ಪ್ರವಾಹ ಸಂತ್ರಸ್ತರಿಗೆ ನಿಧಿ ಸಂಗ್ರಹ
ದೊಡ್ಡಬಳ್ಳಾಪುರ: ಉತ್ತರಭಾರತದಲ್ಲಿ ಪ್ರವಾಹದಿಂದ ತತ್ತರಿಸಿ ಸಂತ್ರಸ್ತರಾಗಿರುವ ಲಕ್ಷಾಂತರ ಜನರಿಗೆ ಪರಿಹಾರ ಒದಗಿಸಲು ನೆರವಾಗುವ ನಿಟ್ಟಿನಲ್ಲಿ ಇಲ್ಲಿನ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಸೋಮವಾರ ಬೆಳಗ್ಗೆ ಪಾದಯಾತ್ರೆ ನಡೆಸಿ ನಿಧಿ ಸಂಗ್ರಹ ಮಾಡಲಾಯಿತು. ಶಾಸಕ ವೆಂಕಟರಮಣಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅಂಗಡಿಗಳು, ಮನೆಗಳಿಗೆ ತೆರಳಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ಮುಖಂಡರು, ಉತ್ತರ ಭಾರತ ಹಿಂದೆಂದೂ ಕಂಡು ಕೇಳರಿಯದ ನೈಸರ್ಗಿಕ ವಿಕೋಪಕ್ಕೆ ತುತ್ತಾಗಿದೆ. ಪರಿಣಾಮವಾಗಿ ಲಕ್ಷಾಂತರ ಜನ ಸಂತ್ರಸ್ತರಾಗಿದ್ದಾರೆ. ಮಾನವೀಯ ದೃಷ್ಟಿಯಿಂದ ನಾವೆಲ್ಲರೂ ಇದು ನಮ್ಮೆಲ್ಲರ ಸಂಕಷ್ಟ ಎಂದೇ ಪರಿಭಾವಿಸಬೇಕು. ಭಾರತೀಯರೆಲ್ಲರೂ ಭಾರತೀಯ ನಾಗರೀಕರ ಸಂಕಷ್ಟಕ್ಕೆ ಸ್ಪಂದಿಸಬೇಕಿದೆ. ಈ ಹಂತದಲ್ಲಿ ಸರ್ಕಾರದೊಟ್ಟಿಗೆ ಸಾರ್ವಜನಿಕರೂ ಕೈಜೋಡಿಸಬೇಕು. ಈ ಹಂತದಲ್ಲಿ ಕಾಂಗ್ರೆಸ್ ರಾಜ್ಯ ಘಟಕದ ನೇತೃತ್ವದಲ್ಲಿ ಪ್ರವಾಹ ಸಂತ್ರಸ್ತರ ಪರಿಹಾರ ನಿಧಿ ಸಂಗ್ರಹಿಸುತ್ತಿದೆ. ಇದಕ್ಕೆ ಎಲ್ಲ ಸಾರ್ವಜನಿಕರ ಸಹಕಾರ ಮುಖ್ಯ ಎಂದರು. ಮಾಜಿ ಶಾಸಕ ಆರ್.ಜಿ.ವೆಂಕಟಾಚಲಯ್ಯ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.
ಹರಿಭಕ್ತಿ ಸಾರ ಕೃತಿ ಕುರಿತ ಕಮ್ಮಟ
ಕನಕಪುರ: ಕರ್ನಾಟಕ ಗಮಕಕಲಾ ಪರಿಷತ್ತು ರಾಮನಗರ ಜಿಲ್ಲಾ ಘಟಕದ ವತಿಯಿಂದ ಆಗಸ್ಟ್ 7 ಮತ್ತು 8 ರಂದು ಹರಿದಾಸ ಸಾಹಿತ್ಯದ ಮೇರುಕೃತಿ ಕನಕದಾಸರ ಹರಿಭಕ್ತಿ ಸಾರ ಕೃತಿ ಕುರಿತ ವಿಚಾರ ಕಮ್ಮಟ ಕನಕಪುರದಲ್ಲಿ ನಡೆಯಲಿದೆ. ಆಸಕ್ತ ವಿದ್ಯಾರ್ಥಿಗಳು,ಗಾಯಕರು ಕಮ್ಮಟದಲ್ಲಿ ಪಾಲ್ಗೊಳ್ಳಲು ಜುಲೈ 25 ರ ಒಳಗಾಗಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕೆಂದು ಜಿಲ್ಲಾಧ್ಯಕ್ಷ ಎಲ್ಲೇಗೌಡ ಬೆಸಗರಹಳ್ಳಿ ಕೋರಿದ್ದಾರೆ. ವಿಚಾರ ಕಮ್ಮಟದ ನೇತೃತ್ವವನ್ನು ಗಮಕಿಗಳು ಹಾಗೂ ವಿದ್ವಾಂಸರಾದ ತೆಕ್ಕೇಕಟ್ಟೆ ಸುಬ್ರಹ್ಮಣ್ಯ ಭಟ್, ಸರಸ್ವತೀ ಭಟ್ ನೀಡಲಿದ್ದಾರೆ. ಮೊ.9986450642 ಸಂಪರ್ಕಿಸಲು ಕೋರಿದೆ.
ಬೋಧಗಯಾ ಸ್ಫೋಟ: ಪ್ರತಿಭಟನೆ
ದೊಡ್ಡಬಳ್ಳಾಪುರ: ಬಿಹಾರದ ವಿಶ್ವಪಾರಂಪರಿಕ ತಾಣವಾಗಿರುವ ಬೋಧಗಯಾದಲ್ಲಿ ನಡೆದಿರುವ ಉಗ್ರಗಾಮಿ ಕೃತ್ಯ, ಸರಣಿ ಬಾಂಬ್ ಸ್ಫೋಟ ಖಂಡಿಸಿ ಇಲ್ಲಿನ ಕರ್ನಾಟಕ ದಸಂಸ ನೇತೃತ್ವದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಮುಂದೆ ಮೇಣದ ಬತ್ತಿ ಹಚ್ಚಿ ಶಾಂತಿಯುತ ಪ್ರತಿಭಟನೆ ನಡೆಸಲಾಯಿತು. ಮುಖಂಡರು ಘಟನೆಗೆ ಕಾರಣವಾದ ಉಗ್ರಗಾಮಿಗಳನ್ನು ಕೂಡಲೇ ಸರ್ಕಾರ ಶಿಕ್ಷಿಸಲು ಕ್ರಮ ಕೈಗೊಳ್ಳಬೇಕು. ವಿಶ್ವಕ್ಕೆ ಶಾಂತಿ ಸಂದೇಶ ನೀಡಿದ ಮಹಾ ಮಾನವತಾವಾದಿ ಬುದ್ಧನ ನೆಲೆಯಲ್ಲಿ ಈ ರೀತಿಯ ರಕ್ತಪಾತದ ಕೃತ್ಯ ನಡೆದಿರುವುದು ಹೇಯ. ಪಾಶವೀಕೃತ್ಯಗಳನ್ನು ಸರ್ಕಾರ ಕೊನೆಗಾಣಿಸಬೇಕು ಎಂದು ಆಗ್ರಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

