ತೂಬಗೆರೆಯಲ್ಲಿ ಮೈನವಿರೇಳಿಸಿದ ಭೂತನೆರಿಗೆ
ಕೆ.ಆರ್.ರವಿಕಿರಣ್
ದೊಡ್ಡಬಳ್ಳಾಪುರ: ಇದೊಂದು ಜಾನಪದ ಆಚರಣೆ. ಭೂತಾವೇಶಕ್ಕೊಳಗಾಗುವ ಇಬ್ಬರು ಇಲ್ಲಿ ಸಾಕ್ಷಾತ್ ದೇವರಾಗುತ್ತಾರೆ. ಜನರ ಭಯ- ಭಕ್ತಿಗಳ ಅಭಿವ್ಯಕ್ತಿಗೆ ಅದೇ ಮೂಲ. ನಂತರ ಆಹಾರ ಬೇಟೆಗಾಗಿ ದಿಕ್ಕೆಟ್ಟು ಓಡುವ ಭೂತಾರಾಧಕರನ್ನು ತಡೆದು ಸಮಾಧಾನಗೊಳಿಸಲು ಅಂತಿಂಥವರ ಕೈಯಲ್ಲಿ ಸಾಧ್ಯವಿಲ್ಲ. ಬಲಾಢ್ಯರೇ ಆಗಬೇಕು. ಹೀಗೆ ಭೂತದಂತೆ ಮೆಲ್ಲುತ್ತಾ ಆರ್ಭಟಿಸುತ್ತಾ ಸಾಗುವ ಅವರ ಹಿಂದೆ ಸಾವಿರಾರು ಜನ ಉಘೇ..ಉಘೇ... ಎಂದು ಓಡುತ್ತಾರೆ. ಹೀಗೆ ಊರಲ್ಲೆಲ್ಲಾ ಸಡಗರ-ಸಂಭ್ರಮ ಮನೆ ಮಾಡಿರುತ್ತದೆ.
- ಇದು ದೊಡ್ಡಬಳ್ಳಾಪುರ ತಾಲೂಕು ತೂಬಗೆರೆಯಲ್ಲಿ ಶನಿವಾರ ಪ್ರತಿವರ್ಷದಂತೆ ಆಶಾಢ ಏಕಾದಶಿಯ ಅಂಗವಾಗಿ ನಡೆದ ಭೂತನೆರಿಗೆ ಹಬ್ಬ(ಪಾರಂಪರಿಕ ಜನಪದ ಆಚರಣೆ)ಯಲ್ಲಿ ಕಂಡು ಬಂದ ದೃಶ್ಯ.
ಸ್ಥಳೀಯ ಐತಿಹ್ಯಗಳ ಪ್ರಕಾರ ಈ ಬಗೆಯ ಆಚರಣೆ ಆರಂಭವಾಗಿ ಸುಮಾರು 5 ಶತಮಾನಗಳು ಉರುಳಿವೆ. ತೂಬಗೆರೆ ಮತ್ತು ಕಲ್ಲುಕೋಟೆಯಲ್ಲಿ ಮಾತ್ರ ಈಗ ಈ ಹಬ್ಬ ನಡೆದುಕೊಂಡು ಬರುತ್ತಿದೆ. ಇದನ್ನು ಮಾಡುವುದಕ್ಕೆ ಪುರಾಣದಲ್ಲಿ ಬಹುದೊಡ್ಡ ಕಥೆಯಿದೆ. ಭೂತಾರಾಧನೆಯ ಪ್ರಮುಖ ಸೂತ್ರಧಾರಿಗಳಾದ ಕೆಂಚಣ್ಣ ಮತ್ತು ಕರಿಯಣ್ಣ ಈ ಭಾಗದ ಜನಪದ ಕಥಾನಾಯಕರು. ವಿಷ್ಣುವಿನ ಪರಮ ಭಕ್ತರು ಕೂಡ. ವೈಕುಂಠದಲ್ಲಿ ಜಯ-ವಿಜಯರಾಗಿದ್ದವರು ಮುಂದಿನ ಜನ್ಮಗಳಲ್ಲಿ ರಾಕ್ಷಸಾವತಾರವನ್ನು ಅವಾಹಿಸುವ ವೇಳೆ ಮೂರನೇ ಜನ್ಮದಲ್ಲಿ ಕೆಂಚಣ್ಣ- ಕರಿಯಣ್ಣರಾಗಿ ಅವತಾರವೆತ್ತುತ್ತಾರೆ. ಅವರನ್ನು ಆರಾಧಿಸಿ- ತೃಪ್ತಿಪಡಿಸಿ ಅವರ ರಕ್ಕಸ ಜನ್ಮದಿಂದ ಮತ್ತೆ ವೈಕುಂಠಕ್ಕೆ ಮರಳಲು ಶ್ರೀಸ್ವಾಮಿಯ ಅನುಮತಿ ಅವಶ್ಯಕವಿರುತ್ತದೆ. ಹೀಗಾಗಿ ಅಲ್ಲಿ ನರಸಿಂಹಸ್ವಾಮಿ ಮತ್ತು ವೆಂಕಟರಮಣಸ್ವಾಮಿಯ ಆರಾಧನೆ ನಡೆಯುತ್ತದೆ ಎನ್ನುತ್ತಾರೆ.
ಹೇಗೆ ನಡೆಯುತ್ತದೆ?: ತೂಬಗೆರೆಯ ಊರಾಚೆಯಲ್ಲಿರುವ ನರಸಿಂಹಸ್ವಾಮಿ ದೇವಾಲಯದಲ್ಲಿ ಭೂತಾವೇಶಕ್ಕೊಳಪಡಿಸುವ ಪ್ರಕ್ರಿಯೆ ನಡೆಯುತ್ತದೆ. ಪೂಜಾರಿಗಳು ಗಂಟೆಗಟ್ಟಲೆ ಮಂತ್ರ ಪಠಿಸುವ ಮೂಲಕ ಭೂತ ಆವಾಹಿಸುತ್ತಾರೆ. ಭೂತವೇಷಧಾರಿಗಳ ಕೈಯಲ್ಲಿ ಭೂತದ ಮುಖ ಹೋಲುವ ನೆರಿಗೆ(ಮರದ ಹರಿವಾಣ) ಮತ್ತೊಂದು ಕೈಯಲ್ಲಿ ಆಯುಧ ಇರುತ್ತದೆ. ಭೂತಧಾರಿಗಳು ಆವೇಶಕ್ಕೊಳಗಾದಂತೆಲ್ಲಾ ಅವರ ಬಾಯಿಗೆ ಹಲಸು- ಬಾಳೆಹಣ್ಣಿನಿಂದ ಮಾಡಿದ ರಸಾಯನ ನೀಡಲಾಗುತ್ತದೆ. ಒಂದೊಂದು ಭೂತಗಳೂ ಬಕೀಟುಗಟ್ಟಲೆ ರಸಾಯನ ಭಕ್ತಿಸುತ್ತವೆ.
ಕೆಲವೊಮ್ಮೆ ಕೋಳಿಗಳನ್ನು ಸಿಗಿಯುವ ಕೆಲಸದಲ್ಲಿ ಭೂತಾವೇಶ ಆರ್ಭಟಿಸುತ್ತದೆ. ರಕ್ತತರ್ಪಣ ಕೂಡ ಭೂತಗಳು ಬಯಸುತ್ತವೆ. ಜೊತೆಗೆ ಭೂತಗಳು ಮನೆಗೆ ಬಂದವೆಂದರೆ ಎಲ್ಲ ಕೆಡುಕುಗಳೂ ಕಳೆಯುತ್ತವೆ. ಒಳ್ಳೆಯದಾಗುತ್ತದೆ ಎಂಬ ಪ್ರತೀತಿ ಇಲ್ಲಿನ ಜನರಲ್ಲಿದೆ. ಹೀಗಾಗಿ ಹಲವರು ಮನೆಗೆ ಆಮಂತ್ರಿಸಿ ಆರಾಧಿಸುತ್ತಾರೆ.
ಕೊನೆಗೆ ಊರೆಲ್ಲಾ ತಿರುಗಾಡುವ ಭೂತಗಳು ವೆಂಕಟರಮಣಸ್ವಾಮಿ ದೇವಾಲಯಕ್ಕೆ ತೆರಳಿ ಶಾಂತವಾಗುತ್ತವೆ. ಅಲ್ಲಿ ಮಂಗಳಾರತಿ ನಡೆದು ಭೂತಾವೇಷ ಕೊನೆಗೊಳ್ಳುತ್ತದೆ.
ಈ ಆಚರಣೆಯಿಂದ ಊರಿಗೆ ಒಳ್ಳೆಯದಾಗುತ್ತದೆ. ಸಾಂಕ್ರಾಮಿಕ ರೋಗಗಳು, ಕೆಡುಕುಗಳಿಂದ ಗ್ರಾಮ ಮುಕ್ತವಾಗುತ್ತದೆ. ಅತಿಮಾನುಷಶಕ್ತಿಯ ಪ್ರಯೋಗಗಳಿಂದ ಮುಕ್ತಿ ದೊರೆಯುತ್ತದೆ ಎಂಬ ಪ್ರತೀತಿಯಿದೆ. ಈ ಬಾರಿ ಕೂಡ ಎಂದಿನಂತೆ ವಿಜೃಂಭಣೆಯಿಂದ ಭೂತನೆರಿಗೆ ನಡೆಯಿತು. ಸಾವಿರಾರು ಭಕ್ತಾದಿಗಳು ಭಾಗವಹಿಸಿದ್ದರು. ಪೂಜಾರಿಗಳು, ಭೂತವೇಷಧಾರಿ ವೆಂಕಟೇಶ್ ಮತ್ತು ವೆಂಕಟರಮಣಪ್ಪ, ಆನಂದ್ ಪೂಜಾ ವಿಧಿವಿಧಾನಗಳ ನೇತೃತ್ವ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

