ಬಿಜೆಪಿ ಯೋಜನೆ ಹತ್ತಿಕ್ಕಲು ಕೈ ಕುತಂತ್ರ
ಕ.ಪ್ರ.ವಾರ್ತೆ ದೊಡ್ಡಬಳ್ಳಾಪುರ ಜು.14
ಬಿಜೆಪಿಗೆ ಕರ್ನಾಟಕದಲ್ಲಿ ಇದು ಸಂಘರ್ಷದ ಕಾಲ. ಗ್ರಾಮ ಮಟ್ಟದಿಂದ ರಾಷ್ಟ್ರಮಟ್ಟದವರೆಗೆ ಪಕ್ಷವನ್ನು ಸುಸಜ್ಜಿತವಾಗಿ ಸಂಘಟಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ಬಿಜೆಪಿ ಹಿರಿಯ ಮುಖಂಡ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅಭಿಪ್ರಾಯಪಟ್ಟರು.
ಇಲ್ಲಿನ ಬೆಂ.ಗ್ರಾ.ಜಿಲ್ಲಾ ಬಿಜೆಪಿ ಕಚೇರಿ ಕಟ್ಟಡ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಭಾನುವಾರ ಬೆಳಗ್ಗೆ ನಡೆದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷರ ಘೋಷಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇಡೀ ರಾಷ್ಟ್ರ ನರೇಂದ್ರಮೋದಿ ಅವರ ಸದೃಢ ನಾಯಕತ್ವಕ್ಕಾಗಿ ಕಾತರಗೊಂಡಿದೆ. ವಾಜಪೇಯಿ ನಂತರ ದೇಶದ ಪ್ರತಿ ವರ್ಗವೂ ಇಷ್ಟಪಡುವ ಸಾಮಾಜಿಕ ನಾಯಕನಾಗಿ ನರೇಂದ್ರಮೋದಿ ವರ್ಚಸ್ಸು ಬೆಳೆದಿದೆ. ಇದು ಬಿಜೆಪಿಯ ಭವಿಷ್ಯ ಮತ್ತು ಈ ದೇಶದ ಅಭಿವೃದ್ಧಿಯ ಹಿತಾಸಕ್ತಿಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಮಾತನಾಡಿ, ಬಿಜೆಪಿ ವಿಶೇಷತೆ ಇರುವ ಪಕ್ಷ. ಬಿಜೆಪಿ ಹೊರತು ಇತರ ಯಾವ ರಾಜಕೀಯ ಪಕ್ಷಗಳಲ್ಲೂ ಪ್ರಜಾಪ್ರಭುತ್ವ ಇಲ್ಲ. ಗೌಡ-ಗಾಂಧಿ ನಮಗೆ ಮುಖ್ಯ ಅಲ್ಲ. ನಿಸ್ವಾರ್ಥ ಮತ್ತು ನಿಷ್ಠ ಕಾರ್ಯಕರ್ತನಿಗೆ ಸದಾ ಗೌರವಾದರ ಇದ್ದೇ ಇದೆ. ಹೀಗಾಗಿ ಇದು ಒಂದು ಕುಟುಂಬದ ಅಥವಾ ಒಂದು ವರ್ಗದ ಪಕ್ಷವಾಗಿಲ್ಲ. ಕಾರ್ಯಕರ್ತರ ಆಶೋತ್ತರಗಳಿಗೆ ಮಾನ್ಯತೆ ಕೊಡುವ ಪಕ್ಷವಾಗಿದೆ ಎಂದರು.
ಅಧಿಕಾರಕ್ಕಿಂತ ಜವಾಬ್ದಾರಿ ಮುಖ್ಯ: ಪರಿಶ್ರಮದ ಮನಸ್ಸು ಮತ್ತು ಸರ್ವಸಾಮಾನ್ಯರೊಂದಿಗೆ ಬೆರೆಯುವ ಒಡನಾಟ ಇದ್ದರೆ ಪಕ್ಷದಲ್ಲಿ ಯಾವ ಹಂತಕ್ಕೆ ಬೇಕಾದರೂ ಬೆಳೆಯಬಹುದು. ಜವಾಬ್ದಾರಿಯಿಂದ ಅಧಿಕಾರದ ಕಡೆ ಜಾರಿರುವ ವಿಧಾನಸೌಧ ಜನವಿರೋಧಿಯಾಗಿದೆ. ಜನಪ್ರತಿನಿಧಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕೇ ಹೊರತು ಅಧಿಕಾರಸ್ಥ ಮನೋಭಾವದಿಂದ ಅಲ್ಲ ಎಂದರು.
ಗ್ಲಾಮರಸ್ ಪ್ರಚಾರ ಇಲ್ಲ: ನಮ್ಮಲ್ಲಿ ಈಗ ಗ್ಲಾಮರಸ್ ಆದ, ರಂಗು-ರಂಗಾದ ಚಟುವಟಿಕೆಗಳಿಲ್ಲ. ಬದಲಿಗೆ ತಳಮಟ್ಟದಿಂದ ಪಕ್ಷವನ್ನು ಸಂಘಟಿಸುವ ಕೆಲಸಗಳು ನಡೆಯುತ್ತಿವೆ. 11700 ವಿವಿಧ ಸಮಿತಿಗಳಲ್ಲಿ 9600ಕ್ಕೂ ಹೆಚ್ಚು ಸ್ಥಾನಿಕ ಸಮಿತಿಗಳು ಪಕ್ಷದಲ್ಲಿರುವುದು ಇದಕ್ಕೆ ಸಾಕ್ಷಿ. ಇಡೀ ರಾಜ್ಯದಲ್ಲಿ ಮೊದಲ ಜಿಲ್ಲಾಧ್ಯಕ್ಷರ ಘೋಷಣೆ ದೊಡ್ಡಬಳ್ಳಾಪುರದಲ್ಲಿ ನಡೆಯುತ್ತಿದೆ ಎಂದರು.
ಕಾಂಗ್ರೆಸ್ ಕುತಂತ್ರ: ತಾಲೂಕುಗಳ ರಚನೆ ವಿಚಾರದಲ್ಲಿ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ ಹೊಸ ತಾಲೂಕುಗಳ ರಚನೆ ಬಿಜೆಪಿಯ ಉದ್ಧಾರಕ್ಕೆ ಅಲ್ಲ ಎಂಬ ಸತ್ಯವನ್ನು ಮನಗಾಣಬೇಕು. 43 ತಾಲೂಕುಗಳು ರಚನೆಯಾದ್ರೆ ಶೆಟ್ಟರ್ಗೆ ಹೆಸರು ಬರುತ್ತೆ ಎಂಬ ಕುತಂತ್ರದಿಂದ ಅದನ್ನು ತಡೆ ಹಿಡಿದಿದ್ದಾರೆ. ಬಿಜೆಪಿ ಸರ್ಕಾರದ ಒಳ್ಳೆಯ ಕೆಲಸಗಳನ್ನು ಹತ್ತಿಕ್ಕುವ ವ್ಯವಸ್ಥಿತ ಕೆಲಸವನ್ನು ಸಿದ್ಧರಾಮಯ್ಯ ಸರ್ಕಾರ ಮಾಡುತ್ತಿದೆ ಎಂದು ಟೀಕಿಸಿದರು.
ಅಧಿಕಾರ ಸ್ವೀಕಾರ: ಇದೇ ಸಂದರ್ಭದಲ್ಲಿ ಬೆಂ.ಗ್ರಾ.ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷರಾಗಿ ಬಿ.ಸಿ.ನಾರಾಯಣಸ್ವಾಮಿ ಅಧಿಕಾರ ಸ್ವೀಕರಿಸಿದರು. ಇವರೊಟ್ಟಿಗೆ ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷರಾಗಿ ಅಶ್ವತ್ಥನಾರಾಯಣಗೌಡ,ನಗರ ಘಟಕದ ಅಧ್ಯಕ್ಷರಾಗಿ ಎಚ್.ಎಸ್.ಶಿವಶಂಕರ್, ನೆಲಮಂಗಲ ತಾಲೂಕು ಅಧ್ಯಕ್ಷರಾಗಿ ಜಗದೀಶಪ್ರಸಾದ್, ದೇವನಹಳ್ಳಿ ತಾ.ಅಧ್ಯಕ್ಷರಾಗಿ ರಾಜಗೋಪಾಲ್, ಹೊಸಕೋಟೆ ತಾ.ಅಧ್ಯಕ್ಷರಾಗಿ ಮುನಿಯಪ್ಪ ಅಧಿಕಾರ ಸ್ವೀಕರಿಸಿದರು. ಬಿಜೆಪಿ ರಾಜ್ಯ ಕಾರ್ಯದರ್ಶಿ ರವಿ, ರೇಷ್ಮೆ ಮಾರಾಟ ಮಂಡಲಿ ಮಾಜಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ, ಬೆಂ.ಗ್ರಾ.ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಎಂ.ನಾರಾಯಣಸ್ವಾಮಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಪುಷ್ಪಾಶಿವಶಂಕರ್ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

