ಮಕ್ಕಳ ಸೃಜನಶೀಲ ಆಲೋಚನೆ ಗೌರವಿಸಿ
ಕ.ಪ್ರ.ವಾರ್ತೆ ದೊಡ್ಡಬಳ್ಳಾಪುರ ಡಿ.27
ಮಕ್ಕಳ ಸೃಜನಶೀಲ ಆಲೋಚನೆಗಳಿಗೆ ಮಹತ್ವ ನೀಡದೆ ಕೇವಲ ಅಂಕಗಳ ಆಧಾರದಲ್ಲಿ ಅವರ ಸಾಮರ್ಥ್ಯವನ್ನು ಅಳೆಯುವುದು ಸರಿಯಲ್ಲ. ಅಂಕಗಳು ಮತ್ತು ರ್ಯಾಂಕುಗಳೇ ಮುಖ್ಯವಾದರೆ ನೈಜ ಕಲಿಕೆಗೆ ಹೊಡೆತ ಬೀಳುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬೆಂ.ಗ್ರಾ.ಜಿಲ್ಲಾ ಪಂಚಾಯಿತಿ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ನೇತೃತ್ವದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಕ್ಕಳನ್ನು ಪರೀಕ್ಷೆಯ ಫಲಿತಾಂಶದ ಆಧಾರದಲ್ಲಿ ಅಳೆಯುವುದು ಸರಿಯಾದ ಮೌಲ್ಯಮಾಪನ ಅಲ್ಲ. ಅದು ಪರಿಪೂರ್ಣವಾಗದು. ಸ್ಪರ್ಧಾ ಭರಾಟೆಯಲ್ಲಿ ವ್ಯಕ್ತಿತ್ವ ಸಂವೇದನೆಗಳನ್ನು ಮರೆತೇ ಬಿಟ್ಟಿದ್ದೇವೆ. ಶಾಲೆಯಲ್ಲಿ ಓದದೇ ಬಂದವರೂ ಸಾಮಾಜಿಕವಾಗಿ ಬೆಳೆದಿರುವ ಇತಿಹಾಸವಿದೆ. ಮಗುವನ್ನು ಒಬ್ಬ ಹೊಣೆಯಾಧಾರಿತ ಪ್ರಜೆಯಾಗಿಸುವ ಜವಾಬ್ದಾರಿಯನ್ನು ಮರೆಯಬಾರದು ಎಂದರು.
ದೊಡ್ಡಬಳ್ಳಾಪುರ ಶಾಸಕ ಟಿ. ವೆಂಕಟರಮಣಯ್ಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎನ್. ಹನುಮಂತೇಗೌಡ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಎಂ. ಗುರುರಾಜ್, ತಾಲೂಕು ಪಂಚಾಯಿತಿ ಅಧ್ಯಕ್ಷೆ ನರಸಮ್ಮ, ಜಿಲ್ಲಾ ಪಂಚಾಯಿತಿ ಸಿಇಓ ಕೃಷ್ಣಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ಡಿ. ಸತ್ಯನಾರಾಯಣಗೌಡ, ಕಾಂಗ್ರೆಸ್ ಮುಖಂಡ ತಿ.ರಂಗರಾಜು, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ತಿಮ್ಮೇಗೌಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಆಕರ್ಷಕ ವೇಷಭೂಷಣ: ಪ್ರತಿಭಾ ಕಾರಂಜಿಯ 50ಕ್ಕೂ ಹೆಚ್ಚು ಸ್ಪರ್ಧೆಗಳಲ್ಲಿ ಜಿಲ್ಲೆಯ ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ, ನೆಲಮಂಗಲ ತಾಲೂಕುಗಳ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ತರಾವರಿ ವೇಷಭೂಷಣಗಳ ಪ್ರದರ್ಶನ, ಜಾನಪದ, ಸಾಂಸ್ಕೃತಿಕ ನೃತ್ಯ, ಏಕಪಾತ್ರಾಭಿನಯ, ಛದ್ಮವೇಷಗಳಲ್ಲಿ ಆಕರ್ಷಕ ಉಡುಗೆ ವೇಷಗಳನ್ನು ಧರಿಸಿ ವಿದ್ಯಾರ್ಥಿಗಳು ಗಮನ ಸೆಳೆದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

