ನೆನಪಿನಂಗಳದ ಹೀರೋ ಇನ್ನು ನೆನಪು ಮಾತ್ರ
ಭರವಸೆಯ ಯುವ ಪ್ರತಿಭೆ ಧಾರುಣ ಅಂತ್ಯ, ಅತಿ ಉತ್ಸಾಹವೇ ಜೀವಕ್ಕೆ ಉರುಳಾದ ಕಥೆ-ವ್ಯಥೆ
- ಕೆ.ಆರ್.ರವಿಕಿರಣ್
ಕ.ಪ್ರ.ವಾರ್ತೆ ದೊಡ್ಡಬಳ್ಳಾಪುರ ಜು.3
ನೆನಪಿನಂಗಳದ ಹೀರೋ ಇನ್ನು ನೆನಪು ಮಾತ್ರ. ಚಿತ್ರರಂಗದಲ್ಲಿ ಎತ್ತರಕ್ಕೆ ಬೆಳೆಯುವ ಅತೀವ ಉತ್ಸಾಹದಲ್ಲಿ ಬದುಕಿನ ನೆನಪಿನಂಗಳಕ್ಕೇ ಹಾರುವ ದುಸ್ಸಾಹಸ ಈ ಯುವನಟನ ಬದುಕಿನಲ್ಲಿ ನಡೆದೇ ಹೋಗಿದೆ. ದೊಡ್ಡಬಳ್ಳಾಪುರದ ಗಲ್ಲಿಗಲ್ಲಿಗಳಲ್ಲಿ ಹುಡುಗರ ದಂಡಿನೊಂದಿಗೆ ಆಗಾಗ್ಗೆ ಕಾಣಿಸಿಕೊಂಡು ತುಂಟಾಟ ಮೆರೆಯುತ್ತಿದ್ದ ಹೇಮಂತ ಇದೀಗ ಬಾರದ ಲೋಕಕ್ಕೆ ತೆರಳಿದ್ದಾನೆ.
ಬದುಕು ಜಟಕಾ ಬಂಡಿ: ಹೇಮಂತ ಚಿತ್ರರಂಗಕ್ಕೆ ಕಾಲಿಡುವ ಮುನ್ನವೇ ಭರವಸೆಯ ನಾಯಕನಟನಾಗಿ ಬೆಳೆಯುವ ಉತ್ಸಾಹ ತೋರಿದ್ದ. ಇಲ್ಲಿನ ಕೊಂಗಾಡಿಯಪ್ಪ ಕಾಲೇಜಿನಲ್ಲಿ ಓದುವ ದಿನಗಳಲ್ಲೇ ಸ್ನೇಹಿತರನ್ನೇ ಜೊತೆಗೂಡಿಸಿಕೊಂಡು ಸಿನಿಮಾ ಘೀಳಿಗೆ ತನ್ನನ್ನು ತಾನು ಸಮರ್ಪಿಸಿಕೊಂಡಿದ್ದ. ಆತನ ಅಣ್ಣ ವಸಂತ್ ಮತ್ತು ಅಣ್ಣನ ಗೆಳೆಯ ಧನುಚಂದ್ರ ಮಾವಿನಕುಂಟೆ ಜೊತೆಗೂಡಿ ತಮ್ಮದೇ ಚಿಂತನೆಯ ಕಥೆ-ಚಿತ್ರಕಥೆ ಸಿದ್ಧಪಡಿಸಿ ನೈಜ ಕಥೆಯಾಧಾರಿತ ನೆನಪಿನಂಗಳ.. ಚಿತ್ರನಿರ್ಮಾಣದ ಸಾಹಸಕ್ಕೆ ಕೈಹಾಕಿ ಸೈ ಎನಿಸಿಕೊಂಡಿದ್ದ ಎಳೆಯ ಪ್ರತಿಭೆ.
ಇದಕ್ಕೆ ಹೇಮಂತ್ ತಂದೆ ದೊಡ್ಡಬಳ್ಳಾಪುರದ ನಗರಸಭಾ ಮಾಜಿ ಅಧ್ಯಕ್ಷ ಜಿ.ರಾಮಕೃಷ್ಣ ಕೊಟ್ಟ ಬೆಂಬಲ, ಮಗನ ಮಹದಾಸೆಗೆ ನೀರೆರೆವ ಇಚ್ಛೆಯಿಂದ ಸಿನಿಮಾ ಮಾಡಲು ಹಣ ತೊಡಗಿಸಿದ್ದು ಈಗ ಇತಿಹಾಸ.
ನೆನಪಿನಂಗಳ: ಕಳೆದ ಕೆಲ ತಿಂಗಳ ಹಿಂದೆ ನೆನಪಿನಂಗಳ ತೆರೆ ಕಂಡಿತ್ತು. ಗಾಂಧಿನಗರದ ಬಲಾಢ್ಯರ ಮುಂದೆ ಹಸುಗೂಸಾಗಿ ಕಂಡ ಈ ಚಿತ್ರತಂಡ ಚಿತ್ರಬಿಡುಗಡೆಗೆ ಚಿತ್ರಮಂದಿರ ಸಿಗದೇ ಪರದಾಡುವ ಸ್ಥಿತಿ ನಿರ್ಮಾಣವಾದರೂ, ಇಂಡಸ್ಟ್ರಿಯಲ್ಲಿ ಹೆಸರು ಮಾಡಲೇಬೇಕು ಎಂಬ ಹಠಕ್ಕೆ ಬಿದ್ದವರಂತೆ ಚಿತ್ರನಿರ್ಮಾಣ ಕಾರ್ಯ ಮುಗಿದು 1 ವರ್ಷವಾದ ನಂತರ ಚಿತ್ರವನ್ನು ಬಿಡುಗಡೆ ಮಾಡಿ ತಮ್ಮ ಉತ್ಸಾಹವನ್ನು ಪ್ರದರ್ಶಿಸಿದ್ದರು.
ಈ ಚಿತ್ರ ಮೂಲತಃ ಹಾಡುಗಳಿಂದಲೇ ಹೆಸರು ಮಾಡಿತು. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯೂ ದೊರೆಯಿತು. ಹಾಕಿದ ಬಂಡವಾಳ ಸಂಪೂರ್ಣವಾಗಿ ಕೈಸೇರದಿದ್ದರೂ ಮೊದಲ ಪ್ರಯತ್ನದಲ್ಲಿ ತಕ್ಕಮಟ್ಟಿಗೆ ಯಶಸ್ಸು ಹೇಮಂತ್ ಹೆಗಲೇರಿತ್ತು. ಇದೇ ಉತ್ಸಾಹದಲ್ಲಿ ಮತ್ತೊಂದು ಚಿತ್ರ ನಿರ್ಮಿಸಲು ಕಟ್ಟಿದ್ದ ಕನಸು ನೆನಪಾಯಿತೇ ಹೊರತು ಕನಸಾಗಲಿಲ್ಲ.
ಕೈ ಕೊಟ್ಟ ಉತ್ಸಾಹ: ಹೇಮಂತ್ ಸದ್ಯ ತೆಲುಗು ಚಿತ್ರವೊಂದರ ಆಫರ್ಗಾಗಿ ಕಾಯುತ್ತಿದ್ದರು. ಅಲ್ಲಿಂದ ಅವಕಾಶ ಸಿಗುವ ಸ್ಪಷ್ಟ ಭರವಸೆಯೂ ಸಿಕ್ಕಿತ್ತು. ಅದಕ್ಕಾಗಿ ಸಿಕ್ಸ್ಪ್ಯಾಕ್ ರೂಢಿಸಿಕೊಳ್ಳಲು ಪ್ರತಿನಿತ್ಯ ಜಿಮ್ನಲ್ಲಿ ಸಾಧನೆ ಮಾಡುತ್ತಿದ್ದರು. ಗಂಟೆಗಟ್ಟಲೆ ಜಿಮ್ನಲ್ಲಿ ದೇಹದಂಡಿಸಿ ವರ್ಕ್ಔಟ್ ಮಾಡುತ್ತಿದ್ದ ಹೇಮಂತ್ಗೆ ಜು.1ರಂದು ವ್ಯಾಯಾಮದಲ್ಲಿ ತೊಡಗಿದ್ದಾಗಲೇ ಎದೆನೋವು ಕಾಣಿಸಿಕೊಂಡಿತ್ತು.
ನಂತರ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರ ಹೇಳಿಕೆ ಪ್ರಕಾರ ಆತನಿಗೆ ರಕ್ತನರಗಳಲ್ಲಿ ಹೆಚ್ಚಿನ ಒತ್ತಡ ಉಂಟಾಗಿ ಹೃದಯ ಸ್ತಂಭನವಾಗಿದೆ. ಹೀಗಾಗಿ ಆತ ಸಾವನ್ನಪ್ಪಿದ್ದಾನೆ. ಅವೈಜ್ಞಾನಿಕವಾಗಿ ಜಿಮ್ನಲ್ಲಿ ವರ್ಕ್ಔಟ್ ಮಾಡಿದ್ದೇ ಸಾವಿಗೆ ಕಾರಣ ಎನ್ನಲಾಗುತ್ತಿದೆ. ದೊಡ್ಡಬಳ್ಳಾಪುರದ ಜಿಮ್ಮೊಂದರಲ್ಲಿ ಆತ ಅಭ್ಯಾಸ ಮಾಡುತ್ತಿದ್ದ. ವ್ಯವಸ್ಥಿತ ಮಾರ್ಗದರ್ಶನವೂ ಇಲ್ಲದೆ ಸಾಹಸಕ್ಕೆ ಕೈ ಹಾಕಿದ ಪರಿಣಾಮ ಬದುಕೇ ಕೊನೆಗೊಂಡಿದೆ.
ಸಿಗರೇಟ್ ಚಟವೂ ಕಾರಣವೇ: ಈ ರೀತಿಯಾಗಿ ಹೃದಯಸ್ತಂಭನ ಸಂಭವಿಸಲು ಕಾರಣ ಆತನಿಗಿದ್ದ ಅತಿಯಾದ ಸಿಗರೇಟ್ ಚಟ ಎಂದೂ ವಿಶ್ಲೇಷಿಸಲಾಗುತ್ತಿದೆ. ಅದೇನೇ ಇರಲಿ, ಕನ್ನಡ ಚಿತ್ರರಂಗದಲ್ಲಿ ಉನ್ನತ ಕನಸುಗಳ ಬೆನ್ನೇರಿ ಬೆಳೆಯುತ್ತಿದ್ದ ಯುವನಟ ಧಾರುಣ ಅಂತ್ಯ ಕಂಡಿದ್ದಾನೆ. ನಟನೆಯನ್ನೇ ಜೀವಾಳ ಮಾಡಿಕೊಳ್ಳುವ ಉತ್ಸಾಹ ತೋರಿದ್ದ ಹೇಮಂತ ಉತ್ಸಾಹದ ಭರಾಟೆಯಲ್ಲೇ ಚಿರವಿದಾಯ ಹೇಳಿದ್ದಾಗಿದೆ. ಕನಸುಗಳ ಬೆನ್ನೇರಿ ಹೊರಡುವ ಯುವಕರಿಗೆ ಹೇಮಂತ್ ಬದುಕು ನೀತಿಪಾಠ ಎಂಬುದೇ ಸದ್ಯದ ನೆನಪಿನಂಗಳ...
ಗಣ್ಯರ ಸಂತಾಪ
ಹೇಮಂತ್ ನಿಧನಕ್ಕೆ ಸ್ಥಳೀಯ ಶಾಸಕ ಟಿ.ವೆಂಕಟರಮಣಯ್ಯ, ಮಾಜಿ ಶಾಸಕ ಜೆ.ನರಸಿಂಹಸ್ವಾಮಿ, ಆರ್.ಜಿ.ವೆಂಕಟಾಚಲಯ್ಯ, ಕನ್ನಡಪರ ಹೋರಾಟಗಾರ ತ.ನ.ಪ್ರಭುದೇವ್, ಜಿಲ್ಲಾ ಕಸಾಪ ಅಧ್ಯಕ್ಷ ಹುಲಿಕಲ್ ನಟರಾಜ್, ಕನ್ನಡ ಪಕ್ಷದ ಅಧ್ಯಕ್ಷ ಸಂಜೀವನಾಯಕ್, ಕಾರ್ಯದರ್ಶಿ ಡಿ.ಪಿ.ಆಂಜನೇಯ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಜಾಗೃತ ಪರಿಷತ್, ಭುವನೇಶ್ವರಿ ಕನ್ನಡ ಸಂಘ, ಶಿವರಾಜ್ಕುಮಾರ್ ಕನ್ನಡ ಸೇನಾ ಸಮಿತಿ, ರಾಶಿರಾಪು ಅಭಿಮಾನಿಗಳ ಬಳಗ, ಪುನಿತ್ ರಾಜ್ಕುಮಾರ್ ಅಭಿಮಾನಿಗಳ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡ ಜಾಗೃತಿ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳು ಸಂತಾಪ ಸೂಚಿಸಿ, ಭಾವಪೂರ್ಣ ಅಶ್ರುತರ್ಪಣ ಸಲ್ಲಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

