ದ್ಯಾವರಸೇಗೌಡನದೊಡ್ಡಿಯಲ್ಲಿ ಡೆಂಘೀ ಭೀತಿ
ಮತ್ತೀಕೆರೆ ಜಯರಾಮ್
ಕ.ಪ್ರ.ವಾರ್ತೆ ಟಿ ರಾಮನಗರ ಟಿ ಜು.11
ಇಲ್ಲಿನ ನಗರಸಭೆಯ 1ನೇ ವಾರ್ಡ್ ವ್ಯಾಪ್ತಿಗೆ ಒಳಪಟ್ಟಿರುವ ದ್ಯಾವರಸೇಗೌಡನದೊಡ್ಡಿಯಲ್ಲಿ ಡೆಂಘೀ ಭೀತಿ ಕಾಡಿದೆ. ಒಂದೇ ಕುಟುಂಬದ ನಾಲ್ವರು ಸಹಿತ 15ಕ್ಕೂ ಹೆಚ್ಚು ಮಂದಿ ಡೆಂಘೀ ಪೀಡಿತರಾಗಿದ್ದು, ಬಡಾವಣೆಯ ಜನತೆಯಲ್ಲಿ ಭೀತಿ ಆವರಿಸಿದೆ.
ಡೆಂಘೀ ಪೀಡಿತರು ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆ, ಕಿಮ್ಸ್ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಡೆಂಘೀ ಜ್ವರಬಾಧೆ ದಿನದಿಂದ ದಿನಕ್ಕೆ ವ್ಯಾಪಿಸುತ್ತಿದೆ. ಜಿಲ್ಲಾಡಳಿತ, ಆರೋಗ್ಯ ಇಲಾಖೆ ಮತ್ತು ನಗರಸಭೆ ಆಡಳಿತ ಬಡಾವಣೆಯತ್ತ ಸುಳಿದೇ ಇಲ್ಲ.
ಏಳೆಂಟು ದಿನಗಳಿಂದ ಈಚೆಗೆ ಇಲ್ಲಿ ಡೆಂಘೀ ಕಾಣಿಸಿಕೊಂಡಿದೆ. ತಲಾ ನಾಲ್ಕು ಮಕ್ಕಳು ಮತ್ತು ಮಹಿಳೆಯರಿಗೂ ಡೆಂಘೀ ಆವರಿಸಿದೆ. ಬಡಾವಣೆ ಸುತ್ತಲ ಪರಿಸರ ಡೆಂಘೀ ಹರಡುವ ಸೊಳ್ಳೆಗಳ ಉತ್ಪಾದನೆಗೆ ಹೇಳಿ ಮಾಡಿಸಿದಂತಿರುವ ಪರಿಣಾಮ ಸಹಜವಾಗಿಯೇ ಜನತೆ ತತ್ತರಗೊಂಡಿದ್ದಾರೆ.
ನಗರಸಭೆ ನಿರ್ಲಕ್ಷ್ಯ: ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಬಳಿಕವೂ ದ್ಯಾವರಸೇಗೌಡನದೊಡ್ಡಿ ಇನ್ನೂ ಕುಗ್ರಾಮದಂತಿದೆ. ಕಾಂಕ್ರೀಟ್ ರಸ್ತೆ ಹೊರತಾದ ಮೂಲ ಸೌಲಭ್ಯಗಳು ಇಲ್ಲಿ ಮರೀಚಿಕೆಯಾಗಿವೆ. ಹೇಳಿ ಕೇಳಿ ಅರ್ಕಾವತಿ ನದಿ ದಡದಲ್ಲಿರುವ ಈ ಬಡಾವಣೆಯ ಸುಧಾರಣೆಯತ್ತ ನಗರಸಭೆ ಗಮನ ಹರಿಸಿಲ್ಲ.
ಬಡಾವಣೆಯಲ್ಲಿ ಎತ್ತ ಕಣ್ಣಾಡಿಸಿದರೂ ಅಶುಚಿತ್ವ, ಅನೈರ್ಮಲ್ಯ ತಾಂಡವವಾಡುತ್ತಿದೆ. ಕಸ, ತ್ಯಾಜ್ಯದಿಂದ ತುಂಬಿಕೊಂಡ ಚರಂಡಿಗಳು ಗಬ್ಬೆದ್ದು ನಾರುತ್ತಿವೆ. ಬಡಾವಣೆಯ ಒಂದು ಪಕ್ಕಕ್ಕೆ ಅರ್ಕಾವತಿ, ಮತ್ತೊಂದು ಬದಿಯಲ್ಲಿ ಮೋರಿ ಹರಿವು ಅಪಾಯ ತಂದೊಡ್ಡಿದೆ.
ಮನವಿಗೆ ಸ್ಪಂದಿಸಿಲ್ಲ: ಡೆಂಘೀ ಬಾಧೆ ಕಾಣಿಸಿಕೊಳ್ಳುವ ಮುಂಚೆಯಿಂದಲೂ ಸ್ಥಳೀಯರು ತಮ್ಮ ಗ್ರಾಮದ ನೈರ್ಮಲ್ಯದ ಬಗ್ಗೆ ಗಮನ ಹರಿಸುವಂತೆ ನಗರಸಭೆ ಅಧಿಕಾರಿಗಳ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ. ಇವರ ಕೂಗಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದ ಸೂಕ್ತ ಸ್ಪಂದನೆ ಸಿಕ್ಕಿಲ್ಲ.
ನಗರಸಭೆ ನಿರ್ಲಕ್ಷ್ಯಕ್ಕೆ ಬೇಸತ್ತ ನಿವಾಸಿಗಳು ತಮ್ಮ ಮನೆಗಳ ಎದುರಿರುವ ಚರಂಡಿ ಶುಚಿಗೊಳಿಸಲು ಸ್ವತಃ ಮುಂದಾಗಿದ್ದಾರೆ. ತುಂಬಿಕೊಂಡಿದ್ದ ತ್ಯಾಜ್ಯ, ಕಸ ಮತ್ತು ಮಣ್ಣು ತೆಗೆದು ಕೊಳಚೆ ನೀರು ಸಲೀಸಾಗಿ ಹರಿದು ಹೋಗುವಂತೆ ಮಾಡಲು ಯತ್ನಿಸಿದ್ದಾರೆ.
ಸಾಗ ಹಾಕುವ ವೈದ್ಯರು: ಚಿಕಿತ್ಸೆಗೆಂದು ಜಿಲ್ಲಾಸ್ಪತ್ರೆ ಮತ್ತು ಸರ್ಕಾರಿ ಆಸ್ಪತ್ರೆಗಳಿಗೆ ತೆರಳುವ ಡೆಂಘೀ ಪೀಡಿತರನ್ನು ವೈದ್ಯರು ಬೆಂಗಳೂರು ಸಹಿತ ವಿವಿಧೆಡೆಯ ಆಸ್ಪತ್ರೆಗಳಿಗೆ ಸಾಗ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ದ್ಯಾವರಸೇಗೌಡನದೊಡ್ಡಿ ಡೆಂಘೀ ಪೀಡಿತರ ಕುಟುಂಬದವರ ಆರೋಪವಾಗಿದೆ.
ಡೆಂಘೀ ನಿಯಂತ್ರಣಕ್ಕೆ ಅರಿವು ಮೂಡಿಸುವ ಮತ್ತು ಆ ನಿಟ್ಟಿನಲ್ಲಿ ತುರ್ತು ಕಾರ್ಯಕ್ರಮ ಹಮ್ಮಿಕೊಳ್ಳುವ ಯಾವೊಂದು ಪ್ರಯತ್ನವೂ ಜಿಲ್ಲಾಡಳಿತದಿಂದ ನಡೆದಿಲ್ಲ. ಬಡಾವಣೆಯಲ್ಲಿ ಆಗುವ ಸಾವು-ನೋವಿಗೆ ಜಿಲ್ಲಾಡಳಿತವೇ ಹೊಣೆಯಾಗಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಲೆಕ್ಕಕ್ಕೆ ಸಿಕ್ಕಿದ್ದು 124 ಮಾತ್ರ
ಮಾರಕ ಡೆಂಘೀಯಿಂದ ರಾಮನಗರ ಜಿಲ್ಲೆ ತತ್ತರಗೊಂಡಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಲೆಕ್ಕಕ್ಕೆ ಸಿಕ್ಕಿರುವ ಡೆಂಘೀ ಪೀಡಿತರ ಸಂಖ್ಯೆ 124 ಮಾತ್ರವೇ. ಆದರೆ, ಲೆಕ್ಕಕ್ಕೆ ಸಿಗದ ಡೆಂಘೀ ಬಾಧಿತರ ಸಂಖ್ಯೆ ದುಪ್ಪಟ್ಟು ಹೆಚ್ಚಿರುವ ಸಾಧ್ಯತೆ ಇದೆ.
ಈಚೆಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ.ಬಸವರಾಜು ಅವರು ಜಿಲ್ಲೆಯಲ್ಲಿ ಹೆಚ್ಚಿರುವ ಡೆಂಘೀ ಪ್ರಕರಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯತ್ತ ಬೊಟ್ಟು ಮಾಡುವ ವ್ಯವಸ್ಥಿತ ಕೆಲಸ ನಡೆದಿದೆ.
ನಮ್ಮ ಸುತ್ತಮುತ್ತಲ ಪರಿಸರವನ್ನು ಶುಚಿಯಾಗಿಟ್ಟುಕೊಂಡಾಗಷ್ಟೇ ಡೆಂಘೀ ನಿಯಂತ್ರಣ ಸಾಧ್ಯ. ಈ ನಿಟ್ಟಿನಲ್ಲಿ ಪಾತ್ರ ವಹಿಸಬೇಕಿರುವುದು ಜಿಲ್ಲಾಡಳಿತ, ಜಿ.ಪಂ. ಸಹಿತ ಸ್ಥಳೀಯ ಸಂಸ್ಥೆಗಳಿಂದಲೇ ಹೊರತು ಆರೋಗ್ಯ ಇಲಾಖೆಯಿಂದಲ್ಲ ಎನ್ನುವುದನ್ನು ಉನ್ನತ ಅಧಿಕಾರಿಗಳು ಮನದಟ್ಟು ಮಾಡಿಕೊಳ್ಳಬೇಕಿದೆ.
ಪ್ರತಿಕ್ರಿಯೆ
124 ಪ್ರಕರಣ ಪತ್ತೆ
ರಾಮನಗರ ಜಿಲ್ಲೆಯಲ್ಲಿ 124 ಮಂದಿಗೆ ಡೆಂಘೀ ಬಾಧಿಸುತ್ತಿರುವುದು ಪತ್ತೆಯಾಗಿದೆ. ಜ್ವರ ಪೀಡಿತರಿಗೆ ಸೂಕ್ತ ವೈದ್ಯಕೀಯ ಸೌಲಭ್ಯ ಕಲ್ಪಿಸಿ, ಅವರ ರಕ್ತ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ಡೆಂಘೀ ನಿಯಂತ್ರಣಕ್ಕೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
- ಡಾ.ರಘುನಾಥ್, ಡಿಎಚ್ಓ, ರಾಮನಗರ
ನಗರಸಭೆಯೇ ಕಾರಣ
1ನೇ ವಾರ್ಡ್ ವ್ಯಾಪ್ತಿಯ ದ್ಯಾವರಸೇಗೌಡನದೊಡ್ಡಿಯಲ್ಲಿ ಡೆಂಘೀ ಪೀಡಿತರ ಸಂಖ್ಯೆ ಹೆಚ್ಚುತ್ತಿದೆ. ಅಲ್ಲಿನ ನೈರ್ಮಲ್ಯದ ಬಗ್ಗೆ ನಗರಸಭೆ ನಿರ್ಲಕ್ಷ್ಯ ವಹಿಸಿದೆ. ಅಧಿಕಾರಿ ಮತ್ತು ಸಿಬ್ಬಂದಿ ಜನ ಹಿತ ಮರೆತಿದ್ದಾರೆ.
- ಸುರೇಶ್, ನಗರಸಭೆ, ಮಾಜಿ ಸದಸ್ಯ
ಎಚ್ಚೆತ್ತುಕೊಳ್ಳದ ಪೌರ ಸಂಸ್ಥೆಗಳು
ಗ್ರಾಮೀಣ ಪ್ರದೇಶಕ್ಕೆ ಹೋಲಿಸಿದರೆ ನಗರ ಮತ್ತು ಪಟ್ಟಣ ಪ್ರದೇಶದಲ್ಲೇ ಅಶುಚಿತ್ವದ ಸಮಸ್ಯೆ ಹೆಚ್ಚಿದೆ. ಸಾಕಷ್ಟು ಬಡಾವಣೆಗಳಲ್ಲಿ ಚರಂಡಿಗಳೇ ಇಲ್ಲ. ರಾಮನಗರ ಮತ್ತು ಚನ್ನಪಟ್ಟಣದ ವಿವಿಧೆಡೆ ರಸ್ತೆಯಲ್ಲೇ ಚರಂಡಿ ನೀರು ಹರಿಯುತ್ತಿದೆ.
ನಗರ, ಪಟ್ಟಣಗಳಲ್ಲಿ ಕಾಟಾಚಾರಕ್ಕೆ ಕಸ ವಿಲೇವಾರಿ ನಡೆಯುತ್ತಿದೆ. ಕಟ್ಟಿಕೊಂಡ ಮೋರಿ, ಚರಂಡಿಗಳನ್ನು ಶುಚಿಗೊಳಿಸುವ ಕೆಲಸದ ಬಗ್ಗೆ ಬೇಜವಬ್ದಾರಿತನ ಪ್ರದರ್ಶಿಸಲಾಗುತ್ತಿದೆ. ಫಾಗಿಂಗ್ ನಡೆಸುವ ಮೂಲಕ ಸೊಳ್ಳೆಗಳ ನಿಯಂತ್ರಣದತ್ತ ಪೌರ ಸಂಸ್ಥೆಗಳು ಮುಂದಾಗಿಲ್ಲ.
ಸಾಕಷ್ಟು ಕಡೆ ಮೋರಿಗಳಲ್ಲಿ ಬೆಳೆದು ನಿಂತಿರುವ ಗಿಡಗಂಟಿಯನ್ನು ತೆರವುಗೊಳಿಸಿಲ್ಲ. ಅಲ್ಲಲ್ಲಿ ಜೆಸಿಬಿಯಿಂದ ತೆಗೆದು ಹಾಕಿದ ತ್ಯಾಜ್ಯವನ್ನು ವಿಲೇವಾರಿ ಮಾಡಿಲ್ಲ. ಕೊಳಚೆ ನೀರನ್ನು ಶುದ್ಧೀಕರಿಸಿ ಹೊರ ಬಿಡದ ಪರಿಣಾಮ ಸಾಂಕ್ರಾಮಿಕ ರೋಗ ಹರಡುವಿಕೆ ಹೆಚ್ಚುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

