ಬೆಂಗಳೂರು ಗ್ರಾಮಾಂತರ

ಆಹಾರ ಧಾನ್ಯ ಸಂಗ್ರಹಣೆಗೆ ಮಿತಿ ನಿಗದಿ

Published On :

ರಾಮನಗರ: ಆಹಾರ ಧಾನ್ಯಗಳ ಅಕ್ರಮ ದಾಸ್ತಾನು, ಬೆಲೆ ಏರಿಕೆ ನಿಯಂತ್ರಣಕ್ಕೆ ಸರ್ಕಾರ ಮುಂದಾಗಿದ್ದು, ಈ ನಿಟ್ಟಿನಲ್ಲಿ ಆಹಾರ ಧಾನ್ಯಗಳ ಸಂಗ್ರಹಣೆಗೆ ಮಿತಿ ನಿಗದಿಪಡಿಸಲಾಗಿದೆ. ಅಂತೆಯೇ ಅಗತ್ಯ ವಸ್ತುಗಳ ದಾಸ್ತಾನಿಗೆ ಪರವಾನಗಿ ಪಡೆದುಕೊಳ್ಳಲು ಸ್ಪಷ್ಟ ಸೂಚನೆ ನೀಡಲಾಗಿದೆ.  
ರಾಜ್ಯದಲ್ಲಿ ಅಕ್ಕಿ ಸೇರಿದಂತೆ ಅಗತ್ಯ ಆಹಾರ ಧಾನ್ಯಗಳ ಬೆಲೆ ಗಗನಕ್ಕೇರಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಪರವಾನಗಿ ಹೊಂದಿಲ್ಲದ, ಮಿತಿಗಿಂತ ಹೆಚ್ಚು ಆಹಾರ ಧಾನ್ಯಗಳ ದಾಸ್ತಾನಿಟ್ಟವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ ಎಚ್ಚರಿಸಿದ್ದಾರೆ.
ದ್ವಿದಳ ಧಾನ್ಯಗಳು, ಖಾದ್ಯ ತೈಲ, ಖಾದ್ಯ ತೈಲ ಬೀಜ, ಅಕ್ಕಿ ದಾಸ್ತಾನನ್ನು ಚಿಲ್ಲರೆ ಮಾರಾಟಗಾರರಿಗೆ 5 ಕ್ವಿಂಟಾಲ್ ನಿಗದಿಪಡಿಸಲಾಗಿದೆ. ಬಹು ಚಿಲ್ಲರೆ ಮಾರಾಟಗಾರರು ದ್ವಿದಳ ಧಾನ್ಯಗಳನ್ನು 100 ಕ್ವಿಂಟಾಲ್ ಮತ್ತು ಇತರೆ ಧಾನ್ಯಗಳಣ್ನು 150 ಕ್ವಿಂಟಾಲ್ ದಾಸ್ತಾನಿಟ್ಟುಕೊಳ್ಳಬಹುದಾಗಿದೆ ಎಂದು ಅವರು ವಿವರಿಸಿದ್ದಾರೆ.
ಸಗಟು ಮಾರಾಟಗಾರರು ದ್ವಿದಳ ಧಾನ್ಯಗಳು, ಖಾದ್ಯ ತೈಲ ಬೀಜ ಹಾಗೂ ಅಕ್ಕಿಯನ್ನು ತಲಾ 2 ಸಾವಿರ ಕ್ವಿಂಟಾಲ್, ಖಾದ್ಯ ತೈಲವನ್ನು 1200 ಕ್ವಿಂಟಾಲ್ ಮತ್ತು ಭತ್ತವನ್ನು 3 ಸಾವಿರ ಕ್ವಿಂಟಾಲ್ ದಾಸ್ತಾನಿಟ್ಟುಕೊಳ್ಳಲು ಅನುಮತಿ ಇದೆ ಎಂದು ಶ್ರೀರಾಮರೆಡ್ಡಿ ಹೇಳಿದ್ದಾರೆ.
ಅಕ್ಕಿ ಗಿರಣಿಗಳಲ್ಲಿ ಹಿಂದಿನ 2 ವರ್ಷಗಳಲ್ಲಿ ಅತಿ ಹೆಚ್ಚು ವಹಿವಾಟು ನಡೆದ ಒಂದು ತಿಂಗಳಿನ ಪ್ರಮಾಣದಷ್ಟು ದಾಸ್ತಾನಿರಿಸಿಕೊಳ್ಳಬಹುದು. ಹೊಸ ಗಿರಣಿಗಳಲ್ಲಿ ಮೊದಲ ವರ್ಷಕ್ಕೆ ಪ್ರಸ್ತಾಪಿತ ಸಾಮರ್ಥ್ಯದ ಶೇಕಡ 75ರಷ್ಟು ಪ್ರಮಾಣದ ದಾಸ್ತಾನು ಹೊಂದಬಹುದು ಎಂದಿದ್ದಾರೆ.   
ಪರವಾನಗಿ ಕಡ್ಡಾಯ: ಅಗತ್ಯ ವಸ್ತು ಕಾಯ್ದೆ ಆದೇಶ 1986ರ ಅನ್ವಯ ಮಾರಾಟಗಾರರಿಗೆ ಪರವಾನಗಿ ಕಡ್‌ಡಾಯವಾಗಿದೆ. ಎಲ್ಲಾ ಸಗಟು ಮಾರಾಟಗಾರರು, ಅಕ್ಕಿ ಗಿರಣಿ ಮಾಲೀಕರು ಜಿಲ್ಲಾಧಿಕಾರಿಯಿಂದ, ಚಿಲ್ಲರೆ ಮಾರಾಟಗಾರರು ಆಯಾ ತಾಲೂಕಿನ ತಹಸೀಲ್ದಾರರಿಂದ ಒಂದು ವಾರದೊಳಗಾಗಿ ಪರವಾನಗಿಯನ್ನು ಪಡೆಯಬೇಕು ಎಂದು ಶ್ರೀರಾಮರೆಡ್ಡಿ ಸೂಚಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.