ಬೆಂಗಳೂರು ಗ್ರಾಮಾಂತರ

6ನೇ ದಿನಕ್ಕೆ ಕಾಲಿಟ್ಟ ಮರಳು ಲಾರಿ ಮುಷ್ಕರ

Published On :

ದೊಡ್ಡಬಳ್ಳಾಪುರ: ರಾಜ್ಯ ಸರ್ಕಾರದ ಹೊಸ ಮರಳು ನೀತಿ ಪರಿಷ್ಕರಣೆಗೊಳ್ಳದಿದ್ದರೆ ಲಾರಿ ಮಾಲೀಕರು ಮತ್ತು ಮರಳು ಸಾಗಾಣಿಕೆಯಲ್ಲಿ ತೊಡಗಿರುವ ಲಕ್ಷಾಂತರ ಮಂದಿಯ ಪಾಲಿಗೆ ಅದು ಮರಣ ಶಾಸನವಾಗಲಿದೆ ಎಂದು ಕರ್ನಾಟಕ ರಾಜ್ಯ ಲಾರಿ ಮಾಲೀಕರು ಮತ್ತು ಏಜೆಂಟ್ ಅಸೋಸಿಯೇಷನ್ ಅಧ್ಯಕ್ಷ ಜಿ.ಆರ್. ಷಣ್ಮುಖಪ್ಪ ಆರೋಪಿಸಿದರು.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಲ್ಲಿನ ಮರಳು ಲಾರಿ ಮಾಲೀಕರು ನಡೆಸುತ್ತಿರುವ ಮುಷ್ಕರದ ಹಿನ್ನಲೆಯಲ್ಲಿ ದೊಡ್ಡಬಳ್ಳಾಪುರದಲ್ಲಿ ಮುಷ್ಕರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಮರಳು ನೀತಿಯನ್ನು ಸರ್ಕಾರ ಅವೈಜ್ಞಾನಿಕವಾಗಿ ರೂಪಿಸಿದೆ. ಮರಳು ಲಾರಿ ಮಾಲೀಕರಿಗೆ ಇಂತಿಷ್ಟು ಹಣ ಎಂದು ನಿಗದಿಪಡಿಸುವ ಮೂಲಕ ತಿಂಗಳ ಪರ್ಮಿಟ್ ವ್ಯವಸ್ಥೆ ಜಾರಿಗೆ ತರಬೇತು. ಮರಳು ಲಾರಿಗಳನ್ನು ಗುರುತಿಸಲು ಲಾರಿಗೆ ಹಳದಿ ಬಣ್ಣದ ಪಟ್ಟಿಯನ್ನು ಕಡ್ಡಾಯ ಮಾಡಬೇಕು. ಆಗ ಅಕ್ರಮ ಸಾಗಾಣಿಕೆಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿದೆ. ರಾಜ್ಯದ ಕೆಲ ಮಂತ್ರಿಗಳ ಮಕ್ಕಳೇ ಈ ರಾಜ್ಯದ ಮರಳನ್ನು ಹೊರರಾಜ್ಯಗಳಿಗೆ ಸಾಗಿಸಿ ಹಣ ಮಾಡುತ್ತಿದ್ದಾರೆ. ಆದರೆ ನಾವು ರೈತರಿಂದ ಖರೀದಿ ಮಾಡಿದ ಮರಳನ್ನು ಸಾಗಾಣಿಕೆ ಮಾಡುವಂತಿಲ್ಲ ಎಂದು ಹೇಳುವ ಸರ್ಕಾರದ ಕುಟಿಲ ನೀತಿ ಖಂಡನೀಯ ಎಂದರು.
ಮರಳು ಸಾಗಾಣಿಕೆದಾರರನ್ನು ಕಳ್ಳರಂತೆ ನೋಡುತ್ತಿರುವ ಸರ್ಕಾರ ಮತ್ತು ಪೊಲೀಸ್ ಇಲಾಖೆ ಮನಸೋಇಚ್ಛೆದಂಡ ಹಾಕಿ, ಕೇಸು ದಾಖಲಿಸಿ ಶೋಷಣೆಗೊಳಪಡಿಸುತ್ತಿದ್ದಾರೆ. ಬೆಂಗಳೂರಿಗೆ ಮರಳು ಸಾಗಿಸಲು ಸ್ಥಳೀಯ ಅಧಿಕಾರಿಗಳು ಮತ್ತು ಪೊಲೀಸರು ಅವಕಾಶ ಕೊಡುತ್ತಿಲ್ಲ. ಹೀಗಾಗಿ ಮರಳು ಸಾಗಾಣಿಕೆಗೆ ಸೂಕ್ತ ಭದ್ರತೆ ಒದಗಿಸುವಲ್ಲಿ ಹೊಸ ಮರಳು ನೀತಿ ಪರಿಷ್ಕರಿಸಿ ಪರವಾನಗಿ ನೀಡಬೇಕು. ಲಾರಿಗಳಿಗೆ 2500 ರಿಂದ 7000ದವರೆಗೆ ದಂಡ ಹೇರುವುದಲ್ಲದೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುತ್ತಿರುವುದು ನಿಲ್ಲಬೇಕು. ರಾಜ್ಯದೆಲ್ಲೆಡೆ ಮರಳು ಸಾಗಾಣಿಕೆದಾರರಿಗೆ ಕೆಲ ಭ್ರಷ್ಟ ಅಧಿಕಾರಿಗಳು ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಸಾರಿಗೆ ಇಲಾಖೆ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಂದ ಕಿರುಕುಳ ನಿರಂತರವಾಗಿ ನಡೆಯುತ್ತಿದೆ ಎಂದು ಆರೋಪಿಸಿದರು.
ಮರಳು ಲಾರಿಗಳಿಗೆ 3 ಅಡಿ ಮರಳು ಸಾಗಾಣಿಕೆಗೆ ಅನುಮತಿ ನೀಡಬೇಕು. ಸಂಪೂರ್ಣ ಟಾರ್ಪಾಲ್ ಹೊದಿಸಿರುವಂತೆ ಕಡ್ಡಾಯಗೊಳಿಸಬೇಕು. 10 ಚಕ್ರದ ವಾಹನಗಳಿಗೆ 4 ಅಡಿ ಮರಳು ಸಾಗಿಸಲು ಅನುಮತಿ ನೀಡಬೇಕು. ರಾಜ್ಯದಿಂದ ಕೇರಳ ಮತ್ತು ಗೋವಾಕ್ಕೆ ಸಾಗಾಣಿಕೆಯಾಗುತ್ತಿರುವ ಅಕ್ರಮ ನಿಲ್ಲಿಸಲು ಕ್ರಮ ಕೈಗೊಳ್ಳಬೇಕು. ಬೆಂಗಳೂರು ನಗರಕ್ಕೆ ಮರಳು ಸಾಗಿಸಲು ಕೂಡಲೇ ಅನುಮತಿ ನೀಡಬೇಕು. ಸೂಕ್ತ ಮರಳು ನೀತಿ ಜಾರಿಗೆ ಬರುವವರೆಗೆ ಹೋರಾಟ ಮುಂದುವರೆಸಲಾಗುವುದು ಎಂದರು.
ತಾಲೂಕು ಸಂಘದ ಅಧ್ಯಕ್ಷ ಆರ್. ಕೆಂಪರಾಜು ಮಾತನಾಡಿ, ಸರ್ಕಾರ ನಮ್ಮ ಮನವಿಗೆ ಸ್ಪಂದಿಸುವ ಮನಸ್ಸು ಮಾಡಿಲ್ಲ. ಇದೇ ಪರಿಸ್ಥಿತಿ ಮುಂದುವರೆದರೆ ಮುಂಬರುವ ದಿನಗಳಲ್ಲಿ  ಎಲ್ಲಾ ರೀತಿಯ ಕಟ್ಟಡ ಸಾಮಗ್ರಿಗಳ ಸಾಗಾಣಿಕೆಯನ್ನು ಸ್ಥಗಿತಗೊಳಿಸಿ ಹೋರಾಟವನ್ನು ತೀವ್ರಗೊಳಿಸಬೇಕಾದೀತು ಎಂದು ಎಚ್ಚರಿಕೆ ನೀಡಿದರು. ಯಶವಂತಪುರದ ಲಾರಿ ಅಸೋಸಿಯೇಷನ್ನ ರುದ್ರಪ್ಪ, ಮೈಸೂರು ಅಸೋಸಿಯೇಷನ್ನ ಅಧ್ಯಕ್ಷ ಶ್ರೀನಿವಾಸ್, ಪ್ರದೀಪ್, ದೊಡ್ಡಬಳ್ಳಾಪುರ ಲಾರಿ ಮಾಲೀಕರ ಸಂಘಧ ಪದಾಧಿಕಾರಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.