ಬೆಂಗಳೂರು ಗ್ರಾಮಾಂತರ

ಬುದ್ಧನ ನಾಡಿನಲ್ಲಿ ಅಶಾಂತಿ: ಸಿದ್ದಲಿಂಗಯ್ಯ ವಿಷಾದ

Published On :

ಕ.ಪ್ರ.ವಾರ್ತೆ   ಚನ್ನಪಟ್ಟಣ   ಜು. 15
ಬುದ್ಧನ  ನಾಡಿನಲ್ಲಿ ಆಶಾಂತಿ ತಾಂಡವವಾಡುತ್ತಿರುವುದು ಮಾನವ ಲೋಕದ ಮಹಾದುರಂತ ಎಂದು ನಾಡೋಜ ಡಾ. ಸಿದ್ಧಲಿಂಗಯ್ಯ ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ಪ್ರೇರಣಾ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್‌ವತಿಯಿಂದ ಹಮ್ಮಿಕೊಂಡಿದ್ದ  ದೇವರಹೊಸಹಳ್ಳಿ ಸುರೇಶಗೌತಮ್‌ರ ಮಾತು ಕೊಂದ ಭಾರತ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, ಬಿಹಾರದ ಬುದ್ಧಗಯಾದ ಬಾಂಬ್ ಸ್ಫೋಟ ಪ್ರಕರಣ ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತ ಹೇಯಕೃತ್ಯ ಎಂದರು.
ಸಮಾಜ ಕೇಂದ್ರಿತ ಸಾಹಿತ್ಯ ಹೊರಬರಲಿ: ಹೊಸತಲೆ ಮಾರಿನ ಯುವ ಲೇಖಕರು ಸಮಾಜ ಕೇಂದ್ರಿತ ಸಾಹಿತ್ಯ ಕೃಷಿ ಮಾಡುತ್ತಿರುವುದು  ಉತ್ತಮ ಬೆಳವಣಿಗೆಯಾಗಿದ್ದು, ಸಾಮಾಜಿಕ ನ್ಯಾಯದ ತಳಹದಿಯ ಮೇಲೆ ಸಮಾಜ ಕಟ್ಟಲು ಸಹಕಾರಿಯಾಗುತ್ತದೆ ಇಂತಹ ಸಾಹಿತ್ಯಗಳು ಹೆಚ್ಚಿನ ಸಂಖ್ಯೆಯಲ್ಲಿ ಹೊರ ಬರಬೇಕೆಂದು ಅಭಿಪ್ರಾಯಪಟ್ಟರು.  
ದಲಿತರಲ್ಲಿ ಹಾಗೂ ಶೋಷಿತ ಸಮುದಾಯದಲ್ಲಿ  ಪ್ರತಿಭೆಗಳಿಗೆ ಕೊರತೆಯಿಲ್ಲ ಎಂಬುದು ಶತಶತಮಾನಗಳಿಂದ ನಿರೂಪಿತವಾಗುತ್ತಲೇ ಬಂದಿದೆ. ಮೇಲ್ವರ್ಗದವರ ಪೂಜನೀಯ ಗ್ರಂಥಗಳಾದ ರಾಮಾಯಣ, ಮಹಾಭಾರತದ ಕಥೆಗಳು ಶೋಷಿತ ಸಮುದಾಯವರೇ, ದೇಶಕ್ಕೆ ಮಾದರಿ  ಸಂವಿಧಾನ ರಚನೆ ಮಾಡಿದ್ದು ಡಾ.ಅಂಬೇಡ್ಕರ್ ಎಂದು ಮೆಲುಕು ಹಾಕಿದರು.
ಸುರೇಶಗೌತಮ್ ಅವರು ರಚಿಸಿರುವ ಮಾತು ಕೊಂದ ಭಾರತದಲ್ಲಿ ಜಾನಪದದ ಧೋರಣೆಗೆ ಕನ್ನಡಿ ಹಿಡಿಯಲಾಗಿದೆ ಹಾಗೂ ಕೆಳಸ್ತರದ ಶೋಷಿತ ಸಮುದಾಯದ ಹಿಂದಿನ ನೋವು, ನಲಿವುಗಳ ತೊಳಲಾಟವಿದೆ. ಅದಲ್ಲದೆ ಸಂವಿಧಾನದ ಆಶೋತ್ತರಗಳ ಮಿಳಿತವಿದೆ. ಇಂತಹ ಕಾವ್ಯಗಳು ಮತ್ತಷ್ಟು ಬರಲಿ ಎಂದು ಆಶಿಸಿದರು. ಹಿರಿಯ ಸಾಹಿತಿ ಡಾ. ಚಂದ್ರಶೇಖರ್ ಪಾಟೀಲ್ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ಸಾಮಾಜಿಕ ಪರಿಕಲ್ಪನೆಯ ಆಧಾರದಲ್ಲಿ ರಚಿತವಾದ ಜೀವಂತ ನಿಧಿ ಸಂವಿಧಾನವನ್ನು ತಿದ್ದುಪಡಿ ಮಾಡುವ ಮೂಲಕ ಮೂಲ ಆಶಯವನ್ನು ಮರೆ ಮಾಚುವ ಕೆಲಸ ಮಾಡಲಾಗುತ್ತಿದೆ. ಇದು ನಾಚಿಕೇಗೆಡಿನ ಸಂಗತಿ. ಕೆಲವು ಪಟ್ಟ ಭದ್ರ ಹಿತಾಸಕ್ತಿಗಳು ಮೀಸಲಾತಿಯನ್ನು ವಿರೋಧ ಮಾಡುತ್ತಿರುವುದು ಸರಿಯಲ್ಲ ಎಂದು ಪ್ರತಿಪಾದಿಸಿದರು.  ದಲಿತರು ದಲಿತರಿಂದಲೆ ಶೋಷಿತರಾಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಜಾತಿಯ ಹೆಸರನ್ನು ಹೇಳಿಕೊಳ್ಳುವುದಕ್ಕೇ ಹಿಂಜರಿಯುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ರಾಜಕೀಯ ವ್ಯಕ್ತಿಗಳು ದಲಿತರನ್ನು ವಿಭಜಿಸಿ ಅವರನ್ನು ಎಡಗೈ ಮತ್ತು ಬಲಗೈ ಎಂದು ಕರೆಯುವ ಮೂಲಕ ಅವರಲ್ಲಿ ವಿಷ ಬೀಜ ಬಿತ್ತುತ್ತಿದ್ದಾರೆ. ಈ ಬಗ್ಗೆ ಯುವಕರು ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದರು. ಅಧ್ಯಕ್ಷತೆ ವಹಿಸಿದ್ದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ ಸಾಹಿತ್ಯದಲ್ಲಿ ಎರಡು ಬಗೆಗಳಿವೆ. ಪುಸ್ತಕ ಮುಟ್ಟಿ ಕೈತೊಳೆದುಕೊಳ್ಳುವುದು ಒಂದು ಬಗೆಯಾದರೆ, ಪುಸ್ತಕ ಮುಟ್ಟದೆ ಕೈತೊಳೆದುಕೊಳ್ಳುವುದು ಇನ್ನೊಂದು ಬಗೆ ಎಂದು ಮಾರ್ಮಿಕವಾಗಿ ನುಡಿದರು. ಅಲ್ಲದೆ ಸಾಹಿತ್ಯದಲ್ಲಿಯೂ ಕಲುಷಿತ ವಾತಾವರಣವಿದೆ ಎಂದು ವಿಷಾದಿಸಿದರು.  ಡಾ.ಅಪ್ಪಗೆರೆ ಸೋಮಶೇಖರ್ ಪುಸ್ತಕ ಕುರಿತು ಮಾತನಾಡಿದರು. ಪ್ರೊ. ಮಾಯೀಗೇಗೌಡ, ಲೇಖಕ ಸುರೇಶ್ ಗೌತಮ್, ಬೇವೂರು ರಾಮಯ್ಯ, ಉಪನ್ಯಾಸಕ ಬಿ.ಪಿ. ಸುರೇಶ್, ಆನಂದ್.ವಿ, ಅಕ್ಕೂರು ಶೇಖರ್,ಪಿ.ಜೆ.ಗೋವಿಂದರಾಜು, ಹನುಮಂತಯ್ಯ, ಮಹೇಶ್ ಮೌರ್ಯ, ಶಶಿಕುಮಾರ್, ವೆಂಕಟಚಲಯ್ಯ ಉಪಸ್ಥಿತರಿದ್ದರು. ಗೀತಗಾಯನವನ್ನು ಬ್ಯಾಡರಹಳ್ಳಿ ಶಿವಕುಮಾರ್ ಮತ್ತು ಎಚ್.ಎಸ್. ಸರ್ವೋತ್ತಮ್, ಅಪ್ಪಗೆರೆ ಸತೀಶ್, ಚಂದ್ರು ಸಾಕ್ಯವಂಶಿ, ನಗೆಮಳೆರಾಜ ಚಂದ್ರಾಜು, ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.