ಬೆಂಗಳೂರು ಗ್ರಾಮಾಂತರ

ಕುವೆಂಪು ಈ ನಾಡಿನ ಸಾಂಸ್ಕೃತಿಕ ರಾಯಭಾರಿ

Published On :

ಚನ್ನಪಟ್ಟಣ:  ನಾಡಿನ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತ ಗೊಳಿಸಿದ ಕುವೆಂಪು ಈ ನಾಡಿನ ಸಾಂಸ್ಕೃತಿಕ ರಾಯಭಾರಿ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ಬಣ್ಣಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪಟ್ಟಣದ ಬಾಲಕಿಯರ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ಕುವೆಂಪು ಜಯಂತಿ ಹಾಗೂ 2014ರ ದಿನದರ್ಶಿಕೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, ಈ ನಾಡಿನ ಸಾಹಿತ್ಯ ಕ್ಷೇತ್ರದ ಶಾಶ್ವತ ನಾಯಕ ಕುವೆಂಪು ಎಂಬ ಸಂಗತಿಯನ್ನು ಕನ್ನಡ ಮನಸ್ಸುಗಳು ಅಂಗೀಕರಿಸಿದ್ದು ಬೇರೆ ಯಾವ ಸಾಹಿತಿಗೂ ಸಿಗದ ಗೌರವ ಕುವೆಂಪು ಅವರಿಗೆ ಶ್ರೀಸಾಮನ್ಯರಿಂದ ಸಿಕ್ಕಿದೆ ಎಂದರು.
ಕುವೆಂಪು ಅವರಂತೆ ನೇರವಾಗಿ, ದಿಟ್ಟವಾಗಿ ಪುರೋಹಿತಶಾಹಿಯನ್ನು ವಿರೋಧಿಸಿ ಬರೆದ ಕವಿ, ದಾರ್ಶನಿಕರು ಕನ್ನಡ ನಾಡಿನಲ್ಲಿ ಮತ್ತೊಬ್ಬರಿಲ್ಲ, ಈನಾಡಿನ ನೊಂದ ವರ್ಗದ ದನಿಯಾಗಿ ರೈತರ ಪರವಾಗಿ ದಿಟ್ಟದನಿ ಎತ್ತಿದ ಕುವೆಂಪು ಸಾಹಿತ್ಯವನ್ನು ಪ್ರತಿಯೊಬ್ಬರು ಓದಿ ಅವರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳ ಬೇಕೆಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿ.ಪಂ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ರಘುಕುಮಾರ್ ಈ ನಾಡಿನ ಸಾಹಿತ್ಯದ ಲೋಕವನ್ನು ಶ್ರೀಮಂತಗೊಳಿಸಿದ ಹಿರಿಮೆ ಅವರಿಗೆ ಸಲ್ಲುತ್ತದೆ, ಕನ್ನಡ ಭಾಷೆ ಹಾಗೂ ಈ ನೆಲದ ಬಗ್ಗೆ ಕುವೆಂಪು ಅಪಾರ ಅಭಿಮಾನ ಹೊಂದಿದ್ದರು ಎಂದರು.
ಕನ್ನಡ ಭಾಷೆಯ ಬಗ್ಗೆ ಕುವೆಂಪು ಅವರು ತಾಯಿ-ಮಗುವಿನ ಸಂಬಂಧವನ್ನು ಇಟ್ಟುಕೊಂಡಿದ್ದರು, ಅವರ ಸೃಜನಶೀಲ ಬರವಣಿಗೆಯು ಸಾಹಿತ್ಯ ಲೋಕಕ್ಕೆ ಹೊಸತನವನ್ನು ನೀಡಿದೆ. ಕುವೆಂಪು ಅವರು ಎಲ್ಲರ ಮನಸ್ಸುಗಳನ್ನು ತಟ್ಟುವ ಅತಿ ದೊಡ್ಡಪ್ರಜ್ಞೆಯಾಗಿ ಇಂದಿಗೂ ಉಳಿದುಕೊಂಡಿದ್ದಾರೆ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಜ್ಯ ವೈನ್ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಡಾ.ಬೆಳ್ಳೂರು ಕೃಷ್ಣ ಮಾತನಾಡಿ ಪರಿಸರ ಹಾಗೂ ರೈತನ ಬಗ್ಗೆ ಹೆಚ್ಚಿನ ಒತ್ತು ಕೊಡುತಿದ್ದ ಕವಿ ಎಂದರೆ ಅವರು ಕುವೆಂಪು ಮಾತ್ರ ಇದಕ್ಕೆ ಉದಾಹರಣೆ ಅವರು ರಚಿಸಿರುವ ರೈತಗೀತೆ ಹಾಗೂ ನಾಡಗೀತೆ ಸಾಕ್ಷಿ ಎಂದರು.
ಒಗ್ಗಟ್ಟಿನಲ್ಲಿ ಮಾತ್ರ ಗೆಲವು ಇದೆ ಎಂಬ ಮನೋಭಾವ ಬೆಳಿಸಿಕೊಂಡಿದ್ದ ಕುವೆಂಪು ಅವರಿಗೆ ಎಲ್ಲ ರೀತಿಯ ಪ್ರಶಸ್ತಿ, ಪುರಸ್ಕಾರಗಳು ದೊರೆತಿವೆ ಆದರೆ ಅವರು ನೊಬಲ್ ಪ್ರಶಸ್ತಿಯಿಂದ ವಂಚಿತರಾಗಿರುವುದು ದುರಂತದ ಸಂಗತಿ ಎಂದ ಅವರು ಕನ್ನಡ ಭಾಷೆ ಕೇವಲ ಕರ್ನಾಟಕದಲ್ಲಿ ಮಾತ್ರ ಸೀಮಿತವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ 2014ರ ದಿನದರ್ಶಿಕೆಯನ್ನು ವಿಶೇಷವಾಗಿ ಅನ್ನದಾತ ರೈತ ಕುಟುಂಬದ ಕೃಷ್ಣೇಗೌಡ ಅವರ ಮುಖೇನ ಬಿಡುಗಡೆಮಾಡಲಾಯಿತು. ಸಪ್ತಗಿರಿ ಸೇವಾ ಸಭಾ ಟ್ರಸ್ಟ್ ಅಧ್ಯಕ್ಷ ಡಾ.ಬಿ.ಆರ್.ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಗಾಯಕರಾದ ಹೊನ್ನಿಗನಹಳ್ಳಿ ಸಿದ್ದರಾಜಯ್ಯ, ಚೌಪು ಸ್ವಾಮಿ ಹಾಗೂ ಶಾರದ ನಾಗೇಶ್ ಕುವೆಂಪು ರಚಿತ ಗೀತೆಗಳ ಗೀತ ಗಾಯನ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಜಿಲ್ಲಾ ಜಾನಪದ ಪರಿಷತ್ತು ಅಧ್ಯಕ್ಷ ಸು.ತ.ರಾಮೇಗೌಡ, ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ.ನಾಗೇಶ್. ರಾಮನಗರ-ಚನ್ನಪಟ್ಟಣ ನಗರಾಭಿವಣದ್ದಿ ಪ್ರಾಧಿಕಾರದ ಆಯುಕ್ತ ಜೆ,ಜಿ.ಪದ್ಮನಾಭ್, ಕಾಲೇಜಿನ ಪ್ರಾಂಶುಪಾಲ ಎಸ್.ಟಿ.ತಿಮ್ಮೇಗೌಡ, ಉಪ ಪ್ರಾಂಶುಪಾಲ ಧಶರಥ್ ಸಿಂಗ್, ತಾಲೂಕು ಕಸಾಪ ಅಧ್ಯಕ್ಷ ಎಂ.ಶಿವಮಾದು, ಮಾಗಡಿ ತಾಲೂಕು ಅಧ್ಯಕ್ಷ ಗಂ. ದಯಾನಂದ್, ಕನಕಪುರ ತಾಲೂಕು ಅಧ್ಯಕ್ಷ ಶಿವನಹಳ್ಳಿ ಶಿವಲಿಂಗಯ್ಯ, ತಾಲೂಕು ಕಸಾಪ ನಿಕಟ ಪೂರ್ವಅಧ್ಯಕ್ಷ ಕೃಷ್ಣೇಗೌಡ, ರೈತ ಸಂಘದ ಜಿಲ್ಲಾಧ್ಯಕ್ಷ ಕೆ.ಎಸ್.ಲಕ್ಷ್ಮಣಸ್ವಾಮಿ, ಜಿ.ವೆಂಕಟೇಶ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಿಕ್ಷಕ ಹರಿದಾಸ್ ಸ್ವಾಗತಿಸಿದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಸಿ,ರಾಜಶೇಖರ್ ನಿರೂಪಿಸಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.