ಬೆಂಗಳೂರು ಗ್ರಾಮಾಂತರ

ಬಜೆಟ್‌ನಲ್ಲಿ ದೊಡ್ಡಬಳ್ಳಾಪುರಕ್ಕೆ ಶೂನ್ಯ ಸಂಪಾದನೆ

Published On :

ಕೆ.ಆರ್.ರವಿಕಿರಣ್
ದೊಡ್ಡಬಳ್ಳಾಪುರ: ಈ ಬಾರಿಯ ರಾಜ್ಯ ಮುಂಗಡಪತ್ರ ಯಾರಿಗೆ ಏನು ಕೊಟ್ಟಿದೆಯೋ ಬಿಟ್ಟಿದೆಯೋ ಗೊತ್ತಿಲ್ಲ, ಆದರೆ ದೊಡ್ಡಬಳ್ಳಾಪುರಕ್ಕೆ ಮಾತ್ರ ಬಜೆಟ್‌ನಲ್ಲಿ ಸಿಕ್ಕಿರುವುದು ದೊಡ್ಡ ಶೂನ್ಯ. ಹಲವು ನಿರೀಕ್ಷೆಗಳ ಭರದಲ್ಲೂ ಶೂನ್ಯ ಸಂಪಾದನೆಯಾಗಿರುವುದು ಇಲ್ಲಿನ ರಾಜಕೀಯ ಇಚ್ಛಾಶಕ್ತಿಯ ದುರ್ಬಲತೆಗೆ ಸಾಕ್ಷಿಯಾಗಿದೆ. ಬಜೆಟ್‌ನಲ್ಲಿ ಯಾವ ರೀತಿಯಿಂದಲೂ ದೊಡ್ಡಬಳ್ಳಾಪುರಕ್ಕೆ ನೇರವಾಗಿ ವರದಾನವಾಗುವ ಯೋಜನೆಗಳಿಗೆ ಅವಕಾಶವೇ ನೀಡಿಲ್ಲ ಎಂಬ ನೇರ ಟೀಕೆ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ.
ನಿರೀಕ್ಷೆಗಳು ಠುಸ್: ಈ ಬಾರಿಯ ಬಜೆಟ್‌ನಲ್ಲಿ ದೊಡ್ಡಬಳ್ಳಾಪುರಕ್ಕೆ ದೊಡ್ಡ ದೊಡ್ಡ ಭರವಸೆಗಳನ್ನು ಇಲ್ಲಿನ ರಾಜಕಾರಣಿಗಳು ಮೂಡಿಸಿದ್ದರು. ಹೇಮಾವತಿ ನೀರನ್ನು ದೊಡ್ಡಬಳ್ಳಾಪುರಕ್ಕೆ ಹರಿಸಿಯೇ ಬಿಡುವ ಭಗೀರಥ ಯತ್ನ ನಡೆದಿದೆ. ಹೀಗಾಗಿ ಬಜೆಟ್‌ನಲ್ಲಿ ಯೋಜನೆ ಪ್ರಸ್ತಾಪಕ್ಕೆ ಸಿಎಂಗೆ ಮನವಿ ಮಾಡಲಾಗಿದೆ ಎಂದು ಸ್ಥಳೀಯ ಶಾಸಕರು ಒಂದೆರಡು ಕಾರ್ಯಕ್ರಮಗಳನ್ನು ಸಾರ್ವಜನಿಕವಾಗಿ ಹೇಳಿದ್ದರು. ಆದರೆ ಅವರ ಮನವಿಗೆ ಸಿಎಂ ಸ್ಪಂದಿಸಿಲ್ಲ ಎಂಬುದು ಸ್ಪಷ್ಟವಾಗಿದೆ.
ಜಿಲ್ಲಾ ಕೇಂದ್ರ ಘೋಷಣೆಯಾಗಿಲ್ಲ: ಅದೇ ರೀತಿ ದೊಡ್ಡಬಳ್ಳಾಪುರ ನಗರವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಬೇಕು ಎಂಬ ಬಹುದಿನದ ಬೇಡಿಕೆಗೆ ಕೂಡ ನಯಾಪೈಸೆ ಕಿಮ್ಮತ್ತು ಸಿಕ್ಕಿಲ್ಲ. ಮುಖ್ಯಮಂತ್ರಿಗಳು 16 ಜಿಲ್ಲೆಗಳಲ್ಲಿ ಒಟ್ಟು 43 ಹೊಸತಾಲೂಕುಗಳನ್ನು ಘೋಷಣೆ ಮಾಡುವ ಪ್ರಸ್ತಾಪ ಮಾಡಿದರೇ ಹೊರತು ಜಿಲ್ಲಾ ಕೇಂದ್ರ ಘೋಷಣೆಯ ಕುರುಹೂ ನೀಡಲಿಲ್ಲ. ಸದ್ಯ ಸಂಪುಟದಲ್ಲಿ ಉಪಮುಖ್ಯಮಂತ್ರಿಯಾಗಿರುವ ಆರ್. ಅಶೋಕ ಕಳೆದ ತಿಂಗಳು ದೊಡ್ಡಬಳ್ಳಾಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಬರುವ ಬಜೆಟ್‌ನಲ್ಲಿ ಜಿಲ್ಲಾ ಕೇಂದ್ರದ ಘೋಷಣೆ ಪ್ರಸ್ತಾಪವಾಗಲಿದೆ ಎಂಬ ಭರವಸೆ ನೀಡಿದ್ದರು. ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಎಚ್.ಡಿ. ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದಗೌಡರೂ ಭರವಸೆ ಕೊಟ್ಟರೇ ವಿನಃ ಈಡೇರಿಸುವ ಮನಸ್ಸು ಮಾಡಲಿಲ್ಲ. ಸದ್ಯ ಜಗದೀಶ ಶೆಟ್ಟರ್ ಕೂಡ ಹಿಂದಿನವರ ಹಾದಿಯಲ್ಲೇ ಸ್ಪಷ್ಟ ಹೆಜ್ಜೆಗುರುತು ಮೂಡಿಸಿದ್ದಾರೆ.
ಅಗಲೀಕರಣ ಮರೀಚಿಕೆ: ಇನ್ನು ದೊಡ್ಡಬಳ್ಳಾಪುರ ನಗರದ ಕಿಷ್ಕಿಂದ ರಸ್ತೆಗಳ ಅಗಲೀಕರಣಕ್ಕೆ ಯೋಜನೆ-ಪ್ರಸ್ತಾವನೆ ಎರಡೂ ಸಿದ್ಧಗೊಂಡು ಕೆಲ ಎಡಬಿಡಂಗಿ ನಿರ್ಧಾರಗಳಿಂದ ನೆನೆಗುದಿಗೆ ಬಿದ್ದಿರುವ ಯೋಜನೆಗೆ ಇಲ್ಲಿನ ನಗರಸಭೆ, ಶಾಸಕರು ಸೇರಿದಂತೆ ಆಡಳಿತ ಯಂತ್ರ ಸಿಎಂ ವಿಶೇಷಾನುದಾನದ ನಿರೀಕ್ಷೆಯಲ್ಲಿ ದಿನ ಕಳೆಯುತ್ತಿದೆ. ಆದರೆ ಸಿಎಂ ಅನುದಾನ ಪ್ರಸ್ತಾಪವಾಗಬೇಕಾದ್ದು ಬಜೆಟ್‌ನಲ್ಲಿ. ಸಿಎಂ ಮತ್ತು ಇಲ್ಲಿನ ಆಡಳಿತ ವ್ಯವಸ್ಥೆಯ ನಡುವಿನ ಸಂವಹನ ಕೊರತೆ, ಇರದ ರಾಜಕೀಯ ಇಚ್ಛಾಶಕ್ತಿ ಪರಿಣಾಮವಾಗಿ ಸತತ 2ನೇ ವರ್ಷ ದೊಡ್ಡಬಳ್ಳಾಪುರ ರಸ್ತೆ ಅಗಲೀಕರಣ ಯೋಜನೆಯ ವಿಶೇಷಾನುದಾನದ ಪ್ರಸ್ತಾಪ ರಾಜ್ಯ ಬಜೆಟ್‌ನಲ್ಲಿ ಬಂದಿಲ್ಲ. ಕೇವಲ ಭರವಸೆಗಳಲ್ಲಿ ಜನರ ಹೊಟ್ಟೆ ತುಂಬಿಸುವ ಹುಂಬತನ ಹೆಚ್ಚುದಿನ ನಡೆಯಲ್ಲ ಎಂಬುದನ್ನು ಸಾರ್ವಜನಿಕ ವಲಯದಲ್ಲಿರುವ ಜನ ಅರ್ಥ ಮಾಡಿಕೊಳ್ಳಬೇಕಿದೆ.
ಬಂದಿದ್ದೇನು: ಇನ್ನು ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ದೊಡ್ಡಬಳ್ಳಾಪುರದ ಹೆಸರು ಪ್ರಸ್ತಾಪವಾಗಿರೋದು ಒಂದೇ ಕಡೆ. ಅದೂ ಯಲಹಂಕ-ದೊಡ್ಡಬಳ್ಳಾಪುರ ಮಾರ್ಗದಲ್ಲಿ ಕಮ್ಯೂಟಿವ್ ರೈಲು ಯೋಜನೆ ಹೆಸರಿನಲ್ಲಿ. ಇದರಿಂದ ದೊಡ್ಡಬಳ್ಳಾಪುರಕ್ಕೆ ಆಗುವ ಪ್ರಯೋಜನಕ್ಕಿಂತ ಬೆಂಗಳೂರಿನ ಒತ್ತಡದಲ್ಲಿ ಸ್ವಲ್ಪಭಾಗವನ್ನು ದೊಡ್ಡಬಳ್ಳಾಪುರದ ಮೇಲೆ ಬಲವಂತವಾಗಿ ಹೇರಿದಂತಾಗುತ್ತದೆ. ಎತ್ತಿನ ಹೊಳೆ ಯೋಜನೆಗೆ ಮೊದಲ ಹಂತದಲ್ಲಿ 200 ಕೋಟಿ ಮೀಸಲಿಡಲಾಗಿದೆ.
ಯಾಕೆ ಹೀಗಾಯ್ತು: ಬೆಂಗಳೂರಿನ ಸೆರಗಿನಲ್ಲೇ ಇರುವ ದೊಡ್ಡಬಳ್ಳಾಪುರ ಇತ್ತೀಚಿನ ದಿನಗಳಲ್ಲಿ ತೀವ್ರಗತಿಯಲ್ಲಿ ಬೆಳೆಯುತ್ತಿದೆ. ವಲಸಿಗರ ಸಂಖ್ಯೆ ನಿರಂತರ ಹೆಚ್ಚುತ್ತಿದೆ. ಉದ್ಯೋಗಾವಕಾಶಗಳ ವಿಫುಲ ಅವಕಾಶಕ್ಕೆ ಪೂರಕವಾಗಿ ಮೂಲಸೌಕರ್ಯಗಳು ಅಭಿವೃದ್ಧಿಯಾಗದೇ ಬೆಳವಣಿಗೆಗೆ ತೊಡಕಾಗಿದೆ. ವಾಸ್ತವವಾಗಿ ಊರಿಗೆ ಅಭಿವೃದ್ಧಿ ಇಚ್ಛಾಶಕ್ತಿ ಕೇವಲ ಚುನಾವಣೆ ಆಧಾರದಲ್ಲಿ, ಮತಗಳ ಲೆಕ್ಕಾಚಾರದಲ್ಲಿ ಮಾತ್ರ ಇದ್ದರೆ ಸಾಲದು. ಭವಿಷ್ಯದ ಮುನ್ನೋಟವಿರದ ಈ ಬಗೆಯ ಧೋರಣೆ ನಗರದ ಅಭಿವೃದ್ಧಿಗೆ ತೊಡಕೇ ಸರಿ. ಇಲ್ಲಿನ ರಾಜಕಾರಣ ಸರ್ಕಾರದ ಮೇಲೆ ಪ್ರಭಾವ ಬೀರಲು ಶಕ್ತವಾಗಿದ್ದರೂ ಬೇಕಾದ ಇಚ್ಛಾಶಕ್ತಿ ಮತ್ತು ಕಾಳಜಿಯ ಕೊರತೆ ಎದ್ದುಕಾಣುತ್ತಿರುವುದು ಸ್ಪಷ್ಟವಾಗಿದೆ. ಇನ್ನಾದರೂ ಭವಿಷ್ಯದ ದೊಡ್ಡಬಳ್ಳಾಪುರದ ಕುರಿತು ರಾಜಕಾರಣಿಗಳು-ಅಧಿಕಾರಿಗಳು ಸ್ವಾರ್ಥಬಿಟ್ಟು ಚಿಂತಿಸಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.