ನಾಪತ್ತೆಗೆ ಕಾರಣ ಜೀವನದಲ್ಲಿ ಜಿಗುಪ್ಸೆ
ಚನ್ನಪಟ್ಟಣ: ಕಳೆದ ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದ ಪಟ್ಟಣದ ಸರ್ಕಾರಿ ಬಾಲಕಿಯರ ಕಾಲೇಜಿನ ಮೂವರು ವಿದ್ಯಾರ್ಥಿಗಳು ಪತ್ತೆಯಾಗಿದ್ದು ಬಾಲಕಿಯರ ನಾಪತ್ತೆ ಪ್ರಕರಣ ಇದೀಗ ಸುಖಾಂತ್ಯಗೊಂಡಿದೆ.
ಜೀವನದಲ್ಲಿ ಜಿಗುಪ್ಸೆ ಹೊಂದಿದ ವಿದ್ಯಾರ್ಥಿನಿಯರು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಕೈಗೊಂಡು ನಾಪತ್ತೆಯಾಗಿದ್ದು, ಅರ್ಚನಾ ಸಾಗರದಲ್ಲಿ ಪತ್ತೆಯಾದರೆ, ಮತ್ತಿಬ್ಬರು ವಿದ್ಯಾರ್ಥಿನಿಯರು ಎನ್.ಪವಿತ್ರ ಮತ್ತು ಅನಿತಾ ಮೈಸೂರಿನ ಲಷ್ಕರ್ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾದರು. ವಿದ್ಯಾರ್ಥಿನಿಯರನ್ನು ಸುರಕ್ಷಿತವಾಗಿ ಪಟ್ಟಣಕ್ಕೆ ಕರೆತಂದ ಪೊಲೀಸರು ವಿಚಾರಣೆ ನಡೆಸಿ ಪೋಷಕರ ವಶಕ್ಕೆ ಒಪ್ಪಿಸಿದ್ದಾರೆ.
ಮೈಸೂರಿಗೆ ಹೋದವರು ದಿಕ್ಕು ತಪ್ಪಿದರು: ಮೂವರು ಬಾಲಕಿಯರು ನಗರದಿಂದ ಮೈಸೂರಿಗೆ ತೆರಳಿದ್ದಾರೆ ಮೈಸೂರಿನಿಂದ ದಿಕ್ಕು ತಪ್ಪಿದ ಅರ್ಚನಾ ಎಂಬ ವಿದ್ಯಾರ್ಥಿನಿ ಸಾಗರಕ್ಕೆ ತೆರಳಿದರೆ ಉಳಿದಿಬ್ಬರು ವಿದ್ಯಾರ್ಥಿನಿಯರು ಮೈಸೂರಿನಲ್ಲೇ ಇದ್ದರು.
ಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರಿನ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರ ಪತ್ತೆಗೆ ಮುಂದಾದ ಎಎಸ್ಪಿ ಶಾಂತನು ಸಿನ್ಹಾ ನೇತೃತ್ವದ ತಂಡ ವಿದ್ಯಾರ್ಥಿನಿಯರ ಮೊಬೈಲ್ ಕರೆಯನ್ನು ಆದರಿಸಿ ಅಲ್ಲಿನ ಪೊಲೀಸರ ಸಹಕಾರದೊಂದಿಗೆ ಬಾಲಕಿಯರನ್ನು ಸುರಕ್ಷಿತವಾಗಿ ಕರೆತಂದಿದ್ದಾರೆ.
ಸುದೀರ್ಘ ವಿಚಾರಣೆ: ಪುರ ಠಾಣೆಗೆ ಸೋಮುವಾರ ಬೆಳಿಗ್ಗೆ ಕರೆತಂದ ಪೊಲೀಸರು ವಿದ್ಯಾರ್ಥಿನಿಯರನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಿದರು. ಎಎಸ್ಪಿ ಶಾಂತನು ಸಿನ್ಹಾ, ಸಿಪಿಐ ರಾಜಣ್ಣ ಮತ್ತು ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ ಬಳಿಕ ರಾಮನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ವಿಚಾರಣೆ ನಡೆಸಿದರು.
ನೆಮ್ಮದಿಯ ನಿಟ್ಟುಸಿರು: ತಾಲೂಕಿನ ಜನತೆಯಲ್ಲಿ ತಲ್ಲಣ ಮೂಡಿಸಿದ್ದ ಬಾಲಕಿಯರ ನಾಪತ್ತೆ ಪ್ರಕರಣ ಸುಖಾಂತ್ಯ ಕಾಣುವುದರೊಂದಿಗೆ ಜನತೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

