ಸುಮಿತ್ರಮ್ಮಗೆ ಜಿಪಂ ಸದಸ್ಯತ್ವ ಪ್ರಮಾಣ
ಕ.ಪ್ರ.ವಾರ್ತೆ , ರಾಮನಗರ , ಡಿ.20
ಕಾನೂನು ಸಮರದಲ್ಲಿ ಗೆದ್ದು, ಜಿಪಂ ಸದಸ್ಯತ್ವ ದಕ್ಕಿಸಿಕೊಂಡ ರಾಮನಗರ ಜಿಪಂ ಕೂಟಗಲ್ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸುಮಿತ್ರಮ್ಮ ಅವರಿಗೆ ಚುನಾವಣಾಧಿಕಾರಿಯೂ ಆದ ಉಪ ವಿಭಾಗಾಧಿಕಾರಿ ಡಾ.ಸ್ನೇಹಾ ಶುಕ್ರವಾರ ಪ್ರಮಾಣ ಪತ್ರ ವಿತರಿಸಿದರು.
2011ರ ಜ.4ರಂದು ನಡೆದಿದ್ದ ಮತ ಎಣಿಕೆಯಲ್ಲಿ ಸದರಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಮಂಜುಳಾ ಮರಿದೇವರು ಆಯ್ಕೆ ಘೋಷಿಸಲಾಗಿತ್ತು. ಈ ವಿರುದ್ಧ ಸುಮಿತ್ರಮ್ಮ ಅವರು ಪ್ರಧಾನ ಸತ್ರ ನ್ಯಾಯಾಲಯಕ್ಕೆ ದಾವೆ ಹೂಡಿದ್ದರು.
ಆ ನ್ಯಾಯಾಲಯದ ಆದೇಶದ ಮೇರೆಗೆ ಮತಗಳ ಮರು ಎಣಿಕೆ ನಡೆಸಿ, ಮಂಜುಳಾ ಅವರನ್ನೇ ವಿಜೇತ ಅಭ್ಯರ್ಥಿ ಎಂದು ಪುನರ್ ಘೋಷಿಸಲಾಗಿತ್ತು. ಅದಾದ ಬಳಿಕ ಸುಮಿತ್ರಮ್ಮ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು.
ಮಂಜುಳಾ ಮರಿದೇವರು ನಾಮಪತ್ರದ ಜತೆಗೆ ಸಲ್ಲಿಸಿದ್ದ ಪ್ರಮಾಣ ಪತ್ರದಲ್ಲಿ ಆಸ್ತಿ ವಿವರಣೆಯನ್ನು ತಪ್ಪಾಗಿ ನಮೂದಿಸಿರುವುದನ್ನು ಸುಮಿತ್ರಮ್ಮ ಪರ ವಕೀಲರು ಸಾಬೀತು ಪಡಿಸಿದರು. ಈ ಹಿನ್ನೆಲೆಯಲ್ಲಿ ಕಳೆದ ಮಂಗಳವಾರ ನ್ಯಾಯಾಲಯವು ಮಂಜುಳಾ ಮರಿದೇವರು ಆಯ್ಕೆಯನ್ನು ಅನೂರ್ಜಿತಗೊಳಿಸಿ, ಸುಮಿತ್ರಮ್ಮ ಅವರನ್ನೇ ವಿಜೇತೆ ಎಂದು ಘೋಷಿಸಿತ್ತು.
ನ್ಯಾಯಾಲಯದ ಆದೇಶ ಪ್ರತಿ ತಲುಪಿದ ಬೆನ್ನಲ್ಲೇ ಸುಮಿತ್ರಮ್ಮ ಹೈಕೋರ್ಟ್ನಲ್ಲಿ ಕೇವಿಯಟ್ ಸಲ್ಲಿಸಿದ್ದಾರೆ. ಈ ಮಧ್ಯೆ, ಜಿಲ್ಲಾಡಳಿತ ಅಧಿಕಾರಿ ವರ್ಗ ಸುದೀರ್ಘ ಸಮಾಲೋಚನೆ ನಡೆಸಿ ಸುಮಿತ್ರಮ್ಮ ಅವರನ್ನು ನ್ಯಾಯಾಲಯದ ಆದೇಶದಂತೆ ವಿಜೇತೆ ಎಂದು ಪರಿಗಣಿಸಿ, ಪ್ರಮಾಣ ಪತ್ರ ನೀಡಿದೆ.
ಕಾನೂನು ಸಮರದಲ್ಲಿ ಗೆದ್ದಿದ್ದಕ್ಕೆ ಎಚ್ಡಿಕೆ ಅಭಿನಂದನೆ
ಭಾರತೀಯ ನ್ಯಾಯಾಲಯ ವ್ಯವಸ್ಥೆ ಇನ್ನೂ ನ್ಯಾಯದ ಪರ ಇದೆ ಎನ್ನುವುದಕ್ಕೆ ಕೂಟಗಲ್ ಕ್ಷೇತ್ರದಿಂದ ಸುಮಿತ್ರಮ್ಮ ಆಯ್ಕೆಯನ್ನು ಎತ್ತಿ ಹಿಡಿದಿರುವುದೇ ಸಾಕ್ಷಿ ಎಂದಿರುವ ಮಾಜಿ ಸಿಎಂ, ವಿಧಾನಸಭೆ ವಿರೋಧ ಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಕಾನೂನು ಸಮರದಲ್ಲಿ ಗೆದ್ದಿರುವ ಸುಮಿತ್ರಮ್ಮ ಅವರನ್ನು ಅಭಿನಂದಿಸಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯು ಕುತಂತ್ರದಿಂದ ಗೆಲುವು ಸಾಧಿಸಿದ್ದರು. ಛಲ ಬಿಡದೆ ಸುಮಿತ್ರಮ್ಮ ಹೋರಾಟ ನಡೆಸಿ, ಗೆಲುವು ಸಾಧಿಸಿದ್ದಾರೆ. ಪಕ್ಷದ ಪ್ರಾಮಾಣಿಕ ಕಾರ್ಯಕರ್ತೆಯಾಗಿರುವ ಸುಮಿತ್ರಮ್ಮ ಹೋರಾಟ ನಿಜಕ್ಕೂ ಮೆಚ್ಚತ್ತಕ್ಕದ್ದು ಎಂದರು. ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ಅವರನ್ನು ಸುಮಿತ್ರಮ್ಮ ಭೇಟಿಯಾಗಿ ಸಂತಸ ಹಂಚಿಕೊಂಡರು. ಕಾನೂನು ಸಮರದಲ್ಲಿ ಗೆದ್ದ ಸುಮಿತ್ರಮ್ಮ ಅವರಿಗೆ ಕುಮಾರಸ್ವಾಮಿ ಅಭಿನಂದನೆ ಸಲ್ಲಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

