ಬೆಂಗಳೂರು ಗ್ರಾಮಾಂತರ

ಗ್ರಾಪಂ ಮಟ್ಟದಲ್ಲಿ ಉದ್ಯೋಗ ಮೇಳ ಅಗತ್ಯ

Published On :

ದೊಡ್ಡಬಳ್ಳಾಪುರ: ಪ್ರತಿಯೊಂದು ಗ್ರಾಮ ಪಂಚಾಯಿತಿಗಳ ಹಂತದಲ್ಲೂ ಉದ್ಯೋಗ ಮೇಳಗಳನ್ನು ನಡೆಸುವುದರಿಂದ ಸಾಕಷ್ಟು ನಿರದ್ಯೋಗಿ ಯುವಕರಿಗೆ ಉದ್ಯೋಗ ದೊರೆಯಲು ಅನುಕೂಲವಾಗುತ್ತದೆ ಎಂದು ಜೆಡಿಎಸ್ ಮುಖಂಡ ಎಚ್.ಅಪ್ಪಯ್ಯಣ್ಣ ಅಭಿಪ್ರಾಯಪಟ್ಟರು.
ಇಲ್ಲಿನ ರಾಜಘಟ್ಟ ಗ್ರಾಮದಲ್ಲಿ ಶ್ರೀರಾಮ ಆಸ್ಪತ್ರೆ ವತಿಯಿಂದ ಆಯೋಜನೆಗೊಳಿಸಲಾಗಿದ್ದ ಉದ್ಯೋಗ ಮೇಳ ಉದ್ಘಾಟಿಸಿ ಅವರು ಮಾತನಾಡಿದರು. ಕೆಲಸಗಳಿಗೆ ಅರ್ಜಿಗಳನ್ನು ಹಿಡಿದು ಅಲೆದಾಡಬೇಕಾದ ಪರಿಸ್ಥಿತಿ ಇರುವ ಸಂದರ್ಭದಲ್ಲಿ ಇಂತಹ ಕಾರ್ಯಗಳು ನಿರುದ್ಯೋಗಿಗಳಿಗೆ ವರದಾನ ಎಂದ ಅವರು ಗ್ರಾಮಾಂತರ ಪ್ರದೇಶಗಳಲ್ಲಿ ಈ ಬಗೆಯ ಮೇಳಗಳ ಅಗತ್ಯತೆ ಹೆಚ್ಚಿದೆ ಎಂದರು.
ಆಯೋಜನೆ ನೇತೃತ್ವ ವಹಿಸಿದ್ದ ತಾ.ಪಂ ಸದಸ್ಯ ಡಾ.ವಿಜಯಕುಮಾರ್ ಮಾತನಾಡಿ ಗ್ರಾಮೀಣ ನಿರುದ್ಯೋಗಿಗಳಿಗೆ ಇದು ಉತ್ತಮ ವೇದಿಕೆ. ಮಾನವ ಸಂಪನ್ಮೂಲದ ಸದ್ಬಳಕೆ ಮತ್ತು ಸಂಯೋಜನೆಗೆ ಮೇಳ ಸಹಕಾರಿಯಾಗಲಿದೆ ಎಂದರು. ಕಾರ್ಯಕ್ರಮದಲ್ಲಿ ಜಿ.ಪಂ ಮಾಜಿ ಸದಸ್ಯ ನರಸಿಂಹಯ್ಯ, ಲಕ್ಷ್ಮೀನಾರಾಯಣ್, ಗ್ರಾ.ಪಂ ಅಧ್ಯಕ್ಷೆ ಭುವನೇಶ್ವರಿ, ಉಪಾಧ್ಯಕ್ಷ ನಾರಾಯಣಸ್ವಾಮಿ, ಕೃಷ್ಣಮೂರ್ತಿ, ಗೌರೀಶ್, ವೆಂಕಟರಮಣಪ್ಪ, ಭೈರೇಗೌಡ, ಜಯರಾಂ, ಮಂಜುನಾಥ್ ಮತ್ತಿತರರು ಭಾಗವಹಿಸಿದ್ದರು.

ಉಪನ್ಯಾಸಕ ಹುದ್ದೆಗೆ ಅರ್ಜಿ ಆಹ್ವಾನ
ರಾಮನಗರ ಬಸವನಪುರದ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಖಾಲಿ ಇರುವ ಮನೋವಿಜ್ಞಾನ ವಿಷಯದ ಉಪನ್ಯಾಸಕ ಹುದ್ದೆ ಭರ್ತಿಗೆ ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ (ಸಾಮಾನ್ಯ ವರ್ಗಕ್ಕೆ) ಶೇ.55 ಹಾಗೂ (ಎಸ್.ಸಿ., ಎಸ್.ಟಿ.ಗೆ) ಶೇ.50ರಷ್ಟು ಅಂಕ ಪಡೆದಿರುವ ಅಭ್ಯರ್ಥಿಯನ್ನು ನೇಮಕ ಮಾಡಿಕೊಳ್ಳಲಾಗುವುದು.
ಆಸಕ್ತರು ಫೆ.2ರಂದು ಬೆಳಗ್ಗೆ 10 ಗಂಟೆಗೆ ಅರ್ಜಿ ಹಾಗೂ ಅಗತ್ಯ ಮೂಲ ದಾಖಲೆಗಳೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗುವುದು. ಎಸ್‌ಎಲ್‌ಇಟಿ, ಎನ್‌ಇಟಿ, ಪಿಎಚ್‌ಡಿ ಪದವಿ ಹೊಂದಿದವರಿಗೆ ಆದ್ಯತೆ ನೀಡಲಾಗುವುದು ಎಂದು ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.

ಕಾನೂನು ಅರಿವು ಶಿಬಿರ
ಕನಕಪುರ: 
ಯುವಜನರಲ್ಲಿ ಕಾನೂನು ಪಾಲನೆಗಿಂತಲೂ ಕಾನೂನನ್ನು ಉಪೇಕ್ಷಿಸುವ, ಮುರಿಯುವ ಮನೋಭಾವ ಹೆಚ್ಚಾಗಿ ಕಂಡು ಬರುತ್ತಿರುವುದು ವಿಷಾದನೀಯ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಬಿ.ದಶರಥ ಹೇಳಿದ್ದಾರೆ. ಅವರು ಕನಕಪುರದ ಸರ್ಕಾರಿ ಪದವಿ ಕಾಲೇಜು ಆವರಣದಲ್ಲಿ ವಕೀಲರ ಸಂಘ, ಕಾನೂನು ಸೇವಾ ಪ್ರಾಧಿಕಾರ ಆಯೋಜಿಸಿದ್ದ ಕಾನೂನು ಅರಿವು ಶಿಬಿರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು. ಪ್ರಾಂಶುಪಾಲ ಪ್ರೊ.ಸಿದ್ಧಪ್ಪ ಅಧ್ಯಕ್ಷತೆ ವಹಿಸಿದ್ದರು.  ಕಾರ್ಯಕ್ರಮದ ಅಂಗವಾಗಿ ನ್ಯಾಯವಾದಿ ಕೆ.ಸಿ.ಗೋಪಾಲಗೌಡ ಅವರು ಲೈಂಗಿಕ ದೌರ್ಜನ್ಯ ಮತ್ತು ಆತ್ಮರಕ್ಷಣೆ ಕುರಿತು, ವಕೀಲರಾದ ಕೆ.ಪ್ರಕಾಶ್ ಮೋಟಾರು ವಾಹನ ಅಧಿನಿಯಮ ವಿಚಾರವಾಗಿ ಉಪನ್ಯಾಸಗಳನ್ನು ನೀಡಿದರು. ಮುಖ್ಯ ಅತಿಥಿಗಳಾಗಿ ವಕೀಲರ ಸಂಘದ ಕಾರ್ಯದರ್ಶಿ ಎಸ್.ವಿ. ವೀರಪ್ಪ, ಸರ್ಕಾರಿ ಅಭಿಯೋಜಕ ರವೀಂದ್ರಪ್ಪ, ಎ.ಸಿ.ಚನ್ನೇಗೌಡ, ಉಪನ್ಯಾಸಕಿ ರತ್ನಮ್ಮ, ಸ್ಮಿತಾ, ಮುತ್ತುರಾಜು ಆಗಮಿಸಿದ್ದರು.

ಕ್ರೀಡಾ ಶಾಲೆ, ಕ್ರೀಡಾ ವಸತಿ ನಿಲಯಕ್ಕೆ ಆಯ್ಕೆ
ರಾಮನಗರ:
ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಿಂದ ನಡೆಸಲಾಗುವ ಕ್ರೀಡಾ ಶಾಲೆ ಮತ್ತು ಕ್ರೀಡಾ ವಸತಿ ನಿಲಯಗಳಿಗೆ 2013-14ನೇ ಸಾಲಿನಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಪ್ರತಿಭೆಯುಳ್ಳ ಬಾಲಕ, ಬಾಲಕಿಯರನ್ನು ಆಯ್ಕೆ ಮಾಡಲು ಉದ್ದೇಶಿಸಲಾಗಿದೆ.
ಹಿರಿಯರ ಮತ್ತು ಕಿರಿಯರ ಕ್ರೀಡಾ ಶಾಲೆಗೆ ಮೊದಲನೇ ಹಂತವಾಗಿ ಜಿಲ್ಲೆಯ ನಾಲ್ಕು ತಾಲ್ಲೂಕು ಕೇಂದ್ರಗಳಲ್ಲಿ ಆಯ್ಕೆ ನಡೆಯಲಿದೆ. ಜ.28ರಂದು ಚನ್ನಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು, ಜ.29ರಂದು ಕನಕಪುರದ ತಾಲೂಕು ಕ್ರೀಡಾಂಗಣದಲ್ಲಿ, ಜ.30ರಂದು ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ, ಜ.31ರಂದು ಮಾಗಡಿಯ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಆಯ್ಕೆ ನಡೆಯಲಿದೆ. ಬೆಳಗ್ಗೆ 10.30 ಗಂಟೆಯಿಂದ ಆಯ್ಕೆ ಪ್ರಕ್ರಿಯೆ ಪ್ರಾರಂಭವಾಗಲಿದೆ.
 ಕಿರಿಯ ಕ್ರೀಡಾ ಶಾಲೆಗೆ ಆಯ್ಕೆಯಾಗಲು ಬಯಸುವ ಕ್ರೀಡಾಪಟುಗಳು 2013ರ ಜೂನ್ 1ಕ್ಕೆ 14 ವರ್ಷ ಒಳಗಿರಬೇಕು ಮತ್ತು ಆಯ್ಕೆಯಾದ ಕ್ರೀಡಾಪಟುಗಳು 8ನೇ ತರಗತಿಗೆ ಪ್ರವೇಶ ಪಡೆಯುವಂತಿರಬೇಕು. ಹಿರಿಯರ ಕ್ರೀಡಾ ವಸತಿ ನಿಲಯಕ್ಕೆ ನೇರವಾಗಿ ಅರ್ಜಿ ಆಹ್ವಾನಿಸಿದ್ದು, 2013ರ ಜೂನ್ 1ರಂದು 18 ವರ್ಷದ ಒಳಗಿರಬೇಕು ಹಾಗೂ ಪಿಯುಸಿಗೆ ಪ್ರವೇಶ ಪಡೆಯುವಂತಿರಬೇಕು. ಆಯ್ಕೆಯಾದ ಕ್ರೀಡಾಪಟುಗಳಿಗೆ ಇಲಾಖೆಯಿಂದ ನಡೆಸುತ್ತಿರುವ ಕ್ರೀಡಾ ಶಾಲೆಯಲ್ಲಿ ವಿದ್ಯಾಭ್ಯಾಸ ಹಾಗೂ ಉಚಿತ ಊಟ ಹಾಗೂ ವಸತಿ ವ್ಯವಸ್ಥೆ ಮತ್ತು ನುರಿತ ತರಬೇತುದಾರರಿಂದ ವೈಜ್ಞಾನಿಕವಾಗಿ ತರಬೇತಿ ನೀಡಲಾಗುವುದು ಇಲಾಖೆಯ ಸಹಾಯಕ ನಿರ್ದೇಶಕಿ ಡಿ.ನವಜ್ಯೋತಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ದೂ.080-27274655, ಮೊಣ 9449627689 ಸಂಪರ್ಕಿಸಲು ತಿಳಿಸಿದೆ.  ಬಾಲಕ, ಬಾಲಕಿಯರಿಗೆ ಆಯ್ಕೆ ನಡೆಸುವ ಕ್ರೀಡೆಗಳು, ಅಥ್ಲೆಟಿಕ್ಸ್, ಹಾಕಿ, ಬ್ಯಾಸ್ಕೆಟ್‌ಬಾಲ್, ವಾಲಿಬಾಲ್, ಜಿಮ್ನಾಸ್ಟಿಕ್. ಬಾಲಕರಿಗೆ  ಆಯ್ಕೆ ನಡೆಸಲಾಗುವ ಕ್ರೀಡೆಗಳು ಫುಟ್‌ಬಾಲ್, ಕುಸ್ತಿ.

6 ಸಾವಿರ ನಿವೇಶನ ಹಂಚುವ ಗುರಿ
ರಾಮನಗರ:
ಬಿಡದಿ ಸಮೀಪದ ಕಾಕರಾಮನಹಳ್ಳಿ, ಮುದ್ದಾಪುರ ಕರೇನಹಳ್ಳಿ, ಬೋರೇಹಳ್ಳಿಯ 499 ಎಕರೆ 21 ಗುಂಟೆ ಜಮೀನಿನಲ್ಲಿ ಕರ್ನಾಟಕ ಗೃಹ ಮಂಡಳಿಯಿಂದ ನಿರ್ಮಿಸುತ್ತಿರುವ ನೇತಾಜಿ ಸುಭಾಷ್‌ಚಂದ್ರ ಬೋಸ್ ಬಡಾವಣೆಯ ಯೋಜನಾ ವೆಚ್ಚ ರು.480 ಕೋಟಿ ಆಗಿದೆ.  
5 ಬ್ಲಾಕ್‌ಗಳನ್ನು ಒಳಗೊಂಡಿರುವ ಈ ಯೋಜನೆಯಲ್ಲಿ ಕೇವಲ 16 ಮನೆಗಳನ್ನು ನಿರ್ಮಿಸಲಿದ್ದು, ಸುಮಾರು 6 ಸಾವಿರ ನಿವೇಶನಗಳನ್ನು ಹಂಚುವ ಗುರಿ ಹೊಂದಲಾಗಿದೆ.
ಮಳೆ ನೀರು ಕೊಯ್ಲು, ಉದ್ಯಾನವನ, ಮೈದಾನ, ಸಮುದಾಯ ಭವನ, ಎಸ್‌ಟಿಪಿ ವ್ಯವಸ್ಥೆ ಇಲ್ಲಿರುತ್ತದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಬಾಲಗಂಗಾಧರನಾಥ ಸ್ವಾಮೀಜಿ ಶ್ರದ್ಧಾಂಜಲಿ ಸಭೆ ಇಂದು
ಕನಕಪುರ: 
ತಾಲೂಕು ಹಾರೋಹಳ್ಳಿ ಗ್ರಾಮಾಂತರ ಪ್ರೌಢಶಾಲೆ ಮೈದಾನದಲ್ಲಿ ಚುಂಚನಗಿರಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ  ಶ್ರದ್ಧಾಂಜಲಿ ಸಭೆಯನ್ನು ಜನವರಿ 23 ರಂದು ಬುಧವಾರ ಬೆಳಗ್ಗೆ ಏರ್ಪಡಿಸಲಾಗಿದೆ. ತಾಲೂಕಿನ ಒಕ್ಕಲಿಗ ಸಮುದಾಯದವರು, ಸಾರ್ವಜನಿಕರು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀಗಳಿಗೆ ಶ್ರದ್ಧಾಂಜಲಿ ಸಲ್ಲಿಸಬೇಕೆಂದು ಮುಖಂಡ ರಾಂಪುರ ನಾಗೇಶ್ ಕೋರಿದ್ದಾರೆ.  ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ವಿಶ್ವ ಒಕ್ಕಲಿಗ ಸಂಸ್ಥಾನ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ, ಶಿವಗಿರಿ ಶ್ರೀ ಅನ್ನದಾ ನೇಶ್ವರನಾಥ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದ ಅಂಗವಾಗಿ ಪರಿಸರ ಪ್ರೇಮಿಯಾಗಿದ್ದ ಸ್ವಾಮೀಜಿ ಸ್ಮರಣೆಗಾಗಿ ನಾಲ್ಕು ಸಾವಿರ ಸಸಿಗಳ ವಿತರಣೆ, ರಕ್ತದಾನ ಶಿಬಿರ, ಆದಿಶ್ರೀ ಸ್ವಾಮೀಜಿ ಭಾವಚಿತ್ರವಿರುವ ಕ್ಯಾಲೆಂಡರ್ ವಿತರಣೆ, ಸಾಮೂಹಿಕ ಭಜನೆ, ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ನಾಗೇಶ್‌ತಿಳಿಸಿದ್ದಾರೆ.

ಗಣರಾಜ್ಯೋತ್ಸವ ದಿನಾಚರಣೆ
ರಾಮನಗರ:
ಜಿಲ್ಲಾಡಳಿತದಿಂದ ಜ.26ರಂದು ಬೆಳಗ್ಗೆ 9 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ 64ನೇ ಗಣರಾಜ್ಯೋತ್ಸವ ದಿನಾಚರಣೆ ನಡೆಯಲಿದೆ.  ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಪಿ.ರೇಣುಕಾಚಾರ್ಯ ಧ್ವಜಾರೋಹಣ ಮಾಡುವರು. ಶಾಸಕ ಕೆ.ರಾಜು ಅಧ್ಯಕ್ಷತೆ ವಹಿಸುವರು. ಅರಣ್ಯ ಸಚಿವ ಸಿ.ಪಿ.ಯೋಗೇಶ್ವರ್, ಸಂಸದ ಎಚ್.ಡಿ.ಕುಮಾರಸ್ವಾಮಿ, ಜಿ.ಪಂ. ಅಧ್ಯಕ್ಷ ಕೆ.ಮುದ್ದುರಾಜ್ ಯಾದವ್ ಭಾಗವಹಿಸುವರು. ಕನ್ನಡ ಮತ್ತು ಸಂಸ್ಕೃತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಸಂಜೆ 5.30ರಿಂದ 7.30ರವರೆಗೆ  ಅಂಬೇಡ್ಕರ್ ಭವನದಲ್ಲಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮ ನಡೆಯಲಿದೆ.

ಜೇನು ಕೃಷಿಯಲ್ಲಿ ಅರ್ಥಿಕಾಭಿವೃದ್ಧಿ ಹೊಂದಲು ಸಲಹೆ
ಸೂಲಿಬೆಲೆ:
  ಅಂತರ್ಜಲ ಕುಸಿತವಾಗುತ್ತಿರುವ ಪ್ರಸಕ್ತ ದಿನಗಳಲ್ಲಿ ರೈತರು ಜೇನು ಸಾಕಣಿಕೆಯನ್ನು ಉಪಕಸುಬಾಗಿ ಮಾಡಿಕೊಂಡು ಆರ್ಥಿಕಾಭಿವೃದ್ಧಿಯನ್ನು ಹೊಂದಬೇಕೆಂದು ಹೊಸಕೋಟೆ ಎಪಿಎಂಸಿ ಅಧ್ಯಕ್ಷ ಸಿ.ಮುನಿಯಪ್ಪ ಹೇಳಿದ್ದಾರೆ.
ಸೂಲಿಬೆಲೆ ಬಳಿಯ ಕಮ್ಮಸಂದ್ರ ಗ್ರಾಮದಲ್ಲಿ ಹೊಸಕೋಟೆ ತೋಟಗಾರಿಕೆ ಇಲಾಖೆ, ರಾಜ್ಯ ವಲಯ ಯೋಜನೆ ಹಾಗೂ ಮಧುವನ ಜೇನು ಸಾಕಣಿಕೆ ಯೋಜನೆಯಡಿಯಲ್ಲಿ ಹಮ್ಮಿಕೊಂಡಿದ್ದ ಮೂರು ದಿನದ ಜೇನು ಕೃಷಿ  ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಹೊಸಕೋಟೆ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ರಜನಿ ಮಾತನಾಡಿ, ಜೇನು ಕೃಷಿಯನ್ನು ಆಳವಡಿಸಿಕೊಳ್ಳುವ ರೈತರಿಗೆ ಜೇನುಗೂಡು ಪಟ್ಟಿಗೆಗಳನ್ನು ಸಹಾಯಧನದಲ್ಲಿ ವಿತರಣೆ ಮಾಡಲಾಗುವುದು ಎಂದರು. ಸೂಲಿಬೆಲೆ ಹೋಬಳಿಯಿಂದ ಹಲವಾರು ರೈತರು ತರಬೇತಿಗಾಗಿ ಆಗಮಿಸಿದ್ದರು.

ಸಹಕಾರ ಸಂಘಗಳ ನಷ್ಟಕ್ಕೆಎಲ್ಲ ನಿರ್ದೇಶಕರು ಹೊಣೆ: ಪಿ. ರುದ್ರಪ್ಪ
ದೇವನಹಳ್ಳಿ:
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಹಕಾರ ಒಕ್ಕೂಟ  ಸಂಯುಕ್ತ ಆಶ್ರಯದಲ್ಲಿ ದೇವನಹಳ್ಳಿ ತಾಲೂಕಿನ ಎಲ್ಲ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಿಗೆ ಒಂದು ದಿನದ ಜಿಲ್ಲಾ ವಿಶೇಷ ತರಬೇತಿ ಕಾರ್ಯಾಗಾರವನ್ನು  ಆಯೋಜಿಸಲಾಗಿತ್ತು.
 ಉದ್ಘಾಟನೆಯನ್ನು ಬೆಂ. ಹಾಲು ಒಕ್ಕೂಟ ನಿರ್ದೇಶಕರಾದ ಎ.ಸೋಮಣ್ಣ ನೆರವೇರಿಸಿ ಸಹಕಾರಿ ಕಾನೂನು ಸಂವಿಧಾನ ತಿದ್ದುಪಡಿ 97 ನೇ ಅಧಿನಿಯಮ -2011 ಎಲ್ಲ ಕಾರ್ಯದರ್ಶಿಗಳು ಮತ್ತು ಅಧ್ಯಕ್ಷರು ತಿಳಿದಿರಲೇಬೇಕು ಎಂದರು.
ಕರ್ನಾಟಕ ಸಹಕಾರ ಮಹಾಮಂಡಳ ನಿವೃತ್ತ ಅಧಿಕಾರಿ ಪಿ.ರುದ್ರಪ್ಪ 97ನೆಯ ಅಧಿನಿಯಮದ ಬಗ್ಗೆ ಉಪನ್ಯಾಸವನ್ನು ನೀಡಿದರು.
ಇದೇ ಸಂಧರ್ಭದಲ್ಲಿ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಕೃಷ್ಣಮೂರ್ತಿ, ಸಹಕಾರ ಅಭಿವೃದ್ಧಿ ಅಧಿಕಾರಿ ಸುಕುಮಾರ್, ಬೆಂ. ಹಾಲು ಒಕ್ಕೂಟ ಉಪ ವ್ಯವಸ್ಥಾಪಕರಾದ ಡಾ.ಸದಾಶಿವ, ದೇವನಹಳ್ಳಿ ಶಿಬಿರದ ಉಪ ವ್ಯವಸ್ಥಾಪಕರಾದ ವಿ.ಜೆ.ನಾಯಕ್ ಮಾತನಾಡಿದರು.
ಅಧ್ಯಕ್ಷತೆಯನ್ನು ಬೆಂಗಳೂರು ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎ.ದೇವರಾಜ್ ವಹಿಸಿದ್ದರು,  ಬೆಂ.ಹಾಲು ಒಕ್ಕೂಟ ನಿರ್ದೇಶಕರಾದ ಜಿ.ಎಸ್. ಸಂಪಂಗಿಗೌಡ ಸ್ವಾಗತ ಕೋರಿದರು, ಹಾಲು ಒಕ್ಕೂಟ ನಿರ್ದೇಶಕರಾದ ಎ.ಸಿ.ನಾಗರಾಜ್ ವಂದನೆ ಅರ್ಪಿಸಿದರು.

ಉಳಿತಾಯಕ್ಕೆ ಬ್ಯಾಂಕ್ ಅವಶ್ಯ
ಆನೇಕಲ್:
ಪ್ರತಿ ವ್ಯಕ್ತಿ ತನ್ನ ಸಂಪಾದನೆಯಲ್ಲಿ ಉಳಿತಾಯಕ್ಕೆ ಆದಷ್ಟು ಬ್ಯಾಂಕುಗಳ ಮೂಲಕ ವ್ಯವಹಾರ ನಡೆಸುವುದು ವ್ಯಕ್ತಿಯ ಸ್ವಹಿತಾಸಕ್ತಿ ಹಾಗೂ ದೇಶದ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ಹೊಸೂರು ಕೈಗಾರಿಕಾ ಪ್ರದೇಶದ ಅಧ್ಯಕ್ಷ ವಾ. ಮುರಳೀಧರ ತಿಳಿಸಿದ್ದಾರೆ. ಅವರು ತಾಲೂಕಿನ ಗಡಿ ಭಾಗ ಬಳ್ಳೂರಿನಲ್ಲಿ ಸೌತ್ ಇಂಡಿಯನ್ ಬ್ಯಾಂಕ್‌ನ ನೂತನ ಶಾಖೆ ಉದ್ಘಾಟಿಸಿ ಮಾತನಾಡಿದರು. ಹಾ.ಉ.ಸ.ಸಂ. ಅಧ್ಯಕ್ಷ ರಾಮರೆಡ್ಡಿ, ಗ್ರಾಪಂ ಅಧ್ಯಕ್ಷ ಮಂಜುಳಮ್ಮ, ನಾರಾಯಣಮಯ್ಯ, ಮುಖಂಡ ಮಧುಕುಮಾರ್, ಸಂದೀಪ್, ಮಾಜಿ ಅಧ್ಯಕ್ಷೆ ಪೂರ್ಣಿಮ ಮಧುಕುಮಾರ್, ಬಿಜೆಪಿ ವಸಂತ್ ಮತ್ತಿತರರು ವೇದಿಕೆಯಲ್ಲಿದ್ದರು.

ನಾಳೆ ಕೃಷಿ ಮಾಹಿತಿ
ದೇವನಹಳ್ಳಿ:
ಬೆಂಗಳೂರು ಗ್ರಾ.ಜಿಪಂ ಹಾಗೂ ಕೃಷಿ ಇಲಾಖೆ  ಸಂಯುಕ್ತ ಆಶ್ರಯದಲ್ಲಿ ಕೃಷಿ ಮಾಹಿತಿ ಆಂದೋಲನ -2013 ಕಾರ್ಯಕ್ರಮವನ್ನು ಗುರುವಾರ ಶ್ರೀ ನಗರೇಶ್ವರ ಸ್ವಾಮಿ ಕಲ್ಯಾಣ ಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಷಕರಾದ ಬಿ.ಟಿ. ವಿನೋದಮ್ಮ ತಿಳಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಬಿ.ಎನ್.ಬಚ್ಚೇಗೌಡ ಉದ್ಘಾಟಿಸಲಿದ್ದು ಕೇಂದ್ರ ಸಚಿವ ಎಂ.ವೀರಪ್ಪಮೊಯ್ಲಿ ವಿಶೇಷ ಗೌರವ ಅತಿಥಿಗಳಾಗಿ ಆಗಮಿಸಲಿದ್ದು ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ವೆಂಕಟಸ್ವಾಮಿ ಅವರು ವಹಿಸಲಿದ್ದಾರೆ. ಕೃಷಿ ವಿಜ್ಞಾನಿಗಳು, ಅಧಿಕಾರಿಗಳಿಂದ ರೈತರಿಗೆ ತಾಂತ್ರಿಕ ಸಲಹೆ ಮತ್ತು ರೈತರೊಂದಿಗೆ ಸಂವಾದ ಕಾರ್ಯಕ್ರಮ ಇದೆ.

ಇಂದು ವಿವಿಧ ಕಾಮಗಾರಿಗಳಿಗೆ ಚಾಲನೆ
ದೊಡ್ಡಬಳ್ಳಾಪುರ:
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ, ಜಿಲ್ಲಾಡಳಿತ ಮತ್ತು ವಿವಿಧ ಇಲಾಖೆಗಳ ನೇತೃತ್ವದಲ್ಲಿ ದೊಡ್ಡಬಳ್ಳಾಪುರ ನಗರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಸಮಾರಂಭ ಜ.23ರ ಬುಧವಾರ ಬೆಳಗ್ಗೆ 10.30ಕ್ಕೆ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಆರ್.ಅಶೋಕ್ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದು, ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಬಿ.ಎನ್.ಬಚ್ಚೇಗೌಡ ಉದ್ಘಾಟಿಸಲಿದ್ದಾರೆ. 100 ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕೆ ಆರೋಗ್ಯ ಸಚಿವ ಅರವಿಂದ ಲಿಂಬಾವಳಿ ಶಂಕುಸ್ಥಾಪನೆ ಮಾಡುವರು. ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ ಪ್ರವಾಸಿ ಮಂದಿರ ಕಟ್ಟಡ ಉದ್ಘಾಟಿಸಲಿದ್ದಾರೆ. ವಸತಿ ಸಚಿವ ವಿ.ಸೋಮಣ್ಣ ಕೊಳಗೇರಿ ನಿವಾಸಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಲಿದ್ದು, ಎಪಿಎಂಸಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಗೋದಾಮುಗಳನ್ನು ಉದ್ಘಾಟಿಸಲಿದ್ದಾರೆ. ಶಾಸಕ ಜೆ.ನರಸಿಂಹಸ್ವಾಮಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಲಿದ್ದಾರೆ.

24ರಿಂದ ಆಗಮ ತರಬೇತಿ ಶಿಬಿರ
ದೊಡ್ಡಬಳ್ಳಾಪುರ:
ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರು, ಆಗಮಿಕರ ಮತ್ತು ನೌಕರರ ಸಂಘದ ಸಹಯೋಗದಲ್ಲಿ ತಾಲೂಕು ಮುಜರಾಯಿ ದೇವಾಲಯಗಳ ಅರ್ಚಕರ ಸಂಘದ ವತಿಯಿಂದ 15 ದಿನಗಳ ಆಗಮ ತರಬೇತಿ ಶಿಬಿರ ಜ.24ರ ಗುರುವಾರದಿಂದ ಫೆ.7ರ ಗುರುವಾರದವರೆಗೆ ರಾಜಘಟ್ಟದ ಆಂಜನೇಯಸ್ವಾಮಿ ಸನ್ನಿಧಾನದಲ್ಲಿ ನಡೆಯಲಿದೆ. ದೇವಿಶ್ರೀ ಫೌಂಡೇಶನ್‌ನ ಶ್ರೀಗುರೂಜಿ ದೇವಿಶ್ರೀ ಸಾನಿಧ್ಯ ವಹಿಸಲಿದ್ದು, ತಹಶೀಲ್ದಾರ್ ಚಂದ್ರ ಉದ್ಘಾಟಿಸಲಿದ್ದಾರೆ. ಸಂಘದ ರಾಜ್ಯಾಧ್ಯಕ್ಷ ಶ್ರೀವತ್ಸ ಅಧ್ಯಕ್ಷತೆ ವಹಿಸಲಿದ್ದು, ಕಾರ್ಯದರ್ಶಿ ಶ್ರೀನಿವಾಸ್, ಜಂಟಿ ಕಾರ್ಯದರ್ಶಿ ರಾಮತೀರ್ಥ, ಸಂಚಾಲಕ ಪ್ರಶಾಂತ್ ನಿರ್ದೇಶಕ ರಂಗಸ್ವಾಮಿ, ಶಿವಣ್ಣ, ಬಸವರಾಜು, ರಾಮದಾಸ್ ಆಚಾರ್ಯ ಭಾಗವಹಿಸುವರು.

ದೇವಸ್ಥಾನದ ಕಳವಿಗೆ ಯತ್ನ
ಹೊಸಕೋಟೆ:
ಪಟ್ಟಣದ ಸೂಲಿಬೆಲೆ ರಸ್ತೆಯಲ್ಲಿರುವ ಖಿಲ್ಲೆ ಆಂಜನೇಯ ಸ್ವಾಮಿ ದೇವಸ್ಥಾನದ ಬೀಗ ಮುರಿದು ಕಳ್ಳತನ ಮಾಡುವ ಘಟನೆ ಜ21 ರಂದು ಮಧ್ಯರಾತ್ರಿ ನಡೆದಿದೆ.
ರಾತ್ರಿ ಕಳ್ಳತನ ಮಾಡಲು ಬಂದ ಕಳ್ಳರು ದೇವಸ್ಥಾನದ ಬೀಗ ಮುರಿದು ಒಳಗೆ ನುಗ್ಗಿ ಕಳುವು ಮಾಡಲು ಯತ್ನಿಸಿ ಬೀಗ ಬಾರದೆ ದ್ವಿಚಕ್ರವಾಹನವನ್ನು ಕದ್ದಿದ್ದಾರೆ. ಈ ಕೃತ್ಯ ಭಾನುವಾರ ರಾತ್ರಿ 12 ಗಂಟೆಯಿಂದ 3 ಗಂಟೆಗಳೊಳಗೆ ನಡೆದಿರಬಹುದೆಂದು ಶಂಕಿಸಲಾಗಿದೆ. ಬೆಳಿಗ್ಗೆ 4 ಗಂಟೆಗೆ ಅರ್ಚಕ ದೇವಸ್ಥಾನದ ಬೀಗ ತೆಗೆಯಲು ಬಂದಾಗ ಬೀಗ ಮುರಿದಿರುವುದು ಬೆಳಕಿಗೆ ಬಂದಿದೆ. ಪಕ್ಕದಲ್ಲಿರುವ ಅವಿಮುಕ್ತೇಶ್ವರ ಸ್ವಾಮಿ ದೇವಸ್ಥಾನದ ಕಳ್ಳತನಕ್ಕೆ ಯತ್ನಿಸಿ ಕಿಟಕಿಯನ್ನು ಕಲ್ಲಿನಿಂದ ಜಜ್ಜಿ ವಿಫಲರಾಗಿ ನಂತರ ಆಂಜನೇಯಸ್ವಾಮಿ ದೇವಾಲಯ ಕಳ್ಳತನಕ್ಕೆ ಯತ್ನಿಸಿದ್ದಾರೆ.

1 ಲಕ್ಷಕ್ಕೆ ಹೆಚ್ಚಳಕ್ಕೆ ಮನವಿ
ರಾಮನಗರ:
ಈ ಬಾರಿ ಬಜೆಟ್‌ನಲ್ಲಿ ಆಶ್ರಯ ಯೋಜನೆ ಫಲಾನುಭವಿಗಳಿಗೆ ನೀಡುತ್ತಿರುವ ಮೊತ್ತವನ್ನು ರು.1 ಲಕ್ಷಕ್ಕೆ ಹೆಚ್ಚಳ ಮಾಡುವಂತೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಕೋರಿಕೆ ಸಲ್ಲಿಸಲಾಗಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದರು.  ಬಿಡದಿ ಹೋಬಳಿಯ ಕಾಕರಾಮನಹಳ್ಳಿಯಲ್ಲಿ ಕರ್ನಾಟಕ ಗೃಹ ಮಂಡಳಿಯ ನೂತನ ಬಡಾವಣೆಗೆ ಮಂಗಳವಾರ ಗುದ್ದಲಿಪೂಜೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಫಲಾನುಭವಿಗಳಿಗೆ ರು.75 ಸಾವಿರ ನೀಡಲಾಗುತ್ತಿದೆ ಎಂದರು. ಆಶ್ರಯ ಯೋಜನೆಯಡಿ 12 ಲಕ್ಷ ಮಂದಿ ಫಲಾನುಭವಿಗಳನ್ನು ಗುರುತಿಸಿದ್ದು, ಈವರೆಗೆ 6 ಲಕ್ಷ ಮಂದಿಗೆ ಸವಲತ್ತು ಕಲ್ಪಿಸಲಾಗಿದೆ. ಫಲಾನುಭವಿಗಳ ಆಯ್ಕೆಯಲ್ಲಿ ಪಕ್ಷಪಾತಕ್ಕೆ ಅವಕಾಶ ನೀಡಿಲ್ಲ. ಅರ್ಹರನ್ನೇ ಆಯ್ಕೆ ಮಾಡಿದ್ದು, ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲಾಗಿದೆ ಎಂದು ತಿಳಿಸಿದರು.  ಕೊಳಚೆ ನಿರ್ಮೂಲನಾ ಮಂಡಳಿ, ಕರ್ನಾಟಕ ಗೃಹ ಮಂಡಳಿಯ ವಿವಿಧ ಯೋಜನೆಗಳು, ರಾಜೀವ್‌ಗಾಂಧಿ ವಸತಿ ಯೋಜನೆ, ಇಂದಿರಾ ಆವಾಜ್ ಯೋಜನೆಯಡಿ ರಾಜ್ಯದಲ್ಲಿ ಕಳೆದೊಂದು ವರ್ಷದಿಂದ 50 ಸಾವಿರ ಮನೆಗಳನ್ನು ನಿರ್ಮಿಸಲಾಗಿದೆ ಎಂದು ಅವರು ಹೇಳಿದರು.

26ರಂದು  ನಾಟಕ ಬಿಡುಗಡೆ  
ಚನ್ನಪಟ್ಟಣ:
ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಘಟಕದ ಉದ್ಘಾಟನಾ ಸಮಾರಂಭ ಮತ್ತು ಅಪ್ಪಗೆರೆ ವೆಂಕಟಯ್ಯರ ವೈಚಾರಿಕ ನಾಟಕಗಳ ಬಿಡುಗಡೆ ಮತ್ತು ಅಭಿನಂದನಾ ಸಮಾರಂಭ ಪಟ್ಟಣದ ಗಾಂಧಿಭವನದಲ್ಲಿ ಶನಿವಾರ (ಜ.26) ನಡೆಯಲಿದೆ. ಕಾರ್ಯಕ್ರಮವನ್ನು ಕರ್ನಾಟಕ ಜಾನಪದ ಪರಿಷತ್  ಅಧ್ಯಕ್ಷ ಟಿ.ತಿಮ್ಮೇಗೌಡ ಉದ್ಘಾಟಿಸಲಿದ್ದು ನಾಟಕ ಕಣತಿಗಳನ್ನು ಜಾನಪದ ಪರಿಷತ್ತಿನ ಮ್ಯಾನೇಜಿಂಗ್ ಟ್ರಸ್ಟಿ ಇಂದಿರಾ ಬಾಲಕೃಷ್ಣ ಬಿಡುಗಡೆ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪರಿಷತ್ತಿನ ಜಿಲ್ಲಾಧ್ಯಕ್ಷ ಸು.ತ.ರಾಮೇಗೌಡ ನೆರವೇರಿಸಲಿದ್ದು, ಪುಸ್ತಕ ಕುರಿತು ಉಪನ್ಯಾಸಕಿ ಡಾ.ಬಿ.ಟಿ. ನೇತ್ರಾವತಿಗೌಡ ಮತ್ತು ಎಸ್.ಬಾಲಾಜಿ ಮಾತನಾಡಲಿದ್ದಾರೆ.

ನಾಳೆ ವಾರ್ಷಿಕೋತ್ಸವ
ಚನ್ನಪಟ್ಟಣ:
ಪಟ್ಟಣದ ಕೆಂಬ್ರಿಡ್ಜ್ ವಿದ್ಯಾಸಂಸ್ಥೆಯ 11 ನೇ ವಾರ್ಷಿಕೋತ್ಸವ  ಜ.24ರಂದು ಸಂಸ್ಥೆಯ ಆವರಣದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಎಸ್.ಲಿಂಗೇಶ್ ಕುಮಾರ್ ತಿಳಿಸಿದ್ದಾರೆ.  ಸಾನಿಧ್ಯವನ್ನು ನಂಜಾವಧೂತ ಶ್ರೀಗಳು ವಹಿಸಲಿದ್ದು, ಮಧುಗಿರಿ ಶಾಸಕಿ ಅನಿತಾ ಕುಮಾರಸ್ವಾಮಿ ಉದ್ಘಾಟನೆ ನೆರವೇರಿಸಲಿದ್ದಾರೆ.

ತರಬೇತಿ ಕಾರ್ಯಾಗಾರ
ಕನಕಪುರ:
ಭಾರತ ಸರ್ಕಾರದ ಎಂಎಸ್‌ಎಂಐ ಸಂಸ್ಥೆ ಹಾಗೂ ಕನಕಪುರದ ಕನಕಾಂಬರಿ ಮಹಿಳಾ ಒಕ್ಕೂಟ ಸಂಯುಕ್ತ ಆಶ್ರಯದಲ್ಲಿ  ಸಾತನೂರಿನ ಅಂಬೇಡ್ಕರ್ ಸಮುದಾಯ ಭವನದಲ್ಲಿ ಉದ್ಯಮಶೀಲತಾ  ತರಬೇತಿ ಕಾರ್ಯಾಗಾರ ನಡೆಯಿತು. ಸುಮಾರು 100 ಮಂದಿ ಮಹಿಳೆಯರು ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.