ಅಪರಾಧ ಪ್ರಕರಣ ಹೆಚ್ಚಳ: ಪೊಲೀಸರು ಮೌನ
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಇತ್ತೀಚೆಗೆ ಅಪರಾಧ ಕೃತ್ಯಗಳು ಗಣನೀಯವಾಗಿ ಹೆಚ್ಚಾಗುತ್ತಿದ್ದು, ಅಪರಾಧ ಕೃತ್ಯಗಳ ನಿಯಂತ್ರಣಕ್ಕೆ ಪೊಲೀಸರು ತೀವ್ರ ಗಮನ ಹರಿಸಬೇಕು ಎಂದು ತಾಲೂಕು ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘ ಒತ್ತಾಯಿಸಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಸಂಘದ ಅಧ್ಯಕ್ಷ ಹ.ರಾಮಕೃಷ್ಣ, ಪ್ರ.ಕಾರ್ಯದರ್ಶಿ ಸು.ನರಸಿಂಹಮೂರ್ತಿ, ನಗರ ಉಪಾಧ್ಯಕ್ಷ ಕೇಬಲ್ ರಾಜು ಮತ್ತಿತರರು ಕಳ್ಳತನ, ದರೋಡೆ, ಕಿಸೆಗಳ್ಳತನದಂತಹ ಪ್ರಕರಣಗಳು ನಿರಂತರ ನಡೆಯುತ್ತಿವೆ. ನಗರದ ಪ್ರತಿಷ್ಠಿತ ಕಾಲೇಜುಗಳ ಬಳಿ ಹೆಣ್ಣುಮಕ್ಕಳನ್ನು ಚುಡಾಯಿಸುವ ಬೀದಿ ಕಾಮಣ್ಣರ ಕಾಟ ಹೆಚ್ಚಾಗಿದೆ. ಅನಧಿಕೃತ ಜೂಜು ಅಡ್ಡೆಗಳು, ಮಟ್ಕಾ ಅಡ್ಡೆಗಳು ಅವ್ಯಾಹತವಾಗಿ ನಡೆಯುತ್ತಿದ್ದರೂ ಪೊಲೀಸರು ಗಾಢ ಮೌನವಹಿಸಿದ್ದಾರೆ. ಸರಗಳ್ಳತನ, ವಾಹನ ಕಳ್ಳತನ ಪ್ರಕರಣಗಳು ಪದೇ ಪದೇ ವರದಿಯಾಗುತ್ತಿವೆ. ಕಳೆದ ಭಾನುವಾರವಷ್ಟೇ ಇಲ್ಲಿನ ಕುಂಬಾರಪೇಟೆಯ ಮನೆಯೊಂದರಲ್ಲಿ ಕಳ್ಳತನ, ಅದೇ ರಾತ್ರಿ ಸೋಮೇಶ್ವರ ಬಡಾವಣೆಯಲ್ಲಿ ಕಳವು ನಡೆದಿದೆ.
ಪೊಲೀಸರು ಈ ಕೂಡಲೇ ಈ ಬಗ್ಗೆ ಗಂಭೀರ ಕ್ರಮ ಜರುಗಿಸಬೇಕು. ರಾತ್ರಿ ಪೊಲೀಸ್ ಪಹರೆ ಚುರುಕುಗೊಳಿಸಬೇಕು. ಹಿಂದೆ ನಡೆದಿದ್ದ ಕಳ್ಳತನ-ಕೊಲೆ ಪ್ರಕರಣಗಳ ತನಿಖೆಯ ವಸ್ತುಸ್ಥಿತಿಯನ್ನು ನಾಗರೀಕರ ಮುಂದಿಡಬೇಕು. ಅಪರಾಧಿಗಳನ್ನು ಬಂಧಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರು ಮತ್ತು ಗೃಹ ಸಚಿವರನ್ನು ಒತ್ತಾಯಿಸಲಾಗಿದೆ ಎಂದು ಹೇಳಿದ್ದಾರೆ.
ಇಂದು ರಾಷ್ಟ್ರೀಯ ಮತದಾರರ ದಿನಾಚರಣೆ
ರಾಮನಗರ: ಜ.25ರಂದು ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಮತಗಟ್ಟೆವಾರು, ತಾಲೂಕುವಾರು ಹಾಗೂ ಜಿಲ್ಲಾಮಟ್ಟದಲ್ಲಿ ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ಸಂದರ್ಭ ಮತಗಟ್ಟೆವಾರು ಪರಿಷ್ಕರಣೆ ಮೇಲೆ 18 ರಿಂದ 21 ವರ್ಷದೊಳಗಿನ ಹೊಸದಾಗಿ ನೋಂದಾಯಿತರಾಗಿರುವ ಯುವ ಮತದಾರರಿಗೆ ಚುನಾವಣಾ ಗುರ್ತಿನ ಚೀಟಿ ವಿತರಣೆ ಮಾಡಲಾಗುವುದು. ಯುವ ಮತದಾರರಿಗೆ ಬ್ಯಾಡ್ಜ್ಗಳನ್ನು ನೀಡುವುದಲ್ಲದೆ ಮತದಾರನಾಗಿರುವುದಕ್ಕೆ ಹೆಮ್ಮೆಪಡುತ್ತೇನೆ. ಮತ ಹಾಕಲು ಸಿದ್ಧನಿದ್ದೇನೆ ಎಂಬ ಪ್ರತಿಜ್ಞಾವಿಧಿ ಬೋಧಿಸಲಾಗುವುದು. ಜಿಲ್ಲಾ ವ್ಯಾಪ್ತಿಯ ಸಮಾರಂಭವು ನಗರದ ಗುರುಭವನದಲ್ಲಿ ಬೆಳಗ್ಗೆ 10ಕ್ಕೆ ನಡೆಯುವುದು. ಜಿಲ್ಲಾ ವ್ಯಾಪ್ತಿಯ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ ನಡೆಸಿ, ವಿಜೇತರಿಗೆ ಬಹುಮಾನ, ಭಾಗವಹಿಸುವ ಎಲ್ಲಾ ಅಭ್ಯರ್ಥಿಗಳಿಗೂ ಪ್ರಶಂಸನಾ ಪತ್ರ ವಿತರಿಸಲಾಗುವುದು. ಎನ್ಸಿಸಿ ತಂಡವನ್ನು ಗುರ್ತಿಸಿಕೊಂಡು, ಮತದಾರರ ದಿನದ ಶೀರ್ಷಿಕೆಯನ್ನು ಒಳಗೊಂಡ ಬ್ಯಾನರ್ಗಳನ್ನು ದಿನಾಚರಣೆಯ ದಿನ ಮತ್ತು ಜ.26ರ ಜಿಲ್ಲಾಮಟ್ಟದ ಮತ್ತು ತಾಲೂಕು ಮಟ್ಟದ ಗಣರಾಜ್ಯೋತ್ಸವದ ಸಮಾರಂಭದಲ್ಲಿ ಪೆರೇಡ್ ನಡೆಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ತಿಳಿಸಿದ್ದಾರೆ.
ಕಿಡ್ನಿ ಅಕ್ರಮ ಜಾಲ: ಮತ್ತೆ ಮೂವರ ಬಂಧನ
ರಾಮನಗರ: ಕಿಡ್ನಿ ಅಕ್ರಮ ಜಾಲದ ಬೆನ್ನುಹತ್ತಿರುವ ಕುಂಬಳಗೋಡು ಪೊಲೀಸರು ಗುರವಾರ ಮತ್ತೆ ಮೂರು ಮಂದಿಯನ್ನು ಬಂಧಿಸಿದ್ದಾರೆ.
ಹೊಸಕೋಟೆಯ ಕೃಷ್ಣ ಅಲಿಯಾಸ್ ಬಾಲಕೃಷ್ಣ, ಬಸವೇಶ್ವರ ನಗರದ ಛಾಯಾಗ್ರಾಹಕ ಶ್ರೀಧರ್, ಶ್ರೀರಾಂಪುರ ನಿವಾಸಿ ಬೆಂಗಳೂರು ಉತ್ತರ ತಾಲೂಕಿನ ಕಂದಾಯ ನಿರೀಕ್ಷಕ ಪುಟ್ಟಬೈರಯ್ಯ ಬಂಧಿತ ಆರೋಪಿಗಳು. ಹೊಸಕೋಟೆಯ ಕೃಷ್ಣ ಎಂಬಾತನನ್ನು ನೆಲಮಂಗಲದ 8ನೇ ಮೈಲಿ ಬಳಿ ಬುಧವಾರ ಬಂಧಿಸಲಾಗಿತ್ತು. ಈತ ತನ್ನ ಹಾಗೂ ತನ್ನ ಹೆಂಡತಿಯ ಕಿಡ್ನಿಯನ್ನು ಮಾರಾಟ ಮಾಡಿದ್ದಲ್ಲದೆ ಇತರ ನಾಲ್ವರ ಕಿಡ್ನಿಯನ್ನು ಮಾರಾಟ ಮಾಡಿಸಿದ್ದ. ಕೃಷ್ಣ ನೀಡಿದ ಮಾಹಿತಿಯನ್ನಾಧರಿಸಿ ನೆಲಮಂಗಲದ ಬಳಿ ಪುಟ್ಟಬೈರಯ್ಯನನ್ನು ಬಂಧಿಸಲಾಗಿದ್ದು, ಈತ ಕಿಡ್ನಿ ಮಾರಾಟಕ್ಕೆ ಬೇಕಾದ ಅಗತ್ಯ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದ. ವೃತ್ತಿಯಲ್ಲಿ ಛಾಯಾಗ್ರಾಹಕನಾಗಿರುವ ಶ್ರೀಧರ್ ಫೋಟೋಗಳನ್ನು ತೆಗೆದು ನಕಲಿ ಗುರುತಿನ ಚೀಟಿಯನ್ನು ತಯಾರಿಸುತ್ತಿದ್ದ ಎನ್ನಲಾಗಿದೆ.
ಇಂದು ಸಿಎಂ ರಿಂದವಿವಿಧ ಕಾಮಗಾರಿ ಉದ್ಘಾಟನೆ
ರಾಮನಗರ: ಕನಕಪುರ ಪಟ್ಟಣದ ಪುರಸಭಾ ಕ್ರೀಡಾಂಗಣದಲ್ಲಿ ನಾಳೆ (ಜ.25) ಬೆಳಿಗ್ಗೆ 11ಕ್ಕೆ ವಸತಿ ಇಲಾಖೆಗೆ ಸಂಬಂಧಿಸಿದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸವನ್ನು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನೆರವೇರಿಸುವರು. ಶಾಸಕ ಡಿ.ಕೆ.ಶಿವಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ವಸತಿ ಸಚಿವ ವಿ.ಸೋಮಣ್ಣ, ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರೇಣುಕಾಚಾರ್ಯ, ಸಂಸದ ಎಚ್.ಡಿ.ಕುಮಾರಸ್ವಾಮಿ, ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಜಿ.ಟಿ.ದೇವೇಗೌಡ, ಕೊಳಚೆ ನಿರ್ಮೂಲನೆ ಮತ್ತು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಜೆ.ನರಸಿಂಹಸ್ವಾಮಿ ಭಾಗವಹಿಸುವರು.
ಕನಕಪುರ ಪುರಸಭಾ ವ್ಯಾಪ್ತಿಯ ಕುರುಪೇಟೆ, ಮೆಳೆಕೋಟೆ, ಮಾಳಗಾಳು, ಮಹಾರಾಜಕಟ್ಟೆ ಪ್ರದೇಶಗಳಲ್ಲಿ ಜೆ.ಎನ್.ಎನ್.ಯು.ಆರ್.ಎಂ., ಐ.ಹೆಚ್.ಎಸ್.ಡಿ.ಪಿ. ಯೋಜನೆಯಡಿಯಲ್ಲಿ ನಿರ್ಮಿಸಿರುವ ಮನೆಗಳ ಉದ್ಘಾಟನೆ, ಫಲಾನುಭವಿಗಳಿಗೆ ಮನೆಗಳ ಹಸ್ತಾಂತರ ಹಾಗೂ ಸಮುದಾಯ ಭವನಗಳಿಗೆ ಶಂಕುಸ್ಥಾಪನೆ, ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದಿಂದ ಪುರಸಭಾ ವ್ಯಾಪ್ತಿಯಲ್ಲಿ ವಾಜಪೇಯಿ ನಗರ ನಿವೇಶನ ಯೋಜನೆಯಡಿ ಉಚಿತ ನಿವೇಶನ ಹಕ್ಕುಪತ್ರ ವಿತರಣೆ ಮಾಡಲಿದ್ದಾರೆ.
ಮಹಿಳೆ ಕೊರಳಲಿದ್ದ ಬಂಗಾರದ ಒಡವೆ ಕಿತ್ತು ಪರಾರಿ
ಮಾಗಡಿ: ಅಪರಿಚಿತನೊಬ್ಬ ಮಹಿಳೆಯ ಕೊರಳಲಿದ್ದ ಬಂಗಾರದ ಒಡವೆಗಳನ್ನು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ತಾಲೂಕಿನ ಶಾನಭೋಗನಹಳ್ಳಿಯಲ್ಲಿ ನಡೆದಿದೆ. ಹನುಮಕ್ಕ ಎಂಬ ಮಹಿಳೆ ಹೊಲಕ್ಕೆ ಹಸುಗಳನ್ನು ಹೊಡೆದುಕೊಂಡು ಹೋಗುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ಕಲ್ಲಿನಿಂದ ಹನುಮಕ್ಕ ಅವರ ತಲೆಗೆ ಹೊಡೆದಿದ್ದಾನೆ. ರಕ್ತಸ್ರಾವದಿಂದ ಆಕೆ ಕೆಳಗೆ ಬಿದ್ದಾಗ ಕೊರಳಲಿದ್ದ ಸುಮಾರು 50 ಗ್ರಾಂ ಬಂಗಾರದ ಸರ ಕಿತ್ತುಕೊಂಡು ಓಡಿದ್ದಾನೆ. ಗಾಯಳು ಹನುಮಕ್ಕ ಮಾಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಜಿ.ಪಂ. ಅಧ್ಯಕ್ಷ ಕೆ.ಮುದ್ದುರಾಜ ಯಾದವ್ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಹನುಮಕ್ಕನ ಆರೋಗ್ಯ ವಿಚಾರಿಸಿದರು.
ಚಿರತೆ ದಾಳಿ: ವ್ಯಕ್ತಿಗೆ ತೀವ್ರ ಗಾಯ
ಮಾಗಡಿ: ಸುಗ್ಗನಹಳ್ಳಿ ಸಂತೆಗೆ ಹಸುವನ್ನು ಹೊಡೆದುಕೊಂಡು ಹೋಗು ತ್ತಿದ್ದಾಗ ಹಠಾತ್ ಚಿರತೆ ದಾಳಿ ಮಾಡಿದ ಪರಿಣಾಮ ಕುದೂರಿನ ಹೊಸಹಳ್ಳಿ ಪಾಳ್ಯದ ಚಿಕ್ಕವೀರಯ್ಯ ತೀವ್ರವಾಗಿ ಗಾಯಗೊಂಡಿದ್ದಾರೆ. ಮುಖ ಮತ್ತು ಕಾಲು ಭಾಗವನ್ನು ಗಾಯಗೊಳಿಸಿದೆ. ಕಾಡಾನೆ ಮತ್ತು ಚಿರತೆಗಳ ದಾಳಿಯಿಂದ ಕುದೂರು ಸುತ್ತಮುತ್ತಲ ನಾಗರಿಕರು ಭಯಭೀತರಾಗಿದ್ದಾರೆ. ಹಗಲು, ರಾತ್ರಿ ವೇಳೆಯೂ ಹೆಂಗಸರು ಮಕ್ಕಳು ಹೊರ ಬರಲಾಗದಂತಹ ಸ್ಥಿತಿಯಲ್ಲಿ ಬದುಕುವಂತಾಗಿದೆ. ಕೂಡಲೆ ಚಿರತೆ ಮತ್ತು ಆನೆಗಳನ್ನು ಓಡಿಸಲು ಅರಣ್ಯ ಇಲಾಖೆ ಮುಂದಾಗಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.
ಮಾಗಡಿಯಲ್ಲಿ ಇಂದುಮತದಾರರ ದಿನಾಚರಣೆ
ಮಾಗಡಿ: ಪಟ್ಟಣದ ಪುರಸಭೆ ಆವರಣದಲ್ಲಿ ಜ.25 ರಂದು ಬೆಳಿಗ್ಗೆ 11 ಗಂಟೆಗೆ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಆಚರಿಸಲಾಗುವುದು ಎಂದು ಪ್ರಭಾರಿ ತಹಸೀಲ್ದಾರ್ ಡಿ.ಟಿ. ಶಿವಕುಮಾರ್ ತಿಳಿಸಿದ್ದಾರೆ. ಸಕಾಲಕ್ಕೆ ತಾಲೂಕಿನ ನಾಗರಿಕರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿ ಕೋರಿದ್ದಾರೆ.
ಹಣ ದುರುಪಯೋಗ: ಪೊಲೀಸರಿಗೆ ದೂರು
ದೇವನಹಳ್ಳಿ: ದೇವನಹಳ್ಳಿ ತಾಲೂಕು ವೆಂಕಟಗಿರಿಕೋಟೆ ಗ್ರಾಮ ಪಂಚಾಯಿತಯ ಪಿಡಿಒ ಹಾಗೂ ಮಾಜಿ ಅಧ್ಯಕ್ಷರು ಸೇರಿ 5,18,500 ರು.ಗಳನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಹಾಲಿ ಪಂಚಾಯಿತಿ ಅಧ್ಯಕ್ಷ ಚಂದ್ರಶೇಖರ್ ವಿಜಯಪುರ ಪೊಲೀಸರಿಗೆ ದೂರು ನೀಡಿದ್ದಾರೆ.
ಫೆ. 3ನೇ ವಾರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
ರಾಮನಗರ: 3ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜಿಲ್ಲಾ ಕಾರ್ಯಕಾರಿ ಸಮಿತಿ ನಿರ್ಣಯದಂತೆ ಫೆಬ್ರವರಿ ಮೂರನೇ ವಾರದಲ್ಲಿ ಆಯೋಜಿಸಬೇಕಾಗಿದ್ದು, ಈ ಹಿನ್ನೆಲೆಯಲ್ಲಿ ಜ.26ರಂದು ಬೆಳಗ್ಗೆ 11ಕ್ಕೆ ಚನ್ನಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಕಾರ್ಯಕಾರಿ ಸಮಿತಿ ಹಾಗೂ ಚನ್ನಪಟ್ಟಣ ತಾಲೂಕು ಕಸಾಪ ಕಾರ್ಯಕಾರಿ ಸಮಿತಿಯನ್ನೊಳಗೊಂಡ ಪೂರ್ವಭಾವಿ ಸಭೆ ನಡೆಯಲಿದೆ. ಕಾರ್ಯಕಾರಿ ಸಮಿತಿಯ ಎಲ್ಲ ಪದಾಧಿಕಾರಿಗಳು ತಪ್ಪದೆ ಆಗಮಿಸಿ ತಮ್ಮ ಸಲಹೆ ನೀಡುವಂತೆ ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಬಿ.ಟಿ.ನಾಗೇಶ್ ಕೋರಿದ್ದಾರೆ.
ಪುಸ್ತಕ ಮಳಿಗೆ ತೆರೆಯಲು ಅರ್ಜಿ
ರಾಮನಗರ: ಫೆಬ್ರವರಿ 9ರಿಂದ 11 ರವರೆಗೆ ವಿಜಾಪುರದಲ್ಲಿ ನಡೆಯುವ 79ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರತಿನಿಧಿಯಾಗಿ ಪಾಲ್ಗೊಳ್ಳಲು ಹಾಗೂ ಪುಸ್ತಕ ಮತ್ತು ವಾಣಿಜ್ಯ ಮಳಿಗೆ ತೆರೆಯಲು ಆಸಕ್ತರಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅರ್ಜಿ ಆಹ್ವಾನಿಸಿದೆ.ಪ್ರತಿನಿಧಿಗಳಿಗೆ ತಲಾ 250 ಶುಲ್ಕ ನಿಗದಿ ಮಾಡಲಾಗಿದೆ.ಪುಸ್ತಕ ಮತ್ತು ವಾಣಿಜ್ಯ ಮಳಿಗೆ ತೆರೆಯಲು ಪರಿಷತ್ತಿನ ಕೇಂದ್ರ ಕಚೇರಿ ಅಥವಾ ಸಮ್ಮೇಳನದ ಸ್ವಾಗತ ಸಮಿತಿಯಲ್ಲಿ ಜ.30 ರೊಳಗೆ ಹೆಸರು ನೋಂದಾಯಿಸಬಹುದು. ವಿವರಕ್ಕೆ ದೂ. 08352-265950 ಅಥವಾ ಬಿ.ಟಿ. ನಾಗೇಶ್, ಅಧ್ಯಕ್ಷರು, ರಾಮನಗರ ಜಿಲ್ಲಾ ಕಸಾಪ, ಮೊ.9448682917 ಸಂಪರ್ಕಿಸಬಹುದು.
ಶಿಶಿಕ್ಷು ತರಬೇತಿ: ಅರ್ಜಿ ಆಹ್ವಾನ
ರಾಮನಗರ: ಹುಬ್ಬಳ್ಳಿಯ ನೈಋತ್ಯ ವಲಯ ರೇಲ್ವೆಯ ರಿಪೇರ್ ವರ್ಕ್ ಶಾಪ್ ಘಟಕದಿಂದ ಐಟಿಐ ತೇರ್ಗಡೆಯಾದ ಅಭ್ಯರ್ಥಿಗಳಿಗೆ 1 ವರ್ಷ ಅವಧಿಯ ಶಿಶಿಕ್ಷು ತರಬೇತಿಗೆ ಅರ್ಜಿ ಆಹ್ವಾನಿಸಿದೆ.
ಐಟಿಐನಲ್ಲಿ ಫಿಟ್ಟರ್, ಟರ್ನರ್, ಮೆಷಿನಿಷ್ಟ್, ಎಲೆಕ್ಟ್ರಿಷಿಯನ್, ವೆಲ್ಡರ್ ಮತ್ತು ಎಂಆರ್ಎಸಿ ಕೋರ್ಸ್ಗಳಲ್ಲಿ ತೇರ್ಗಡೆಯಾಗಿರಬೇಕು. 15 ರಿಂದ 25 ವರ್ಷ ವಯೋವುತಿಯೊಳಗಿರಬೇಕು. ಪರಿಶಿಷ್ಟ ಜಾತಿಗೆ 5 ವರ್ಷ ಮತ್ತು ಹಿಂದುಳಿದ ವರ್ಗಕ್ಕೆ 3 ವರ್ಷ ವಯೋವಾನ ವಿನಾಯಿತಿ ಇದೆ. ತರಬೇತಿ ಅವಧಿಯಲ್ಲಿ ಮಾಸಿಕ 1970 (ಎಲ್ಲಾ ವೃತ್ತಿಗಳು) ಮತ್ತು 1700 (ವೆಲ್ಡರ್) ನೀಡಲಾಗುವುದು. ಜಿಲ್ಲಾ ಉದ್ಯೋಗ ವಿನಿಯಮ ಕಚೇರಿಯಲ್ಲಿ ಅರ್ಜಿಗಳನ್ನು ಪಡೆದು, ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಫೆ.8 ರೊಳಗೆ ವರ್ಕ್ಶಾಪ್ ಪರ್ಸನಲ್ ಆಫೀಸರ್, ಕ್ಯಾರಿಯೇಜ್ ರಿಪೇರ್ ವರ್ಕ್ಶಾಪ್, ನೈಋತ್ಯ ರೇಲ್ವೆ, ಗದಗ್ ರಸ್ತೆ, ಹುಬ್ಬಳ್ಳಿ. ಇಲ್ಲಿಗೆ ಸಲ್ಲಿಸಬೇಕು.
28 ರಂದು ಪ್ರಗತಿ ಪರಿಶೀಲನಾ ಸಭೆ
ರಾಮನಗರ: ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕೆ. ಮುದ್ದುರಾಜ್ ಯಾದವ್ ಅವರ ಅಧ್ಯಕ್ಷತೆಯಲ್ಲಿ ಜ.28ರಂದು ಬೆಳಗ್ಗೆ 11ಕ್ಕೆ ಜಿಲ್ಲಾ ಪಂಚಾಯಿತಿ ಕಾರ್ಯಾಲಯದ ಸಭಾಂಗಣದಲ್ಲಿ ನಡೆಯಬೇಕಿದ್ದ ಪ್ರಗತಿ ಪರಿಶೀಲನಾ ಸಭೆಯನ್ನು ಮಧ್ಯಾಹ್ನ 3ಕ್ಕೆ ಮುಂದೂಡಲಾಗಿದೆ.
28 ರಂದು ಲೋಕಾಯುಕ್ತ ಭೇಟಿ
ಕೊರಟಗೆರೆ: 28 ರಂದು ಪಟ್ಟಣದ ತಾ.ಪಂ. ಸಮುದಾಯ ಭವನದಲ್ಲಿ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷರು ಭೇಟಿ ನೀಡಲಿದ್ದಾರೆ. ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಕುಂದು ಕೊರತೆಗಳ ಅರ್ಜಿ ಸ್ವೀಕರಿಸುವರು.
ಜನಪರ ಸರ್ಕಾರಕ್ಕೆ ತೊಂದರೆ ಕೊಟ್ಟರೆ ಜನತೆಯಿಂದ ತಕ್ಕಪಾಠ: ಸಚಿವರ ಎಚ್ಚರಿಕೆ
ಕುಣಿಗಲ್: ಶಾಸಕರ ರಾಜಿನಾಮೆ ಪ್ರಹಸನ ಹುಡುಗಾಟಿಕೆ ವಿಷಯವಲ್ಲ. ರಾಜ್ಯದ ಮತದಾರರು ಎಲ್ಲವನ್ನು ಗಂಭೀರವಾಗಿ ನೋಡುತ್ತಿದ್ದು, ಉತ್ತಮ ಕೆಲಸ ಮಾಡುವವರಿಗೆ ತೊಂದರೆ ಮಾಡಿದರೆ ತಕ್ಕ ಪಾಠ ಕಲಿಸಲಿದ್ದಾರೆಂದು ಯಡಿಯೂರಪ್ಪನವರ ಹೆಸರನ್ನು ಪ್ರಸ್ತಾಪಿಸದೆ, ಸಚಿವ ಸುರೇಶ್ ಕುಮಾರ್ ಮಾಜಿ ಸಿಎಂಗೆ ಪರೋಕ್ಷ ಎಚ್ಚರಿಕೆ ನೀಡಿದರು.ತಾಲೂಕಿನ ಅಮೃತೂರಿನಲ್ಲಿ ಏರ್ಪಡಿಸಲಾಗಿದ್ದ ಹೋಬಳಿ ಮಟ್ಟದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಉತ್ತಮವಾಗಿ ಕೆಲಸ ಮಾಡುತ್ತಿರುವ ಬಿಜೆಪಿ ಸರ್ಕಾರದ ಏಳಿಗೆ ಸಹಿಸದೆ ಕೆಲವರು ಮೊಸರನ್ನದಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತ, ದಿನಬೆಳಗಾದರೆ ಪತ್ರಿಕೆಗಳಲ್ಲಿ ಸುದ್ದಿ ಮಾಡಿ ಜನತೆಯನ್ನು ಗೊಂದಲದಲ್ಲಿ ಮುಳುಗಿಸುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ರಾಜ್ಯದ ನೆಮ್ಮದಿ ಹಾಳಾಗುತ್ತದೆ ಹೊರತು ಇನ್ನೇನು ಆಗುವುದಿಲ್ಲ, ರಾಜಿನಾಮೆ ಪ್ರಹಸನವೂ ಅಷ್ಟೇ. ಇದರಿಂದ ಯಾವುದೇ ತೊಂದರೆ ಇಲ್ಲ ಶೆಟ್ಟರ್ ನೇತೃತ್ವದ ಬಿಜೆಪಿ ಸರ್ಕಾರ ತನ್ನ ಪಾಲಿನ ಅವಧಿಯನ್ನು ಪೂರ್ಣವಾಗಿ ಮುಗಿಸುತ್ತದೆ ಎಂದು ತಿಳಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವಪ್ರಸಾದ್, ಡಿ.ಕೃಷ್ಣಕುಮಾರ್, ತಾಲೂಕು ಅಧ್ಯಕ್ಷ ಚಿಕ್ಕರಾಮಯ್ಯ, ಪ್ರಮುಖರಾದ ಸೋಮಶೇಖರ್, ರಂಗಸ್ವಾಮಿ, ನಾರಾಯಣಗೌಡ, ತಿಮ್ಮಪ್ಪ,ವರಲಕ್ಷ್ಮೀ, ಗೌರಮ್ಮ, ಅಮೃತೂರು ಹೋಬಳಿ ಬಿಜೆಪಿ ಅಧ್ಯಕ್ಷ ದಿನೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಜಿಲ್ಲೆಯ ಕಥೆಗಾರರಿಂದ ಕಥೆ ಆಹ್ವಾನ
ರಾಮನಗರ: ಫೆಬ್ರವರಿ 3ನೇ ವಾರದಲ್ಲಿ ಚನ್ನಪಟ್ಟಣದಲ್ಲಿ ನಡೆಯಲಿರುವ ತೃತೀಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಹೊರತರುತ್ತಿರುವ ಜಿಲ್ಲಾ ಪ್ರಾತಿನಿಧಿಕ ಕಥಾ ಸಂಕಲನಕ್ಕೆ ಜಿಲ್ಲೆಯ ಕಥೆಗಾರರಿಂದ ಒಂದೊಂದು ಉತ್ತಮ ಕಥೆ ಆಹ್ವಾನಿಸಲಾಗಿದೆ. ಕಥೆಗಾರರು ಕಥೆಗಳನ್ನು ಫೆ.6 ರೊಳಗೆ ಪುಸ್ತಕ ಕಥಾ ಸಂಕಲನ ಸಮಿತಿ ಸಂಚಾಲಕರಾದ ಡಾ.ಕೂಡ್ಲೂರು ವೆಂಕಟಪ್ಪ, ನಂ 634, 3ನೇ ಮುಖ್ಯರಸ್ತೆ, ಕೆಂಗೇರಿ ಉಪನಗರ ಬೆಂಗಳೂರು-60 ಅಥವಾ ಸಿ.ರಾಜಶೇಖರ್, ಜಿಲ್ಲಾ ಕಸಾಪ ಕಾರ್ಯದರ್ಶಿ ಜಿಲ್ಲಾ ಸಮ್ಮೇಳನ ಸಮಿತಿ ಕಾರ್ಯಾಲಯ, ನಂ.26, ಕಾಳಿದಾಸ ಪ್ರೌಢಶಾಲೆ ಕಟ್ಟಡ, ಬೆಂಗಳೂರು ಮೈಸೂರು ರಸ್ತೆ, ಚನ್ನಪಟ್ಟಣ ಇಲ್ಲಿಗೆ ತಲುಪಿಸಬೇಕು. ಮಾಹಿತಿಗೆ ಮೊ. 9448573062 ಸಂಪರ್ಕಿಸಲು ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಟಿ.ನಾಗೇಶ್ ಕೋರಿದ್ದಾರೆ.
ಪುಷ್ಪೋದ್ಯಮ ಉತ್ತೇಜಿಸಿ: ಶಿವರಾಮರೆಡ್ಡಿ ಆಗ್ರಹ
ಆನೇಕಲ್ಲು: ಪುಷ್ಪ ಬೆಳೆಗೆ ಉತ್ತಮ ಮಾರುಕಟ್ಟೆ ವ್ಯವಸ್ಥೆ ಒದಗಿಸುವಲ್ಲಿ ರಾಜ್ಯ ಸರ್ಕಾರ ಹಾಗೂ ತೋಟಗಾರಿಗೆ ಮಂಡಳಿ ಎಡವಿದೆ ಎಂದು ತಾಲೂಕು ಹಸಿರು ಮನೆ ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಿವರಾಮರೆಡ್ಡಿ ಆರೋಪಿಸಿದ್ದಾರೆ.
ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೋಟಗಾರಿಕೆ ಇಲಾಖೆ ಬೆಂಗಳೂರು ಕೃಷ್ಣ ರಾಜೇಂದ್ರ ಮಾರುಕಟ್ಟೆಯಲ್ಲಿ ಹೂ ಮಾರಾಟಗಾಗರರಿಗೆ ನಿಗದಿತ ಸ್ಥಳ ನೀಡಿಲ್ಲ. ಬೆಳಗಿನ ಜಾವ 2 ಗಂಟೆಯಿಂದ 5 ಗಂಟೆ ಒಳಗೆ ಹಾದಿ ಬದಿಯಲ್ಲಿ ವ್ಯಾಪಾರ ವಹಿವಾಟು ನಡೆಸಬೇಕು. ಪೊಲೀಸರು ಹಾಗೂ ದಳ್ಳಾಳಿಗಳಿಂದ ರೈತರಿಗೆ ತೊಂದರೆಯಾಗುತ್ತದೆ. ತೋಟಗಾರಿಕೆ ಇಲಾಖೆ ಹೆಬ್ಬಾಳ ಬಳಿ ಸ್ಥಳ ಗುರ್ತಿಸಿದ್ದು, ಆನೇಕಲ್ಲು ಭಾಗದ 150ಕ್ಕೂ ಹೆಚ್ಚು ರೈತರು 200 ಎಕರೆ ಪ್ರದೇಶದಲ್ಲಿ ಬೆಳೆಯುವ ಫಸಲಿನ ಸಾಗಾಣೆ ವೆಚ್ಚ ದುಬಾರಿಯಾಗುತ್ತದೆ. ನಗರದ ಲಾಲ್ಬಾಗ್ ಬಳಿ ಕನಿಷ್ಠ 1 ಎಕರೆ ಪ್ರದೇಶ ಹೂ ಮಾರುಕಟ್ಟೆಗೆ ಮೀಸಲಿಡಬೇಕು ಎಂದು ಆಗ್ರಹಿಸಿದರು. ಫಲಪುಷ್ಪ ಪ್ರದರ್ಶನ ಹಾಗೂ ಪ್ರಚಾರಕ್ಕಾಗಿ ಕೋಟ್ಯಂತರ ವೆಚ್ಚ ಮಾಡುವ ತೋಟಗಾರಿಕೆ ಇಲಾಖೆ ಈ ಬಗ್ಗೆ ಕೂಡಲೇ ಕ್ರಮ ವಹಿಸಬೇಕು ಎಂದು ಕೋರಿದ್ದಾರೆ. ಪದಾಧಿಕಾರಿಗಳಾದ ಸುಬ್ಬಣ್ಣ, ಉಪಾಧ್ಯ ಜಯಪ್ರಕಾಶ್, ಕಾರ್ಯದರ್ಶಿ ಮುನಿರಾಜು, ಖಜಾಂಚಿ ಪಾಪಣ್ಣ, ಸಮಿತಿಯ ವೈ. ಸೋಮಣ್ಣ, ಎಸ್. ನಾರಾಯಣಗೌಡ ಮತ್ತಿತರರು ಉಪಸ್ಥಿತರಿದ್ದರು.
'ವಿಕಲಚೇತನರೂ ಸಾಧಿಸಬಲ್ಲರು'
ಮಾಗಡಿ: ವಿಕಲಚೇತರು ಅಸಮರ್ಥರಲ್ಲ, ಅವರಿಗೆ ಅವಕಾಶ ನೀಡಿದರೆ ಎಲ್ಲಾ ಕ್ಷೇತ್ರದಲ್ಲೂ ಸಾಮಾನ್ಯರಂತೆ ಸಾಧಿಸಿ ತೋರಿಸಬಲ್ಲರು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ರಂಗಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ಪಟ್ಟಣದ ತಿರುಮಲೆ ಬ್ಲಾಕ್ ಸಂಪನ್ಮೂಲ ಕೇಂದ್ರದಲ್ಲಿ ನಡೆದ ಸಾರ್ವಜನಿಕ ಶಿಕ್ಷಣ ಇಲಾಖೆ ಕಾರ್ಯಕ್ರಮದಲ್ಲಿ ವಿಕಲಚೇತನರಿಗೆ ವಿವಿಧ ಸಾಧನ ಸಲಕರಣೆ ವಿತರಿಸಿ ಅವರು ಮಾತನಾಡಿದರು.
ವಿಕಲಚೇತನರು ಸ್ವಾವಲಂಬನೆ ಸಾಧಿಸುವಲ್ಲಿ ಪಾಲಕರು ಮತ್ತು ಶಿಕ್ಷಕರು ಮಹತ್ತರ ಪಾತ್ರ ವಹಿಸಬೇಕು. ಈ ನಿಟ್ಟಿನಲ್ಲಿ ಸಮಾಜದ ಮುಖ್ಯವಾಹಿನಿಗೆ ಬರಲು ಸಹಕಾರಿಯಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಸಲಕರಣೆ ಬಳಕೆ ಮಾಡುವ ಬಗ್ಗೆ ವಿಕಲಾಂಗ ಮಕ್ಕಳ ಪೋಷಕರಿಗೆ ತರಬೇತಿ ನೀಡಿ ಅರಿವು ಮೂಡಿಸಲಾಯಿತು. ಇದೆ ಸಂದರ್ಭದಲ್ಲಿ 19 ತೀವ್ರ ಅಂಗವಿಕಲರಿಗೆ ವ್ಹೀಲ್ ಛೇರ್, ಟ್ರೈಸಿಕಲ್ ವಿತರಿಸಲಾಯಿತು.
ವಿಕಲಚೇತನರಿಗೆ ವಿವಿಧ ಇಲಾಖೆಗಳಿಂದ ಸಿಗುವ ಸೌಲಭ್ಯಗಳು ಹಾಗು ಸಹಕಾರವನ್ನು ಸಂಪನ್ಮೂಲ ವ್ಯಕ್ತಿ ಲಕ್ಷ್ಮೀನರಸಿಂಹಯ್ಯ ತಿಳಿಸಿಕೊಟ್ಟು ಇದರ ಸದುಪಯೋಗಪಡೆದುಕೊಳ್ಳುವಂತೆ ವಿಕಲಚೇತನರಿಗೆ ಕಿವಿಮಾತು ಹೇಳಿದರು.
ಶಿಕ್ಷಣ ಇಲಾಖೆ ಸಂಪನ್ಮೂಲ ವ್ಯಕ್ತಿಗಳು, ಸಿಆರ್ ಪಿ, ಬಿಆರ್ಪಿ ಮತ್ತು ಶಿಕ್ಷಕರು, ಪೋಷಕರು, ಮಕ್ಕಳು ಭಾಗವಹಿಸಿದ್ದರು. ಶಿಕ್ಷಕ ಬಸವರಾಜು ಸ್ವಾಗತಿಸಿದರು. ನರಸಿಂಹಮೂರ್ತಿ ನಿರೂಪಿಸಿ, ವಂದಿಸಿದರು.
ಸಹಾಯಕಿಯರ ಹುದ್ದೆ ನೇಮಕಾತಿಗೆ ಅರ್ಜಿ
ಮಾಗಡಿ: ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಹುದ್ದೆಯ ನೇಮಕಾತಿಗಾಗಿ ಸಿಡಿಪಿಓ ಇಲಾಖೆ ಅರ್ಜಿಯನ್ನು ಆಹ್ವಾನಿಸಿದೆ ಎಂದು ಸಿಡಿಪಿಓ ಅಧಿಕಾರಿ ಆರ್. ಕೆಂಪಣ್ಣ ತಿಳಿಸಿದ್ದಾರೆ.
ಮಾಗಡಿ ತಾಲೂಕಿನಲ್ಲಿ ನೇತೇನಹಳ್ಳಿ, ಚನ್ನುವಳ್ಳಿ, ಚಿಕ್ಕಮಸ್ಕಲ್, ಸುಂಕುತಿಮ್ಮನಪಾಳ್ಯ, ಬೆಣ್ಣಪ್ಪನಪಾಳ್ಯ ಮತ್ತು ಕುರುಪಾಳ್ಯದಲ್ಲಿನ ಅಂಗನವಾಡಿ ಕೇಂದ್ರದಲ್ಲಿ ಹುದ್ದೆ ಖಾಲಿಯಿರುವ ಸ್ಥಳಕ್ಕೆ ಕಾರ್ಯಕರ್ತೆರನ್ನು ಭರ್ತಿ ಮಾಡಲು ಹಾಗೂ ತಗಚಕುಪ್ಪೆ,ಜೋತಿಪಾಳ್ಯ ಮತ್ತು ಕಾಗಿಮಡು ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿಯರ ಹುದ್ದೆ ಭರ್ತಿ ಮಾಡಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಗ್ರಾಮೀಣ ಸ್ಥಳೀಯ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹದಾಗಿದ್ದು, ಆಸಕ್ತ ಅಭ್ಯರ್ಥಿಗಳು ಮಾಗಡಿ ಸಿಡಿಪಿಓ ಇಲಾಖೆಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಫೆ.5 ರಂದು ಕೊನೆ ದಿನಾಂಕವಾಗಿದ್ದು, ಸಂಜೆ 5.30 ರೊಳಗೆ ಅಭ್ಯರ್ಥಿಗಳು ಖುದ್ದಾಗಿ ಪೂರ್ಣ ದಾಖಲಾತಿಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮಾಗಡಿ ಶಿಶು ಅಭಿವೃದ್ಧಿ ಯೋಜನಾ ಕಚೇರಿಯಲ್ಲಿ ಕೆಲಸದ ಸಮಯ ವೇಳೆ ಸಂಪರ್ಕಿಸಿ ಮಾಹಿತಿ ಪಡೆಯಬಹುದು. ದೂರವಾಣಿ ಸಂಖ್ಯೆ. 08027745431 ಸಂಪರ್ಕಿಸಬಹುದು.
ಇಂದು ಮತದಾರರ ದಿನಾಚರಣೆ
ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಮತ್ತು ದೊಡ್ಡಬಳ್ಳಾಪುರ ತಾಲೂಕು ಮಟ್ಟದ ರಾಷ್ಟ್ರೀಯ ಮತದಾರರ ದಿನಾಚರಣೆ-2013 ಕಾರ್ಯಕ್ರಮ ಜ.25ರಂದು ಬೆಳಗ್ಗೆ 11 ಗಂಟೆಗೆ ಇಲ್ಲಿನ ಪುರಭವನದಲ್ಲಿ ನಡೆಯಲಿದೆ. ಜಿಲ್ಲಾಧಿಕಾರಿ ಅಯ್ಯಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ದೊಡ್ಡಬಳ್ಳಾಪುರ ತಾಲೂಕು ಆಡಳಿತದ ಪ್ರಕಟಣೆ ತಿಳಿಸಿದೆ.
ಲೋಕಾಯುಕ್ತ ಜನಸಂಪರ್ಕ ಸಭೆ
ದೊಡ್ಡಬಳ್ಳಾಪುರ: ಕರ್ನಾಟಕ ಲೋಕಾಯುಕ್ತದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸರು ಜ.28ರಂದು ಬೆಳಗ್ಗೆ 11 ಗಂಟೆಗೆ ದೊಡ್ಡಬಳ್ಳಾಪುರ ತಾಲೂಕಿನ ಪರಿವೀಕ್ಷಣಾ ಮಂದಿರದಲ್ಲಿ ಸಾರ್ವಜನಿಕರ ಕುಂದುಕೊರತೆ ಆಲಿಸಲು ಜನಸಂಪರ್ಕ ಸಭೆ ಆಯೋಜಿಸಿದ್ದಾರೆ. ಸದರಿ ಸಭೆಗೆ ತಾಲೂಕು ಮಟ್ಟದ ಇಲಾಖಾ ಅಧಿಕಾರಿಗಳು ಖುದ್ದು ಹಾಜರಾಗಲು ಕೋರಲಾಗಿದೆ. ಸಾರ್ವಜನಿಕರು ಸಭೆಯ ಸದುಪಯೋಗ ಪಡೆದು, ತಮ್ಮ ಅಹವಾಲುಗಳ ಕುರಿತು ಚರ್ಚಿಸಬಹುದು ಎಂದು ತಾಲೂಕು ದಂಡಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಮಹತ್ವಪೂರ್ಣ ಲೇಖನಗಳ ಆಹ್ವಾನ
ರಾಮನಗರ: ಫೆಬ್ರವರಿ ಮೂರನೇ ವಾರದಲ್ಲಿ ಚನ್ನಪಟ್ಟಣದಲ್ಲಿ ನಡೆಯಲಿರುವ ರಾಮನಗರ ಜಿಲ್ಲಾ ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಹೊರತರುತ್ತಿರುವ ಸಮ್ಮೇಳನದ ಸ್ಮರಣ ಸಂಚಿಕೆಗೆ ಜಿಲ್ಲೆಯ ಆಸಕ್ತ ಲೇಖಕರಿಂದ ಜಿಲ್ಲೆಯನ್ನು ಪ್ರತಿನಿಧಿಸುವ ಮಹತ್ವಪೂರ್ಣ ಲೇಖನಗಳನ್ನು ಆಹ್ವಾನಿಸಿದೆ. ಲೇಖಕರು ತಮ್ಮ ಲೇಖನಗಳನ್ನು ಫೆ.6ರ ಒಳಗಾಗಿ ಪುಸ್ತಕ ಪ್ರಕಟಣಾ ಸಮಿತಿ ಸಂಚಾಲಕರಾದ ಸು.ತ.ರಾಮೇಗೌಡ, ಬಯಲುಸೀಮೆ ದಿನಪತ್ರಿಕೆ ಕಾರ್ಯಾಲಯ, ರೈಲು ನಿಲ್ದಾಣ ರಸ್ತೆ, ಚನ್ನಪಟ್ಟಣ ಇಲ್ಲಿಗೆ ತಲುಪಿಸುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಮೊಣ9242263904 ಸಂಪರ್ಕಿಸಬಹುದು. ಫೆ.6ರ ನಂತರ ಬಂದ ಲೇಖನಗಳನ್ನು ಪರಿಗಣಿಸುವುದಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

