ಬೆಂಗಳೂರು ಗ್ರಾಮಾಂತರ

ಲೋಡ್ ಶೆಡ್ಡಿಂಗ್ ವಿರುದ್ಧ ಆಕ್ರೋಶ

Published On :

ಮಾಗಡಿ: ತಾಲೂಕಿನಲ್ಲಿ ತೀವ್ರಗೊಂಡಿರುವ ಅನಿಯಮಿತ ಲೋಡ್ ಶೆಡ್ಡಿಂಗ್ ವಿರುದ್ಧ  ಜೆಡಿಎಸ್ ಶಾಸಕ
ಎಚ್.ಸಿ. ಬಾಲಕೃಷ್ಣ ಅವರ ನೇತೃತ್ವದಲ್ಲಿ ಶನಿವಾರ  ಬೆಳಗ್ಗೆ ಮರೂರು ಹ್ಯಾಂಡ್ ಪೋಸ್ಟ್‌ನ ರಾಷ್ಟ್ರೀಯ ಹೆದ್ದಾರಿ 48ರ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
 ತಾಲೂಕು ಜೆಡಿಎಸ್ ನೇತೃತ್ವದಲ್ಲಿ ಕರೆಯಲಾಗಿದ್ದ ಪ್ರತಿಭಟನಾ ಧರಣಿಯಲ್ಲಿ ನೂರಾರು ಸಂಖ್ಯೆಯಲ್ಲಿ
ರೈತರು ಭಾಗವಹಿಸಿದ್ದರು. ಪ್ರತಿಭಟನೆಯಲ್ಲಿ ಮಾತನಾಡಿದ ಶಾಸಕ ಎಚ್.ಸಿ. ಬಾಲಕೃಷ್ಣ ರಾಜ್ಯದಲ್ಲಿ ಅಧಿಕಾರಕ್ಕೆ ಕಾಂಗ್ರೆಸ್ ಸರ್ಕಾರ ಕಳೆದ 6 ತಿಂಗಳಿನಿಂದಲೂ ಉತ್ತಮ ಆಡಳಿತ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ನಾನು ಮುಖ್ಯ ಎಂಜಿನಿಯರ್  ಅವರನ್ನು ಭೇಟಿ ಮಾಡಿದಾಗ 1500 ಮೆಘಾ ವ್ಯಾಟ್
ವಿದ್ಯುತ್ ಖರೀದಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಬೆಸ್ಕಾಂ ಮುಖ್ಯ ಎಂಜಿನಿಯರ್ ತಿಳಿಸಿದರು.
ಹಿಂದೆ ಶೋಭಾ ಕರಂದ್ಲಾಜೆ ಅವರು ವಿದ್ಯುತ್ ಖರೀದಿಗೆ ಮುಂಗಡ ಕರಾರು ಮಾಡಿಕೊಂಡು  ವಿದ್ಯುತ್  ಉತ್ಪಾದಕರಿಂದ ವಿದ್ಯುತ್ ಖರೀದಿಸಿದ್ದರು. ಈ ಸರ್ಕಾರ ಮುಂದಾಲೋಚನೆ ಇಲ್ಲದೆ ವಿದ್ಯುತ್ ಉತ್ಪಾದಕರಿಂದ ವಿದ್ಯುತ್ ಖರೀದಿಸಲು ಸರ್ಕಾರ ಚಿಂತಿಸಿಲ್ಲ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.
 ಲೋಡ್‌ಶೆಡ್ಡಿಂಗ್‌ನಿಂದಾಗಿ  ಮಾಗಡಿ  ಜೀವನಾಡಿಯಾಗಿರುವ ರೈತರು, ಕಾರ್ಮಿಕರು, ನೇಕಾರರು ಬಹುತೇಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ದಿನದಲ್ಲಿ  ಕನಿಷ್ಠ 4 ಗಂಟೆ ಕಾಲವೂ ಸರಿಯಾಗಿ ವಿದ್ಯುತ್ ಸರಬರಾಜು ಇಲ್ಲದ ಕಾರಣ ತೋಟಗಾರಿಕೆ, ಹೈನುಗಾರಿಕೆ, ಗುಡಿ ಕೈಗಾರಿಕೆ, ರೇಷ್ಮೆ ಕಾರ್ಖಾನೆಗಳನ್ನು ನಂಬಿರುವ ಸಾವಿರಾರು ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಒಳಗಾಗಿ ಪರಿತಪಿಸುವಂತಾಗಿದೆ. ಕಳೆದ ತಿಂಗಳಿನಿಂದ ನಿರಂತರವಾಗಿ ನಡೆಯುತ್ತಿರುವ ಪವರ್ ಕಟ್‌ನಿಂದಾಗಿ ನಾಗರಿಕರು ಪರಿತಪಿಸುವಂತಾಗಿದೆ. ಇರುವ ವಿದ್ಯುತ್ ಅನ್ನು ಕೈಗಾರಿಕಾ ಪ್ರದೇಶದ ಬಂಡವಾಳಶಾಹಿಗಳಿಗೆ ಪೂರೈಕೆ ಮಾಡಿ, ಬಡ ಜನರು ವಾಸಿಸುವ ಬಡಾವಣೆಗಳಲ್ಲೇ
ವಿದ್ಯುತ್ ಸರಬರಾಜು ಸ್ಥಗಿತ ಮಾಡುವ ಕುತಂತ್ರ ನಡೆಯುತ್ತಿದೆ. ಕೈಗಾರಿಕೋದ್ಯಮಿಗಳಿಗೆ ನಿರಂತರ
ವಿದ್ಯುತ್ ಪೂರೈಕೆ ಮಾಡುವ ಬೆಸ್ಕಾಂ ಸಾರ್ವಜನಿಕರ ಬಳಕೆಗೆ ವಿದ್ಯುತ್ ನೀಡಲು ಕುಂಟು ನೆಪ ಹೇಳುತ್ತಿದೆ. ಲಭ್ಯವಿರುವ ವಿದ್ಯುತ್ ಅನ್ನು ಸಾರ್ವಜನಿಕರಿಗೆ,  ಸಣ್ಣ ಕೈಗಾರಿಕೆಗಳಿಗೆ, ರೇಷ್ಮೆ ಹುರಿ ಕಾರ್ಖಾನೆಗಳಿಗೆ, ರೈತರ ಪಂಪ್ ಸೆಟ್‌ಗಳ ಬಳಕೆ ನೀಡಿ ಬೇಕಾದರೆ ಉಳಿದದ್ದನ್ನು ಕೈಗಾರಿಕೆಗಳಿಗೆ ಸರಬರಾಜು ಮಾಡಲಿ ಎಂದು ಆಗ್ರಹಿಸಿದರು.
ಸಮಯ ನಿಗದಿ ಮಾಡಿ: ವಿದ್ಯುತ್ ಸರಬರಾಜು ಮಾಡಲು ತೀವ್ರ ಸಮಸ್ಯೆ ಇದ್ದದ್ದೇ ನಿಜವಾದಲ್ಲಿ ದಿನಕ್ಕೆ ಇಂತಿಷ್ಟು ಅವಧಿ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಪ್ರಕಟಿಸಲಿ. ವಿದ್ಯುತ್ ಸರಬರಾಜು ನಡೆಯುವ ಸಮಯವನ್ನು ಪಾರದರ್ಶಕವಾಗಿ ಸಾರ್ವಜನಿಕರಿಗೆ ನೀಡಲಿ. ಬೇಕಾದಾಗ ಸರಬರಾಜು ಮಾಡುವುದು, ಇಷ್ಟ ಬಂದಾಗ
ಸ್ಥಗಿತಗೊಳಿಸುವ ಅವೈಜ್ಞಾನಿಕ ಧೋರಣೆ ಅನುಸರಿಸಲಾಗುತ್ತಿದೆ. ಅದನ್ನು ಬಿಟ್ಟು ಅರ್ಧ ಗಂಟೆ ವಿದ್ಯುತ್ ಕೊಟ್ಟು 3 ಗಂಟೆ ತೆಗೆಯುವುದು, ಪ್ರತಿ ಅರ್ಧಗಂಟೆಗೊಮ್ಮೆ ಲೋಡ್ ಶೆಡ್ಡಿಂಗ್ ಮಾಡುವುದು ಸರಿಯಲ್ಲ ಎಂದರು.
ತೀವ್ರ ಪ್ರತಿಭಟನೆ ಎಚ್ಚರಿಕೆ: ಈ ಕೂಡಲೇ ಮೇಲಧಿಕಾರಿಗಳು  ರೈತರ ಸಂಕಷ್ಟವನ್ನು ಅರ್ಥ ಮಾಡಿಕೊಂಡು ಅವೈಜ್ಞಾನಿಕ ಲೋಡ್‌ಶೆಡ್ಡಿಂಗ್ ನಿಲ್ಲಿಸಬೇಕು. ತಪ್ಪಿದಲ್ಲಿ ವ್ಯಾಪಕ ಹೋರಾಟ ರೂಪಿಸಬೇಕಾದೀತು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಬಿ.ಬಿ.ಆರ್  ಮತ್ತು ಆರ್.ಡಿ.ಸಿ.ಸಿ ಬ್ಯಾಂಕ್ ಜಿಲ್ಲಾಧ್ಯಕ್ಷ ಎಚ್.ಎನ್.ಅಶೋಕ್, ತಾ.ಪಂ. ಅಧ್ಯಕ್ಷ ಜಿ. ಕೃಷ್ಣ, ಸದಸ್ಯರಾದ ಬಿ.ಟಿ. ವೆಂಕಟೇಶ್, ಅರುಂಧತಿ ಚಿಕ್ಕಣ್ಣ, ಪೊಲೀಸ್ ರಾಮಣ್ಣ, ಜಿ.ವಿ. ರಾಮಣ್ಣ, ಜಿ.ಪಂ. ಸದಸ್ಯರಾದ ಕೆ.ಮುದ್ದುರಾಜ ಯಾದವ್, ವಿಜಯಕುಮಾರ್, ಬಮೂಲ್ ನಿರ್ದೇಶಕ ನರಸಿಂಹಮೂರ್ತಿ, ನಾರಸಂದ್ರ ಗ್ರಾ.ಪಂ. ಮಾಜಿ ಅಧ್ಯಕ್ಷ ಎಂ.ಎಚ್. ಸುರೇಶ್, ಮರೂರು ಅನುಸೂಯಮ್ಮ ಮರಿಗೌಡ, ಶಿವರಾಜು, ರವೀಶ್, ಭೈರಪ್ಪ, ಲಕ್ಕೇನಹಳ್ಳಿ ಗಂಗರಾಜು, ಚಲುವಯ್ಯ, ನಾಗೇಂದ್ರ, ಡಿಂಗ್ರಿ ನರಸಿಂಹಮೂರ್ತಿ, ಏಸಪ್ಪನಪಾಳ್ಯದ ಗಂಗಣ್ಣ, ರಾಜಣ್ಣ, ಲತಾ ವೆಂಕಟೇಶ್, ಸೇರಿದಂತೆ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.