ಬೆಂಗಳೂರು ಗ್ರಾಮಾಂತರ

ಏಲಕ್ಕಿ ಬಾಳೆಗೆ ಬೇಡಿಕೆ, ಬೆಲೆ ದಿಢೀರ್ ಇಳಿಕೆ

Published On :

ರಾಮನಗರ: ಏಲಕ್ಕಿ ಬಾಳೆಗೆ ಬೇಡಿಕೆ ಜತೆಗೆ ಬೆಲೆಯೂ ದಿಢೀರ್ ಕುಸಿದಿದೆ. ವರ್ಷವಿಡೀ ಬೆವರು ಬಸಿದು ಬಾಳೆ  ಬೆಳೆದಿರುವ ರೈತರು ಗಣನೀಯ ಇಳಿಮುಖವಾಗಿರುವ ಧಾರಣೆಯಿಂದ ಕಂಗಾಲಾಗಿದ್ದಾರೆ.  
ಸಹಕಾರಿ ವ್ಯವಸ್ಥೆಯಡಿ ಸ್ಥಾಪಿತವಾದ ಹಾಪ್‌ಕಾಮ್ಸ್ ನೆರೆಯ ತಮಿಳುನಾಡಿನಿಂದ ಅಧಿಕ ಪ್ರಮಾಣದಲ್ಲಿ ಬಾಳೆ ಸರಬರಾಜು ಮಾಡಿಕೊಂಡು, ತನ್ನ ಆಧಾರಸ್ಥಂಭವಾಗಿರುವ ರಾಜ್ಯದ ರೈತರ ಗಾಯದ ಮೇಲೆ ಬರೆ ಎಳೆದಿದೆ.   
ಕೆಜಿಗೆ ರು.22.50: ಆಗಸ್ಟ್ ಮಾಹೆಯಲ್ಲಿ ಪ್ರತಿ ಕೆಜಿಗೆ ರು.55 ಇದ್ದ ಬಾಳೆ ಧಾರಣೆ ನಂತರ ನಿರಂತರವಾಗಿ ಕುಸಿಯುತ್ತಾ ಬಂದಿದೆ. ಡಿ.25ರಂದು ಹಾಪ್‌ಕಾಮ್ಸ್ ನಿಗದಿಪಡಿಸಿದ ದರ ರು.22.50 ಆಗಿದೆ.
ಆಗಸ್ಟ್ ಮಾಹೆಗೆ ಹೋಲಿಸಿದರೆ ಪ್ರಸ್ತುತ ಮಾರುಕಟ್ಟೆಯಲ್ಲಿ ಏಲಕ್ಕಿ ಬಾಳೆ ಧಾರಣೆ ಬರೋಬ್ಬರಿ ಅರ್ಧದಷ್ಟು ಕಡಿಮೆಯಾಗಿದೆ. ಬೆಳೆದ ರೈತರು ವಿಧಿಯಿಲ್ಲದೆ ಸಿಕ್ಕಷ್ಟೇ ಬೆಲೆಗೆ ಬಾಳೆ ಪೂರೈಸುವ ಪರಿಸ್ಥಿತಿ ಎದುರಾಗಿದೆ.
ನಿರಂತರ ಕುಸಿತ: ಪ್ರತಿ ಕೆಜಿ ಏಲಕ್ಕಿ ಬಾಳೆಗೆ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ರು.45, ನವೆಂಬರ್‌ನಲ್ಲಿ ರು.40 ಆಸುಪಾಸಿನಲ್ಲಿ ಧಾರಣೆ ಇತ್ತು.  ಡಿಸೆಂಬರ್ ಪ್ರಾರಂಭದ ವೇಳೆಗೆ ಬೆಲೆ ರು.35ಕ್ಕೆ ಕುಸಿದಿತ್ತು. ಕಳೆದೆರಡು ವಾರದಿಂದ ನಿರಂತರ ಕುಸಿತ ಕಂಡಿದೆ.
ಬಾಳೆ ಖರೀದಿ ಬೆಲೆ ಡಿ.1ರಲ್ಲಿ ರು.35, ಡಿ.5ಕ್ಕೆ ರು.33, ಡಿ.10ಕ್ಕೆ ರು.32, ಡಿ.15ಕ್ಕೆ ರು.31.50, ಡಿ.16ಕ್ಕೆ ರು.30, ಡಿ.18ಕ್ಕೆ ರು.28, ಡಿ.21ಕ್ಕೆ ರು.23.50, ಡಿ.25ಕ್ಕೆ ರು.22.50 ಹೀಗೆ ಪಾತಾಳಕ್ಕಿಳಿಯುತ್ತಲೇ ಬಂದಿದೆ.
ಪ್ರತಿಕೂಲ ಪರಿಸ್ಥಿತಿ: ಹೇಳಿ ಕೇಳಿ ಇದು ಧನುರ್ಮಾಸ. ಇದರಲ್ಲಿ ಹಬ್ಬ ಹರಿದಿನ, ಮದುವೆ ಮುಂಜಿಯಂತಹ ಶುಭ ಕಾರ್ಯಗಳಿರುವುದಿಲ್ಲ. ಚಳಿಗಾಲದಲ್ಲಿ ಸಾಮಾನ್ಯವಾಗಿ ಹಣ್ಣು ಸೇವನೆ ಪ್ರಮಾಣ ತೀರಾ ಕಡಿಮೆ. ಇದು ಏಲಕ್ಕಿ ಬಾಳೆಗೆ ಬೇಡಿಕೆಯೊಟ್ಟಿಗೆ ಬೆಲೆ ಕುಸಿತಕ್ಕೆ ಇತರೆ ಪ್ರಮುಖ ಕಾರಣ.
ಡಿಸೆಂಬರ್- ಜನವರಿ ಮಾಹೆಯಲ್ಲಿ ತಮಿಳುನಾಡಿನಿಂದ ಹೆಚ್ಚು ಹೊಳಪು, ಗಾತ್ರದೊಂದಿಗೆ ಆಕರ್ಷಣೀಯವಾಗಿರುವ ಏಲಕ್ಕಿ ಬಾಳೆ ಹೇರಳವಾಗಿ ಹಾಪ್‌ಕಾಮ್ಸ್ ಮಾರುಕಟ್ಟೆಗೆ ತಲುಪುತ್ತಿದೆ. ಇದರಿಂದ ಬೆಲೆ ಕುಸಿದು ಸ್ಥಳೀಯ ರೈತರು ನಷ್ಟ ಅನುಭವಿಸುತ್ತಿದ್ದಾರೆ.
ಕಡಿಯದೆ ವಿಧಿಯಿಲ್ಲ: ಉತ್ತಮ ಧಾರಣೆ ಸಿಕ್ಕಾಗ ಮಾರಾಟ ಮಾಡೋಣವೆಂದರೆ ರಾಜ್ಯದಲ್ಲಿ ಬಾಳೆ ಗೊನೆಗಳನ್ನು ಶೇಖರಿಸಿಡುವ ಶೈತ್ಯಾಗಾರ ವ್ಯವಸ್ಥೆ ಇಲ್ಲ. ಹೆಚ್ಚು ದಿನ ಗೊನೆಗಳನ್ನು ಗಿಡದಲ್ಲೇ ಬಿಟ್ಟರೆ ಕಾಯಿಗಳು ಒಡೆದು, ನಷ್ಟ ಉಂಟಾಗುತ್ತದೆ.
ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಕೊಳವೆ ಬಾವಿ ಆಶ್ರಿತ ರೈತರು ತಮ್ಮ ಬೆಳೆಗೆ ಸಮರ್ಪಕವಾಗಿ ನೀರೊದಗಿಸಲಾಗುತ್ತಿಲ್ಲ. ನೀರಿನ ಕೊರತೆಯಿಂದ ಬಾಳೆ ಇಳುವರಿ ಕುಂಠಿತವಾಗುತ್ತದೆ. ಇದಲ್ಲದೆ ಕಳ್ಳರ ಹಾವಳಿಯೂ ಹೆಚ್ಚಿರುವ ಕಾರಣ ರೈತರು ಧಾರಣೆ ಎಷ್ಟೇ ಇರಲಿ ಸಕಾಲದಲ್ಲಿ ಗೊನೆಗಳನ್ನು ಕಡಿದು, ಮಾರಾಟ ಮಾಡಲೇಬೇಕು.
ಇಷ್ಟಲ್ಲದೆ, ರೈತರು ಹಾಪ್ ಕಾಮ್ಸ್ ಮತ್ತಿತರ ಘಟಕಗಳಿಗೆ ಬಾಳೆ ಸರಬರಾಜು ಮಾಡಲು ಅನುಮತಿ ಪಡೆಯುವುದಕ್ಕೂ ವಾರಗಟ್ಟಲೆ ಕಾಯುವ ದಯನೀಯ ಸ್ಥಿತಿಯೂ ಇದೆ. ಬೆಲೆ ಮತ್ತು ಬೇಡಿಕೆ ಕುಸಿತದ ಹಿಂದೆ ಹಾಪ್‌ಕಾಮ್ಸ್ ಮಾಫಿಯಾದ್ದೇ ಕೈವಾಡ ಶಂಕೆಯಿದೆ.

ಮತ್ತೀಕೆರೆ ಜಯರಾಮ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.