ಬೆಂಗಳೂರು ಗ್ರಾಮಾಂತರ

ಜಿಲ್ಲಾ ಕೇಂದ್ರಕ್ಕಾಗಿ ಮತ್ತೆ ಹೋರಾಟ

Published On :

ಕೆ.ಆರ್.ರವಿಕಿರಣ್
ಕನ್ನಡಪ್ರಭ ವಾರ್ತೆ, ದೊಡ್ಡಬಳ್ಳಾಪುರ, ಜು.20
ನಗರವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೇಂದ್ರವಾಗಿ ಘೋಷಿಸಬೇಕು ಎಂಬ ಬೇಡಿಕೆ ಈಗ ಮತ್ತೆ ಗಂಭೀರ ಹೋರಾಟದ ಸ್ವರೂಪ ಪಡೆದುಕೊಳ್ಳುತ್ತಿದೆ. ಶನಿವಾರ ಸಂಜೆ ವಕೀಲರ ಸಂಘದ ನೇತೃತ್ವದಲ್ಲಿ ತಾಲೂಕು ವಿವಿಧ ಸಂಘಟನೆಗಳ ಮಹತ್ವದ ಸಭೆ ದೊಡ್ಡಬಳ್ಳಾಪುರ ನ್ಯಾಯಾಲಯ ಆವರಣದಲ್ಲಿರುವ ವಕೀಲರ ಸಂಘದ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕ್ಷೇತ್ರದ ಶಾಸಕ ಟಿ.ವೆಂಕಟರಮಣಯ್ಯ, ಜಿಲ್ಲಾ ಕೇಂದ್ರದ ವಿಚಾರದಲ್ಲಿ ಯಾವುದೇ ತ್ಯಾಗಕ್ಕೂ ಸಿದ್ಧ. ಈ ಹಂತದಲ್ಲಿ ಸರ್ಕಾರದ ಮೇಲೆ ಒತ್ತಡ ಹೇರುವ ಮೂಲಕ ನಮ್ಮ ನ್ಯಾಯಯುತ ಬೇಡಿಕೆ ಈಡೇರಿಸಲು ಒತ್ತಾಯ ಮಾಡಲಾಗುವುದು. ಸಮನ್ವಯ ಸಮಿತಿ ರಚಿಸಿಕೊಂಡು, ದೊಡ್ಡಬಳ್ಳಾಪುರವನ್ನು ಯಾವ ಕಾರಣಕ್ಕಾಗಿ ಜಿಲ್ಲಾ ಕೇಂದ್ರವಾಗಿ ಘೋಷಿಸಬೇಕು ಎಂಬ ಬಗ್ಗೆ ಸರ್ಕಾರಕ್ಕೆ ಮನದಟ್ಟು ಮಾಡುವ ಮತ್ತು ಈ ಹಂತದಲ್ಲಿ ಸಂಘಟನೆಗಳು ರೂಪಿಸುವ ಚಳವಳಿ ಮತ್ತು ನ್ಯಾಯಯುತ ಹೋರಾಟಗಳಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ಮಾತನಾಡಿದ ವಿವಿಧ ಸಂಘಟನೆಗಳ ಮುಖಂಡರು, ಜಿಲ್ಲಾ ಕೇಂದ್ರದ ಬೇಡಿಕೆ ಇಂದು- ನಿನ್ನೆಯದಲ್ಲ. ವಾಸ್ತವವಾಗಿ 2008ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ವಿಭಜನೆ ಮಾಡಿದಾಗಲೇ ರಾಮನಗರದ ಜೊತೆಗೆ ದೊಡ್ಡಬಳ್ಳಾಪುರವನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸಬೇಕಿತ್ತು. ಆದರೆ, ಅಂದಿನ ಸರ್ಕಾರ ತೋರಿದ ನಿರ್ಲಕ್ಷ್ಯದಿಂದಾಗಿ ಬೆಂ.ಗ್ರಾ. ಜಿಲ್ಲೆ ಅನಾಥ ಸ್ಥಿತಿಯಲ್ಲಿ ಉಳಿಯಬೇಕಾಯಿತು. ಇಡೀ ರಾಜ್ಯದಲ್ಲಿ ಜಿಲ್ಲಾ ವ್ಯಾಪ್ತಿಯ ಹೊರಗೆ ಕೇಂದ್ರ ಸ್ಥಾನ ಇರುವ ನತದೃಷ್ಟ ಜಿಲ್ಲೆ ಇದೊಂದೆ. 5 ದಶಕಗಳ ಹಿಂದೆಯೇ ಉಪವಿಭಾಗ ಕೇಂದ್ರವಾಗಿ ರೂಪಾಂತರ ಹೊಂದಿರುವ ಮತ್ತು ಈ ಭಾಗದ ಸಮಸ್ತ ಆರ್ಥಿಕತೆ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಬದುಕನ್ನು ಪ್ರಭಾವಿಸಿರುವ ಕೇಂದ್ರ ಸ್ಥಳವಾಗಿ ದೊಡ್ಡಬಳ್ಳಾಪುರ ಬೆಳೆದಿದೆ. ಹೀಗಾಗಿ ಇಲ್ಲಿನ ಜನರ ಬೇಡಿಕೆಗೆ ಸೂಕ್ತವಾಗಿ ಸರ್ಕಾರ ಸ್ಪಂದಿಸಬೇಕಿತ್ತು. ಆದರೆ, ರಾಜಕೀಯ ಪಕ್ಷಗಳ ಇಚ್ಛಾಶಕ್ತಿ ಕೊರತೆ ಇದಕ್ಕೆ ಕಾರಣ ಎಂದರು.
ಹುನ್ನಾರಕ್ಕೆ ಅವಕಾಶ ಬೇಡ: ಜಿಲ್ಲಾ ಕೇಂದ್ರದ ವಿಚಾರದಲ್ಲಿ ನೆರೆಯ ತಾಲೂಕುಗಳೊಂದಿಗೆ ಯಾವುದೇ ಭಿನ್ನಾಭಿಪ್ರಾಯಕ್ಕೂ ಆಸ್ಪದ ನೀಡಬಾರದು. ಎಲ್ಲರನ್ನೂ ಒಟ್ಟುಗೂಡಿಸಿಕೊಂಡು, ವಿಶ್ವಾಸಯುತವಾಗಿ ಯೋಜನೆ ರೂಪಿಸಬೇಕು. ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರವಾದರೆ ಇರುವ ಸಾಧಕ- ಬಾಧಕಗಳ ಸಂಪೂರ್ಣ ಅಂಕಿ- ಅಂಶ ಪ್ರಕಟಿಸುವ ಮೂಲಕ ಸಾಮಾಜಿಕ ಜಾಗೃತಿ ಮೂಡಿಸಬೇಕಿದೆ ಎಂದರು.
ಉಪವಿಭಾಗ ಕಚೇರಿ ಬರಲಿ: ದೊಡ್ಡಬಳ್ಳಾಪುರಕ್ಕೆ ಸರ್ಕಾರ ಎಲ್ಲ ಹಂತಗಳಲ್ಲಿ ವಂಚಿಸಿದೆ. ಉಪವಿಭಾಗ ಕೇಂದ್ರ ದೊಡ್ಡಬಳ್ಳಾಪುರ ಆಗಿದ್ದರೂ ಅದರ ಕಚೇರಿ ಈಗಲೂ ಬೆಂಗಳೂರಿನಲ್ಲೇ ಕಾರ್ಯನಿರ್ವಹಿಸುತ್ತಿದೆ. ಜನಸಂಖ್ಯೆ, ವಿರ್ಸ್ತೀರ್ಣ, ಸಂಪರ್ಕ, ಶಿಕ್ಷಣ, ಕೈಗಾರಿಕೆ, ಉದ್ಯೋಗಾವಕಾಶ, ಕಂದಾಯ ಸಂಗ್ರಹ ಸೇರಿದಂತೆ ಎಲ್ಲ ಹಂತಗಳಲ್ಲಿ ಇತರ ತಾಲೂಕುಗಳಿಗಿಂತ ಸಾಕಷ್ಟು ಮುಂದಿರುವ ತಾಲೂಕು ಇದು. ಜೊತೆಗೆ ದೇವನಹಳ್ಳಿ, ನೆಲಮಂಗಲ, ಹೊಸಕೋಟೆ ತಾಲೂಕುಗಳು ಈಗಾಗಲೇ ಬೆಂಗಳೂರಿನ ಬೆಳವಣಿಗೆಯ ಜೊತೆಗೆ ಗುರುತಿಸಿಕೊಂಡು ಬೆಳೆಯುತ್ತಿವೆ. ಗ್ರಾಮೀಣ ಸೊಗಡನ್ನು ಉಳಿಸಿಕೊಂಡು, ಬೆಂಗಳೂರಿನ ಗಾಳಿಗೆ ಸಿಲುಕದೇ ಉಳಿದಿರುವ ದೊಡ್ಡಬಳ್ಳಾಪುರ ನಗರ ಮಾತ್ರ ಜಿಲ್ಲಾ ಕೇಂದ್ರವಾಗುವ ಅರ್ಹತೆ ಹೊಂದಿದೆ ಎಂದರು.
ಯಾವುದೇ ಹೋರಾಟಕ್ಕೆ ಸಿದ್ಧ: ಜಿಲ್ಲಾ ಕೇಂದ್ರದ ವಿಚಾರದಲ್ಲಿ ಯಾವುದೇ ಸ್ವರೂಪದ ಹೋರಾಟಕ್ಕೆ ತಾವು ಸಿದ್ಧ. ಬೀದಿ ಹೋರಾಟಗಳಿಂದಲೇ ಕಾರ್ಯಸಾಧನೆಯಾಗಬೇಕು ಎಂದರೆ ಅದಕ್ಕೂ ಬದ್ಧ. ಆದರೆ, ಸರ್ಕಾರ ಇದಾವುದಕ್ಕೂ ಅವಕಾಶ ಮಾಡಿಕೊಡದೆ ಶೀಘ್ರವೇ ಇಲ್ಲಿನ ಜನರ ಬಹುದಿನದ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.
ಮತ್ತೆ ಸಭೆ: ಸಂಘಟನೆಗಳ ಪದಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ಹೋರಾಟ ಸಮಿತಿ ಬೃಹತ್ತಾಗಿ ಸಂಘಟಿಸಿ ನಿರಂತರ ಹೋರಾಟಕ್ಕೆ ಧುಮುಕುವ ವಿಚಾರದಲ್ಲಿ ಮತ್ತೆ ಬುಧವಾರ ಸಂಜೆ ಸಭೆ ಸೇರಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಸ್ಥಳೀಯ ಶಾಸಕರು, ಸಂಸದರು, ಜನಪ್ರತಿನಿಧಿಗಳು, ಸಂಘಟನೆಗಳು, ಎಲ್ಲ ಹಂತದ ಸಾರ್ವಜನಿಕರೂ ಹೋರಾಟಕ್ಕೆ ಬದ್ಧವಾಗಿದ್ದಾರೆ ಎಂದು ವಿವರಿಸಿದರು.
ಸಭೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ಜನಾರ್ದನ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಮುಖಂಡ ಕೆ.ಎಂ. ಹನುಮಂತರಾಯಪ್ಪ, ದಯಾನಂದ್ ಸೇರಿದಂತೆ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ, ರೈತಶಕ್ತಿ, ಕರ್ನಾಟಕ ರಕ್ಷಣಾ ವೇದಿಕೆ, ವಿದ್ಯುತ್ ಗುತ್ತಿಗೆದಾರರು, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಜಾಗೃತ ಪರಿಷತ್ತು, ಕರ್ನಾಟಕ ದಲಿತ ಸಂಘರ್ಷ ಸಮಿತಿ, ಗಾಯತ್ರಿ ನೇಕಾರರ ಸಂಘಷ ದೊಡ್ಡಬಳ್ಳಾಪುರ ಅಭಿವೃದ್ಧಿ ಸಮಿತಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಜಿಲ್ಲಾ ಮತ್ತು ತಾಲೂಕು ಸಂಘಗಳು, ಕನ್ನಡ ಜಾಗೃತಿ ವೇದಿಕೆ ಮತ್ತಿತರ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.


ಇವರೇನಂತಾರೆ?
ದೊಡ್ಡಬಳ್ಳಾಪುರವೇ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೇಂದ್ರವಾಗಬೇಕು. ಈ ಹಂತದಲ್ಲಿ ಯಾವ ಬಗೆಯ ಹೋರಾಟಕ್ಕೂ ನಾವು ಸಿದ್ಧ. ಸರ್ಕಾರದ ಮೇಲೆ ಒತ್ತಡ ಹೇರುವ ಮತ್ತು ಬಹುದಿನದ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನ ಮಾಡಲಾಗುವುದು.
ಟಿ ಟಿ.ವೆಂಕಟರಮಣಯ್ಯ, ಶಾಸಕರು, ದೊಡ್ಡಬಳ್ಳಾಪುರ

ದೊಡ್ಡಬಳ್ಳಾಪುರ ಈ ಹಿಂದೆಯೇ ಜಿಲ್ಲಾ ಕೇಂದ್ರವಾಗಬೇಕಿತ್ತು. ಆಗ ಆರಂಭವಾಗಿದ್ದ ಹೋರಾಟ ಕೆಲವು ಕಾರಣಗಳಿಂದ ಗಂಭೀರ ಸ್ವರೂಪ ಪಡೆದುಕೊಳ್ಳದಿರುವುದೇ ಬೇಡಿಕೆ ಈಡೇರದಿರಲು ಕಾರಣ. ಇದರ ಲಾಭ ಪಡೆಯಲು ಹವಣಿಸುವ ಹುನ್ನಾರಗಳು ಸರಿಯಲ್ಲ.
ಟಿ ಕೆ.ಎಂ.ಹನುಮಂತರಾಯಪ್ಪ, ಬಿಜೆಪಿ ಹಿರಿಯ ಮುಖಂಡರು

ಸರ್ಕಾರದ ದ್ವಂದ್ವ ನಿಲುವು ಮತ್ತು ಸ್ಥಳೀಯ ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ದೊಡ್ಡಬಳ್ಳಾಪುರ ಶಾಪಗ್ರಸ್ತವಾಗಿದೆ. ಅವಕಾಶಗಳನ್ನು ಕಸಿದುಕೊಳ್ಳುವ ಪ್ರಯತ್ನಗಳು ನಿರಂತರವಾಗಿರುವಾಗ ನ್ಯಾಯಬದ್ಧವಾಗಿ ಪಡೆದುಕೊಳ್ಳಬೇಕಾದ್ದನ್ನು ನಾವು ಪಡೆಯಲೇ ಬೇಕು.
ಟಿ ಡಾ.ಸಿ.ಎಸ್. ಶ್ರೀನಿವಾಸ್, ಜಿಲ್ಲಾ ಮುಖಂಡರು, ರೈತ ಸಂಘ

ಇಂದು-ನಿನ್ನೆಯ ಬೇಡಿಕೆಗಳಿಗೆ ಮಾನ್ಯತೆ ನೀಡುವ ಮೊದಲು ಹೋರಾಟದ ಇತಿಹಾಸ ಗಮನಿಸಬೇಕು. ಜೊತೆಗೆ ಯಾವುದೇ ಸವಲತ್ತು ನೀಡುವ ಮುನ್ನ ಅದರ ನೈಜ ಪರಿಣಾಮ ಮತ್ತು ಉಪಯೋಗ ಕುರಿತು ಯೋಚಿಸಬೇಕು. ಜಿಲ್ಲೆ ಘೋಷಣೆ ಮಾಡುವಾಗ 1 ತಾಲೂಕಿನ ಹಿತಾಸಕ್ತಿ ಮುಖ್ಯವಾಗುವುದಿಲ್ಲ.
 ಟಿ ಬಿ.ಎಸ್.ಚಂದ್ರಶೇಖರ್, ಅಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ

ಇತಿಹಾಸ, ಪರಂಪರೆ, ಭೌಗೋಳಿಕ ಅಂಶಗಳು, ಪ್ರಸ್ತುತ ಬೆಳವಣಿಗೆ ಅಂಕಿ- ಅಂಶಗಳು, ಸಾಮಾಜಿಕ-ಶೈಕ್ಷಣಿಕ ಬೆಳವಣಿಗೆಗಳ ವೇಗ ದೊಡ್ಡಬಳ್ಳಾಪುರವನ್ನು ಜಿಲ್ಲಾ ಕೇಂದ್ರ ಎಂದು ಈಗಾಗಲೇ ವಾಸ್ತವದಲ್ಲಿ ಪ್ರತಿನಿಧಿಸುತ್ತಿವೆ. ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡಬೇಕಷ್ಟೇ.
ಟಿ ತೂಬಗೆರೆ ಷರೀಫ್, ಅಧ್ಯಕ್ಷರು, ಮಹ್ಮದೀಯರ ಕನ್ನಡ ಸಂಘ

ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರವಾಗಿ ಘೋಷಣೆಗೆ ಸರ್ಕಾರ ಕೂಡಲೇ ಮುಂದಾಗಬೇಕು. ವಕೀಲರ ಸಂಘ ಈ ನಿಟ್ಟಿನಲ್ಲಿ ಕಾನೂನು ಹೋರಾಟಕ್ಕೂ ಸಜ್ಜುಗೊಳ್ಳಲಿದೆ. ದೊಡ್ಡಬಳ್ಳಾಪುರಕ್ಕೆ ಸಿಗಬೇಕಾದ ಹಲವು ಸವಲತ್ತುಗಳನ್ನು ಈಗಾಗಲೇ ವಂಚಿಸಲಾಗಿದೆ.
 ಟಿ ಜನಾರ್ದನ್, ಅಧ್ಯಕ್ಷರು, ವಕೀಲರ ಸಂಘ

ಜಿಲ್ಲಾ ಕೇಂದ್ರ ಘೋಷಣೆಗೆ ಸರ್ಕಾರ ಮುಂದಾಗದಿದ್ದರೆ ಬೀದಿ ಹೋರಾಟ ಅನಿವಾರ್ಯವಾದೀತು. ವಸ್ತುಸ್ಥಿತಿ ಗಮನಿಸಿ ಸಲ್ಲಬೇಕಾದ ಮಾನ್ಯತೆ ನೀಡಿ ಎಂದಷ್ಟೇ ನಮ್ಮ ಒತ್ತಾಯ.
ಟಿ ಡಿ.ವಿ.ಅಶ್ವತ್ಥಪ್ಪ, ಹೋರಾಟಗಾರರು.

ಹೋರಾಟಗಳಿಂದಲೇ ಎಲ್ಲವನ್ನು ಪಡೆಯಬೇಕಾದ ದುರ್ದೈವ ಒದಗಿರುವುದು ದುರಂತ. ಒಂದು ಪ್ರದೇಶದ ಬೇಕು-ಬೇಡಗಳ ಕುರಿತು ಚಿಂತಿಸುವ ಕನಿಷ್ಠ ಹೊಣೆಗಾರಿಕೆಯನ್ನೂ ಪ್ರದರ್ಶಿಸದ ಸರ್ಕಾರಗಳ ದ್ವಂದ್ವ ನೀತಿ ಖಂಡನೀಯ.
ಟಿ ಹೊನ್ನಾಘಟ್ಟ ಮಹೇಶ್, ಅಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಶಕ್ತಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.