ಅಲ್ಪಾವಧಿ ಅಧಿಕಾರಕ್ಕೆ ನಿರಾಸಕ್ತಿ!
ಮತ್ತೀಕೆರೆ ಜಯರಾಮ್/ಕೆ.ಎನ್.ರವಿ
ರಾಮನಗರ/ಮಂಡ್ಯ, ಜು.20
ಲೋಕಸಭೆಗೆ ಸಾರ್ವತ್ರಿಕ ಚುನಾವಣೆಯನ್ನು ಎದುರು ನೋಡುತ್ತಿರುವ ರಾಜಕೀಯ ಪಕ್ಷಗಳು ಆ ನಿಟ್ಟಿನಲ್ಲಿ ಸಜ್ಜಾಗುತ್ತಿವೆ. ಈ ಹಂತದಲ್ಲಿ ತೆರವಾಗಿರುವ ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಕ್ಷೇತ್ರಕ್ಕೆ ಯಾರಿಗೂ ಬೇಡವಾದ ಮರು ಚುನಾವಣೆ ಘೋಷಣೆಯಾಗಿದೆ.
ಎಚ್.ಡಿ.ಕುಮಾರಸ್ವಾಮಿ ಮತ್ತು ಎನ್.ಚಲುವರಾಯಸ್ವಾಮಿ ಅವರಿಬ್ಬರೂ ವಿಧಾನಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ರಾಜಿನಾಮೆ ಸಲ್ಲಿಸಿರುವ ಕಾರಣಕ್ಕೆ ಕ್ರಮವಾಗಿ ಬೆಂಗಳೂರು ಗ್ರಾಮಾಂತರ, ಮಂಡ್ಯ ಕ್ಷೇತ್ರಕ್ಕೆ ಮರು ಚುನಾವಣೆ ಎದುರಾಗಿದೆ. ಅನಿರೀಕ್ಷಿತ ಚುನಾವಣೆ ಬಗ್ಗೆ ರಾಜಕೀಯ ಪಕ್ಷಗಳಲ್ಲಿ ನಿರಾಸಕ್ತಿ ಎದ್ದು ಕಾಣುತ್ತಿದೆ.
ಆಡಳಿತಾರೂಢ ಕಾಂಗ್ರೆಸ್, ಕಳೆದ ಬಾರಿ ಉಭಯ ಕ್ಷೇತ್ರಗಳನ್ನು ತೆಕ್ಕೆಗೆ ಹಾಕಿಕೊಂಡಿದ್ದ ಜೆಡಿಎಸ್ ಸಹಿತ ಯಾವ ಪಕ್ಷಗಳೂ ಅಲ್ಪಾವಧಿಗೆ ಚುನಾವಣೆ ನಡೆಯುವುದನ್ನು ನಿರೀಕ್ಷಿಸಿರಲಿಲ್ಲ. ಚುನಾವಣಾ ಆಯೋಗ ಮರು ಚುನಾವಣೆ ಘೋಷಣೆ ಮೂಲಕ ರಾಜಕೀಯ ಪಕ್ಷಗಳಿಗೆ ನಿಜಕ್ಕೂ ಶಾಕ್ ನೀಡಿದೆ.
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರಕ್ಕೂ ಸಾರ್ವತ್ರಿಕ ಚುನಾವಣೆಗೆ ಹೋಗುವ ಇರಾದೆ ಇದೆ. ಪ್ರತಿಪಕ್ಷ ಬಿಜೆಪಿ ಈಗಾಗಲೇ ತಂಡ ಕಟ್ಟಿಕೊಂಡು ಸಜ್ಜಾಗಿದೆ. ಪ್ರಾದೇಶಿಕ ಪಕ್ಷಗಳು ತೃತೀಯ ರಂಗ ರಚನೆಯನ್ನು ಜಪಿಸುತ್ತಿವೆ. ಈ ಹಂತದಲ್ಲಿ ಮರು ಚುನಾವಣೆ ಘೋಷಣೆ ವಿಪರ್ಯಾಸದ ಸಂಗತಿಯಾಗಿದೆ.
ಆರು ಜಿಲ್ಲೆ ವ್ಯಾಪ್ತಿ: ಕ್ಷೇತ್ರಗಳು ಎರಡೇ ಆದರೂ ಆರು ಜಿಲ್ಲೆಗಳಲ್ಲಿ ವ್ಯಾಪಿಸಿವೆ. ಮಂಡ್ಯ ಕ್ಷೇತ್ರಕ್ಕೆ ಆ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಜತೆಗೆ ಮೈಸೂರಿನ ಕೆ.ಆರ್.ನಗರವೂ ಸೇರಿದೆ. ವಿಸ್ತಾರದಲ್ಲಿ ಕಡಿಮೆಯಿದ್ದರೂ ಬೆಂಗಳೂರು ಗ್ರಾಮಾಂತರ ಕ್ಷೇತ್ರವು 4 ಜಿಲ್ಲೆಗಳಲ್ಲಿ ವ್ಯಾಪಿಸಿದೆ.
ರಾಮನಗರ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳ ಜತೆಗೆ ಬೆಂಗಳೂರು ನಗರದ ರಾಜರಾಜೇಶ್ವರಿ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ಹಾಗೂ ತುಮಕೂರು ಜಿಲ್ಲೆಯ ಕುಣಿಗಲ್ ವಿಧಾನಸಭಾ ಕ್ಷೇತ್ರಗಳು ಬೆಂಗಳೂರು ಗ್ರಾಮಾಂತರಕ್ಕೆ ಸೇರಿವೆ.
ಈ ಅನವಶ್ಯಕ ಮರು ಚುನಾವಣೆ ಕಾರಣದಿಂದ 6 ಜಿಲ್ಲೆಗಳ 16 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದೆ. ಇಲ್ಲಿನ ಅಭಿವೃದ್ಧಿ ಕೆಲಸಗಳು, ಸರ್ಕಾರದ ಯೋಜನೆಗಳ ಅನುಷ್ಠಾನಕ್ಕೂ ಕಲ್ಲು ಹಾಕಿದಂತಾಗಿದೆ. ಸರ್ಕಾರದ ಬೊಕ್ಕಸಕ್ಕೂ ಚುನಾವಣೆ ಹೊರೆಯೇ ಸರಿ.
ತೀರಾ ಕಡಿಮೆ ಅವಧಿ: ಲೋಕಸಭೆಗೆ ಕಳೆದ ಸಾರ್ವತ್ರಿಕ ಚುನಾವಣೆ 2009ರ ಏಪ್ರಿಲ್ನಲ್ಲಿ ನಡೆದಿತ್ತು. ಸರ್ಕಾರ ಅವಧಿ ಪೂರೈಸುತ್ತದೆ ಎಂದಾದರೂ ಉಭಯ ಕ್ಷೇತ್ರಗಳಿಂದ ಆಯ್ಕೆಯಾಗುವ ಸಂಸದರ ಅವಧಿ ಗರಿಷ್ಠ ಏಳೆಂಟು ತಿಂಗಳಷ್ಟೇ. ಆಸುಪಾಸಿನ ಈ ಕ್ಷೇತ್ರಗಳ ಚುನಾವಣೆ ತುಂಬಾ ದುಬಾರಿಯೂ ಹೌದು.
ಇಷ್ಟಲ್ಲದೆ, ಇವೆರಡೂ ಜಿದ್ದಾಜಿದ್ದಿನ ಕ್ಷೇತ್ರಗಳು. ವಿಧಾನಸಭೆ ಚುನಾವಣೆಯ ಪರಾಜಿತರೂ ಸಹಿತ ಹಲವರಿಗೆ ಸಂಸದರಾಗುವ ಹಂಬಲವೇನೋ ಇದೆ. ಆದರೆ, ಅವರೆಲ್ಲರ ಚಿತ್ತ ಲೋಕಸಭೆಯ ಸಾರ್ವತ್ರಿಕ ಚುನಾವಣೆಯತ್ತ ನೆಟ್ಟಿದೆಯೇ ಹೊರತು ಈಗ ಎದುರಾಗಿರುವ ಮರು ಚುನಾವಣೆ ಮೇಲಲ್ಲ.
ಹೇಗೂ ಈ ಅವಧಿಯಲ್ಲಿ ಇರುವುದು ಹೆಚ್ಚೆಂದರೆ ಏಳೆಂಟು ತಿಂಗಳ ಅವಧಿ ಮಾತ್ರ. ಇಷ್ಟು ಕನಿಷ್ಠ ಅವಧಿಗೆ ಸಂಸದ ಎನಿಸಿಕೊಳ್ಳಲು ಭಾರಿ ಬಂಡವಾಳ ಹೂಡಿ ಹೋರಾಟ ನಡೆಸುವುದಾದರೂ ಯಾವ ಪುರುಷಾರ್ಥಕ್ಕೆ ಎನ್ನುವ ಭಾವನೆ ಸಂಸದರಾಗಬೇಕೆನ್ನುವ ನಾಯಕರಲ್ಲಿ ಸಹಜವಾಗಿಯೇ ಮೂಡಿದೆ.
ಹಾಗೊಮ್ಮೆ ಚುನಾವಣೆ ನಡೆಯುವುದೇ ಆದರೆ ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ತಲೆ ಕೊಡುವವರು ಯಾರು ಎನ್ನುವುದು ಕುತೂಹಲ ಕೆರಳಿಸಿದೆ. ಮರು ಚುನಾವಣೆ ಎದುರಿಸಿದವರಿಗೇ ಸಾರ್ವತ್ರಿಕ ಚುನಾವಣೆ ಟಿಕೆಟ್ ಎಂದು ಪಕ್ಷಗಳು ಘೋಷಿಸಿದಾಗಷ್ಟೇ ಕೆಲವರು ಧೈರ್ಯ ತೋರಬಹುದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

