ಆಸ್ತಿ ದೋಚಲು ಮಾರಣಾಂತಿಕ ಹಲ್ಲೆ ಆರೋಪ
ಕ.ಪ್ರ.ವಾರ್ತೆ ರಾಮನಗರ ಡಿ.27
ತಾಲೂಕಿನ ಚಿಕ್ಕಗಂಗವಾಡಿಯಲ್ಲಿ ಆಸ್ತಿ ಲಪಟಾಯಿಸಲು ಭಾಗ್ಯಮ್ಮ ಮತ್ತು ಆಕೆಯ ಪುತ್ರ ಶಶಿಕುಮಾರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪಿಗಳನ್ನು ಜಿಲ್ಲೆಯಿಂದ ಗಡಿಪಾರು ಮಾಡುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಮಿನಿ ವಿಧಾನಸೌಧ ಆವರಣದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು ಕಂದಾಯ ಭವನದವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿ ಜಿಲ್ಲಾಡಳಿತ ಮತ್ತು ಪೊಲೀಸರ ವಿರುದ್ಧ ಘೋಷಣೆ ಕೂಗಿದರು. ಬಳಿಕ ಜಿಲ್ಲಾಧಿಕಾರಿ ವಿಶ್ವನಾಥ್ ಅವರಿಗೆ ಮನವಿ ಸಲ್ಲಿಸಿದರು.
ಹಲ್ಲೆಗೊಳಗಾಗಿರುವ ಭಾಗ್ಯಮ್ಮ ಮತ್ತು ಶಶಿಕುಮಾರ್ ದಲಿತ ಕೋಮಿಗೆ ಸೇರಿದ್ದು, ಸವರ್ಣೀಯರು ಅವರಿಬ್ಬರ ಕತ್ತುಕೊಯ್ದು ಹಲ್ಲೆ ನಡೆಸಿದ್ದಾರೆ. ಆದರೆ, ಹಲ್ಲೆ ನಡೆಸಿದವರು ವಿರುದ್ಧ ಪೊಲೀಸರು ಸೂಕ್ತ ಕಾನೂನು ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಮೃಧು ಧೋರಣೆ: ಹಲ್ಲೆ ನಡೆಸಲು ಕಾರಣ ಏನು ಹಾಗೂ ಹಲ್ಲೆ ನಡೆಸಿದವರ ವಿರುದ್ಧ ಪೊಲೀಸರು ಮೃದು ಧೋರಣೆ ತಳೆಯಲು ಕಾರಣ ಏನು ಎಂಬುದನ್ನು ಅರಿಯಲು ಸಿಒಡಿ ತನಿಖೆ ಅನಿವಾರ್ಯವಾಗಿದೆ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಆಗ್ರಹಿಸಿದರು.
ದೌರ್ಜನ್ಯ ಹೆಚ್ಚಳ: ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿವೆ. ಇದನ್ನು ನಿಯಂತ್ರಿಸಬೇಕಾದ ಉನ್ನತಾಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಇದು ದೌರ್ಜನ್ಯ ನಡೆಸುವವರಿಗೆ ಪ್ರೇರಣೆ ನೀಡಿದಂತಾಗಿದೆ ದಸಂಸ ರಾಜ್ಯ ಪ್ರಧಾನ ಸಂಚಾಲಕ ಮಾವಳಿ ಶಂಕರ್ ಆರೋಪಿಸಿದರು.
ಚನ್ನಪಟ್ಟಣದ ಕುಂತೂರುದೊಡ್ಡಿಯಲ್ಲಿ ಸವರ್ಣೀಯರು ತಮಗೆ ಗೌರವ ನೀಡಿಲ್ಲವೆನ್ನುವ ಕಾರಣಕ್ಕೆ ಆ ಗ್ರಾಮದ ದಲಿತರಾದ ದಾಸಪ್ಪ ಮತ್ತು ಸ್ವಾಮಿ ಮೇಲೆ ಹಲ್ಲೆ ನಡೆಸಿದ್ದಾರೆ. ಆ ಪ್ರಕರಣದಲ್ಲೂ ಪೊಲೀಸರು ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿಲ್ಲ ಎಂದು ಟೀಕಿಸಿದರು.
ಇತರೆ ಪ್ರಕರಣ: ಹೊನ್ನಗನಹಳ್ಳಿ ಗ್ರಾಮದ ದಲಿತ ಸಿದ್ಧರಾಜು ಮತ್ತು ನಾಗರಾಜು ಮೇಲಿನ ಹಲ್ಲೆ ಹಾಗೂ ದರೋಡೆ, ಕನಕಪುರ ತಾಲೂಕಿನ ಕೊತ್ತನೂರು ಗ್ರಾಮದ ದಲಿತರ ಕುಟುಂಬದವರ ಜಮೀನು ಕಬಳಿಕೆ ಪ್ರಕರಣಗಳಲ್ಲೂ ನ್ಯಾಯ ದೊರಕಿಲ್ಲ ಎಂದು ಸಂಘಟನೆಯ ಜಿಲ್ಲಾ ಸಂಚಾಲಕ ಪಿ.ಸೋಮಶೇಖರ್ ಆಕ್ರೋಶ ವ್ಯಕ್ತಪಡಿಸಿದರು.
ಕನಕಪುರದ ಆನೆಹೊಸಹಳ್ಳಿ ಗ್ರಾಮದಲ್ಲಿ ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವ ದಲಿತರಿಗೆ ಸಾಗುವಳಿ ಚೀಟಿ, ಪಹಣಿ, ಮ್ಯುಟೇಶನ್ ಕಾಪಿ ಇದ್ದು, ಕಂದಾಯವನ್ನೂ ಪಾವತಿಸುತ್ತಿದ್ದಾರೆ. ಇದನ್ನು ಸಹಿಸದ ಸವರ್ಣೀಯರು ಕೊಲೆ ಬೆದರಿಕೆ ಹಾಕಿ ವ್ಯವಸಾಯ ಮಾಡದಂತೆ ತಡೆದಿದ್ದಾರೆ. ಈ ದೂರಿನ ಪ್ರತಿ ಕಸದ ಬುಟ್ಟಿ ಸೇರಿದೆ ಎಂದು ಟೀಕಿಸಿದರು.
ರಾಮನಗರದ ಅರ್ಕೇಶ್ವರ ಕಾಲೋನಿಯಲ್ಲಿ ಔಟ್ ಪೋಸ್ಟ್ ಸ್ಥಾಪನೆ ಬೇಡಿಕೆಯೂ ಈಡೇರಿಲ್ಲ ಎಂದು ಹೇಳಿದರು. ಪ್ರತಿಭಟನೆಯಲ್ಲಿ ಚಕ್ಕಲೂರು ಚೌಡಯ್ಯ, ಸಿ.ರಂಗಯ್ಯ, ಬೈರಲಿಂಗಯ್ಯ, ಜೆ.ಎಂ.ಶಿವಲಿಂಗಯ್ಯ, ಶಾಂತಮೂರ್ತಿ, ಸುರೇಶ್, ಕೃಷ್ಣ, ಶಿವಮುತ್ತು, ಕೃಷ್ಣ, ಹರೀಶ್, ಸಂದೀಪ್, ರವೀಂದ್ರ ಮತ್ತಿತರರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

