ಬೆಂಗಳೂರು ಗ್ರಾಮಾಂತರ

ಜಿ.ಪಂ. ಅಧ್ಯಕ್ಷ ಸ್ಥಾನ: 20ಕ್ಕೆ ಚುನಾವಣೆ ನಿಗದಿ

Published On :

ಕ.ಪ್ರ.ವಾರ್ತೆ  ರಾಮನಗರ  ಜು.13
ತೆರವಾಗಿರುವ ರಾಮನಗರ ಜಿ.ಪಂ. ಅಧ್ಯಕ್ಷ ಸ್ಥಾನಕ್ಕೆ ಜು.20ಕ್ಕೆ ಚುನಾವಣೆ ನಿಗದಿಯಾಗಿದೆ. ಗದ್ದುಗೆಗಾಗಿ ಬದ್ಧ ವೈರಿ ಪಕ್ಷಗಳ ನಡುವೆ ಹೋರಾಟ ತಾರಕಕ್ಕೇರಿದ್ದು, ಅಧಿಕಾರ ಉಳಿಸಿಕೊಳ್ಳಲು ಜೆಡಿಎಸ್ ಸದಸ್ಯರು ಗೋವಾ ಯಾತ್ರೆಗೆ ಹೊರಟಿದ್ದಾರೆ.
ಚುನಾವಣೆ ದಿನಾಂಕ ಪ್ರಕಟವಾಗುತ್ತಿದ್ದಂತೆಯೇ ಜೆಡಿಎಸ್‌ನಲ್ಲಿ ಒಗ್ಗಟ್ಟು ಕಾಯ್ದುಕೊಳ್ಳುವ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ಪಕ್ಷದ 12 ಸದಸ್ಯರ ಪೈಕಿ 8 ಮಂದಿಯ ಮೊದಲ ತಂಡ 3 ದಿನದ ಹಿಂದೆಯೇ ಗೋವಾ ತಲುಪಿದೆ. ನಿನ್ನೆಯಷ್ಟೇ ತಂಡಕ್ಕೆ ಮತ್ತೊಬ್ಬ ಸದಸ್ಯರು ಸೇರ್ಪಡೆಯಾಗಿದ್ದಾರೆ.
ಮತ್ತಿಬ್ಬರು ಸದಸ್ಯರು ಭಾನುವಾರದ ವೇಳೆಗೆ ಯಾತ್ರಾ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಒಮ್ಮೆ ಪಕ್ಷದ ವಿಪ್ ಉಲ್ಲಂಘಿಸಿ, ವರಿಷ್ಠರಿಗೆ ಸಡ್ಡು ಹೊಡೆದಿದ್ದ ಹೊಂಗನೂರು ಕ್ಷೇತ್ರದ ಸದಸ್ಯ ಕ್ಲಬ್ ಒಂದರ ಪ್ಯಾಕೇಜ್ ಯೋಜನೆಯಡಿ ಸದ್ಯ ವಿದೇಶ ಪ್ರವಾಸದಲ್ಲಿದ್ದಾರೆ. ಹಿಂತಿರುಗಿದ ಬಳಿಕ ತಂಡವನ್ನು ಕೂಡಿಕೊಳ್ಳುವರು ಎಂದು ಹೇಳಲಾಗುತ್ತಿದೆ.
ಬಾಲಕೃಷ್ಣಗೆ ಸಾರಥ್ಯ: ಅಧಿಕಾರ ಹಂಚಿಕೆ ಒಡಂಬಡಿಕೆ ಸೂತ್ರದನ್ವಯ ಕೆ.ಮುದ್ದುರಾಜ್ ಯಾದವ್ ಅವರು ಜಿ.ಪಂ. ಅಧ್ಯಕ್ಷ ಹುದ್ದೆ ತ್ಯಜಿಸಿದ್ದಾರೆ. ಜೆಡಿಎಸ್ ಪಕ್ಷದಲ್ಲಿ ಈ ಬಾರಿಯ ಸರದಿ ಕೈಲಾಂಚ ಕ್ಷೇತ್ರದ ಸದಸ್ಯ ಎಚ್.ಸಿ.ರಾಜು ಅವರದ್ದಾಗಿದೆ. ಈ ಪಟ್ಟಾಭಿಷೇಕ ಪ್ರಕ್ರಿಯೆಯನ್ನು ಸುಸೂತ್ರವಾಗಿ ನಡೆಸುವ ಹೊಣೆಯನ್ನು ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರಿಗೆ ಪಕ್ಷದ ವರಿಷ್ಠರು ವಹಿಸಿದ್ದಾರೆ.
ಈ ಬಾರಿ ಚುನಾವಣೆಯಲ್ಲಿ ಜೆಡಿಎಸ್ ಕಾರ್ಯತಂತ್ರವನ್ನು ಬಾಲಕೃಷ್ಣ ಹೆಣೆಯುತ್ತಿದ್ದಾರೆ. ಪಕ್ಷದ ಸದಸ್ಯರ ಗೋವಾ ಯಾತ್ರೆಯ ಯೋಜನೆಯ ರೂವಾರಿಯೂ ಸ್ವತಃ ಬಾಲಕೃಷ್ಣ. ಯಾತ್ರೆಗೆ ತೆರಳಿರುವ ಮತ್ತು ತೆರಳದ ಎಲ್ಲ ಸದಸ್ಯರೊಂದಿಗೆ ಬಾಲಕೃಷ್ಣ ನಿಕಟ ಸಂಪರ್ಕ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಭೀತಿಯಲ್ಲಿ ಜೆಡಿಎಸ್: 22 ಸದಸ್ಯ ಬಲದ ಜಿ.ಪಂ.ನಲ್ಲಿ 12 ಸದಸ್ಯರೊಂದಿಗೆ ಜೆಡಿಎಸ್ ಸ್ಪಷ್ಟ ಬಹುಮತವನ್ನೇನೋ ಹೊಂದಿದೆ. ಆದರೆ, ಕೆಲ ಸದಸ್ಯರು ಪಕ್ಷ ನಿಷ್ಠೆಗಿಂತಲೂ ಸ್ವಾರ್ಥ ಸಾಧನೆಗೆ ಹೊರಟವರು. ಈ ಕಹಿ ಅನುಭವ ಕಣ್ಮುಂದೆ ಇರುವ ಕಾರಣದಿಂದಲೇ ಗೋವಾ ಯಾತ್ರೆಗೆ ವರಿಷ್ಠರು ಹಸಿರು ನಿಶಾನೆ ತೋರಿದ್ದಾರೆ.
ಹೇಳಿ ಕೇಳಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ರಾಮನಗರ ಜಿಲ್ಲೆಯಲ್ಲಿ ಕಾಂಗ್ರೆಸ್ ಹೀನಾಯ ಸ್ಥಿತಿಗೆ ದೂಡಲ್ಪಟ್ಟಿದೆ. ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್ ಮುಖಂಡರು ಜಿ.ಪಂ. ಚುನಾವಣೆಯಲ್ಲಿ ಕೈ ಚಳಕ ತೋರಬಹುದೆನ್ನುವುದೂ ಜೆಡಿಎಸ್ ಸದಸ್ಯರ ಯಾತ್ರೆ ಹಿಂದಿನ ಉದ್ದೇಶವಾಗಿದೆ.
ಟೈ ಮಾಡಲು ಟ್ರೈ: ಕಾಂಗ್ರೆಸ್ 10 ಸದಸ್ಯರನ್ನು ಹೊಂದಿದೆ. ಅಧಿಕಾರ ಕಸಿದುಕೊಳ್ಳಲು ಆ ಪಕ್ಷಕ್ಕೆ ಇನ್ನೆರಡು ಮತಗಳ ಅಗತ್ಯವಿದೆ. ಆಪರೇಷನ್ ಹಸ್ತ ಕಾರ್ಯಾಚರಣೆಗೆ ಯತ್ನ ಹಿಂದೆಯೂ ನಡೆದಿರುವುದು ಗುಟ್ಟಿನ ಸಂಗತಿಯೇನಲ್ಲ. ಈಗಲೂ ಸದ್ದಿಲ್ಲದೆ ಪ್ರಯತ್ನ ಸಾಗಿದೆ.
ಎಲ್ಲಕ್ಕಿಂತ ಮುಖ್ಯವಾಗಿ ಜಿ.ಪಂ. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಲ್ಲಿರುವ ಪ್ರಬಲ ಆಕಾಂಕ್ಷಿ ಇಕ್ಬಾಲ್ ಹುಸೇನ್. ಗಣಿ ಉದ್ಯಮಿಯೂ ಆಗಿರುವ ಅವರಿಗೆ ದುಡ್ಡಿನ ಚಿಂತೆಯಿಲ್ಲ. ಕುದುರೆ ವ್ಯಾಪಾರದಿಂದ ಎದುರಾಳಿ ಪಕ್ಷದ ಒಬ್ಬ ಸದಸ್ಯನನ್ನು ಸೆಳೆದರೂ ಫಲಿತಾಂಶ ಟೈ ಆಗಿಸಿ, ಆಯ್ಕೆಗೆ ಲಾಟರಿ ಮೊರೆ ಹೋಗುವ ಸ್ಥಿತಿ ತಂದೊಡ್ಡಬಹುದು.
ಡಿಕೆಶಿ ಎಫೆಕ್ಟ್: ಕಳೆದ ಎರಡು ಬಾರಿ ನಡೆದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಭಾವಿ ನಾಯಕ ಡಿ.ಕೆ.ಶಿವಕುಮಾರ್ ಮೂಗು ತೂರಿಸಿದ್ದರು. ಶತಾಯ ಗತಾಯ ರಾಮನಗರ ಜಿ.ಪಂ. ಆಡಳಿತವನ್ನು ಕೈವಶ ಮಾಡಿಕೊಳ್ಳಲು ಅವರು ಹೆಣೆದ ರಣತಂತ್ರಗಳೆಲ್ಲಾ ಕೈ ಕೊಟ್ಟಿದ್ದವು. ಈಗ ಸಚಿವ ಸ್ಥಾನ ಸಿಗದೆ ಅಸಮಾಧಾನಿತರಾಗಿರುವ ಅವರ ಹೆಜ್ಜೆ ನಿಗೂಢವಾಗಿದೆ.
ತಮ್ಮನ್ನು ರಾಜಕೀಯವಾಗಿ ಮುಗಿಸುವ ವ್ಯವಸ್ಥಿತ ಷಡ್ಯಂತ್ರ ಕಾಂಗ್ರೆಸ್ ಮುಖಂಡರಿಂದಲೇ ನಡೆಯುತ್ತಿದೆ ಎನ್ನುವ ಕುದಿ ಶಿವಕುಮಾರ್ ಅವರಲ್ಲಿದೆ. ಶಿವಕುಮಾರ್ ಅವರಿಗೆ ಸಚಿವ ಸ್ಥಾನ ತಪ್ಪಿಸಿದ್ದು ಸರಿಯಲ್ಲವೆಂದು ಕುಮಾರಸ್ವಾಮಿ ಕೂಡಾ ಸಾಂತ್ವನದ ಮಾತುಗಳನ್ನಾಡಿದ್ದಾರೆ. ಹೀಗಾಗಿ ಶಿವಕುಮಾರ್ ಅವರ ನಡೆಯತ್ತ ಎಲ್ಲರ ಚಿತ್ತ ನೆಟ್ಟಿದೆ.
ನಮ್ಮಲ್ಲಿ ಒಗ್ಗಟ್ಟಿದೆ
ಜೆಡಿಎಸ್ ಸದಸ್ಯರಲ್ಲಿ ಒಗ್ಗಟ್ಟಿದೆ. ವರಿಷ್ಠರು ಸೂಚಿಸುವ ಅಭ್ಯರ್ಥಿಯ ಗೆಲವು ನಿಶ್ಚಿತ. ಜೆಡಿಎಸ್ ಬಹುತೇಕ ಸದಸ್ಯರು ಪ್ರವಾಸದಲ್ಲಿರುವುದು ನಿಜ. ಉಳಿದವರು ಒಂದೆರಡು ದಿನದಲ್ಲಿ ತಂಡವನ್ನು ಸೇರಲಿದ್ದಾರೆ.
- ರಘುಕುಮಾರ್, ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ
ಡಿಕೆಶಿ ತೀರ್ಮಾನ ಅಂತಿಮ
ಜಿ.ಪಂ. ಅಧ್ಯಕ್ಷ ಸ್ಥಾನದ ಚುನಾವಣೆ ಸಂಬಂಧ ಕಾಂಗ್ರೆಸ್ ಪಕ್ಷವು ಯಾವುದೇ ರಣತಂತ್ರವನ್ನೂ ರೂಪಿಸಿಲ್ಲ. ನಮ್ಮ ನಾಯಕರಾದ ಡಿ.ಕೆ.ಶಿವಕುಮಾರ್ ತೀರ್ಮಾನವೇ ಅಂತಿಮ. ಶೀಘ್ರ ಅವರನ್ನು ಭೇಟಿಯಾಗಿ ಚರ್ಚಿಸಲಾಗುವುದು.
- ಇಕ್ಬಾಲ್ ಹುಸೇನ್, ಜಿ.ಪಂ. ಪ್ರತಿಪಕ್ಷ ನಾಯಕ

ಮತ್ತೀಕೆರೆ ಜಯರಾಮ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.