ಬಟ್ಟೆಗೆ ಬಣ್ಣ ಹಚ್ಚುವ ಕೈಗಾರಿಕೆಗಳ ಮೇಲೆ ದಾಳಿ
ರಾಮನಗರ: ತಾಲೂಕಿನ ಬಿಡದಿ ಹೋಬಳಿಯ ಎರೇಪಾಳ್ಯ ಗ್ರಾಮದಲ್ಲಿ ಅನಧಿಕೃತವಾಗಿ ಕಾರ್ಯ ನಿರ್ವಹಿಸುತ್ತಿದ್ದ ಬಟ್ಟೆಗೆ ಬಣ್ಣ ಹಚ್ಚುವ ಕೈಗಾರಿಕೆಗಳ ಮೇಲೆ ದಾಳಿ ನಡೆಸಿದ ತಹಸೀಲ್ದಾರ್ ನೇತೃತ್ವತ್ವದ ಅಧಿಕಾರಿಗಳ ತಂಡ ಜೆಸಿಬಿ ಯಂತ್ರದಿಂದ ಧ್ವಂಸಗೊಳಿಸಿದೆ. ಬಟ್ಟೆಗೆ ಬಣ್ಣ ಹಚ್ಚುವ ಕಾರ್ಖಾನೆಗಳಿಂದ ಪರಿಸರ ನೈರ್ಮಲ್ಯ ಉಂಟಾಗುತ್ತಿದ್ದು, ಈ ಕೈಗಾರಿಕೆಗಳನ್ನು ಕೂಡಲೇ ಸ್ಥಗಿತಗೊಳಿಸಬೇಕೆಂದು ಸ್ಥಳೀಯ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಈ ಸಂಬಂಧ ಜಿಲ್ಲಾಧಿಕಾರಿ ಡಾ.ವಿಶ್ವನಾಥ್ ಅವರು ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಟಾಸ್ ಫೋರ್ಸ್ ಸಮಿತಿಗೆ ಸೂಚಿಸಿದ್ದರು. ಕೂಡಲೇ ಕಾರ್ಯ ಪ್ರವೃತ್ತರಾದ ತಹಸೀಲ್ದಾರ್ ಹನುಮಂತರಾಯಪ್ಪ ನೇತೃತ್ವದ ಟಾಸ್ಕ್ ಫೋರ್ಸ್ ಸಮಿತಿಯು ಎರೇಪಾಳ್ಯ ಗ್ರಾಮದ ಜಮೀನಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 2 ಬಣ್ಣ ಹಚ್ಚುವ ಕಾರ್ಖಾನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈ ಕಾರ್ಖಾನೆಗಳು ಯಾವುದೇ ಪರವಾನಗಿ ಇಲ್ಲದೆ ಅನಧಿಕೃತವಾಗಿ ಕಾರ್ಯ ನಿರ್ವಹಿಸುತ್ತಿರುವುದು ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಎರಡೂ ಕಾರ್ಖಾನೆಗಳನ್ನು ಜೆಸಿಬಿ ಯಂತ್ರದಿಂದ ಧ್ವಂಸಗೊಳಿಸಲಾಯಿತು.
ಯುವ ಸಂಸತ್ ಸ್ಪರ್ಧೆ ಪ್ರತಿವರ್ಷ ಆಯೋಜನೆ
ರಾಮನಗರ: ವಿದ್ಯಾರ್ಥಿಗಳಿಗೆ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಕಾರ್ಯ ವೈಖರಿಗಳ ಬಗ್ಗೆ ಅರಿವು ಮೂಡಿಸುವ ಮೂಲಕ ಪ್ರಜಾಪ್ರಭುತ್ವದ ಬುನಾದಿಯನ್ನು ಭದ್ರಪಡಿಸುವ ಉದ್ದೇಶದಿಂದ ಯುವ ಸಂಸತ್ ಸ್ಪರ್ಧೆಯನ್ನು ಪ್ರತಿ ವರ್ಷ ಆಯೋಜಿಸಲಾಗುತ್ತಿದೆ ಎಂದು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆಯ ಪದನಿಮಿತ್ತ ಉಪ ಕಾರ್ಯದರ್ಶಿ ಬಿ.ಜಿ.ಶ್ಯಾಮಲ ತಿಳಿಸಿದರು. ನಗರದ ಗುರುಭವನದಲ್ಲಿ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಶನಿವಾರ ನಡೆದ 2013-14ನೇ ಸಾಲಿನ ಯುವ ಸಂಸತ್ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳಾದ ಶಿವರಾಮೇಗೌಡ, ಕನಕಪ್ಪ, ಸೋಮಲಿಂಗಯ್ಯ, ಶಿವಮಾಧು ಮತ್ತಿತರರು ಭಾಗವಹಿಸಿದ್ದರು.
ಕುಡಿವ ನೀರು ಯೋಜನೆ ತ್ವರಿತವಾಗಿ ಜಾರಿಗೊಳಿಸಿ
ರಾಮನಗರ: ಬೆಂಗಳೂರಿನ ಕೊಳಚೆ ನೀರನ್ನು ಹೊತ್ತು ಬರುವ ವೃಷಭಾವತಿ ನದಿಯಿಂದ ಬೈರಮಂಗಲದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಂತರ್ಜಲ ಕಲುಷಿತಗೊಂಡಿದೆ. ಈ ಭಾಗದ ಜನರಿಗೆ ಕಾವೇರಿ ಶುದ್ಧ ಕುಡಿಯುವ ನೀರು ಒದಗಿಸುವ ಯೋಜನೆಯನ್ನು ತ್ವರಿತವಾಗಿ ಜಾರಿಗೊಳಿಸಬೇಕು ಎಂದು ಜಿ.ಪಂ. ಅಧ್ಯಕ್ಷ ಎಚ್.ಸಿ.ರಾಜು ಹೇಳಿದರು. ತಾಲೂಕಿನ ಬಿಡದಿ ಹೋಬಳಿಯ ಬೈರಮಂಗಲ ಗ್ರಾಮದಲ್ಲಿ ರೋಟರಿ ಸಂಸ್ಥೆಯಿಂದ ಗ್ರಾಮದ ಜನರಿಗೆ ಕುಡಿಯುವ ನೀರಿನ ಶುದ್ಧೀಕರಣ ಸಾಮಗ್ರಿಗಳನ್ನು ವಿತರಿಸಿ ಅವರು ಮಾತನಾಡಿದರು. ರೋಟರಿ ಸಂಸ್ಥೆಯ ಅಧ್ಯಕ್ಷ ಆರ್.ಜಿ.ಚಂದ್ರಶೇಖರ್, ಜಿ.ರಾಮಯ್ಯ, ಡಾ.ಪದ್ಮ ವೆಂಕಟೇಶ್, ಡಾ.ರಂಗರಾಜು, ಪಿ.ಶೋಭಾ, ಮಹಾಲಿಂಗಯ್ಯ, ಅಲ್ತಾಫ್ ಅಹ್ಮದ್, ಎಂ.ಎಚ್.ಚಂದ್ರಶೇಖರ್, ಸಿದ್ದಪಾಜಿ, ಕುಮಾರಸ್ವಾಮಿ, ಸಿದ್ದೋಜಿ ರಾವ್, ಮರಿಸ್ವಾಮಿ ಹಾಜರಿದ್ದರು.
ಶಾಲಾ ವಾರ್ಷಿಕೋತ್ಸವ
ಮಂಡ್ಯದ ಕಲಾಮಂದಿರದಲ್ಲಿ ಮಹರ್ಷಿ ವಾಲ್ಮೀಕಿ ಸೆಂಟ್ರಸಲಸ್ ಸ್ಕೂಲ್ ವತಿಯಿಂದ ನಡೆದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಶಾಲಾ ಮಕ್ಕಳು ನೃತ್ಯ ಪ್ರದರ್ಶನ ನೀಡಿದರು.
ಕಿರುಕುಳ ತಾಳಲಾರದ ಪ್ರೇಯಸಿ ಆತ್ಮಹತ್ಯೆ
ರಾಮನಗರ: ಪ್ರಿಯಕರನ ಕಿರುಕುಳ ತಾಳಲಾರದ ಪ್ರೇಯಸಿ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಐಜೂರಿನಲ್ಲಿ ಶನಿವಾರ ನಡೆದಿದೆ. ನಾಗಮಂಗಲ ಮೂಲದ ತಸ್ಮಿಯಾ ತಬಸ್ಸಮ್ (25) ಆತ್ಮಹತ್ಯೆಗೆ ಶರಣಾದ ಮಹಿಳೆ. ಈಕೆ ಕಳೆದ 15 ದಿನಗಳಿಂದ ನಗರದ ಐಜೂರಿನ ಪೀರನ್ ಷಾ ಎಂಬುವರು ನೀಡಿದ್ದ ಬಾಡಿಗೆ ಮನೆಯಲ್ಲಿ ತನ್ನ ಪ್ರಿಯಕರ ಬೆಂಗಳೂರು ಬನಶಂಕರಿಯ ಇಲಿಯಾಜ್ ನಗರದ ವಾಸಿ ಸಯ್ಯದ್ ಫಜಲ್ ಜತೆ ವಾಸವಿದ್ದಳು. ಸಯ್ಯದ್ ಫಜಲ್ಗೆ ಈಗಾಗಲೇ ಮದುವೆಯಾಗಿದ್ದು ಹೆಂಡತಿ ಹಾಗೂ 4 ಮಕ್ಕಳಿದ್ದಾರೆ. ತಸ್ಮಿಯಾ ಜತೆ ಅನೈತಿಕ ಸಂಬಂಧ ಇರಿಸಿಕೊಂಡಿದ್ದನು ಎಂದು ಹೇಳಲಾಗಿದೆ. ತಸ್ಮಿಯಾ ತಬಸ್ಸುಮ್ ಮತ್ತು ಸಯ್ಯದ್ ಫಜಲ್ ನಡುವೆ ರಾತ್ರಿಯಿಡೀ ಜಗಳ ನಡೆದಿದ್ದು, ತಸ್ಮಿಯಾ ಮೇಲೆ ಹಲ್ಲೆ ನಡೆದಿತ್ತು. ಇದರಿಂದ ನೊಂದ ಆಕೆ ಬೆಳಗಿನ ಜಾವ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ. ಸಯ್ಯದ್ ಫಜಲ್ನನ್ನು ಸಾರ್ವಜನಿಕರು ಪೊಲೀಸರ ವಶಕ್ಕೊಪ್ಪಿಸಿದ್ದಾರೆ. ಈ ಸಂಬಂಧ ಐಜೂರು ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆಪಾದನೆ ಮೇಲೆ ಪ್ರಕರಣ ದಾಖಲಾಗಿದೆ.
ಜಿಎಸ್ಎಸ್ ಸಾಹಿತ್ಯ ಅಜರಾಮರ
ಆನೇಕಲ್ಲು: ರಾಷ್ಟ್ರ ಕವಿ ಜಿ.ಎಸ್. ಶಿವರುದ್ರಪ್ಪ ಅವರು ತಮ್ಮ ಅಭೂತ ಪೂರ್ವ ಸಾಹಿತ್ಯ ಕೃಷಿ ಮೂಲಕ ಜನ ಮಾನಸದಲ್ಲಿ ಸ್ಥಾವರವಾಗಿ ಉಳಿದಿದ್ದಾರೆ ಎಂದು ಆನೇಕಲ್ ಕಸಾಪ ಅಧ್ಯಕ್ಷ ಹನುಮದಾಸ್ ತಿಳಿಸಿದ್ದಾರೆ. ಅವರು ಆನೇಕಲ್ಲಿನ ರಾಮಕುಟೀರದಲ್ಲಿ ಸಮಾನ ಮನಸ್ಕ ಕನ್ನಡ ಬಳಗ, ತಾಲೂಕು ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ಕಾವ್ಯ ಶಕ್ತಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿ ಕವಿಯ ಭಾವಕ್ಕೆ ಎಲ್ಲೆ ಇರುವುದಿಲ್ಲ. ಅದರ ಸಾರವನ್ನು ಅರಿತು ಅನುಭವಿಸುವ ಮೂಲಕ ಜೀವನ ಸಾರ್ಥಕತೆ ಕಂಡುಕೊಳ್ಳಬಹುದೆಂದರು. ನಿರೂಪಕಿ ಹಾಗೂ ಶಿಕ್ಷಕಿ ಅನುಪಮಾ ಮಾತನಾಡಿದರು. ಉದಯೋನ್ಮುಖ ಕವಿ ಆದರೂ ಪ್ರಕಾಶ್, ವಾಟಾಳ್ ಬಳಗದ ಆ.ನ. ನಾಗರಾಜು, ಸನಾಉಲ್ಲ, ಅಪ್ಸರ್ ಅಲಿಖಾನ್, ಮಧು, ಶ್ಯಾಮಮೂರ್ತಿ, ಚುಟುಕು ಶಂಕರ್, ಶಾಮಮೂರ್ತಿ, ಸರಸ್ವತಮ್ಮ, ಜಗನ್ನಾಥ್, ಅಶ್ರು ತರ್ಪಣ ಸಲ್ಲಿಸಿದರು.
ನಾಯಕರು ವಾಜಪೇಯಿ ಅವರನ್ನು ಅನುಸರಿಸಲಿ
ಮಾಗಡಿ: ಇಂದಿನ ನಾಯಕರು ಮಾಜಿ ಪ್ರಧಾನಿ ವಾಜಪೇಯಿ ಅವರನ್ನು ಅನುಸರಿಸಬೇಕಿದೆ ಎಂದು ಆರ್ಯ ಈಡಿಗ ಸಂಸ್ಥಾನದ ಪೀಠಾಧ್ಯಕ್ಷ ರೇಣುಕಾನಂದಸ್ವಾಮೀಜಿ ಹೇಳಿದರು. ಅವರು ಅಟಲ್ ಬಿಹಾರಿ ವಾಜಪೇಯಿ ಅಭಿಮಾನಿ ಬಳಗ ಮತ್ತು ಸೋಲೂರು ಹೋಬಳಿ ಭಾರತೀಯ ಜನತಾ ಪಕ್ಷ ಜಂಟಿಯಾಗಿ ತಾಲೂಕಿನ ಗುಡೇಮಾರನಹಳ್ಳಿ ಹ್ಯಾಂಡ್ ಪೋಸ್ಟ್ನಲ್ಲಿರುವ ಶ್ರೀ ಬಸವೇಶ್ವಸ್ವಾಮಿ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ವಾಜಪೇಯಿ ಅವರ ಹುಟ್ಟು ಹಬ್ಬದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಅವರೊಬ್ಬ ಸುಂದರ ಕನಸುಗಾರರು ಎಂದರು. ನೆಲಮಂಗಲ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ.ಪಿ. ಆನಂದ್, ಬಾಣವಾಡಿ ನಾರಾಯಣಪ್ಪ, ಬೃಂಗೇಶ್, ಹೇಮಂತ್ಕುಮಾರ್, ರಾಘವೇಂದ್ರ, ಶಿವಮ್ಮ ನಾಗರಾಜು, ಗುಡೇಮಾರನಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಮಂಜುಳ ಗೋಪಾಲಕೃಷ್ಣ, ನಂದೀಶ್ ಗೊಲ್ಲಳ್ಳಿ, ರಾಜಶೇಖರ್, ಸತ್ಯಭಾಮ ರವಿಕುಮಾರ್, ವೀರಭದ್ರಪ್ಪ ಇತರರು ಇದ್ದರು.
ಮಡಿವಾಳರ ಜನಜಾಗೃತಿ ಸಂಚಾರ ರ್ಯಾಲಿಗೆ ಚಾಲನೆ
ಮಾಗಡಿ: ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಜನವರಿ 5 ರಂದು ಹಮ್ಮಿಕೊಂಡಿರುವ ರಾಜ್ಯ ಮಡಿವಾಳರ ಜಾಗೃತಿ ಸಮಾವೇಶದ ಪ್ರಯುಕ್ತ ತಾಲೂಕು ಮಡಿವಾಳ ಮಾಚೀದೇವ ಸಂಘದ ವತಿಯಿಂದ ತಾಲೂಕಿನಾದ್ಯಂತ ಮಡಿವಾಳರ ಜನಜಾಗೃತಿ ಸಂಚಾರ ರ್ಯಾಲಿ ತೀವ್ರಗತಿಯಲ್ಲಿ ನಡೆದಿದೆ ಎಂದು ತಾಲೂಕು ಘಟಕದ ಅಧ್ಯಕ್ಷ ಕೆ.ಆರ್. ಉಮೇಶ್ ತಿಳಿಸಿದರು, ಅವರು ತಾಲೂಕಿನ ಶ್ರೀರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿ ಮಡಿವಾಳ ಜನಜೃತಿ ಸಂಚಾರ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದರು. ಉಪಾಧ್ಯಕ್ಷ ಎಂ.ಟಿ ಶಿವಣ್ಣ ಮಾತನಾಡಿದರು. ಕಾರ್ಯಾಧ್ಯಕ್ಷ ವೆಂಕಟರಾಮಯ್ಯ, ಪ್ರಧಾನ ಕಾರ್ಯದರ್ಶಿ ಟಿ.ಎಂ.ಶ್ರೀನಿವಾಸ್, ಖಜಾಂಚಿ ಪಿ.ರಾಜು, ಸಂಘಟನಾ ಕಾರ್ಯದರ್ಶಿ ಮಂಜನಾಥ್, ಹನುಮಂತರಾಜು, ಮುನಿರಂಗಯ್ಯ, ವೆಂಕಟಪ್ಪ, ರಂಗಸ್ವಾಮಿ, ಮರೂರು ತಿಮ್ಮರಾಜು, ಕಣ್ಣೂರು ಮಂಜಣ್ಣ ಇತರರು ಇದ್ದರು.
ತಾಯಿ, ಮಗು ನಾಪತ್ತೆ
ನೆಲಮಂಗಲ: ಮಗುವನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆಕೊಡಿಸಿಕೊಂಡು ಬರುವುದಾಗಿ ತಿಳಿಸಿ ಮನೆಯಿಂದ ಹೊರಟ ಮಹಿಳೆಯೋರ್ವಳು ಮಗುವಿನೊಂದಿಗೆ ಕಾಣೆಯಾಗಿರುವ ಘಟನೆ ಪಟ್ಟಣದ ವೀವರ್ಸ್ ಕಾಲೋನಿಯಲ್ಲಿ ನಡೆದಿದೆ. ಕಾಣೆಯಾದವರನ್ನು ಪಟ್ಟಣದ ವೀವರ್ಸ್ ಕಾಲೋನಿ ಹತ್ತಿರದ ಶಿವಾಜಿನಗರದಲ್ಲಿ ವಾಸವಾಗಿದ್ದ ಪದ್ಮಶ್ರೀ ಉರುಫ್ ಶಶಿಕಲಾ (26) ಹಾಗೂ ಆಕೆಯ ಮಗ ಲೋಹಿತ್ ಗೌಡ(4) ಎಂದು ಗುರುತಿಸಲಾಗಿದೆ. ಪದ್ಮಶ್ರೀ ಮೂರ್ತಿ ಎಂಬಾತನನ್ನು ವಿವಾಹವಾಗಿದ್ದರು. ಈಕೆಯ ತಾಯಿ ಅನುಸೂಯಮ್ಮ ಮಗಳು ಮತ್ತು ಮೊಮ್ಮಗ ಕಾಣೆಯಾಗಿರುವ ಬಗ್ಗೆ ಪಟ್ಟಣ ಪೊಲೀಸರಿಗೆ ದೂರು ನೀಡಿದ್ದಾರೆ. ಕಾಣೆಯಾದ ಪದ್ಮಶ್ರೀ 5.5 ಅಡಿ ಎತ್ತರವಿದ್ದು, ಎಣ್ಣೆಗೆಂಪು ಮೈಬಣ್ಣ, ಕೋಲುಮುಖ ಹೊಂದಿದ್ದು, ಕನ್ನಡ ಮಾತನಾಡುತ್ತಾರೆ. ಆಕೆಯ ಮಗ ಲೋಹಿತ್ಗೌಡ 2.5 ಅಡಿ ಎತ್ತರವಿದ್ದು, ಎಣ್ಣೆಗೆಂಪು ಬಣ್ಣ, ಗುಂಡುಮುಖ ಹೊಂದಿದ್ದು ಕನ್ನಡ ಮಾತನಾಡುತ್ತಾನೆಎಂದು ಪೊಲೀಸರು ತಿಳಿಸಿದ್ದಾರೆ. ಸುಳಿವು ದೊರೆತಲ್ಲಿ ದೂ. 080-27722133, 27726260, 9731809411ಗೆ ಸಂಪರ್ಕಿಸಲು ಕೋರಿದ್ದಾರೆ.
ಮಾಹಿತಿ...
ಮಂಡ್ಯ ತಾಲೂಕು ತಾಲೂಕಿನ ದುದ್ದ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉರಗತಜ್ಞ ಸ್ನೇಕ್ ಶಾಮ್ ಅವರು ವಿದ್ಯಾರ್ಥಿಗಳಿಗೆ ಹಾವುಗಳ ಬಗ್ಗೆ ಮಾಹಿತಿ ನೀಡಿದರು.
ದಕ್ಷ ತಂಡ ಆರಿಸುವ ಮೂಲಕ ಪ್ರೌಢತೆ ಮೆರೆಯಲಿ
ಮಾಗಡಿ: ಸಜ್ಜನ ಒಕ್ಕಲಿಗರು ದಕ್ಷ ತಂಡವನ್ನು ಆರಿಸುವ ಮೂಲಕ ಪ್ರೌಢತೆ ಮೆರೆಯಬೇಕಾಗಿದೆ ಎಂದು ಅಪ್ಪಾಜಿಗೌಡ ತಂಡದ ಅಭ್ಯರ್ಥಿ ಪೂಜಾರಿಪಾಳ್ಯದ ಕೆ.ಕೃಷ್ಣಮೂರ್ತಿ ತಿಳಿಸಿದರು. ಜ.5 ರಂದು ನಡೆಯಲಿರುವ ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ ಹಿನ್ನೆಲೆಯಲ್ಲಿ ಮತದಾರರನ್ನು ಕುರಿತು ಮಾತನಾಡಿದ ಅವರು, ಒಕ್ಕಲಿಗರ ಸಂಘವು ವೈದ್ಯಕೀಯ, ತಾಂತ್ರಿಕ ಶಿಕ್ಷಣ ಕಾಲೇಜುಗಳೂ ಸೇರಿದಂತೆ ಒಕ್ಕಲಿಗರ ಸಂಘವು ಒಟ್ಟು 21 ವಿದ್ಯಾಸಂಸ್ಥೆಗಳನ್ನು ನಡೆಸುತ್ತಿದ್ದು, ಹತ್ತಾರು ವರ್ಷಗಳಿಂದ ಅಭಿವೃದ್ಧಿ ಕುಂಠಿತವಾಗಿರುವ ಸಂಘದಲ್ಲಿ ಭ್ರಷ್ಟಾಚಾರ ಸ್ವಜನಪಕ್ಷಪಾತಗಳು ಮಿತಿ ಮೀರಿದೆ. ಡಾ.ಅಪ್ಪಾಜಿಗೌಡ ತಂಡವನ್ನು ಒಕ್ಕಲಿಗರು ಬಹುಮತದಿಂದ ಗೆಲ್ಲಿಸುವಂತೆ ಮನವಿ ಮಾಡಿದರು. ಅಭ್ಯರ್ಥಿ ಡಾ.ಅಪ್ಪಾಜಿಗೌಡ ಮಾತನಾಡಿ, ಬೆಂಗಳೂರಿನ ಸುತ್ತಮುತ್ತ ಎಂಟು ಸುಸಜ್ಜಿತ ಆಸ್ಪತ್ರೆಗಳು ಹಾಗೂ ವಿದ್ಯಾರ್ಥಿ ವಸತಿ ನಿಲಯಗಳನ್ನು ಪ್ರಾರಂಭಿಸಿ ಸದಸ್ಯರಿಗೆ ಶೇ.25 ರಿಯಾಯತಿ ದರದಲ್ಲಿ ಚಿಕಿತ್ಸೆ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಶೇ.5 ಮೀಸಲಾತಿ ಒದಗಿಸಲಾಗುವುದು. ಭ್ರಷ್ಟ ಆಡಳಿತದ ನಿರ್ಮೂಲನೆಗಾಗಿ ಸಜ್ಜನ, ಜನಪರ, ರೈತಪರ ಅಭ್ಯರ್ಥಿಗಳನ್ನು ಆರಿಸಲು ಕರೆ ನೀಡಿದರು.
ಇಂದು ಟೌನ್ ಸೊಸೈಟಿ ಶತಮಾನೋತ್ಸವ
ಮಾಗಡಿ: ಟೌನ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ನ ಶತಮಾನೋತ್ಸವ ಸಮಾರಂಭ ಡಿ.29 ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ಸೊಸೈಟಿ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಕಾರ್ಯದರ್ಶಿ ಟಿ.ಎನ್.ನರಸಿಂಹಮೂರ್ತಿ ತಿಳಿಸಿದ್ದಾರೆ. ಶಾಸಕ ಎಚ್.ಸಿ. ಬಾಲಕೃಷ್ಣ ಸಮಾರಂಭ ಉದ್ಘಾಟಿಸಲಿದ್ದಾರೆ. ಟೌನ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಆರ್. ರಂಗನಾಥಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು, ಸಂಸದ ಡಿ.ಕೆ. ಸುರೇಶ್ ಅವರು ಶತಮಾನೋತ್ಸವದ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮಾಜಿ ಸಚಿವ ಎಚ್.ಎಂ. ರೇವಣ್ಣ ಹಿರಿಯ ಸದಸ್ಯರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಿದ್ದಾರೆ. ಕೆಪಿಸಿಸಿ ಸದಸ್ಯ ಎ.ಮಂಜು, ಸೂರಾಜ್ ಡಿಜಿಟಲ್ ಪ್ರಿಂಟ್ ಮಾಲೀಕ ಹಾಗೂ ಸಮಾಜ ಸೇವಕ ಕೆ. ಕೃಷ್ಣಮೂರ್ತಿ, ತಹಸೀಲ್ದಾರ್ ಸಿ.ಎಚ್. ಶಿವಕುಮಾರ್, ಸಹಕಾರ ಸಂಘದ ಉಪನಿಬಂಧಕ ಕೆ.ಎನ್.ನಂಜುಂಡೇಗೌಡ, ಅಸ್ಲಾಂ ಪಾಷ, ಎನ್. ಬಾಸ್ಕರ್ ಸೇರಿದಂತೆ ಸೊಸೈಟಿ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಲಿದ್ದಾರೆ ಎಂದರು.
ದಾಸನಪುರ ಗ್ರಾಪಂ ನೂತನ ಅಧ್ಯಕ್ಷ ಎಂ.ಎಚ್. ರವಿ
ನೆಲಮಂಗಲ: ದಾಸನಪುರ ಗ್ರಾಮ ಪಂಚಾಯ್ತಿಯ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಎಂ.ಎಚ್.ರವಿ ಆಯ್ಕೆಗೊಂಡಿದ್ದಾರೆ. ಮಾಜಿ ಅಧ್ಯಕ್ಷ ಹನುಮಂತರಾಜು ಅವರ ರಾಜಿನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ 25 ಸದಸ್ಯರ ಬಲವನ್ನು ಹೊಂದಿರುವ ಪಂಚಾಯ್ತಿಯಲ್ಲಿನ ಅಧ್ಯಕ್ಷ ಸ್ಥಾನ ಸಾಮಾನ್ಯವಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ದಾಸನಪುರ ಕ್ಷೇತ್ರದ ಎಂ.ಎಚ್.ರವಿ ಮತ್ತು ಮಾಕಳಿ ಕ್ಷೇತ್ರದ ಸದಸ್ಯ ಮಂಜುನಾಥ್ ಸಿಂಗ್ ನಾಮಪತ್ರ ಸಲ್ಲಿಸಿದ್ದರು. ಚುನಾವಣೆಯು ನಡೆದು ಎಂ.ಎಚ್.ರವಿ ಅವರಿಗೆ 13 ಮತ ಬಂದರೆ ಪ್ರತಿ ಸ್ಪರ್ದಿ ಅಭ್ಯರ್ಥಿ ಮಂಜುನಾಥ್ಸಿಂಗ್ ಅವರಿಗೆ 11 ಮತಗಳು ಬಂದು ಪರಾಜಯಗೊಂಡರು. ನಡೆದ ಮತ ಚಲಾವಣೆಯಲ್ಲಿ ಒಂದು ಮತ ತಿರಸ್ಕೃತಗೊಂಡಿತ್ತು. ನೂತನ ಅಧ್ಯಕ್ಷರಿಗೆ ಇ.ಕೃಷ್ಣಪ್ಪ, ಎಲ್.ರಾಮಕೃಷ್ಣಪ್ಪ, ಮುನಿರಾಜು, ಗೋವಿಂದರಾಜು, ಎ.ಕೃಷ್ಣಪ್ಪ ಅಭಿನಂದನೆ ಸಲ್ಲಿಸಿದರು. ಚುನಾವಣಾಧಿಕಾರಿಯಾಗಿ ರೇಖಾ ಭಾಗವಹಿಸಿದ್ದರು.
ಪ್ರತಿಭಾ ಪ್ರದರ್ಶನಕ್ಕೆ ವಾರ್ಷಿಕೋತ್ಸವ ಉತ್ತಮ ವೇದಿಕೆ
ಆನೇಕಲ್ಲು: ಪ್ರತಿ ವಿದ್ಯಾರ್ಥಿಯಲ್ಲೂ ದೈವದತ್ತವಾಗಿ ವಿವಿಧ ಪ್ರತಿಭೆಗಳು ಅಡಗಿರುತ್ತದೆ. ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಆಸಕ್ತಿ ಅರಿತು ಪ್ರೋತ್ಸಾಹ ನೀಡಿದಲ್ಲಿ ವಿಶ್ವಕ್ಕೆ ಉಪಯುಕ್ತವಾಗುವ ಅನೇಕ ಸಂಗತಿಗಳು ಗರಿಗೆದರುತ್ತವೆ ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗವಿ ರಂಗಯ ತಿಳಿಸಿದ್ದಾರೆ. ಅವರು ಪಟ್ಟಣದ ಭಾರತಿ ಪ್ರೌಢಶಾಲೆಯ ವಾರ್ಷಿಕೋತ್ಸವದಲ್ಲಿ ಕಲಾ ಮತ್ತು ವಿಜ್ಞಾನ ವಸ್ತು ಪ್ರದರ್ಶನವನ್ನು ವೀಕ್ಷಿಸಿ ಮಾತನಾಡಿ ಹಿಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಆಯ್ದ ಮಕ್ಕಳಿಗೆ ಮಾತ್ರ ಅವಕಾಶ ಸಿಗುತ್ತಿತ್ತು ಎಂದು ಹೇಳಿದರು. ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಹಾಗೂ ಸಾಹಿತಿ ಬೆಸಗರಹಳ್ಳಿ ಎಲ್ಲೇಗೌಡರು ಮಾತನಾಡಿದರು. ಉದ್ಯಮಿ ಶ್ರೀಕಾಂತ್ ಅವರು ಮಾಹಿತಿ ತಂತ್ರಜ್ಞಾನ ಹಾಗೂ ಆಧುನಿಕ ಭಾರತ ಬಗ್ಗೆ ಮಾತನಾಡಿ ಬಹುಮಾನ ವಿತರಣೆ ಮಾಡಿದರು. ಮುಖ್ಯ ಶಿಕ್ಷಕರ ಕೃಷ್ಣಾರೆಡ್ಡಿ ಸ್ವಾಗತ ಕೋರಿದರು. ಶಿಕ್ಷಕ ಸಿ. ಮುನಿರಾಜು ವಂದನೆ ಸಲ್ಲಿಸಿದರು.
ಮಣ್ಣಿನ ದಿಬ್ಬ ಕುಸಿದು ವ್ಯಕ್ತಿ ಸಾವು
ದೊಡ್ಡಬಳ್ಳಾಪುರ: ಮಣ್ಣಿನ ದಿಬ್ಬ ಕುಸಿದ ಪರಿಣಾಮ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ತಾಲೂಕಿನ ಮೇಳೇಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕರಾಯಪ್ಪನಹಳ್ಳಿ ಹೊರವಲಯದಲ್ಲಿ ಶನಿವಾರ ನಡೆದಿದೆ. ಮೃತನನ್ನು ಮೆಳೇಕೋಟೆ ಗ್ರಾಮದ ಗಂಗಪ್ಪ ಎಂದು ಗುರುತಿಸಲಾಗಿದೆ. ಬೆಳಗಿನ ಜಾವ 4 ಗಂಟೆ ಸುಮಾರಿನಲ್ಲಿ ಈ ಘಟನೆ ನಡೆದಿದ್ದು, ಫಿಲ್ಟರ್ ಮರಳುಗಾರಿಕೆಗೆ ಗ್ರಾವಲ್ ಮಣ್ಣನ್ನು ತುಂಬುತ್ತಿದ್ದ ವೇಳೆ ಕಲ್ಲು ಬಂಡೆ ಉರುಳಿ ಮಣ್ಣಿನ ದಿಬ್ಬ ಕುಸಿದಿದೆ. ಮಣ್ಣಿನಡಿ ಸಿಲುಕಿದ ಗಂಗಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಈ ಪ್ರದೇಶದಲ್ಲಿ ಫಿಲ್ಟರ್ ಮರಳು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದ್ದು ಹಲವಾರು ಬಾರಿ ಇದನ್ನು ನಿಯಂತ್ರಿಸುವಂತೆ ಪೊಲೀಸರಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ತಾಲೂಕು ಆಡಳಿತ ಅಕ್ರಮ ಮರಳು ಅಡ್ಡೆಗಳ ಮೇಲೆ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ. ಇದು ಈ ರೀತಿಯ ದುರ್ಘಟನೆಗಳಿಗೆ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ಕುರಿ ದೊಡ್ಡಿಗೆ ಬೆಂಕಿ
ನಾಗಮಂಗಲ; ಜಮೀನಿನಲ್ಲಿ ರಸ್ತೆ ಮಾಡಲು ಅವಕಾಶ ನೀಡಲಿಲ್ಲ ಎಂಬ ಕಾರಣಕ್ಕಾಗಿ ಗುಂಪೊಂದು ದಲಿತ ಕುಟುಂಬಕ್ಕೆ ಸೇರಿದ ಕುರಿ ಕೊಟ್ಟಿಗೆ ಬೆಂಕಿ ಹಚ್ಚಿದ ಘಟನೆ ಶನಿವಾರ ತಾಲೂಕಿನ ದುಮ್ಮಸಂದ್ರ ಗ್ರಾಮದಲ್ಲಿ ಜರುಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಮಂದಿ ವಿರುದ್ಧ ಪ್ರಕರಣ ದಾಖಲಿಸಿರುವ ಬೆಳ್ಳೂರು ಪೊಲೀಸರು ದಲಿತ ಕುಟುಂಬವನ್ನು ಗ್ರಾಮದಿಂದಲೇ ಒಕ್ಕಲೆಬ್ಬಿಸುವ ಚಿತಾವಣಿ ಮಾಡಿದ ಹಿನ್ನೆಲೆಯಲ್ಲಿ ದೌರ್ಜನ್ಯ ಪ್ರಕರಣವನ್ನೂ ದಾಖಲಿಸಿದ್ದಾರೆ. ಕಾಳಿಂಗನಹಳ್ಳಿ - ಮೈಲಾರಪಟ್ಟಣ ಮಾರ್ಗವಾಗಿ ನಾಗಮಂಗಲಕ್ಕೆ ರಸ್ತೆ ಕಾಮಗಾರಿ ನಡೆಯುತ್ತಿದೆ. ದುಮ್ಮಸಂದ್ರದ ವರದರಾಜು ಜಮೀನಿನಲ್ಲಿ ರಸ್ತೆ ನಿರ್ಮಾಣಕ್ಕೆ ಅಗತ್ಯವಾಗಿರುವ ಸೇತುವೆ ನಿರ್ಮಿಸಬೇಕಾಗಿದೆ. ಗುತ್ತಿಗೆದಾರ ಜೆ.ಸಿ.ಬಿ. ಯಂತ್ರದಿಂದ ಕೆಲಸ ಆರಂಭಿಸಿದಾಗ, ವರದರಾಜು ಜಮೀನು ವಿವಾದ ನ್ಯಾಯಾಲಯದಲ್ಲಿದೆ. ಇತ್ಯರ್ಥವಾದ ಬಳಿಕ ಕೆಲಸ ಆರಂಭಿಸಿ ಎಂದು ಹೇಳಿದ್ದಾನೆ. ಕೊನೆಗೆ ಜಮೀನು ಮಾಲೀಕನ ಹಠಕ್ಕೆ ಬೇಸತ್ತು ಗ್ರಾಮದ 12 ಮಂದಿ ವರದರಾಜು ಕುಟುಂಬಕ್ಕೆ ಬೆದರಿಕೆ ಹಾಕಿ ನಂತರ ಕುರಿಯ ಕೊಟ್ಟಿಗೆಗೆ ಬೆಂಕಿಹಚ್ಚಲಾಗಿದೆ ಎಂದು ವರದರಾಜು ಮಗ ಪರಮಶಿವ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಅವ್ಯವಹಾರಗಳ ಸಂಬಂಧ ಅಹವಾಲು ಸ್ವೀಕಾರ
ಮೇಲುಕೋಟೆ: ಇಲ್ಲಿನ ಪ್ರಖ್ಯಾತ ಸಂಸ್ಕೃತ ಸಂಶೋಧನಾ ಸಂಸ್ಥೆಯ ಬಗ್ಗೆ ಕೇಳಿಬಂದಿರುವ ಅವ್ಯವಹಾರಗಳ ಆರೋಪದ ಬಗ್ಗೆ ಅಧ್ಯಯನ ಮಾಡಿ ವರದಿ ನೀಡಲು ಉಪವಿಭಾಗಾಧಿಕಾರಿ ವಾಣಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದ್ದು, ಡಿ.31 ರ ಮಂಗಳವಾರ ಸಮಿತಿ ಸಾರ್ವಜನಿಕರಿಂದ ಈ ಸಂಬಂಧ ಅಹವಾಲು ಸ್ವೀಕರಿಸಲಿದೆ.
ಮೇಲುಕೋಟೆಯ ಲೋಕೋಪಯೋಗಿ ಪ್ರವಾಸಿ ಮಂದಿರದಲ್ಲಿ ಬೆಳಿಗ್ಗೆ 11 ಗಂಟೆಗೆ ವಿಚಾರಣೆ ನಡೆಯಲಿದ್ದು, ಸಂಸ್ಕೃತ ಸಂಶೋಧನಾ ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ ಅನುದಾನ ದುರ್ಬಳಕೆ, ನೌಕರರ ನೇಮಕಾತಿ ಮತ್ತು ಇತರ ಅಕ್ರಮಗಳ ಆರೋಪದ ಸಂಬಂಧ ವಿಚಾರಣೆ ನಡೆಸಲಾಗುತ್ತಿದೆ.
ಸಾರ್ವಜನಿಕರು, ಸಂಸ್ಥೆಯ ಬಗ್ಗೆ ಹಿತಾಸಕ್ತಿಯುಳ್ಳವರು, ಸಂಸ್ಥೆಯ ನೌಕರರು ತಮ್ಮ ಆಕ್ಷೇಪಣೆಗಳು ಅಥವಾ ಯಾವುದೇ ದೂರುಗಳಿದ್ದಲ್ಲಿ ಸಮಿತಿಯ ಮುಂದೆ ಹಾಜರಾಗಿ ಲಿಖಿತ ಅಭಿಪ್ರಾಯ ಸಲ್ಲಿಸಬಹುದಾಗಿದೆ ಎಂದು ಪಾಂಡವಪುರ ತಹಸೀಲ್ದಾರ್ ಶಿವಕುಮಾರಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ರಿಸ್ಮಸ್
ಕ್ರಿಸ್ಮಸ್ ಅಂಗವಾಗಿ ಮಂಡ್ಯ ಬೆಂಗಳೂರು - ಮೈಸೂರು ಹೆದ್ದಾರಿ ಪಕ್ಕದಲ್ಲಿರುವ ಸಂತ ಫಿಲೋಮಿನಾ ಚರ್ಚ್ ಅನ್ನು ವಿದ್ಯುತ್ ದೀಪಗಳಿಂದ ಅಲಂಕರಿಸುರುವುದು.
ಅವರು ಹೇಳಿದ್ದು
ವಿಧಾನಸೌಧ ಮಾಲ್ ಆಗಿಬಿಟ್ಟಿದೆ. ಅಲ್ಲಿ ಈಗ ಏನನ್ನು ಬೇಕಾದರೂ ಕ್ರಯ ಮಾಡಬಹುದು, ಏನನ್ನು ಬೇಕಾದರೂ ಮಾರಾಟ ಮಾಡಬಹುದು.
ಟಿ ವಿಶ್ವನಾಥ್, ಸಂಸದ
ಒಳಮರ್ಮ
ವಿಧಾನಸೌಧದಲ್ಲಿ ಕುಳಿತು ಏನೇ ಡೀಲ್ ಮಾಡಿದ್ರೂ ಯಾರೂ ಕೇಳಂಗಿಲ್ಲ. ಏಕೆಂದರೆ ಅದು 'ಮಾಲ್' ಎಂದು ಹೇಳುತ್ತಿದ್ದಾರೆ.
ಪ್ರಧಾನ ಸಂಪಾದಕರಿಗೆ ಟ್ವೀಟ್ ಮಾಡಿ
ಅಗ್ಝಝಢಿಜಝಢಿಝ್ಠಇಛಡಿ
ನಮ್ಮ ಕಚೇರಿ ವಿಳಾಸ
ಕನ್ನಡಪ್ರಭ ಕಾರ್ಯಾಲಯ, ನಂ.22, ಮೊದಲ ಮಹಡಿ, ಮಮತ ಕಾಂಪ್ಲೆಕ್ಸ್ ಬೆನಕ ಬಜಾರ್ ರಸ್ತೆ, ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಪಕ್ಕ, ರಾಮನಗರ-562159.
ಓದುಗರಲ್ಲಿ ಮನವಿ
ನೀವು ಕನ್ನಡಪ್ರಭ ಪತ್ರಿಕೆಗೆ ಚಂದಾದಾರರಾಗಬೇಕೆ? ಸಂಪರ್ಕಿಸಿ ದೂರವಾಣಿ
9483515456
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

