ಬೆಂಗಳೂರು ಗ್ರಾಮಾಂತರ

ಪ್ರತಿ ವಾರ್ಡಲ್ಲೂ ಸಾರ್ವಜನಿಕ ಕುಂದುಕೊರತೆ ಸಭೆ

Published On :

ಕ.ಪ್ರ.ವಾರ್ತೆ   ರಾಮನಗರ    ಡಿ.26
ಅರಾಜಕತೆ ಮತ್ತು ದುರಾಡಳಿತಕ್ಕೆ ಹೆಸರಾಗಿರುವ ರಾಮನಗರ ನಗರಸಭೆಯು ಎಲ್ಲ ವಾರ್ಡ್ಗಳಲ್ಲೂ ಸಾರ್ವಜನಿಕ ಕುಂದು ಕೊರತೆ ಸಭೆಯನ್ನು ಆಯೋಜಿಸುವ ಮೂಲಕ ಈ ಕಳಂಕವನ್ನು ತೊಡೆದುಕೊಳ್ಳಲು ಮುಂದಾಗಿದೆ.
ಇದರ ಪ್ರಥಮ ಹೆಜ್ಜೆಯಾಗಿ ಗುರುವಾರ ಐಜೂರಿನ ನೀರಿನ ಟ್ಯಾಂಕ್ ಬಳಿ 28, 29, 30ನೇ ವಾರ್ಡ್ಗಳ ಕುಂದುಕೊರತೆ ಸಭೆಯು ನಗರಸಭೆ ಆಯುಕ್ತ ಯಶವಂತ ಕುಮಾರ್ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.  ಆದರೆ, ಈ ಭಾಗದ ಜನರಿಗೆ ಸಭೆ ನಡೆಯುವ ಬಗ್ಗೆ ಮಾಹಿತಿಯೇ ಇರಲಿಲ್ಲ. ಹೀಗಾಗಿ ಕೇವಲ ಬೆರಳೆಣಿಕೆ ಮಂದಿಯಷ್ಟು ಮಾತ್ರ ಸಭೆಯಲ್ಲಿ ಪಾಲ್ಗೊಂಡು ತಮ್ಮ ಸಮಸ್ಯೆಗಳನ್ನು ತೋಡಿಕೊಂಡರು.
ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುವುದಿಲ್ಲ ಎಂಬುದನ್ನು ನಗರಸಭೆ ಅಧಿಕಾರಿಗಳು ಮೊದಲೇ ಊಹಿಸಿದಂತಿತ್ತು. ಏಕೆಂದರೆ ಸಭೆಗೆ ಕೇವಲ 25 ರಿಂದ 30 ಕುರ್ಚಿಗಳನ್ನು ಮಾತ್ರ ಹಾಕಲಾಗಿತ್ತು. ಈ ಪೈಕಿ ಅರ್ಧದಷ್ಟು ಕುರ್ಚಿಗಳಲ್ಲಿ ನಗರಸಭೆ ಮತ್ತು ಜಲ ಮಂಡಳಿ ಅಧಿಕಾರಿಗಳು ಮತ್ತು ಅರ್ಧದಷ್ಟು ಕುರ್ಚಿಗಳಲ್ಲಿ ಪತ್ರಕರ್ತರೇ ಆಸೀನರಾಗಿದ್ದರು.
ಕಡಿಮೆ ಜನ: ಈ ಮೂರೂ ವಾರ್ಡ್ಗಳಲ್ಲಿ ವಾಸಿಸುವ ಬಹುತೇಕರು ಕೂಲಿ ಕಾರ್ಮಿಕರಾದರೆ, ಮತ್ತೆ ಕೆಲವರು ಸರ್ಕಾರಿ ನೌಕರರು. ಸಭೆಗೆ ಹಾಜರಾಗಿ ತಮ್ಮ ಕುಂದುಕೊರತೆಗಳನ್ನು ತೋಡಿಕೊಳ್ಳಬೇಕಾದರೆ ಕೂಲಿ ಕಾರ್ಮಿಕರು ಒಂದು ದಿನದ ಕೂಲಿ ಕಳೆದುಕೊಳ್ಳಬೇಕಿತ್ತು. ಸರ್ಕಾರಿ ನೌಕರರು ಒಂದು ದಿನ ರಜೆ ತೆಗೆದುಕೊಳ್ಳಬೇಕಿತ್ತು. ಹೀಗಾಗಿ ಜನರು ಸಭೆಗೆ ಬರದೆ ತಂತಮ್ಮ ಕೆಲಸ ಕಾರ್ಯಗಳಿಗೆ ತೆರಳಿದ್ದರು. ಇತ್ತೀಚಿನ ದಿನಗಳಲ್ಲಿ ನಗರಸಭೆಗೆ ನಿರೀಕ್ಷಿತ ಆದಾಯ ಇಲ್ಲದಾಗಿದೆ. ಇದಕ್ಕೆ ಸಮರ್ಪಕ ರೀತಿಯಲ್ಲಿ ತೆರಿಗೆ ವಸೂಲಿ ಮಾಡದಿರುವುದೂ ಒಂದು ಕಾರಣವಾಗಿದೆ. ಇದನ್ನರಿತ ನಗರಸಭೆ ಅಧಿಕಾರಿಗಳು ಕರಪತ್ರಗಳನ್ನು ಮುದ್ರಿಸಿ ಹಂಚುವ ಮೂಲಕ ತೆರಿಗೆ ವಸೂಲಿಗೆ ಮುಂದಾಗಿದ್ದಾರೆ.
ಸಭೆಯಲ್ಲಿ ಹಾಜರಿದ್ದ ಬೆರಳೆಣಿಕೆ ಮಂದಿಯಲ್ಲಿ 3-4 ಮಂದಿ ಮಾತ್ರ ಸಮಸ್ಯೆಗಳನ್ನು ಅನಾವರಣಗೊಳಿಸಿದರು. ಇದರಲ್ಲಿ ಕುಡಿಯುವ ನೀರಿನ ಸಮಸ್ಯೆಯೇ ಪ್ರಮುಖವಾಗಿತ್ತು. ವಾರದಲ್ಲಿ ಕೇವಲ ಅರ್ಧ ಗಂಟೆ ಮಾತ್ರ ನೀರು ಪೂರೈಸಲಾಗುತ್ತಿದೆ. ನಲ್ಲಿಗಳಿಗೆ ಮೋಟಾರ್ ಅಳವಡಿಸಿಕೊಂಡಿರುವುದರಿಂದ ಎತ್ತರದ ಪ್ರದೇಶಗಳಲ್ಲಿರುವವರಿಗೆ ನೀರೇ ಬರುವುದಿಲ್ಲ. ಅನಧಿಕೃತ ಸಂಪರ್ಕಗಳನ್ನು ಪಡೆಯಲು ಜಲಮಂಡಳಿ ಸಿಬ್ಬಂದಿಯೇ ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಪಾರ್ಕ್ಗಳ ಅಭಿವೃದ್ಧಿ, ಮಲ್ಲೇಶ್ವರ ಕೆರೆ ಶುದ್ಧೀಕರಣ ಮತ್ತು ಅಭಿವೃದ್ಧಿ, ರುದ್ರಭೂಮಿಗೆ ಬೇಡಿಕೆ, ಅಕ್ರಮ ಮದ್ಯ ಮಾರಾಟ ತಡೆಗಟ್ಟುವುದು, ಸ್ವಚ್ಛತೆಗೆ ಆದ್ಯತೆ ನೀಡಬೇಕು. ಮಲ್ಲೇಶ್ವರ ಕೆರೆ ಬಳಿ ಹಳೆ ಟೈರ್ಗಳನ್ನು ಸುಡಲಾಗುತ್ತಿದೆ. ಇದರಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದ್ದು, ಕೂಡಲೇ ಇದನ್ನು ತಡೆಗಟ್ಟಬೇಕು ಎಂದು ಆಗ್ರಹಿಸಿದರು.
30ನೇ ವಾರ್ಡ್ನಲ್ಲಿ ಅಂಗನವಾಡಿಗೆ ಸ್ವಂತ ಕಟ್ಟಡ ಇಲ್ಲದೆ ಸಮುದಾಯ ಭವನದಲ್ಲಿ ನಡೆಯುತ್ತಿದೆ. ಇದರಿಂದ ಸಮುದಾಯ ಭವನ ನಿರ್ಮಾಣದ ಮೂಲ ಉದ್ದೇಶ ಈಡೇರಿಲ್ಲ. ಹೀಗಾಗಿ ಜರೂರಾಗಿ ಅಂಗನವಾಡಿ ಕಟ್ಟಡ ನಿರ್ಮಿಸಬೇಕು. ಸಮುದಾಯ ಭವನದಲ್ಲಿ ಸಭೆ, ಸಮಾರಂಭ ನಡೆಸಲು ಅವಕಾಶ ಕಲ್ಪಿಸಬೇಕು ಎಂದು ಸ್ಥಳೀಯ ನಿವಾಸಿ ಮೋಹನ್ ಕುಮಾರ್ ತಿಳಿಸಿದರು.
30ನೇ ವಾರ್ಡ್ನಲ್ಲಿ ವಾಸಿಸುತ್ತಿರುವ ದಲಿತರಿಗೆ 22.75ರ ಯೋಜನೆಯಡಿಯಲ್ಲಿ ಅನುಕೂಲ ಕಲ್ಪಿಸಬೇಕು. ಹಿರಿಯ ನಾಗರಿಕರಿಗೆ ಹಾಗೂ ವಿಕಲಚೇತನರಿಗೆ ಗುರುತಿನ ಚೀಟಿ ವಿತರಿಸುವುದು, ಬೀದಿ ನಾಯಿ ಕಾಟ ತಪ್ಪಿಸುವುದು ಹಾಗೂ ಕೆಟ್ಟು ನಿಂತಿರುವ ಬೀದಿ ದೀಪಗಳನ್ನು ಕೂಡಲೇ ಸರಿಪಡಿಸಬೇಕು ಎಂದರು.  ಎಲ್ಲವನ್ನೂ ಕೇಳಿದ ನಗರಸಭೆ ಅಧಿಕಾರಿಗಳು ಸಮಸ್ಯಾತ್ಮಕ ಜಾಗಗಳಿಗೆ ಭೇಟಿ ಇತ್ತು, ಪರಿಶೀಲಿಸುವ ನಾಟಕವಾಡಿದರು. ಎಲ್ಲ ಸಮಸ್ಯೆಗಳನ್ನೂ ಈಡೇರಿಸುವ ಪೊಳ್ಳು ಭರವಸೆ ನೀಡಿ, ಇಂದಿನ ಕಾರ್ಯ ಮುಗಿಯಿತೆಂಬ ಸಮಾಧಾನದಿಂದ ಜಾಗ ಖಾಲಿ ಮಾಡಿದರು.


ತುರ್ತಾಗಿ ಪಾವತಿಸಿ
2013-14 ಸಾಲಿನ ಆರ್ಥಿಕ ವರ್ಷ ಪೂರ್ಣಗೊಳ್ಳಲು ಕೇವಲ ಮೂರು ತಿಂಗಳಷ್ಟೇ ಬಾಕಿ ಇರುವುದರಿಂದ ಪ್ರಸಕ್ತ ಸಾಲಿನ ಆಸ್ತಿ ತೆರಿಗೆಯನ್ನು ತುರ್ತಾಗಿ ಪಾವತಿಸಬೇಕು. ತಪ್ಪಿದಲ್ಲಿ ಕಾನೂನು ಪ್ರಕಾರವಾಗಿ ಆಸ್ತಿಗಳನ್ನು ಜಪ್ತಿ ಮಾಡಲಾಗುವುದು ಎಂದು ಕರಪತ್ರದಲ್ಲಿದೆ. ಈ ಕರಪತ್ರವನ್ನು ಓದಿದ ಸಾರ್ವಜನಿಕರು ಸಭೆ ನಡೆಯುವ ಕಡೆ ತಲೆ ಹಾಕಲಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.