ಮೈಗಳ್ಳ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ
ಕ.ಪ್ರ.ವಾರ್ತೆ ಮಾಗಡಿ ಜು. 18
ಗ್ರಾಮ ಪಂಚಾಯಿತಿಗಳು ಸಕಾಲದಲ್ಲಿಯೇ ಅರ್ಜಿ ಸ್ವೀಕಾರ, ತಿಂಗಳಿಗೆ ಕನಿಷ್ಠ 100 ಅರ್ಜಿಗಳನ್ನು ಸ್ವೀಕಾರ ಕಡ್ಡಾಯ, ಅನ್ಲೈನ್ ಇಲ್ಲ, ಸಿಗ್ನಲ್ ಇಲ್ಲ ಎಂದು ಕಾಗೆ, ಗೂಬೆ ಕಥೆ ಹೇಳಬಾರದು ಆದೇಶ ಉಲ್ಲಂಘನೆ ಮಾಡಿದರೆ ಅಮಾನತುಗೊಳಿಸುವ ಮೂಲಕ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ಪಂಚಾಯಿತಿ ಪಿಡಿಒಗಳಿಗೆ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಎಚ್ಚರಿಕೆ ನೀಡಿದರು.
ಮಾಗಡಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಪಿಡಿಒಗಳ ಸಭೆಯಲ್ಲಿ ಮಾತನಾಡಿ, ತಾಲೂಕಿನ 32 ಪಂಚಾಯಿತಿಗಳಿಂದ 5 ಕೋಟಿ ತೆರಿಗೆ ಬಾಕಿಯಿದೆ. ಬಾಕಿ ಉಳಿಸಿಕೊಂಡರೆ ಪಂಚಾಯಿತಿ ಅಭಿವೃದ್ಧಿ ಹೇಗೆ ಸಾಧ್ಯ, ಪಂಚಾಯಿತಿಗಳ ಪಿಡಿಒಗಳು ತಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆ, ನಿವೇಶನ, ನೀರಿನ ತೆರಿಗೆಯನ್ನು ಕಡ್ಡಾಯವಾಗಿ ವಸೂಲಾತಿ ಮಾಡಬೇಕು. ಸುಮಾರು ಕನಿಷ್ಠ 5 ಲಕ್ಷ ತೆರಿಗೆ ವಸೂಲಾತಿ ಮಾಡಬೇಕು. ಈಗ ರೇಷನ್ ಕಾರ್ಡ್ ಮಾಡಿಸಲು ಜನರೇ ಪಂಚಾಯಿತಿಗೆ ಬರುತ್ತಿದ್ದಾರೆ. ಅವರಿಗೆ ತಮ್ಮ ಸ್ವತ್ತಿನ ಬಾಕಿ ತೆರಿಗೆ ಪಾವತಿಸುವಂತೆ ಮನವರಿಕೆ ಮಾಡಿ, ತೆರಿಗೆ ಕಟ್ಟದಿದ್ದರೆ ಸ್ವತ್ತನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳುತ್ತದೆ ಎಂದು ಕಾನೂನು ಅರಿವು ಮೂಡಿಸುವ ಮೂಲಕ ತೆರಿಗೆ ಕಟ್ಟಿಸಲು ಜಾಗೃತರಾಗಬೇಕು. ಬೇರೆ ದೇಶದಲ್ಲಿ ಜನತೆ ತೆರಿಗೆಯನ್ನು ಅಭಿಮಾನದಿಂದ ಕಟ್ಟುತ್ತಾರೆ. ಇದನ್ನು ನಮ್ಮ ಜನತೆಯೂ ಬೆಳೆಸಿಕೊಳ್ಳಲು ಮನವರಿಕೆ ಮಾಡಿ, ತೆರಿಗೆ ವಸೂಲಾತಿ ಹಣದಿಂದಲೇ ಗ್ರಾಮ ನೈರ್ಮಲ್ಯ ಕಾಪಾಡಲು ಅನುಕೂಲವಾಗುತ್ತದೆ. ಅನುಪಯುಕ್ತ ಕೊಳವೆ ಬಾವಿಗಳಲ್ಲಿನ ಮೋಟರ್ ಪಂಪ್ ತೆಗೆಸಿ ಉಪಯುಕ್ತ ಕೊಳವೆ ಬಾವಿಗಳಿಗೆ ಬಳಕೆ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ವಿದ್ಯುತ್ ಸಂಪರ್ಕ ವರ್ಗಾಯಿಸಬೇಕು. ಸುಮ್ಮನೆ ವಿದ್ಯುತ್ ಪಾವತಿ ಬೇಡ. ಫಾರಂ 9 ಮತ್ತು 11 ಅನ್ನು ಕೈಬರಹದಲ್ಲಿ ನೀಡಬೇಡಿ, ಅನ್ಲೈನ್ ಮೂಲಕವೇ ನೀಡಬೇಕು. ಕೈಬರಹ ನೀಡಿದರೆ ಅಂಥವರ ವಿರುದ್ಧ ಕ್ರಮಿನಿಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಪಿಡಿಒಗಳಿಗೆ ಡಾ.ವೆಂಕಟೇಶ್ ಎಚ್ಚರಿಸಿದರು. ಜಿಲ್ಲಾ ಉಪಕಾರ್ಯದರ್ಶಿ ಸಿದ್ದರಾಮಯ್ಯ, ತಾಪಂ ಇಒ ಕೆ.ಬಿ. ಅಕ್ಕೋಜಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಗು ಎಲ್ಲಾ ಗ್ರಾಮ ಪಂಚಾಯಿತಿಗಳ ಪಿಡಿಒಗಳು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

