ಅಹಿಂಸ ತತ್ವದಿಂದ ಮಾನಸಿಕ ನೆಮ್ಮದಿ
ರಾಮನಗರ: ಸ್ವಾತಂತ್ರ್ಯ ಸಂಗ್ರಾಮವು ಹಿಂಸಾತ್ಮಕ ಮಾರ್ಗದಲ್ಲಿ ನಡೆದಿದ್ದರೆ ಪ್ರಾಯಶ: ನಮ್ಮ ದೇಶಕ್ಕೆ ಇನ್ನೂ 25 ವರ್ಷ ಮುಂಚೆಯೇ ಪರಕೀಯರ ದಾಸ್ಯದಿಂದ ಮುಕ್ತಿ ಸಿಕ್ಕಿರುತ್ತಿತ್ತು. ಆದರೆ, ಮಹಾತ್ಮ ಗಾಂಧೀಜಿ ಅವರು ಅಹಿಂಸಾ ಹಾದಿ ಹಿಡಿದು ಜಗದ್ವಿಖ್ಯಾತರಾದರು ಎಂದು ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ ಹೇಳಿದರು.
ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹುತಾತ್ಮರಾದವರ ಸ್ಮರಾಣಾರ್ಥ ಇಂದು ಜಿಲ್ಲಾಡಳಿತದ ವತಿಯಿಂದ ನಗರದ ಕಂದಾಯ ಭವನದಲ್ಲಿ ಬುಧವಾರ ನಡೆದ ಹುತಾತ್ಮರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಗಾಂಧೀಜಿ ಅನುಸರಿಸಿದ ಅಹಿಂಸಾತ್ಮಕ ಚಳವಳಿಯಿಂದ ಅದೆಷ್ಟೋ ಸಾವು-ನೋವು ಸಂಭವಿಸುವುದು ತಪ್ಪಿದಂತಾಯ್ತು ಎಂದರು.
ಚಳವಳಿಗೆ ಹಿಂಸಾತ್ಮಕ ರೂಪ ನೀಡಬೇಕೆನ್ನುವ ನಿಟ್ಟಿನಲ್ಲಿ ದೇಶಾದ್ಯಂತ ಸಾಕಷ್ಟು ಒತ್ತಡ ಹೆಚ್ಚಿತ್ತು. ಅದೆಷ್ಟೇ ಒತ್ತಡ ಬಂದರೂ ಗಾಂಧೀಜಿ ಮಣಿಯಲಿಲ್ಲ. ಈ ಕಾರಣದಿಂದಲೇ ಅವರು ಜಗತ್ತಿನ ಶಾಂತಿಧೂತ ಎನಿಸಿಕೊಂಡರು. ಅಹಿಂಸಾ ಹೋರಾಟದಿಂದಲೇ ಪರಕೀಯರನ್ನು ದೇಶದಿಂದ ತೊಲಗಿಸಿ, ಭಾರತಕ್ಕೆ ಸ್ವತಂತ್ರ ತಂದುಕೊಟ್ಟರು ಎಂದು ಪ್ರಶಂಸಿಸಿದರು.
ಶಾಂತಿ ನೆಲಸಬೇಕು: ದೇಶವನ್ನು ದಾಸ್ಯದಿಂದ ಬಿಡುಗಡೆ ಮಾಡಲು ಸಹಸ್ರಾರು ಸ್ವಾತಂತ್ರ್ಯ ಸೇನಾನಿಗಳು ಪ್ರಾಣಾರ್ಪಣೆ ಮಾಡಿದ್ದಾರೆ. ಭಾರತದ ಭವಿಷ್ಯವನ್ನು ಉಜ್ವಲಗೊಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಪಣತೊಟ್ಟು, ಹುತಾತ್ಮರ ಆತ್ಮಕ್ಕೆ ಶಾಂತಿ ಕೋರುವ ಜತೆಗೆ ಅವರ ಆಶಯಗಳನ್ನು ಈಡೇರಿಸಬೇಕು ಎಂದು ಶ್ರೀರಾಮರೆಡ್ಡಿ ಕರೆ ನೀಡಿದರು. ಹುತಾತ್ಮರ ಸಂದೇಶ, ಗುರಿಯು ನಮ್ಮಲ್ಲಿ ರಾಷ್ಟ್ರೀಯ ಐಕ್ಯತೆಯನ್ನು ಪ್ರೇರೇಪಿಸಬೇಕು. ಸಮಾಜದಲ್ಲಿ ತಲೆ ಎತ್ತಿರುವ ಭಯೋತ್ಪಾದನೆ, ಭ್ರಷ್ಟಾಚಾರ ಮತ್ತು ಪಿಡುಗುಗಳನ್ನು ತೊಡೆದು ಹಾಕಿ ನೆಮ್ಮದಿ ಮೂಡಿಸಬೇಕಿದೆ. ಇದಕ್ಕಾಗಿ ಪ್ರತಿಯೊಬ್ಬರೂ ರಾಷ್ಟ್ರಪ್ರೇಮ, ರಾಷ್ಟ್ರಭಕ್ತಿ ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಮಾನತೆ ಅಗತ್ಯ: ಗಾಂಧೀಜಿ ಸಾರಿದ ಸತ್ಯ, ನಿಷ್ಠೆ, ಅಹಿಂಸೆ ಸಂದೇಶಗಳು, ಹುತಾತ್ಮರ ತ್ಯಾಗ, ಬಲಿದಾನ ನಮಗೆ ಮಾರ್ಗದರ್ಶಕವಾಗಿವೆ. ಹುತಾತ್ಮರು ತೋರಿದ ಹಾದಿಯಲ್ಲಿ ನಾವು ಸಾಗಬೇಕು. ಎಲ್ಲ ಅನಾಹುತಗಳಿಗೂ ಕಾರಣವಾಗಿರುವ ಸಾಮಾಜಿಕ ಅಸಮಾನತೆಯನ್ನು ದೂರವಾಗಿಸುವ ನಿಟ್ಟಿಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದು ಶ್ರೀರಾಮರೆಡ್ಡಿ ಕಿವಿಮಾತು ಹೇಳಿದರು.
ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿ ಮಡಿದವರು ಹುತಾತ್ಮರಾದರೆ, ಮಹಾತ್ಮ ಗಾಂಧೀಜಿ ಅವರು ದೇಶಕ್ಕೆ ಪರಮಾತ್ಮ ಆಗಿದ್ದಾರೆ. ಅವರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ಪ್ರತಿವರ್ಷ ಮತ್ತಷ್ಟು ಅರ್ಥಗರ್ಭಿತವಾಗಿ ನಡೆಯುವಂತಾಗಬೇಕು ಎಂದು ಅವರು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಭಾಗವಹಿಸಿದ್ದರು. ಕಂದಾಯ ಭವನದ ಅಧಿಕಾರಿಗಳು ಮತ್ತು ಸಿಬ್ಬಂದಿ ಎರಡು ನಿಮಿಷ ಮೌನಾಚರಣೆಯೊಂದಿಗೆ ಹುತಾತ್ಮರಿಗೆ ಗೌರವ ಸಲ್ಲಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

