ಸಚಿವ ರೇಣುಕಾಚಾರ್ಯ ವಿರುದ್ಧ ಪ್ರತಿಭಟನೆ
ರಾಮನಗರ: ಜಿಲ್ಲೆ ಮರೆತ ಉಸ್ತುವಾರಿ ಸಚಿವ ಎಂ.ಪಿ.ರೇಣುಕಾಚಾರ್ಯ ವಿರುದ್ಧ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ನಗರದ ಐಜೂರು ವೃತ್ತದಲ್ಲಿ ಭಿತ್ತಿಪತ್ರ ಹಿಡಿದು ಪ್ರತಿಭಟಿಸಿದ ವೇದಿಕೆ ಕಾರ್ಯಕರ್ತರು ರಾಜ್ಯ ಸರ್ಕಾರ, ರೇಣುಕಾಚಾರ್ಯ ವಿರುದ್ಧ ಘೋಷಣೆ ಕೂಗಿದರು. ಬಳಿಕ ಕಾಣೆಯಾದ ರೇಣುಕಾಚಾರ್ಯ ಅವರನ್ನು ಹುಡಿಕಿಕೊಡಿ ಎಂದಿದ್ದ ಭಿತ್ತಿಪತ್ರಗಳನ್ನು ಹೆದ್ದಾರಿಯಲ್ಲಿ ಸಾಗುತ್ತಿದ್ದ ಬಸ್ಗಳ ಮೇಲೆ ಅಂಟಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ವೇದಿಕೆ ಅಧ್ಯಕ್ಷ ರಮೇಶಗೌಡ, ಭೀಕರ ಬರ ಮತ್ತು ನಾನಾ ಬವಣೆಗಳಿಂದ ರಾಮನಗರ ಜಿಲ್ಲೆ ತತ್ತರಗೊಂಡಿದೆ. ಜಿಲ್ಲೆಯ ಉಸ್ತುವಾರಿ ಹೊಣೆ ಹೊತ್ತ ರೇಣುಕಾಚಾರ್ಯ ನಾಲ್ಕು ತಿಂಗಳಿಂದ ಇತ್ತ ತಲೆ ಹಾಕದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಕಿಡಿ ಕಾರಿದರು.
ಜಿಲ್ಲೆಯ ಎಲ್ಲೆಡೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಸರ್ಕಾರದಿಂದ ಅಗತ್ಯ ಅನುದಾನ ಬಿಡುಗಡೆಗೊಳಿಸಿ, ಪರಿಹಾರ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವಲ್ಲಿ ರೇಣುಕಾಚಾರ್ಯ ವಿಫಲರಾಗಿದ್ದಾರೆ ಎಂದು ಅವರು ಆರೋಪಿಸಿದರು.
ಹುದ್ದೆ ತ್ಯಜಿಸಲಿ: ನಾಮ್ಕೇ ವಾಸ್ತೆ ಉಸ್ತುವಾರಿ ಮಂತ್ರಿಯಾಗಿರುವ ರೇಣುಕಾಚಾರ್ಯ ಅವರು ಹೊಣೆ ನಿಭಾಯಿಸಿದಿದ್ದ ಮೇಲೆ ಅಧಿಕಾರದಲ್ಲಿ ಮುಂದುವರೆಯುವುದು ಸೂಕ್ತವಲ್ಲ. ತಕ್ಷಣ ಅವರು ಉಸ್ತುವಾರಿ ಹೊಣೆಯಿಂದ ನಿರ್ಗಮಿಸಲಿ ಎಂದು ರಮೇಶಗೌಡ ಆಗ್ರಹಿಸಿದರು.
ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಜಿಲ್ಲಾ ಉಸ್ತುವಾರಿ ಸಚಿವರನ್ನು ತಕ್ಷಣ ಬದಲಿಸಬೇಕು. ಜಿಲ್ಲೆಯ ಕುಡಿಯುವ ನೀರು ಸೇರಿದಂತೆ ನಾನಾ ಬವಣೆಗಳಿಗೆ ಶೀಘ್ರ ಪರಿಹಾರ ಕಂಡು ಹಿಡಿಯಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ರಾಮನಗರ ಜಿಲ್ಲೆ ರಚನೆಗೊಂಡು ಇನ್ನೂ ಆರು ವರ್ಷ ಪೂರ್ಣಗೊಂಡಿಲ್ಲ. ಈಗಾಗಲೇ ಆರು ಉಸ್ತುವಾರಿ ಸಚಿವರು ಬದಲಾಗಿದ್ದಾರೆ. ಈ ಪರಿಣಾಮ ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳು ಕುಂಟಿತಗೊಂಡಿವೆ. ಬಿಜೆಪಿ ಸರ್ಕಾರ ಜಿಲ್ಲೆಯನ್ನು ಸಂಪೂರ್ಣ ಕಡೆಗಣಿಸಿದೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ವೇದಿಕೆ ಪದಾಧಿಕಾರಿಗಳಾದ ಯೋಗೇಶ್, ಲಕ್ಷ್ಮಮ್ಮ, ರಂಜಿತ್ಗೌಡ, ಶಂಕರ್, ನಿರಂಜನಗೌಡ, ನಾಗರತ್ನ, ಪ್ರತಾಪ್, ಸಿದ್ದು, ಶ್ಯಾಮ್ ಮತ್ತಿತರರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

