ಬೆಂಗಳೂರು ಗ್ರಾಮಾಂತರ

ಎಪಿಎಂಸಿ ಪ್ರಾಂಗಣದಲ್ಲಿ ಮೂಲ ಸೌಲಭ್ಯ ಒದಗಿಸಿ

Published On :

ರಾಮನಗರ: ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಪ್ರಾಂಗಣದಲ್ಲಿ ರೈತರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ಶಾಸಕ ಕೆ.ರಾಜು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.  
ನಗರದ ಎಪಿಎಂಸಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅಧಿಕಾರಿಗಳೊಂದಿಗೆ ಸಮಾಲೋಚಿಸಿದ ಅವರು, ಪ್ರಾಂಗಣದಲ್ಲಿರುವ ಅವ್ಯವಸ್ಥೆಗಳನ್ನು ಶೀಘ್ರ ಸರಿಪಡಿಸಬೇಕು. ರೈತರು, ಗ್ರಾಹಕರಿಗೆ ಯಾವುದೇ ಅನಾನುಕೂಲ ಉಂಟಾಗದಂತೆ ಎಚ್ಚರವಹಿಸಬೇಕು ಎಂದು ತಾಕೀತು ಮಾಡಿದರು.  ನಕ್ಷೆಯ ಪ್ರಕಾರ ಸಮಿತಿಗೆ ಸೇರಿದ ನಿವೇಶನ ಮತ್ತು ಜಾಗವನ್ನು ಸ್ವಾಧೀನಾನುಭವಕ್ಕೆ ಪಡೆಯಬೇಕು. ರಸ್ತೆ, ಚರಂಡಿ, ಮಳಿಗೆಗಳ ಸುರಕ್ಷತೆಗಾಗಿ ಕಾಂಪೌಂಡ್ ನಿರ್ಮಾಣ ಮಾಡಬೇಕು. ವಿದ್ಯುತ್ ಮತ್ತು ಕುಡಿಯುವ ನೀರಿನ ಸಂಪರ್ಕ ಪಡೆಯಬೇಕು ಎಂದು ಅವರು ಹೇಳಿದರು.  
ಮಾವು ಮಾರುಕಟ್ಟೆ: ಈ ಬಾರಿ ಹೇರಳವಾಗಿ ಬರುವ ಮಾವಿನ ಉತ್ಪಾದನೆಗೆ ಸೂಕ್ತ ಮಾರುಕಟ್ಟೆ ಒದಗಿಸಬೇಕು. ಪ್ರಸ್ತುತ ಮಾವು ಖರೀದಿಗೆ 30 ಮಳಿಗೆಗಳಿದ್ದು, ಅವನ್ನು ಕನಿಷ್ಠ 65-70ಕ್ಕೆ ಹೆಚ್ಚಳ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ರಾಜು ಅವರು ಅಧಿಕಾರಿಗಳು ಮತ್ತು ವರ್ತಕರಿಗೆ ತಿಳಿಸಿದರು.  
ಮಾರುಕಟ್ಟೆಗೆ ಮಾವು ಫಸಲು ತುಂಬಿಕೊಂಡು ಬರುವ ವಾಹನಗಳ ಸಂಚಾರಕ್ಕೆ ರಸ್ತೆಗಳು ಯೋಗ್ಯವಾಗಿಲ್ಲ. ಮಾವು ಮಾರಾಟ ಪ್ರಾರಂಭಕ್ಕೆ ಮುನ್ನವೇ ರಸ್ತೆ ಸಹಿತ ಮೂಲಭೂತ ಸೌಕರ್ಯಗಳ ಸಮಸ್ಯೆಯನ್ನು ನಿವಾರಿಸಬೇಕು ಎಂದು ಅವರು ಆದೇಶಿಸಿದರು.  
ಸಮಸ್ಯೆಗೆ ಸ್ಪಂದನೆ: ವರ್ತಕರಿಗೂ ಸಾಕಷ್ಟು ಸಮಸ್ಯೆಗಳಿಗೆ ಅವನ್ನು ತಾತ್ಸಾರ ಮಾಡದೆ, ಪರಿಹರಿಸಲು ಮುಂದಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ ರಾಜು, ಸುಂಕದ ಮೂಲಕ ಸಂದಾಯವಾಗುವ ಹಣ ಮತ್ತು ಕಳೆದ ಸಾಲಿನಲ್ಲಿ ಮಾವು ಖರೀದಿಯಿಂದ ಬಂದಿರುವ ಸುಂಕದ ವಿವರವನ್ನು ಪಡೆದರು.  
ರು. 68 ಲಕ್ಷ ಬಿಡುಗಡೆ: ಎಪಿಎಂಸಿ ಪ್ರಾಂಗಣದ ರಸ್ತೆಗಳಿಗೆ ಡಾಂಬರು, ಚರಂಡಿ, ಶೌಚಾಲಯ, ಮಾವಿನಕಾಯಿ ಮಾರುಕಟ್ಟೆಯಲ್ಲಿನ ಗುಂಡಿಗಳನ್ನು ಮುಚ್ಚುವುದು ಸೇರಿದಂತೆ ಮೂಲಭೂತ ಸೌಲಭ್ಯಗಳಿಗೆ ರು.68 ಲಕ್ಷ ಬಿಡುಗಡೆಯಾಗಿದ್ದು, ಈಗಾಗಲೇ ಟೆಂಡರ್ ಕರೆಯಲಾಗಿದೆ ಎಂದು ಎಪಿಎಂಸಿ ಕಾರ್ಯದರ್ಶಿ ರಾಜಮ್ಮ ತಿಳಿಸಿದರು.
 ಅಳತೆಯಲ್ಲಿನ ಮೋಸವನ್ನು ತಡೆಯುವ ಉದ್ದೇಶದಿಂದ ಎಲೆಕ್ಟ್ರಾನಿಕ್ ಯಂತ್ರ ಅಳವಡಿಸಲಾಗಿದೆ ಎಂದು ವಿವರಿಸಿದರು. ಸಭೆಯಲ್ಲಿ ಆಡಳಿತಾಧಿಕಾರಿ ರಾಮದೇವ್, ಮಾವು ವರ್ತಕರ ಸಂಘದ ಅಧ್ಯಕ್ಷ ಹಕ್ಕುಲ್ಲಾ ಷರೀಫ್, ವರ್ತಕರಾದ ಜಿ.ಕೃಷ್ಣರೆಡ್ಡಿ,  ಹನೀಫ್ ಖಾನ್, ಬಿ.ಎಚ್.ದೇವರಾಜ್, ಕರಡಿಗೌಡ, ರಶಿದ್ ಷರೀಫ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.