ಬೆಂಗಳೂರು ಗ್ರಾಮಾಂತರ

ಜಿಪಂನಲ್ಲೀಗ ಸ್ಥಾಯಿ ಸಮಿತಿಗಳ ಪುನಾರಚನೆ ಪರ್ವ

Published On :

ರಾಮನಗರ: ಜಿ.ಪಂ.ನಲ್ಲಿ ಸ್ಥಾಯಿ ಸಮಿತಿಗಳ ಪುನಾರಚನೆ ಪರ್ವ ಎದುರಾಗಿದೆ. ಎರಡನೇ 20 ತಿಂಗಳ ಅವಧಿಗೆ ಸ್ಥಾಯಿ ಸಮಿತಿಗಳ ಗದ್ದುಗೆ ಹಿಡಿಯಲು ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಹಗ್ಗ ಜಗ್ಗಾಟ ಪ್ರಾರಂಭವಾಗಿದೆ.   ಈ ಚುನಾವಣೆಯಲ್ಲಿ ಕಡು ವೈರಿ ಪಕ್ಷಗಳ ನಡೆ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.  
ಜಿ.ಪಂ. ಅಂಗ ರಚನೆಯ ಪ್ರಕಾರ 5 ಸ್ಥಾಯಿ ಸಮಿತಿಗಳು ಅಸ್ತಿತ್ವದಲ್ಲಿವೆ. ಜಿ.ಪಂ. ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಕ್ರಮವಾಗಿ  ಹಣಕಾಸು ಸ್ಥಾಯಿ ಸಮಿತಿ, ಸಾಮಾನ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿರುತ್ತಾರೆ. ಸಾಮಾಜಿಕ ನ್ಯಾಯ ಸಮಿತಿ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿಗೆ ಒಮ್ಮತ ಇಲ್ಲವೇ ಚುನಾವಣೆ ಮೂಲಕ ಸದಸ್ಯರು, ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಬೇಕಿದೆ.
ಪ್ರಸಕ್ತ ಆಡಳಿತಾವಧಿಯ ಮೊದಲ 20 ತಿಂಗಳ ಅವಧಿಗೆ ಅಸ್ತಿತ್ವಕ್ಕೆ ಬಂದ ಸ್ಥಾಯಿ ಸಮಿತಿಗಳ ಅಧಿಕಾರ ಜ.27ಕ್ಕೆ ಅಂತ್ಯಗೊಂಡಿದೆ. ಕಳೆದ ಬಾರಿ ಉಭಯ ಪಕ್ಷಗಳು ಒಪ್ಪಂದದೊಂದಿಗೆ ಅಧಿಕಾರ ಹಂಚಿಕೊಂಡಿದ್ದವು. ಆಡಳಿತ ಜೆಡಿಎಸ್ ಪಕ್ಷವು ಕೃಷಿ ಮತ್ತು ಕೈಗಾರಿಕೆ, ಆರೋಗ್ಯ ಮತ್ತು ಶಿಕ್ಷಣ ಸಮಿತಿಗಳನ್ನು ಉಳಿಸಿಕೊಂಡು, ಪ್ರತಿಪಕ್ಷ ಕಾಂಗ್ರೆಸ್‌ಗೆ  ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಟ್ಟಿತ್ತು.
ಸಂಪ್ರದಾಯ ಪಾಲನೆ: ರಾಜ್ಯದ ಬಹುತೇಕ ಜಿ.ಪಂ.ಗಳಲ್ಲಿ ಆಡಳಿತ ಪಕ್ಷವು 2 ಸ್ಥಾಯಿ ಸಮಿತಿಗಳನ್ನು ತನಗಿಟ್ಟುಕೊಂಡು, 1 ಸ್ಥಾಯಿ ಸಮಿತಿಯನ್ನು ಪ್ರತಿಪಕ್ಷಕ್ಕೆ ನೀಡುವ ಸಂಪ್ರದಾಯ ಪಾಲನೆ ಮಾಡಿಕೊಂಡು ಬರಲಾಗಿದೆ. ಇದಕ್ಕೆ ರಾಮನಗರವೂ ಹೊರತಾಗಿಲ್ಲ. ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಇರುವ ಈ ಸಂದರ್ಭದಲ್ಲಿ ನಡೆಯುತ್ತಿರುವ ಸ್ಥಾಯಿ ಸಮಿತಿಗಳ ರಚನೆಯಲ್ಲಿ ಹಲವೆಡೆ ಏರುಪೇರಾಗಿದೆ.
ಕಾಂಗ್ರೆಸ್ ಪ್ರತಿ ಹಂತದಲ್ಲೂ ಅಸಹಾಕಾರ ಧೋರಣೆ ಅನುಸರಿಸುತ್ತಲೇ ಬಂದಿದೆ. ಹೇಳಿ ಕೇಳಿ ಈಗ ವಿಧಾನಸಭೆ ಚುನಾವಣೆಯೂ ಸಮೀಪಿಸುತ್ತಿದೆ. ಹೀಗಾಗಿ ಜೆಡಿಎಸ್ ಇಲ್ಲಿ ಯಾವ ಲೆಕ್ಕಾಚಾರ ಅನುಸರಿಸಬಹುದು ಎನ್ನುವುದು ಕೌತುಕವಾಗಿದೆ. ಒಂದು ಸಮಿತಿ ಚುಕ್ಕಾಣಿಯನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟು ದಳಪತಿಗಳು ಸಂಪ್ರದಾಯ ಪಾಲಿಸುವರೋ ಅಥವಾ 3 ಸಮಿತಿಗಳಿಗೂ ತನ್ನವರನ್ನೇ ಪ್ರತಿಷ್ಠಾಪಿಸಿ ಪ್ರತೀಕಾರಕ್ಕೆ ಇಳಿಯುವರೋ ಕಾದು ನೋಡಬೇಕಿದೆ.
ಕುಮಾರದ್ವಯರಿಗೆ ಪಟ್ಟ: 22 ಸದಸ್ಯ ಬಲದ ಜಿ.ಪಂ.ನಲ್ಲಿ ಜೆಡಿಎಸ್ 12 ಮತ್ತು ಕಾಂಗ್ರೆಸ್ 10 ಸದಸ್ಯರನ್ನು ಹೊಂದಿವೆ. ಜೆಡಿಎಸ್ ಸದಸ್ಯರ ಪೈಕಿ 7 ಮಂದಿಗೆ ಈಗಾಗಲೇ ಅಧಿಕಾರ ಸಿಕ್ಕಿದೆ. ಉಳಿದ 5 ಮಂದಿ ಪೈಕಿ ಮೂವರಿಗೆ ಅಧಿಕಾರ ಹಂಚಿಕೆಯ ಭರವಸೆ ಸಿಕ್ಕಿದೆ. ಹೀಗಾಗಿ ಉಳಿದವರು ರಘುಕುಮಾರ ಮತ್ತು ವಿಜಯಕುಮಾರ. ಈ ಇಬ್ಬರೂ ಕುಮಾರರಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ಪಟ್ಟ ಬಹುತೇಕ ಖಚಿತವಾದಂತಿದೆ.
ಮೂಲಗಳ ಪ್ರಕಾರ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಗೆ ರಘುಕುಮಾರ, ಕೃಷಿ ಮತ್ತು ಕೈಗಾರಿಕೆ ಸಮಿತಿಗೆ ವಿಜಯಕುಮಾರ ಆಯ್ಕೆ ಸಂಬಂಧ ಮಾತುಕತೆ ಮುಗಿದಿದೆ ಎನ್ನಲಾಗಿದೆ. ಸಾಮಾಜಿಕ ನ್ಯಾಯ ಸಮಿತಿ ವಿಷಯದಲ್ಲಿ ಅಂತಿಮ ನಿರ್ಧಾರ ತಳೆದಿಲ್ಲ. ಹೀಗಾಗಿ ಜೆಡಿಎಸ್ ಮುಖಂಡರು ಕಾಂಗ್ರೆಸ್‌ನಿಂದ ಮತ್ತೊಮ್ಮೆ ಮೈತ್ರಿ ಮಾತುಕತೆಯನ್ನು ಎದಿರು ನೋಡುತ್ತಿದ್ದಾರೆ ಎನ್ನುವ ಅಂಶ ಸ್ಪಷ್ಟವಾಗುತ್ತದೆ. ಒಂದು ಸ್ಥಾಯಿ ಸಮಿತಿಗಾಗಿ ಈ ಹಂತದಲ್ಲಿ ಜೆಡಿಎಸ್ ಜತೆ ಕೈಜೋಡಿಸಬೇಕೇ ಅಥವಾ ಬೇಡವೇ ಎನ್ನುವ ವಿಷಯದಲ್ಲಿ ಕಾಂಗ್ರೆಸ್ ಮುಖಂಡರಲ್ಲೂ ಒಮ್ಮತ ಮೂಡಿಲ್ಲ.
ದೂರವಿರಲು ಒತ್ತಡ: ಸ್ಥಾಯಿ ಸಮಿತಿ ಅಧಿಕಾರಕ್ಕಾಗಿ ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಂಡಲ್ಲಿ ಮುಂಬರುವ ಚುನಾವಣೆಯಲ್ಲಿ ಜನತೆಗೆ ಬೇರೆಯದೇ ಸಂದೇಶ ರವಾನೆ ಆಗಬಹುದು ಎನ್ನುವ ಭೀತಿ ಕಾಂಗ್ರೆಸಿಗರನ್ನು ಸಹಜವಾಗಿಯೇ ಕಾಡುತ್ತಿದೆ. ಜಿ.ಪಂ. ವರಿಷ್ಠರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಆದ ಕಹಿ ಅನುಭವದಿಂದ ಕೆರಳಿರುವ ಬಹುತೇಕ ಕಾಂಗ್ರೆಸ್ ಸದಸ್ಯರು ಸ್ಥಾಯಿ ಸಮಿತಿ ಅಧಿಕಾರಕ್ಕಾಗಿ ಕೈಜೋಡಿಸದಂತೆ ವರಿಷ್ಠರ ಮೇಲೆ ಒತ್ತಡ ಹೇರಿದ್ದಾರೆ.
ಹೊಂದಾಣಿಕೆಯಿಂದ ಅಧಿಕಾರ ಹಿಡಿಯುವ ಬದಲು ಇಲ್ಲೂ ಚುನಾವಣೆ ಎದುರಿಸೋಣ. ಅಧಿಕಾರ ಸಿಗಲಿ, ಸಿಗದಿರಲಿ ಚಿಂತೆಯಿಲ್ಲ.
ಒಂದು ಸ್ಥಾಯಿ ಸಮಿತಿಯ ಚುಕ್ಕಾಣಿ ಹಿಡಿಯುವುದರಿಂದ ಪಕ್ಷಕ್ಕೆ ಯಾವ ಉಪಯೋಗವಿಲ್ಲ ಎನ್ನುವುದು ಕಾಂಗ್ರೆಸ್‌ನ ಹಲವು ಸದಸ್ಯರ ವಾದವಾಗಿದೆ. ಕಾಂಗ್ರೆಸ್ ನಿಲವು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಅವಲಂಬಿಸಿದೆ.
ರಾಜಕೀಯ ಮೇಲಾಟ: 13 ತಿಂಗಳಿಂದ ಈಚೆಗೆ ಜಿ.ಪಂ.ನಲ್ಲಿ ಸಾಕಷ್ಟು ರಾಜಕೀಯ ಮೇಲಾಟವೇ ನಡೆದಿದೆ. ಜೆಡಿಎಸ್‌ನಿಂದ ಬಂಡೆದ್ದ ನಾಗೇಶ್ವರಿ ಕಾಂಗ್ರೆಸ್ ಜತೆ ಕೈ ಜೋಡಿಸಿ, ಅಧಿಕಾರ ಅನುಭವಿಸಿದರು. ಅವರ ರಾಜೀನಾಮೆ ನಾಟಕಕ್ಕೆ ಮಂಗಳವಾಡಲು ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ದೋಸ್ತಿ ಏರ್ಪಟ್ಟಿತ್ತು. ಎರಡನೇ 20 ತಿಂಗಳ ವರಿಷ್ಠರ ಚುನಾವಣೆಯಲ್ಲಿ ಮತ್ತೆ ದೂರಾದ ಉಭಯ ಪಕ್ಷಗಳು, ಕಾದಾಟಕ್ಕೆ ಇಳಿದವು.
ನಾಗೇಶ್ವರಿ, ರಮೇಶ್ ಅವರಿಬ್ಬರೂ ಮಾತೃಪಕ್ಷಕ್ಕೆ ಮರಳಿ ಸದಸ್ಯತ್ವ ಅನೂರ್ಜಿತದಿಂದ ಪಾರಾದರು. ಗೊಂದಲವೆಲ್ಲಾ ಬಗೆಹರಿದು, ಬಹುಮತ ಮರಳುತ್ತಿದ್ದಂತೆಯೇ ಜೆಡಿಎಸ್ ಸದಸ್ಯರು ಬೀಗಿದರು. ಒಪ್ಪಂದವನ್ನು ಕೈಬಿಟ್ಟು, ಕಾಂಗ್ರೆಸ್‌ಗೆ ಚಳ್ಳೆಹಣ್ಣು ತಿನ್ನಿಸಿದ ಜೆಡಿಎಸ್ ವಚನಭ್ರಷ್ಟತೆಯ ಕಳಂಕ ತಂದುಕೊಂಡಿತು. ಅಲ್ಲಿಂದಾಚೆ ಇವೆರಡೂ ಪಕ್ಷಗಳ ನಡುವೆ ಸಂಘರ್ಷ ಮುಂದುವರೆದಿದೆ.
ಫೆ.2ಕ್ಕೆ ಸಭೆ ನಿಗದಿ : ರಾಮನಗರ ಜಿ.ಪಂ.ನ ಸ್ಥಾಯಿ ಸಮಿತಿಗಳ ಪುನಾರಚನೆ ಹಿನ್ನೆಲೆಯಲ್ಲಿ ಫೆ.2ರಂದು ಸಾಮಾನ್ಯ ಸಭೆಯನ್ನು ಕರೆಯಲಾಗಿದೆ. ಉಭಯ ಪಕ್ಷಗಳ ನಡುವೆ ಒಮ್ಮತ ಮೂಡಿದಲ್ಲಿ ಅವಿರೋಧ ಆಯ್ಕೆ ನಡೆಯಲಿದ್ದು, ವಿರೋಧ ಎದುರಾದಲ್ಲಿ ಚುನಾವಣೆ ಅನಿವಾರ್ಯವಾಗಲಿದೆ.
- ಮತ್ತೀಕೆರೆ ಜಯರಾಮ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.