ರಾಮಮ್ಮನ ಕೆರೆ ಏರಿ ಸ್ಥಿತಿ ರಾಮ ರಾಮ!
ಚನ್ನಪಟ್ಟಣ: ಕೆರೆಯ ಆದಿಯಿಂದ ಅಂತ್ಯದವರೆಗೂ ಒಂದಡಿ ಕಲ್ಲುಗಳೇ ಇಲ್ಲಿ ತಡೆಗೋಡೆ, ಎಡಭಾಗದಲ್ಲಿ ಐವತ್ತು ಅಡಿ ಆಳದ ಕಂದಕ, ಬಲಕ್ಕೆ ನೀರು ತುಂಬಿರುವ ಕೆರೆ, ಎಚ್ಚರ ತಪ್ಪಿದರೆ ಯಮಪುರಿ ಪ್ರವೇಶ ಖಚಿತ. ಇದು ಚನ್ನಪಟ್ಟಣದಿಂದ ಮಲ್ಲನಕುಪ್ಪೆಗೆ ಸಂಪರ್ಕ ಕಲ್ಪಿಸುವ ಮಾರ್ಗಮಧ್ಯೆ ಇರುವ ರಾಮಮ್ಮನ ಕೆರೆ ಏರಿಯ ಸ್ಥಿತಿಗತಿ.
ಹೌದು... ನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಈ ರಸ್ತೆಯಲ್ಲಿ ಒಂದಡಿ ಕಲ್ಲುಗಳೇ ಶತಮಾನದಿಂದಲೂ ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತಿವೆ. ಸುಮಾರು ಒಂದೂವರೆ ಕಿಲೋ ಮೀಟರ್ ಕೆರೆಯ ಏರಿಯ ಮೇಲೆ ಸಾಗಬೇಕಾಗಿದ್ದು, ಮಧ್ಯೆ ಮೂರು ತಿರುವುಗಳಿವೆ. ಏರಿಯ ಒಂದು ಬದಿಯ 50 ಅಡಿ ಕೆಳಗೆ ಕೆರೆಯ ಜಲಾನಯನ ಪ್ರದೇಶವಿದ್ದರೆ ಇನ್ನೊಂದು ಬದಿಯಲ್ಲಿ ಕೆರೆ ಇದೆ. ಕೊಂಚ ಎಚ್ಚರ ತಪ್ಪಿದರೂ ಕೆರೆಗೆ ಅಥವಾ ಕಂದಕಕ್ಕೆ ಉರುಳಿ ಬೀಳುವ ಅಪಾಯದಲ್ಲೇ ಪ್ರತಿನಿತ್ಯ ವಾಹನ ಸವಾರರು ಸಂಚರಿಸುತ್ತಿದ್ದಾರೆ.
ಗುಂಡಿಮಯ ರಸ್ತೆ: ನೆರೆಯ ತುಮಕೂರು ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಈ ರಸ್ತೆ 30 ಅಡಿಯದ್ದಾಗಿದ್ದು, ಏಕಕಾಲಕ್ಕೆ ಎರಡು ವಾಹನಗಳು ಸಂಚರಿಸಲು ತುಸು ತ್ರಾಸದಾಯಕವಾಗಿದೆ. ಆದರೂ ಹೋಗೋಣವೆಂದು ಮೊಂಡು ಧೈರ್ಯಮಾಡಲು ಹೊರಟರೆ ರಸ್ತೆ ಮಧ್ಯೆ ಇರುವ ಗುಂಡಿಗಳು ಸೀದಾ ಕೆರೆಯೊಳಕ್ಕೆ ಅಥವಾ ಕಂದಕಕ್ಕೆ ದಾರಿ ತೋರಿಸುತ್ತವೆ.
ರಸ್ತೆ ಡಾಂಬರೀಕರಣಗೊಂಡು ವರ್ಷಗಳೇ ಕಳೆದಿದ್ದು, ಬಹುತೇಕ ರಸ್ತೆ ಗುಂಡಿಮಯವಾಗಿದೆ. ಇನ್ನು ತಡೆಗೋಡೆಯಂತಿರುವ ಕಲ್ಲುಗಳು ಅಲ್ಲಲ್ಲಿ ಕಿತ್ತುಹೋಗಿದ್ದು, ಅವುಗಳನ್ನು ಬದಲಿಸುವ ಕಾರ್ಯ ಇಂದಿಗೂ ಆಗಿಲ್ಲ.
ಕೆರೆಯಂಗಳಕ್ಕೆ ಆಟೋ-ಟ್ರ್ಯಾಕ್ಟರ್ ಪಟ್ಟಣದಿಂದ ತಿಟ್ಟಮಾರನಹಳ್ಳಿಯವರೆಗೆ ಇರುವ ಈ ಕೆರೆಯ ಏರಿಯ ಮೇಲೆ ಹಲವು ಬಾರಿ ಅಪಘಾತಗಳು ನಡೆದಿದ್ದು, ಕಳೆದೆರಡು ವರ್ಷಗಳ ಹಿಂದೆ ಪ್ರಯಾಣಿಕರ ಆಟೋ ಹಾಗೂ ಟ್ರ್ಯಾಕ್ಟರ್ ಕೆರೆಯೊಳಗೆ ನುಗ್ಗಿ ಸಾವು ನೋವು ಸಂಭವಿಸಿತ್ತು. ಹಾಗೆಯೇ ದ್ವಿಚಕ್ರ ವಾಹನಗಳು, ಸೈಕಲ್ ಸವಾರರು ನಿಯಂತ್ರಣ ತಪ್ಪಿ ಕೆರೆಯೊಳಗೆ ಬಿದ್ದು ನೋವನುಭವಿಸಿದ ಪ್ರಕರಣಗಳು ಇಂದಿಗೂ ಹಸಿರಾಗಿಯೇ ಇವೆ.
ಪ್ರತಿಬಾರಿ ಅಪಘಾತಗಳು ನಡೆದಾಗ ಕಿತ್ತುಹೋಗಿರುವ ಕಲ್ಲುಗಳನ್ನು ಮತ್ತೆ ಅಲ್ಲಿ ಸ್ಥಾಪಿಸಲು ಲೋಕೋಪಯೋಗಿ ಇಲಾಖೆ ಮಾತ್ರ ಮನಸ್ಸು ಮಾಡಿಲ್ಲ. ಪರಿಣಾಮ ತಡೆಗೋಡೆಯೇ ಇಲ್ಲದೆ ಉಸಿರು ಬಿಗಿ ಹಿಡಿದುಕೊಂಡು ಪ್ರಯಾಣಿಕರು ಸಾಗುವ ಪರಿಸ್ಥಿತಿ ಎದುರಾಗಿದೆ. ಹೊಂಗನೂರು ಕೆರೆ ಏರಿಯದ್ದೂ ಇದೇ ಪರಿಸ್ಥಿತಿ ಇನ್ನು ಚನ್ನಪಟ್ಟಣದಿಂದ ಸಾತನೂರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮಧ್ಯೆ ಬರುವ ಹೊಂಗನೂರು ಕೆರೆಯ ಏರಿಯ ಪರಿಸ್ಥಿತಿಯೂ ರಾಮಮ್ಮನ ಕೆರೆ ಏರಿಗಿಂತ ಭಿನ್ನವಾಗಿಲ್ಲ. ಇಲ್ಲಿಯೂ ಸಹ ಒಂದಡಿ ಕಲ್ಲುಗಳೇ ತಡೆಗೋಡೆಯಾಗಿ ನಿರ್ವಹಿಸುತ್ತಿದ್ದು, ಏಕಕಾಲಕ್ಕೆ ಒಂದೇ ವಾಹನ ಹೋಗುವಷ್ಟೇ ಜಾಗವಿರುವ ರಸ್ತೆ ಗುಂಡಿಮಯವಾಗಿ ವಾಹನ ಸವಾರರಿಗೆ ಸವಾಲಾಗಿ ಪರಿಣಮಿಸಿದೆ.
ರಸ್ತೆ ದುರವಸ್ಥೆಯಿಂದಲೇ ಅಪಘಾತ: ಕೆರೆ ಏರಿಯ ಮೇಲೆ ರಸ್ತೆ ಅಪಘಾತಗಳು ಸಂಭವಿಸಲು ರಸ್ತೆಗಳ ಅವ್ಯವಸ್ಥೆಯೇ ಪ್ರಧಾನ ಪಾತ್ರ ವಹಿಸುತ್ತಿದ್ದು, ರಸ್ತೆಯಲ್ಲಿನ ಗುಂಡಿ ತಪ್ಪಿಸಲು ಹೋಗಿ ಕೆರೆಯೊಳಗೆ ನುಗ್ಗಿದ ಪ್ರಕರಣಗಳೇ ಹೆಚ್ಚಾಗಿವೆ. ಹಾಗೆಯೇ ರಸ್ತೆಗಳು ಕಿರಿದಾಗಿರುವುದರಿಂದ ಓವರ್ ಟೇಕ್ ಮಾಡಲೋಗಿ ಕೆರೆಯೊಳಗೆ ಹೋದ ಉದಾಹರಣೆಗಳು ಸಾಕಷ್ಟಿವೆ.
ರಸ್ತೆಗಳನ್ನು ಸಾಧ್ಯವಾದಷ್ಟು ಅಗಲಗೊಳಿಸುವುದು ಹಾಗೂ ಡಾಂಬರೀಕರಣಗೊಳಿಸಿ ಸುಸ್ಥಿತಿಯಲ್ಲಿಟ್ಟರೆ ಅಪಘಾತಗಳು ಕಡಿಮೆಯಾಗಲಿವೆ. ಹಾಗೆಯೇ ಏರಿಯುದ್ದಕ್ಕೂ ತಡೆಗೋಡೆ ನಿರ್ಮಿಸಿದರೆ ಕೆರೆಗೆ ಹಾರವಾಗುವ ಸನ್ನಿವೇಶ ನಿಯಂತ್ರಣಕ್ಕೆ ಬರಲಿದೆ.
- ಸು.ನಾ. ನಂದಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

