ಶಿವಕುಮಾರ್ಗೆ ಕೊನೆಗೂ ದಕ್ಕಿದ ಸಚಿವ ಪದವಿ
ಮತ್ತೀಕೆರೆ ಜಯರಾಮ್
ಕ.ಪ್ರ.ವಾರ್ತೆ ರಾಮನಗರ ಡಿ.31
ಕಳಂಕದ ಕಾರಣಕ್ಕೆ ಡಿ.ಕೆ.ಶಿವಕುಮಾರ್ ಅವರಿಗೆ ತಪ್ಪಿ ಹೋಗಿದ್ದ ಸಚಿವ ಪದವಿ ಕಡೆಗೂ ಕೈಗೂಡುವ ಕಾಲ ಸನ್ನಿಹಿತವಾಗಿದೆ. ಹೊಸ ವರ್ಷಾಚರಣೆಯೊಂದಿಗೆ ಸಂಪುಟ ಸೇರ್ಪಡೆಯ ಸಂಭ್ರಮಾಚರಿಸಲು ಅವರ ಪಾಲಿಗೆ ಪಿತೃ ವಿಯೋಗದ ಶೋಕಾಚರಣೆ ಅಡ್ಡಿಯಾಗಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಿಚ್ಚಳ ಬಹುಮತ ಲಭ್ಯವಾಗುತ್ತಿದ್ದಂತೆಯೇ ಕನಕಪುರ ಶಾಸಕ ಶಿವಕುಮಾರ್ ಪ್ರಮುಖ ಖಾತೆಯ ಸಚಿವರಾಗುವ ಸಾಧ್ಯತೆ ನಿಚ್ಚಳವಾಗಿತ್ತು. ಕಡೆ ಗಳಿಗೆಯಲ್ಲಿ ಹೈಕಮಾಂಡ್ ಅದಕ್ಕೆ ತಡೆಯೊಡ್ಡಿ, ನಿರಾಸೆ ಮೂಡಿಸಿತ್ತು.
ಕಾಂಗ್ರೆಸಿಗರಲ್ಲಿ ಹರ್ಷ : ಕನಕಪುರದಿಂದ ಶಿವಕುಮಾರ್ ಅವರನ್ನು ಭಾರಿ ಅಂತರದಿಂದ ಗೆಲ್ಲಿಸಿದ್ದೇ ಆದರೆ ಕಾಂಗ್ರೆಸ್ ಸರ್ಕಾರದಲ್ಲಿ ಅವರಿಗೆ ಆಯಕಟ್ಟಿನ ಖಾತೆ ನೀಡಿ, ಸಂಪುಟ ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದು ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಭರವಸೆ ನೀಡಿದ್ದರು. ಫಲಿತಾಂಶದ ಬಳಿಕ ಅದು ಈಡೇರಿರಲಿಲ್ಲ.
ಶಿವಕುಮಾರ್ ಅವರು ರಾಮನಗರ ಜಿಲ್ಲಾ ಕಾಂಗ್ರೆಸ್ನಲ್ಲಿ ಪ್ರಶ್ನಾತೀತ ನಾಯಕ. ಅವರಿಗೆ ಸಚಿವ ಸ್ಥಾನ ತಪ್ಪಿದ್ದಕ್ಕೆ ಜಿಲ್ಲೆಯ ಇಡೀ ಕಾಂಗ್ರೆಸ್ ಪಾಳಯಕ್ಕೆ ನಿರಾಸೆ ಮೂಡಿತ್ತು. ಇದೀಗ ಅವರಿಗೆ ಸಂಪುಟದ ಕದ ತೆರೆದಿರುವುದು ಕಾಂಗ್ರೆಸಿಗರ ಸಂತಸಕ್ಕೆ ಪಾರವೇ ಇಲ್ಲದಂತೆ ಮಾಡಿದೆ.
ಸಂಭ್ರಮಾಚರಣೆ ಇಲ್ಲ: ಸಂಪುಟ ವಿಸ್ತರಣೆ ಸಂಬಂಧ ಸಿಎಂ ಸಿದ್ದರಾಮಯ್ಯ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಖಾತೆ ಚರ್ಚಿಸಿ, ಮುಹೂರ್ತ ನಿಗದಿಪಡಿಸುತ್ತಿದ್ದಂತೆಯೇ ಕನಕಪುರವೂ ಸೇರಿದಂತೆ ರಾಮನಗರ ಜಿಲ್ಲಾದ್ಯಂತ ಕಾಂಗ್ರೆಸಿಗರು ಸಂಭ್ರಮಿಸಲು ಸಿದ್ಧತೆಯಲ್ಲಿ ತೊಡಗಿದ್ದರು.
ಅಷ್ಟರಲ್ಲಿ ಶಿವಕುಮಾರ್ ತಂದೆ ಕೆಂಪೇಗೌಡ ನಿಧನರಾದ ಸುದ್ದಿ ಬಂದ ಹಿನ್ನೆಲೆಯಲ್ಲಿ ಸಂಭ್ರಮಾಚರಣೆ ಸ್ಥಗಿತಗೊಂಡಿತು. ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ದಂಡು ಕೆಂಪೇಗೌಡರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ದೊಡ್ಡಾಲಹಳ್ಳಿಗೆ ದೌಡಾಯಿಸಿದರು.
ಜನ ಸೇರಿಸಲು ಸಿದ್ಧತೆ: ಬೆಂಗಳೂರಿನಲ್ಲಿ ಬುಧವಾರ ನಡೆಯುವ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಜಿಲ್ಲೆಯಿಂದ ಭಾರಿ ಸಂಖ್ಯೆಯಲ್ಲಿ ಜನರನ್ನು ಕರೆದೊಯ್ಯಲು ವಾಹನ ಸೌಲಭ್ಯ ಸಹಿತ ಅಗತ್ಯ ಸಿದ್ಧತೆಯಲ್ಲಿ ಕಾಂಗ್ರೆಸ್ ಮುಖಂಡರು ಮಂಗಳವಾರ ಸಂಜೆಯಿಂದಲೇ ಕಾರ್ಯೋನ್ಮುಖರಾದರು.
ಸಮಾರಂಭಕ್ಕೆ ಜನರನ್ನು ಕರೆದೊಯ್ಯಲು ಹೋಬಳಿವಾರು ಮುಖಂಡರಿಗೆ ಉಸ್ತುವಾರಿ ವಹಿಸಲಾಗಿದೆ. ಅದಕ್ಕಾಗಿ ಅಗತ್ಯ ಸಂಪನ್ಮೂಲ, ಸಕಲ ಸೌಕರ್ಯಗಳನ್ನು ಒದಗಿಸುವ ಜವಬ್ದಾರಿಯನ್ನು ಕನಕಪುರ ಹೊರತಾದ 3 ವಿಧಾನಸಭಾ ಕ್ಷೇತ್ರಗಳಲ್ಲಿ ಪರಾಜಿತ ಅಭ್ಯರ್ಥಿಗಳು ವಹಿಸಿಕೊಂಡಿದ್ದಾರೆ.
ಅಗ್ನಿ ಪರೀಕ್ಷೆಯಲ್ಲಿ ಗೆಲವು
ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಡಿ.ಕೆ.ಸುರೇಶ್ ಅವರನ್ನು ಗೆಲ್ಲಿಸಿಕೊಂಡು ಬಂದರೆ ಸಂಪುಟ ಸೇರ್ಪಡೆ ಅವಕಾಶ ಒದಗಿಸುವುದಾಗಿ ಕಾಂಗ್ರೆಸ್ ಹೈಕಮಾಂಡ್ ಡಿ.ಕೆ.ಶಿವಕುಮಾರ್ ಅವರಿಗೆ ಭರವಸೆ ನೀಡಿತ್ತೆನ್ನುವುದು ಗುಟ್ಟಿನ ಸಂಗತಿಯೇನಲ್ಲ.
ವರಿಷ್ಠರ ಅಣತಿಯಂತೆ ಸಹೋದರ ಸುರೇಶ್ ಅವರನ್ನು ಕಣಕ್ಕೆ ಇಳಿಸಿದ ಶಿವಕುಮಾರ್ ತಮ್ಮ ಸಾಮರ್ಥ್ಯವನ್ನು ಓರೆಗೆ ಹಚ್ಚಿದರು. ತಮ್ಮೆಲ್ಲಾ ರಾಜಕೀಯ ತಂತ್ರಗಳನ್ನು ಬಳಸಿ, ಜೆಡಿಎಸ್ ಭದ್ರಕೋಟೆಯನ್ನು ಕೈವಶ ಮಾಡಿಕೊಂಡು ಅಗ್ನಿ ಪರೀಕ್ಷೆಯಲ್ಲಿ ಪಾಸಾಗಿದ್ದರು. ಇಷ್ಟಾಗಿಯೂ ಶಿವಕುಮಾರ್ ಪಾಲಿಗೆ ನಾನಾ ಅಡೆತಡೆಗಳು ಎದುರಾಗುತ್ತಲೇ ಬಂದಿದ್ದವು. ಈಗ ಎಲ್ಲ ಅಡ್ಡಿ-ಆತಂಕ ನಿವಾರಣೆಯಾಗಿದೆ. ತಂದೆಯ ಅಗಲಿಕೆಯ ನೋವಿನ ನಡುವೆಯೇ ಸಚಿವ ಸ್ಥಾನ ವಂಚಿತರಾಗಿದ್ದ ಕೊರಗು ದೂರವಾಗುತ್ತಿರುವುದು ವಿಪರ್ಯಾಸದ ಸಂಗತಿ.
ಡಿಕೆಶಿಗೆ ಉಸ್ತುವಾರಿ
ಜಿಲ್ಲೆಯಾಗಿ ರಾಮನಗರಕ್ಕೆ ತುಂಬಿರುವುದು ಏಳು ವರ್ಷ ಮಾತ್ರ. ಇಷ್ಟರಲ್ಲಾಗಲೇ 9 ಮಂದಿ ಉಸ್ತುವಾರಿ ಸಚಿವರು ಬದಲಾಗಿದ್ದು, ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಕೆ.ಜೆ.ಜಾರ್ಜ್ 10ನೆಯವರು. ಡಿ.ಕೆ.ಶಿವಕುಮಾರ್ ಸಂಪುಟ ಸೇರುತ್ತಿದ್ದಂತೆಯೇ ಮತ್ತೊಮ್ಮೆ ಉಸ್ತುವಾರಿ ಸಚಿವರ ಬದಲಾವಣೆ ಸಾಧ್ಯತೆಯೂ ನಿಚ್ಚಳವಾಗಿದೆ.
ಇದುವರೆಗೆ ಉಸ್ತುವಾರಿ ಸಚಿವರಾದವರ ಪೈಕಿ ಸಿ.ಪಿ.ಯೋಗೇಶ್ವರ್ ಮಾತ್ರವೇ ರಾಮನಗರ ಜಿಲ್ಲೆಯವರು.
ಉಳಿದೆಲ್ಲರೂ ಹೊರಗಿನವರು. ಸಂಪುಟ ಸೇರ್ಪಡೆ ಬಳಿಕ ಶಿವಕುಮಾರ್ ಹೆಗಲಿಗೆ ಜಿಲ್ಲಾ ಉಸ್ತುವಾರಿ ಹೊಣೆ ವಹಿಸಿದರೆ ಈ ಜಿಲ್ಲೆಯ 11ನೇ ಉಸ್ತುವಾರಿ ಸಚಿವ ಎನಿಸಿಕೊಳ್ಳಲಿದ್ದಾರೆ. ರಾಮನಗರಕ್ಕೆ ಹೊರಗಿನ ಉಸ್ತುವಾರಿ ಸಚಿವರ ಆಳ್ವಿಕೆಯ ಶಾಪಕ್ಕೂ ಮುಕ್ತಿ ಸಿಗಲಿದೆ.
ಮಕ್ಕಳ ಏಳ್ಗೆಯಲ್ಲಿ ಕೆಂಪೇಗೌಡ
ದೊಡ್ಡಾಲಹಳ್ಳಿಯ ಕೆಂಪೇಗೌಡ ಅವರು ಸಕ್ರಿಯ ರಾಜಕಾರಣಿಯೇನಲ್ಲ. ಆದರೆ, ಮಕ್ಕಳಿಬ್ಬರ ರಾಜಕೀಯ ಏಳ್ಗೆಯಲ್ಲೂ ಪಾತ್ರ ವಹಿಸಿಕೊಂಡೇ ಬಂದಿದ್ದರು. ಇಬ್ಬರು ಮಕ್ಕಳ ಸ್ಪರ್ಧೆ ವೇಳೆಯೂ ಕ್ಷೇತ್ರ ವ್ಯಾಪ್ತಿಯಲ್ಲಿ ಮತಯಾಚನೆ ನಡೆಸಿದ್ದರು.
ಕಳೆದ ಲೋಕಸಭೆ ಉಪ ಚುನಾವಣೆಯಲ್ಲಿ ಡಿ.ಕೆ.ಸುರೇಶ್ ಅವರು ನಾಮಪತ್ರ ಸಲ್ಲಿಸುವ ಮುನ್ನ
ಮಾತಾಪಿತೃ ಆಶೀರ್ವಾದ ಪಡೆದು ಬಂದಿದ್ದರು. ಕೆಂಪೇಗೌಡರು ಪತ್ನಿಯೊಂದಿಗೆ ಜಿಲ್ಲಾಧಿಕಾರಿವರೆಗೂ ಬಂದು ಪುತ್ರನ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲೂ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

