆ ಸೇರಿದ ವಿದ್ಯಾರ್ಥಿಗಳು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಧರಣಿ ನಡೆಸಿದರು.
ಹಣಕ್ಕೆ ಪ್ರಾಧಾನ್ಯತೆ ಸಲ್ಲ: ಈ ಸಂದರ್ಭದಲ್ಲಿ ಮಾತನಾಡಿದ ವಿದ್ಯಾರ್ಥಿ ಮುಖಂಡರು, ಸರ್ಕಾರ ಬಡ ವಿದ್ಯಾರ್ಥಿಗಳು ಭವಿಷ್ಯಕ್ಕೆ ತಣ್ಣೀರೆರಚುವ ಕೆಲಸ ಮಾಡುತ್ತಿದೆ. ಬಡ ಮತ್ತು ಮಧ್ಯಮ ವಿದ್ಯಾರ್ಥಿಗಳು ಏಕೈಕ ಆಶಾಕಿರಣವಾಗಿರುವ ಸಿಇಟಿ ಈಗ ಈ ವಿದ್ಯಾರ್ಥಿಗಳಿಗೆ ಕಂಟಕವಾಗುವ ಲಕ್ಷಣಗಳು ಗೋಚರಿಸುತ್ತಿವೆ.ಖಾಸಗಿ ಲಾಭಿಗೆ ಮಣಿಯುತ್ತಿರುವ ಸರ್ಕಾರ ಅವೈಜ್ಞಾನಿಕವಾಗಿ ನಡೆದುಕೊಳ್ಳುತ್ತಿದೆ. ಪ್ರತಿಭೆಗೆ ಮನ್ನಣೆ ನೀಡದೆ ಹಣಕ್ಕೆ ಪ್ರಾಧಾನ್ಯತೆ ನೀಡುವ ಹುಚ್ಚುತನ ಮಾಡುತ್ತಿದೆ. 2006ರ ಸಿಇಟಿ ಕಾಯ್ದೆ ಜಾರಿ ಬೇಕಾಗಿಲ್ಲ.ತಾಂತ್ರಿಕ ಶಿಕ್ಷಣದ ಪ್ರವೇಶ ಶುಲ್ಕದ ಮೇಲೆ ಕಣ್ಣಿಟ್ಟಿರುವ ಖಾಸಗಿ ಕಾಲೇಜುಗಳಿಗೆ ಸರ್ಕಾರ ಮಣೆಹಾಕುತ್ತಿದೆ ಎಂದು ಆರೋಪಿಸಿದರು.
ಉಗ್ರ ಹೋರಾಟದ ಎಚ್ಚರಿಕೆ: ಸಿಇಟಿ ವ್ಯವಸ್ಥೆ ಬಗ್ಗೆ ಆಳವಾದ ಅರಿವಿರುವ ಮತ್ತು ಬಡವಿದ್ಯಾರ್ಥಿಗಳ ಪರ ಕಾಳಜಿ ಇರುವ ಯಾರೊಬ್ಬರೂ ಈ ಕಾಯ್ದೆಯನ್ನು ಸಮರ್ಥನೆ ಮಾಡಿಕೊಳ್ಳಲು ಸಾಧ್ಯವಿಲ್ಲ. ತಕ್ಷಣ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು.ತನ್ನ ನಿರ್ಧಾರ ಬದಲಿಸಿಕೊಳ್ಳಬೇಕು. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಡೋಲಾಯಮಾನ ಮಾಡುವ ಕಾಯ್ದೆ ಜಾರಿ ವಿಚಾರ ಅಲಕ್ಷ್ಯ ಮಾಡಲು ಸಾಧ್ಯವಿಲ್ಲ. ಬಡ ಪ್ರತಿಬಾವಂತ ವಿದ್ಯಾರ್ಥಿಗಳ ಹಿತಕಾಯುವ ಹೊಣೆಗಾರಿಕೆ ಮರೆತರೆ ಖಂಡಿತವಾಗಿ ಸರ್ಕಾರದ ವಿರುದ್ಧ ವ್ಯವಸ್ಥೆ ತಿರುಗಿಬೀಳುವುದು ಅನಿವಾರ್ಯವಾಗುತ್ತದೆ. ಕೂಡಲೇ ತನ್ನ ದ್ವಂದ್ವ ನೀತಿ ಕೈಬಿಟ್ಟು ಈಗಿರುವ ಸಿಇಟಿ ಮಾದರಿಯನ್ನೇ ಉಳಿಸಿಕೊಳ್ಳುವ ತೀರ್ಮಾನ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ವಿವಿಧ ಸಂಘಟನೆಗಳ ಬೆಂಬಲ: ಇಲ್ಲಿನ ವಿದ್ಯಾರ್ಥಿ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ರಾಜ್ಯ ಸರ್ಕಾರ ಹೊಸದಾಗಿ ತರುತ್ತಿರುವ ಸಿಇಟಿ ಕಾಯ್ದೆ ವಿರುದ್ಧ ವಿದ್ಯಾರ್ಥಿಗಳು ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ದೊಡ್ಡಬಳ್ಳಾಪುರ ವಿದ್ಯಾರ್ಥಿ ಹಿತರಕ್ಷಣಾ ಸಮಿತಿಯ ಪ್ರತಿಭಟನೆಗೆ ಕನ್ನಡ ಜಾಗೃತ ಪರಿಷತ್ತು, ದೊಡ್ಡಬಳ್ಳಾಪುರ ಅಭಿವೃದ್ಧಿ ಸಮಿತಿ ಮತ್ತು ಕರ್ನಾಟಕ ರಾಜ್ಯ ರೈತ ವಿದ್ಯಾರ್ಥಿ ಸೇನೆ ಸೇರಿದಂತೆ ಹಲವು ಸಂಘಟನೆಗಳು ಬೆಂಬಲ ನೀಡಿದ್ದವು. ವಿವಿಧ ಸಂಘಟನೆಗಳ ಮುಖಂಡರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರತಿಭಟನೆ ನಂತರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.