ಬೆಂಗಳೂರು ಗ್ರಾಮಾಂತರ

ಕಾಟಾಚಾರಕ್ಕೆ ಸೀಮಿತವಾದ ಚೌಡಯ್ಯರ ಜಯಂತ್ಯುತ್ಸವ

Published On :

ರಾಮನಗರ:  ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಇದೇ ಮೊದಲ ಬಾರಿಗೆ ಆಚರಿಸಲಾದ ಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವವು ಸರ್ಕಾರದ ಆದೇಶ ಪಾಲನೆಗೆ ಸೀಮಿತವಾಗಿ ನಡೆದ ಕಾಟಾಚಾರದ ಕಾರ್ಯಕ್ರಮವಾಯಿತು.
ಜಿಲ್ಲಾಡಳಿತದ ಕಂದಾಯ ಭವನದಲ್ಲಿ ಸೋಮವಾರ ಬೆಳಗ್ಗೆ 10ಕ್ಕೆ ನಿಗದಿಯಾಗಿದ್ದ ಕಾರ್ಯಕ್ರಮ 11.15ಕ್ಕೆ ಉದ್ಘಾಟನೆಗೊಂಡಿತು. ಗಣ್ಯರು, ಅಧಿಕಾರಿ ವರ್ಗದ ಸಾಮೂಹಿಕ ಗೈರು ನಡುವೆ ಕೆಲವೇ ನಿಮಿಷಗಳಲ್ಲಿ ಮುಕ್ತಾಯಗೊಂಡ ನಿಜ ಶರಣರ ಜಯಂತ್ಯುತ್ಸವ ಕಳಾಹೀನವಾಗಿತ್ತು.
ಸಾಮೂಹಿಕ ಗೈರು:  ಕಾರ್ಯಕ್ರಮ ಉದ್ಘಾಟಿಸಬೇಕಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಪಿ. ರೇಣುಕಾಚಾರ್ಯ, ಸಚಿವ ಸಿ.ಪಿ. ಯೋಗೇಶ್ವರ್, ಸಂಸದ ಎಚ್.ಡಿ. ಕುಮಾರಸ್ವಾಮಿ ಸಹಿತ ಆಹ್ವಾನ ಪತ್ರಿಕೆಯಲ್ಲಿ ಆಹ್ವಾನಿತ ಅತಿಥಿಗಳಾಗಿದ್ದ ಶಾಸಕರು ಮತ್ತು ಸ್ಥಳೀಯ ಸಂಸ್ಥೆಗಳ ವರಿಷ್ಠರ ಸಾಮೂಹಿಕ ಗೈರು ಎದ್ದು ಕಾಣುತ್ತಿತ್ತು. ಅಧ್ಯಕ್ಷತೆ ವಹಿಸಬೇಕಿದ್ದ ಶಾಸಕ ಕೆ.ರಾಜು, ಮುಖ್ಯ ಅತಿಥಿ ಜಿ.ಪಂ. ಅಧ್ಯಕ್ಷ ಮುದ್ದುರಾಜ್ ಯಾದವ್ ಕೂಡ ಇತ್ತ ಸುಳಿಯಲಿಲ್ಲ. ಜಿ.ಪಂ. ಸಿಇಒ ಡಾ.ಸಿದ್ದರಾಮಯ್ಯ, ಎಸ್ಪಿ ಅನುಪಮ್ ಅಗ್ರವಾಲ್ ಅವರೂ ಗೈರಾಗಿದ್ದರು. ಅವರ ಅನುಪಸ್ಥಿತಿಯಲ್ಲಿ ಇಲಾಖೆ ಪ್ರತಿನಿಧಿಸುವವರೂ ಇಲ್ಲವಾದರು.
ಮತಬೇಟೆಗೆ ಇಳಿದವರು:  ರಾಜಕಾರಣಿಗಳು ಜಾತಿ, ಧರ್ಮದ ಹೆಸರಿನಲ್ಲಿ ಮತಬೇಟೆಗೆ ಇಳಿದಿದ್ದಾರೆ. ಸರ್ಕಾರವು ವಿವಿಧ ಸಮುದಾಯದವರನ್ನು ಓಲೈಸಲು ಜಯಂತಿಗಳ ಆಚರಣೆ ಜಾರಿಗೆ ತಂದಿದೆ. ಆದರೆ, ಜಯಂತಿಗಳನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಳ್ಳದಿರುವುದು ದುರಂತ.
ಆಹ್ವಾನ ಪಟ್ಟಿಯಲ್ಲಿದ್ದ ಸುಮಾರು ಎರಡು ಡಜನ್ ಗಣ್ಯರ ಪೈಕಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಏಕೈಕ ಜನಪ್ರತಿನಿಧಿ ಎಂದರೆ ನಗರಸಭೆ ಅಧ್ಯಕ್ಷ ಸಾಬಾನ್ ಮಾತ್ರ. ಅವರಿಗೆ ಭಾಷಣದ ಅವಕಾಶವೇ ಸಿಗಲಿಲ್ಲ. ಜಿಲ್ಲಾಧಿಕಾರಿಯೇ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಭಾಷಣಕಾರರಿಗೆ 5 ನಿಮಿಷದ ಕಾಲಮಿತಿ ನೀಡಲಾಗಿತ್ತು.
ಕುರ್ಚಿ ಭರ್ತಿಗೆ ಸರ್ಕಸ್:  ಕಾರ್ಯಕ್ರಮದಲ್ಲಿ ಬರೋಬ್ಬರಿ 100 ಕುರ್ಚಿಗಳನ್ನಷ್ಟೇ ಹಾಕಲಾಗಿತ್ತು. ಸಮಾರಂಭ ಪ್ರಾರಂಭಕ್ಕೆ ಮುನ್ನ ಬೆರಳೆಣಿಕೆ ಮಂದಿಯಷ್ಟೇ ಇದ್ದರು. ಸಿಬ್ಬಂದಿ ಸಮೇತ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದು ಕಂದಾಯ ಭವನದಲ್ಲಿದ್ದ ವಿವಿಧ ಇಲಾಖೆ ಅಧಿಕಾರಿಗಳಿಗೆ ಧ್ವನಿವರ್ಧಕದ ಮೂಲಕ ಪದೇ ಪದೇ ಸೂಚನೆ ನೀಡಲಾಗುತ್ತಿತ್ತು.
ಸಾಕಷ್ಟು ಕಾಡಿ-ಬೇಡಿ, ಸರ್ಕಸ್ ನಡೆಸಿದ ಬಳಿಕ ಒಂದಷ್ಟು ಕುರ್ಚಿಗಳನ್ನು ಭರ್ತಿಗೊಳಿಸಲಾಯಿತು. ಗಣ್ಯರನ್ನು ಸ್ವಾಗತಿಸಲು ಕಂದಾಯ ಭವನದ ಎದುರು ಒಂದು ತಾಸು ಕಲಾ ಪ್ರದರ್ಶನ ನೀಡಿ ಸುಸ್ತಾದ ಕಲಾವಿದರು ಕಡೆಗೆ ಸಭಾಂಗಣಕ್ಕೆ ಬಂದು ಆಸೀನರಾದರು. ಕಲಾವಿದರ ತಂಡವು ವಚನ ಗಾಯನದ ಮೂಲಕ ಗಮನ ಸೆಳೆಯಿತು.
ಆಹ್ವಾನ ಪತ್ರ ಹಂಚಿಕೆ:  ಜಿಲ್ಲಾಡಳಿತದಿಂದ ನಡೆಯುವ ಬಹುಪಾಲು ಸಮಾರಂಭ, ಉತ್ಸವಗಳ ಆಹ್ವಾನ ಪತ್ರಿಕೆಗಳು ಮಾಧ್ಯಮ ಕಚೇರಿ ಮತ್ತು ಪ್ರತಿನಿಧಿಗಳಿಗೆ ತಲುಪುವುದೇ ಇಲ್ಲ. ಅಂಬಿಗರ ಚೌಡಯ್ಯ ಜಯಂತ್ಯುತ್ಸವದಲ್ಲಿ ಆಗಿದ್ದೂ ಅದೇ. ಆಹ್ವಾನ ಪತ್ರಿಕೆಗಳನ್ನು ವೇದಿಕೆ ಎದುರು ಬಂದು ಕುಳಿತವರಿಗೆ ಸಿಬ್ಬಂದಿ ಹಂಚುತ್ತಿದ್ದದ್ದು ನೆಗೆಪಾಟಲಿಗೀಡು ಮಾಡಿತ್ತು. ಇಷ್ಟೆಲ್ಲಾ ಅಧ್ವಾನಗಳ ನಡುವೆ ನಡೆದ ಸಮಾರಂಭವನ್ನು ಅರ್ಥಪೂರ್ಣವೆಂದು ಹೇಳಿಕೊಂಡು ಜಿಲ್ಲಾಧಿಕಾರಿ ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.