ಜಾತಿ, ಭಾಷೆ ಹೆಸರಿನಲ್ಲಿ ಕಚ್ಚಾಟ ಬೇಡ
ಕ.ಪ್ರ.ವಾರ್ತೆ ರಾಮನಗರ ಜು.13
ಜಾತಿ, ಭಾಷೆ ಹೆಸರಿನಲ್ಲಿ ಕಚ್ಚಾಟ ನಡೆಸುವುದನ್ನು ಬಿಟ್ಟು, ದೇಶವನ್ನು ಕಾಡುತ್ತಿರುವ ಬಡತನ, ನಿರುದ್ಯೋಗ ಸಮಸ್ಯೆ ನಿವಾರಣೆಗೆ ಮುಂದಾಗಿ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ದಿನೇಶ್ ಗುಂಡೂರಾವ್ ಜನತೆಗೆ ಕರೆ ನೀಡಿದ್ದಾರೆ.
ನಗರದ ಕೃಷ್ಣಸ್ಮೃತಿ ಕಲ್ಯಾಣ ಮಂದಿರದಲ್ಲಿ ರಾಮನಗರ ರೋಟರಿ ಸಂಸ್ಥೆ ಆಯೋಜಿಸಿದ್ದ 2013-14ನೇ ಸಾಲಿನ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಅಭಿವೃದ್ಧಿಗೆ ಆರೋಗ್ಯ, ಶಿಕ್ಷಣದ ಪ್ರಗತಿ ಮತ್ತು ಮೂಲಭೂತ ಸಮಸ್ಯೆ ನಿವಾರಣೆ ಅತ್ಯಂತ ಪ್ರಮುಖವಾದುದಾಗಿದೆ ಎಂದರು. ಪೊಲಿಯೋ, ಏಡ್ಸ್‌ನಂತಹ ಮಾರಕ ರೋಗಗಳು ನಾಗರಿಕ ಸಮಾಜವನ್ನು ಕಾಡುತ್ತಿವೆ. ಇಂತಹ ಸಮಸ್ಯೆಗಳನ್ನು ತೊಡೆದುಹಾಕಲು ಸಾಮಾಜಿಕ ಕ್ಷೇತ್ರದಲ್ಲಿ ಪರೋಪಕಾರಿ ಮನೋಭಾವದಿಂದ ಮಾತ್ರ ಸಾಧ್ಯ ಎಂದು ಅಭಿಪ್ರಾಯಪಟ್ಟರು. ಸಮೃದ್ಧ ಮತ್ತು ಸದೃಢ ಕರ್ನಾಟಕ ನಿರ್ಮಾಣಕ್ಕೆ ಪ್ರಗತಿಪರ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ. ಸಮಾಜದ ಅಭಿವೃದ್ಧಿಗೆ ಮಾರಕವಾಗಿರುವ ಮೂಢನಂಬಿಕೆಗಳನ್ನು ಮುಗ್ಧ ಜನರ ಮನಸ್ಸಿನಿಂದ ದೂರಸರಿಸಿ, ಅವರಲ್ಲಿ ನೈತಿಕತೆಯ ಅರಿವು ಮೂಡಿಸಬೇಕಾಗಿದೆ ಎಂದರು.
ಕಿವಿಮಾತು: ಬದ್ಧತೆ ಮತ್ತು ಶಿಸ್ತಿಗೆ ಹೆಸರಾಗಿರುವ ರೋಟರಿ ಸಂಸ್ಥೆಯು ಕೈಗೊಂಡಿರುವ ಸಮಾಜ ಸೇವೆಯು ಪ್ರಶಂಸನಾರ್ಹವಾದುದು. ಒದಗಿರುವ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಮತಭೇದ ತೊರೆದು ಎಲ್ಲರನ್ನೂ ಒಟ್ಟಾಗಿ ಸೇರಿಸಿಕೊಂಡು ಹೋಗುವ ವ್ಯಕ್ತಿತ್ವ ಮತ್ತು ನಾಯಕತ್ವ ಬೆಳೆಸಿಕೊಳ್ಳಿ ಎಂದು ನೂತನ ಪದಾಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಪದವಿ ಸ್ವೀಕರಿಸಿದ ಸಂಸ್ಥೆಯ ನೂತನ ಅಧ್ಯಕ್ಷ ಆರ್.ಜಿ. ಚಂದ್ರಶೇಖರ್ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಶಾಲಾ ಮಕ್ಕಳಿಗೆ ಸಮವಸ್ತ್ರ, ಪುಸ್ತಕ ವಿತರಣೆ, ಬಿಸಿಯೂಟ, ವೈದ್ಯರ ಮತ್ತು ಶಿಕ್ಷಕರ ದಿನಾಚರಣೆ, ಕ್ರೀಡಾಕೂಟ, ಆರೋಗ್ಯ ಮತ್ತು ನೇತ್ರ ತಪಾಸಣೆ, ಹಿರಿಯರಿಗೆ ಮಾಸಾಶನ ನೀಡುವಂತಹ ಜನಪ್ರಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಇಂಗಿತ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತ ನೋಟ್ ಪುಸ್ತಕ, ಬ್ಯಾಗ್ ಮತ್ತು ಡಿಕ್ಷನರಿಗಳನ್ನು ವಿತರಿಸಲಾಯಿತು. ಸಂಸ್ಥೆಯ ಡಿಜಿಎನ್ ನಾಗೇಶ್, ಡಾ.ಬಿ.ಡಿ.ಪಟೇಲ್, ನಿಕಟಪೂರ್ವ ಅಧ್ಯಕ್ಷ ಸುರೇಶ್, ಕಾರ್ಯದರ್ಶಿ ಡಿ.ಪುಟ್ಟಸ್ವಾಮಯ್ಯ, ನೂತನ ಕಾರ್ಯದರ್ಶಿ ಎಚ್.ಪಿ. ಮಹಾಲಿಂಗಯ್ಯ, ಆರ್. ಕುಮಾರಸ್ವಾಮಿ, ಎಂ.ಎಚ್.ಚಂದ್ರಶೇಖರ್, ಅಲ್ತಾಫ್ ಅಹಮದ್, ಪಿ.ಉಮೇಶ್, ಸಿದ್ದಪ್ಪಾಜಿ, ರಾಜು, ಸಿದ್ದೋಜಿರಾವ್, ಜಯರಾಂ, ರಾಮಕೃಷ್ಣಯ್ಯ, ಎಂ.ಚಂದ್ರಶೇಖರ್, ದೊಡ್ಡಸಿದ್ದೇಗೌಡ ಮತ್ತಿತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

