ಬದುಕು ಕೊಡೋದು ಕೃಷಿ, ಐಟಿ-ಬಿಟಿ ಅಲ್ಲ
ಕೆ.ಆರ್. ರವಿಕಿರಣ್
ದೊಡ್ಡಬಳ್ಳಾಪುರ: ಐಟಿ-ಬಿಟಿ ದುಡ್ಡು ಕೊಡಬಹುದು, ಆದ್ರೆ ಬದುಕು ಕೊಡಲ್ರೀ. ಕೃಷಿಕ-ಕೃಷಿ ಉಳಿದ್ರೆ ನಾವು-ನೀವು ಎಲ್ಲ. ಆದ್ರೆ ಈ ಜನಕ್ಕೆ ರೈತನ ಬದುಕು ಮುಖ್ಯ ಆಗಿಲ್ಲ. ರೈತರನ್ನು ಮಾರುಕಟ್ಟೆ ಸರಕಾಗಿ ನೋಡ್ತಾರೆ. ಇದು ನನ್ನ ಮನಸ್ಸಿಗೆ ಅತಿಯಾಗಿ ನೋವು ಮಾಡುತ್ತೆ. ಕೃಷಿಕನ ಮಗನಾಗಿ, ಚಡ್ಡಿ ಹಾಕ್ಕೊಂಡು ಗದ್ದೇಲಿ ದುಡಿದ ಜೀವ ಕಣ್ರೀ ಇದು. ಸುಮ್ನೆ ಉಡಾಫೆ ಮಾತಾಡಲ್ಲ. ರೈತರ ನಿಜವಾದ ಸಂಕಷ್ಟ ಏನು ಅಂತ ನನ್ಗೆ ಗೊತ್ತು...
- ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನೇರ ಮಾತುಗಳಿವು.
ಕೃಷಿ ಚಟುವಟಿಕೆಗಳ ಹೊಸ ಬಗೆಯ ಆವಿಷ್ಕಾರಗಳನ್ನು ಪ್ರಾಯೋಗಿಕವಾಗಿ ಬಳಕೆ ಮಾಡಿಕೊಂಡು ಉನ್ನತ ಕೃಷಿ ಸಾಧನೆ ಮಾಡಿರುವ ಜನರ ಭೇಟಿ ಮತ್ತು ಪ್ರಗತಿಪರ ಕೃಷಿಯ ವಿಭಿನ್ನ ಮಾದರಿಗಳ ಅಧ್ಯಯನ ಭೇಟಿಗಾಗಿ ದೊಡ್ಡಬಳ್ಳಾಪುರ ತಾಲೂಕಿನ ತಪಸೀಹಳ್ಳಿ ಮತ್ತು ಹಾಡೋನಹಳ್ಳಿಗೆ ಆಗಮಿಸಿದ್ದ ದೇವೇಗೌಡರು ತಮ್ಮ ಮನದಾಳದ ಮಾತುಗಳನ್ನು ಲೋಕಾಭಿರಾಮ ಬಿಚ್ಚಿಟ್ಟಿದ್ದು ಹೀಗೆ.
ಇಂದು ವಾತಾವರಣ ಬದಲಾಗಿದೆ. ಬದಲಾದ ಕಾಲಘಟ್ಟಕ್ಕೆ ಪೂರಕವಾಗಿ ಸಾಮೂಹಿಕ ವ್ಯವಸಾಯ ಪದ್ಧತಿಗಳು, ಪದಾರ್ಥಗಳನ್ನು ಬೆಳೆಯುವಲ್ಲಿ ಸ್ವಾವಲಂಬನೆ ಬರಬೇಕು. ರೈತರು ಬದುಕೋ ಮಾರ್ಗವನ್ನು ಸರ್ಕಾರಗಳು ತೋರಬೇಕು. ಇದಕ್ಕೆ ಸ್ಪಷ್ಟ ಉದಾಹರಣೆಯಾಗಿ ಸದಾನಂದ ನಿಲ್ಲುತ್ತಾರೆ. ತಾನು, ತನ್ನ ಹೆಂಡತಿ ಮತ್ತು ವಿದ್ಯಾವಂತ ಮಗ ಸೇರಿ ಇರೋ 2.5 ಎಕರೆ ಜಮೀನಿನಲ್ಲಿ ಕೃಷಿ ಪ್ರಗತಿ ಸಾಧಿಸಿರೋದು ಗಣನೀಯ. ಸರ್ಕಾರ ಇಂತಹ ಚಟುವಟಿಕೆಗಳನ್ನು ಸಾರ್ವತ್ರೀಕರಣ ಮಾಡಬೇಕು. ತಿಳಿ ಹೇಳಬೇಕು ಎಂದರು.
ನಮ್ಮವರನ್ನು ಗುರ್ತಿಸಿ: ನಮ್ಮಲ್ಲಿರೋ ತಂತ್ರಜ್ಞಾನ, ಪ್ರಜ್ಞಾವಂತಿಕೆಯನ್ನು ನಾವು ಗುರ್ತಿಸಬೇಕು. ನಾವು ನಮ್ಮವರನ್ನೇ ನೋಡದಿದ್ರೆ ಬೇರೆ ಯಾರು ನೋಡ್ತಾರೆ ಉದ್ಯೋಗ ನಿರ್ಮಾಣ ಇಂದಿನ ಸಂದರ್ಭ ತೀರಾ ಮುಖ್ಯವಾದದ್ದು. ಆದ್ರೆ ಅದು ಕೃತಕವಾಗಿಯೋ, ಖಾಸಗಿ ವಲಯದಲ್ಲೋ, ಸರ್ಕಾರದ ಮಟ್ಟದಲ್ಲೋ ಆಗೋದು ಒಂದು ಭಾಗವಾದ್ರೆ, ಸ್ವಾವಲಂಭಿ ಕೃಷಿ ಪ್ರಚೋದನೆಯಿಂದ ನಿರುದ್ಯೋಗ ಬಹುಬೇಗ ನಿವಾರಣೆಯಾಗುತ್ತೆ. ವಿದ್ಯಾವಂತರು ಕೃಷಿ ಚಟುವಟಿಕೆಗಳಿಂದ ದೂರ ಸರಿಯಬಾರದು. ಬದಲಿಗೆ ಅವರು ಈ ಬಗ್ಗೆ ಜಾಗೃತಿ ಮೂಡಿಸುವಂತಾಗಬೇಕು ಎಂದರು.
ಸಗಣಿ ಸ್ಪರ್ಶವಿಲ್ಲ: ಇಂದಿನ ಜನಕ್ಕೆ ಮಣ್ಣಿನ ನಿಜವಾದ ವಾಸನೆ ಗೊತ್ತಿಲ್ಲ. ನಾನು-ನನ್ನ ಮಕ್ಕಳು ವ್ಯವಸಾಯ ಮಾಡಿದ್ವಿ. ಆದ್ರೆ ಅವರ ಮಕ್ಕಳು ಮುಂದುವರಿಸ್ತಾರಾ ಎಂಬ ಆಂತಕ ನನ್ನ ಮನೆಯಲ್ಲೇ ಇದೆ. ವಿದ್ಯಾವಂತರಾಗೋದು ಒಂದು ಭಾಗವಾದ್ರೆ, ನಮ್ಮ ಪಾರಂಪರಿಕ ಕುಲಕಸುಬುಗಳನ್ನು, ಕೃಷಿಯನ್ನು ಹೊಸ ಪರಂಪರೆಯೊಂದಿಗೆ ಬೆಳೆಸಿಕೊಂಡು ಹೋಗೋದು ಮತ್ತೊಂದು ಮಹತ್ವದ ಘಟ್ಟ. ಪ್ಪಪಂಚದಲ್ಲಿ ವಂಚನೆ-ದ್ರೋಹವಿಲ್ಲದ ಕಸುಬು ಕೃಷಿ. ಕೃಷಿಕನ ಬದುಕು ಅತ್ಯಂತ ಶ್ರೇಷ್ಠವಾದದ್ದು. ನಮ್ಮವರನ್ನು ಗುರ್ತಿಸುವ ಯೋಗ್ಯತೆ ನಮಗೆ ಬೇಕು. ಆಗ ಮಾತ್ರ ರೈತನ ಬದುಕು ಸುಧಾರಿಸುತ್ತದೆ ಎಂದರು.
ತೋಟದಲ್ಲಿ 1 ಗಂಟೆಗೂ ಹೆಚ್ಚು ಕಾಲ ಸುತ್ತಾಡಿದ ಗೌಡರು, ಅಲ್ಲೇ ಬೆಳೆದಿದ್ದ ಎಳನೀರು ಕುಡಿದು ಬಾಯಾರಿಕೆ ನೀಗಿಸಿಕೊಂಡರು. ಸ್ಥಳೀಯ ರೈತರೊಂದಿಗೆ ಮುಕ್ತವಾಗಿ ಮಾತನಾಡಿ ಅನುಭವ ಹಂಚಿಕೊಂಡರು. ನಂತರ ಹಾಡೋನಹಳ್ಳಿಯ ವಿವಿಧ ಕೃಷಿ ಚಟುವಟಿಕೆಗಳ ವೀಕ್ಷಣೆಗೆ ತೆರಳಿದರು.
ಅಧಿಕಾರಿಗಳು ಮತ್ತು ಸ್ಥಳೀಯ ರೈತರೊಂದಿಗೆ ಸಂವಾದದಲ್ಲಿ ಪಾಲ್ಗೊಂಡ ಅವರು, ಬೆಂಗಳೂರಿಗೆ ಹಿಂತಿರುಗುವ ಮುನ್ನ ಸುಪ್ರಸಿದ್ಧ ಶ್ರೀಘಾಟಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

