ಬೆಂಗಳೂರು ಗ್ರಾಮಾಂತರ

ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರವಾಗಲಿ

Published On :

ಟಿ ಕೆ.ಆರ್.ರವಿಕಿರಣ್
ಕ.ಪ್ರ.ವಾರ್ತೆ   ದೊಡ್ಡಬಳ್ಳಾಪುರ   ಜು. 18
ದೊಡ್ಡಬಳ್ಳಾಪುರ ನಗರವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೇಂದ್ರವನ್ನಾಗಿ ಘೋಷಿಸಬೇಕು ಎಂಬ 7 ವರ್ಷದ ಬೇಡಿಕೆಗೆ ಕೇವಲ ಭರವಸೆಗಳ ಉತ್ತರವನ್ನೆ ಕೊಡುತ್ತಿರುವ ರಾಜಕಾರಣಿಗಳು ಮತ್ತು ಸರ್ಕಾರಗಳ ವಿರುದ್ಧ ಜನ ಅಕ್ಷರಶಃ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನ್ಯಾಯಯುತ ಬೇಡಿಕೆಗೆ ಸೊಪ್ಪು ಹಾಕದ ಸರ್ಕಾರಗಳ ವಿರುದ್ಧ ವ್ಯಾಪಕ ಹೋರಾಟ ನಡೆಸುವ ಎಚ್ಚರಿಕೆ ರವಾನಿಸಿದ್ದಾರೆ.
2008ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ವಿಭಜಿಸಿ ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಾಗಿ ವಿಂಗಡಣೆ ಮಾಡಿದ ನಂತರ ರಾಮನಗರವನ್ನು ಜಿಲ್ಲಾ ಕೇಂದ್ರವನ್ನಾಗಿಸಲಾಯಿತು. ಆದರೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಕೇಂದ್ರವನ್ನು ಬೆಂಗಳೂರು ನಗರದಲ್ಲೆ ಉಳಿಸಿಕೊಳ್ಳಲಾಗಿತ್ತು. ಆಗಿನ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಕೈಗೊಂಡ ಅವೈಜ್ಞಾನಿಕ ನಿರ್ಧಾರದಿಂದಾಗಿ ಬೆಂಗಳೂರು ಗ್ರಾಮಾಂತರ ಮತ್ತೆ ಎಡಬಿಡಂಗಿ ಜಿಲ್ಲೆಯಾಗಿ ಉಳಿದುಕೊಳ್ಳಬೇಕಾಯಿತು. ಕಾರಣ ಜಿಲ್ಲಾ ಪ್ರದೇಶದ ವ್ಯಾಪ್ತಿಯ ಹೊರಗೆ ಜಿಲ್ಲಾ ಕೇಂದ್ರ ಹೊಂದಿರುವ ಏಕೈಕ ನತದೃಷ್ಟ ಜಿಲ್ಲೆ ಬೆಂಗಳೂರು ಗ್ರಾಮಾಂತರ.
ನ್ಯಾಯಯುತವಾಗಿ ದೊಡ್ಡಬಳ್ಳಾಪುರವನ್ನು ಜಿಲ್ಲೆಯ ಕೇಂದ್ರವನ್ನಾಗಿ ಘೋಷಣೆ ಮಾಡಬೇಕಿತ್ತು. ಕಾರಣ ಅವಿಭಜಿತ ಜಿಲ್ಲೆಯಲ್ಲಿದ್ದದ್ದು ಕೇವಲ 2 ಉಪವಿಭಾಗ ಕೇಂದ್ರಗಳು ಮಾತ್ರ. ಅದರಲ್ಲಿ ರಾಮನಗರ ಈಗ ಜಿಲ್ಲೆಯಾಗಿದೆ. ಆದರೆ, ದೊಡ್ಡಬಳ್ಳಾಪುರ ಈಗಲೂ ಉಪವಿಭಾಗ ಕೇಂದ್ರವಾಗಿದೆ. ಉಪವಿಭಾಗದ ಕೇಂದ್ರ ಕಚೇರಿ ಕೂಡ ಬೆಂಗಳೂರು ನಗರದಲ್ಲಿರುವುದು ದುರ್ದೈವ ಮತ್ತು ಸರ್ಕಾರದ ಅವೈಜ್ಞಾನಿಕ ಕುರುಡು ನೀತಿಯ ಕನ್ನಡಿ.
ಭರವಸೆಗಳೇ ಜೀವಾಳ: ಈ ಬಗ್ಗೆ 2008ರಲ್ಲೇ ಹೋರಾಟ ಆರಂಭವಾದವು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ, ಡಿ.ವಿ. ಸದಾನಂದಗೌಡ, ಜಗದೀಶ್ ಶೆಟ್ಟರ್ ಸೇರಿದಂತೆ ಘಟಾನುಘಟಿ ನಾಯಕರೆಲ್ಲಾ ಜಿಲ್ಲಾ ಕೇಂದ್ರವಾಗಿ ದೊಡ್ಡಬಳ್ಳಾಪುರವನ್ನು ಘೋಷಣೆ ಮಾಡುವ ಭರವಸೆಗಳಲ್ಲೇ ಕೈ ತೊಳೆದು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಂಡರು. ಯಡಿಯೂರಪ್ಪ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲೇ ಜಿಲ್ಲಾ ಕೇಂದ್ರ ಘೋಷಿಸುವ ಹೇಳಿಕೆಯನ್ನೂ ನೀಡಿದ್ದರು. ಕುಮಾರಸ್ವಾಮಿ ಅಧಿಕಾರಕ್ಕೆ ಬಂದರೆ ಜಿಲ್ಲೆ ಘೋಷಣೆ ಮಾಡಿಯೇ ತೀರುವುದಾಗಿ ಹೇಳಿದ್ದರು. ಈ ವಿಚಾರದಲ್ಲಿ ಯಾರೂ ಕೊಟ್ಟ ಮಾತು ಉಳಿಸಿಕೊಂಡಿಲ್ಲ.
ಜಿಲ್ಲೆಯಾಗಬೇಕು: ದೊಡ್ಡಬಳ್ಳಾಪುರ ನಗರ ಜಿಲ್ಲಾ ಕೇಂದ್ರವಾಗಬೇಕು. ಕಾರಣ ಇಡೀ ಗ್ರಾಮಾಂತರ ಜಿಲ್ಲೆಯಲ್ಲಿ ಪ್ರಸ್ತುತ ಉಪವಿಭಾಗ ಕೇಂದ್ರ ಇದೊಂದೆ. 50- 60ರ ದಶಕದಲ್ಲೇ ಉಪವಿಭಾಗವಾಗಿ ಅಸ್ತಿತ್ವಕ್ಕೆ ಬಂದ ಇತಿಹಾಸ ಹೊಂದಿದೆ. ಅಲ್ಲದೆ, ವಿಸ್ತೀರ್ಣ ಮತ್ತು ಜನಸಂಖ್ಯೆಯಲ್ಲೂ ದೊಡ್ಡ ತಾಲೂಕಾಗಿ ಗುರುತಿಸಿಕೊಂಡಿದೆ. ಜೊತೆಗೆ ಡಿವೈಎಸ್ಪಿ ಕಚೇರಿ, ಕೃಷಿ ಉತ್ಪನ್ನ ಮಾರುಕಟ್ಟೆ ಕೇಂದ್ರ ಸ್ಥಾನ, ಕಂದಾಯ ಉಪವಿಭಾಗ, ಜಿಲ್ಲಾ ಸೆಷನ್ ಕೋರ್ಟ್, ಅಪರ ಸಿವಿಲ್ ನ್ಯಾಯಾಲಯ ಸೇರಿದಂತೆ ಅನೇಕ ಸರ್ಕಾರಿ ಇಲಾಖೆಗಳು ಕಾರ್ಯನಿರ್ವಹಿಸುತ್ತಿರುವುದು ಇಲ್ಲೆ. ಅಲ್ಲದೆ, ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಬ್ರಾಡ್ಗೇಜ್ ರೈಲು ಮಾರ್ಗ ಹೊಂದಿರುವ ಏಕೈಕ ತಾಲೂಕು ಇದು. ಅಲ್ಲದೆ, ಜಿಲ್ಲೆಯ ನೆಲಮಂಗಲ, ಹೊಸಕೋಟೆ ಈಗಾಗಲೇ ಬೆಂಗಳೂರು ನಗರದೊಂದಿಗೆ ಸೇರಿಕೊಂಡು ಬೆಳೆಯುತ್ತಿವೆ. ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾದ ಮೇಲೆ ಬೆಂಗಳೂರಿನ ಅಂಗವೇ ಆಗಿದೆ.
ಹೀಗಾಗಿ ದೊಡ್ಡಬಳ್ಳಾಪುರ ಮಾತ್ರ ಬೆಂಗಳೂರಿನ ನಗರೀಕರಣ ಸಂಸ್ಕೃತಿಯಿಂದ ಸ್ಪಲ್ಪ ಮಟ್ಟಿಗೆ ಹೊರಗಿದ್ದು, ಗ್ರಾಮೀಣ ಸೊಗಡನ್ನೂ ಉಳಿಸಿಕೊಂಡಿದೆ. ಹೀಗಾಗಿ ಜಿಲ್ಲಾ ಕೇಂದ್ರವಾಗಲು ಸೂಕ್ತ. ಅಲ್ಲದೆ, ಜಿಲ್ಲೆಯ 4 ತಾಲೂಕುಗಳ ಪೈಕಿ ಕೇಂದ್ರ ಸ್ಥಾನದಲ್ಲಿರುವ ದೊಡ್ಡಬಳ್ಳಾಪುರ ನೆಲಮಂಗಲದಿಂದ 28, ದೇವನಹಳ್ಳಿಯಿಂದ 20, ಹೊಸಕೋಟೆಯಿಂದ 50 ಕಿಮೀ ದೂರದಲ್ಲಿದೆ. ಜಿಲ್ಲೆಯ ಜನ ತಮ್ಮ ಕೆಲಸ ಕಾರ್ಯಗಳಿಗೆ ಬೆಂಗಳೂರಿನ ಟ್ರಾಫಿಕ್ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲೂ ಸಾಧ್ಯವಾಗುತ್ತದೆ. ಕೈಗಾರಿಕಾ ಪ್ರದೇಶ ಕೂಡ ಉತ್ತಮವಾಗಿ ನೆಲೆಯೂರಿರುವುದರಿಂದ ಉದ್ಯೋಗಾವಕಾಶಗಳ ಸೃಷ್ಟಿ ಕೂಡ ದೊಡ್ಡ ಸವಾಲೇನಲ್ಲ. ಹೀಗಾಗಿ ಕೂಡಲೇ ಸರ್ಕಾರ ದೊಡ್ಡಬಳ್ಳಾಪುರವನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.