ಬೆಂಗಳೂರು ಗ್ರಾಮಾಂತರ

ಹಣ ವರ್ಗಾವಣೆ ಖಾತೆ ವಿವರ ಪತ್ತೆ

Published On :

-ಮತ್ತೀಕೆರೆ ಜಯರಾಮ್/ ಕೆ.ಎನ್.ರವಿ
ರಾಮನಗರ/ಮಂಡ್ಯ:
ಮುಡಾ ಮತ್ತು ರಾ-ಚ ಪ್ರಾಧಿಕಾರದ ಬಹುಕೋಟಿ ಹಗರಣ ಸಂಬಂಧ ಜಂಟಿ ಕಾರ್ಯಾಚರಣೆಯಲ್ಲಿ ತೊಡಗಿರುವ ಉಭಯ ಜಿಲ್ಲೆ ಪೊಲೀಸರು ವಶಪಡಿಸಿಕೊಂಡಿರುವ ಬಂಡಿಗಟ್ಟಲೆ ಕಡತಗಳ ಪರಿಶೀಲನೆಯಲ್ಲಿ ನಿರತರಾಗಿದ್ದಾರೆ.
ಹಗರಣ ನಡೆದಿರೋದು ಮಂಡ್ಯದ ಬ್ಯಾಂಕುಗಳಲ್ಲೇ. ವಂಚಕರ ಜಾಲವೂ ಬಹುಪಾಲು ಅಲ್ಲಿಯದೇ. ಹೀಗಾಗಿ ಮಂಡ್ಯದ ಪೊಲೀಸ್ ಭವನದಲ್ಲಿ ಅಲ್ಲಿನ ಡಿವೈಎಸ್ಪಿ ಶೋಭಾ ರಾಣಿ ಮತ್ತು ರಾಮನಗರ ಡಿವೈಎಸ್ಪಿ ರಾಮಲಿಂಗಪ್ಪ ನೇತೃತ್ವದ ತನಿಕಾಧಿಕಾರಿಗಳು ಕಡತ ಯಜ್ಞದಲ್ಲಿ ತೊಡಗಿದ್ದಾರೆ.
ಎರಡೂ ಪ್ರಾಧಿಕಾರಗಳು, ವ್ಯವಹಾರಕ್ಕೆ ಬಳಸಿಕೊಂಡ ನಾನಾ ಬ್ಯಾಂಕುಗಳಿಂದ ವಶಪಡಿಸಿಕೊಂಡ ದಾಖಲೆಗಳನ್ನು ಪೊಲೀಸರು ಅತ್ಯಂತ ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದಾರೆ. ಈಗ ಬೆಳಕಿಗೆ ಬಂದಿರುವ ಹಗರಣವಷ್ಟೇ ಅಲ್ಲದೆ ಅದಕ್ಕೂ ಹಿಂದಿನ ವರ್ಷಗಳಲ್ಲಿ ಆರೋಪಿಗಳು ಎಸಗಿದ್ದಾರೆ ಎನ್ನಲಾದ ಅವ್ಯವಹಾರದ ಮೇಲೂ ತನಿಖೆ ನಡೆಯುತ್ತಿದೆ.
ಖಾತೆದಾರರ ವಿಚಾರಣೆ: ಮಹತ್ವದ ಬೆಳವಣಿಗೆಯೊಂದರಲ್ಲಿ ಕೆಬ್ಬಳ್ಳಿ ಆನಂದ ಮತ್ತು ಸಹಚರರಿಂದ ಹಣ ವರ್ಗಾವಣೆಯಾದ ಖಾತೆಗಳ ವಿವರ ಈಗಾಗಲೇ ಲಭ್ಯವಾಗಿದೆ. ಆ ಖಾತೆದಾರರ ಪೈಕಿ ಹಲವರನ್ನು ಜಂಟಿ ತನಿಖಾ ತಂಡ ನಿರಂತರ ವಿಚಾರಣೆಗೆ ಒಳಪಡಿಸಿದೆ.
ವಂಚಕರ ಜಾಲದಿಂದ ಯಾವ ಕಾರಣಕ್ಕಾಗಿ ಹಣ ಬಂದಿದೆ ಎಂದು ವಿವರಣೆ ಪಡೆಯಲಾಗುತ್ತಿದೆ. ಈ ಪೈಕಿ ಕೆಲವರು ಸ್ಥಿರ ಮತ್ತು ಚರಾಸ್ತಿಗಳ ಭೋಗ್ಯ, ಕ್ರಯ, ಕ್ರಯದ ಕರಾರು ಕಾರಣಕ್ಕೆ ಕೆಬ್ಬಳ್ಳಿ ಆನಂದ್ ಹಾಗೂ ಸಹಚರರಿಂದ ಹಣ ಪಡೆದಿರುವುದಕ್ಕೆ ದಾಖಲೆ ಒದಗಿಸಿದ್ದಾರೆ.
ಇದರೊಂದಿಗೆ ವಂಚಕರ ಜಾಲವು ಲಪಟಾಯಿಸಿರುವ ಹಣದಲ್ಲಿ ರಿಯಲ್ ಎಸ್ಟೇಟ್ ಉದ್ಯಮಕ್ಕೂ ಭಾರಿ ಮೊತ್ತವನ್ನು ಹೂಡಿಕೆ ಮಾಡಿದೆ ಎನ್ನುವ ಅಂಶ ಸ್ಪಷ್ಟವಾಗಿದೆ. ದೇಣಿಗೆ, ಕಿಕ್ಬ್ಯಾಕ್, ಲಂಚ ರುಷುವತ್ತು ನೀಡಿಕೆಯ ಸಾಕಷ್ಟು ಸಂಗತಿ ತನಿಖೆಯಲ್ಲಿ ಬಯಲಾಗಿದೆ.
ಇನ್ನಷ್ಟು ಅವ್ಯಹಾರ: ವಂಚಕರ ಜಾಲವು ಬ್ಯಾಂಕಿಂಗ್ ಸಂಸ್ಥೆಗಳಲ್ಲಿ ಹಣ ಲಪಟಾಯಿಸಿದ್ದಷ್ಟೇ ಅಲ್ಲದೆ, ಗಣಿ, ರಿಯಲ್ ಎಸ್ಟೇಟ್ ಸಹಿತ ವಿವಿಧ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದೆ. ಅಲ್ಲಿ ತಪ್ಪೆಸಗಿರುವ ಅಂಶಗಳನ್ನು ಪೊಲೀಸ್ ಕಸ್ಟಡಿಯಲ್ಲಿರುವ ಆರೋಪಿಗಳು ಬಹಿರಂಗಪಡಿಸಿದ್ದಾರೆ.
ಬಳ್ಳಾರಿಯ ಅದಿರು ಅವ್ಯವಹಾರದಲ್ಲೂ ಇದೇ ಜಾಲದ ರೂವಾರಿ ಕೈ ಚಳಕ ತೋರಿದ್ದಾರೆ.
ಮಾಡಿರುವ ದುಡ್ಡನ್ನು ಮಾರಿಷಸ್, ಮಲೇಷ್ಯಾ ಸಹಿತ ಬೇರೆಡೆ ಹೂಡಿಕೆ ಮಾಡಲಾಗಿದೆ. ಹೈದ್ರಾಬಾದ್ ಮತ್ತು ಬೆಂಗಳೂರಿನಲ್ಲಿ ಜಾಲದ ವ್ಯವಹಾರ ಸಾಕಷ್ಟಿದೆ.
ಹಗರಣದ ತನಿಖೆ ತೀವ್ರಗೊಳ್ಳುತ್ತಿದ್ದಂತೆಯೇ ಉಭಯ ಪ್ರಾಧಿಕಾರಗಳ ಕಚೇರಿಗಳಲ್ಲಿ ನೀರವ ಮೌನ ಆವರಿಸಿದೆ. ಖಾತೆ ಬದಲಾವಣೆ, ಕರ ವಸೂಲಾತಿಯೂ ಸಹಿತ ಬಹುತೇಕ ವ್ಯವಹಾರಗಳು ಸ್ಥಗಿತಗೊಂಡಿವೆ. ನಾಮ್ಕೇ ವಾಸ್ತೆಗಷ್ಟೇ ಕಚೇರಿ ಬಾಗಿಲು ತೆರೆದಿದೆ.
ಕಸ್ಟಡಿ ನಾಳೆ ಅಂತ್ಯ: ಮುಡಾ ಆಯುಕ್ತ ಡಾ.ಶಿವರಾಮ್ ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದಾರೆ. ವಂಚಕರ ಜಾಲದ ರೂವಾರಿ ಕೆಬ್ಬಳ್ಳಿ ಆನಂದ್, ನಾಗಲಿಂಗಸ್ವಾಮಿ ಪೊಲೀಸ್ ಕಸ್ಟಡಿ ಅವಧಿ ಮುಗಿಯುವ ಹಿನ್ನೆಲೆಯಲ್ಲಿ ಅವರನ್ನು ಮಂಗಳವಾರ(ಜು.23) ನ್ಯಾಯಾಲಯಕ್ಕೆ ಮಂಡ್ಯ ಪೊಲೀಸರು ಹಾಜರುಪಡಿಸಲಿದ್ದಾರೆ.
ಆರೋಪಿಗಳನ್ನು ತಮ್ಮ ಕಸ್ಟಡಿಗೆ ಒಪ್ಪಿಸುವಂತೆ ಅದೇ ವೇಳೆ ರಾಮನಗರ ಪೊಲೀಸರು ಮಂಡ್ಯ ನ್ಯಾಯಾಲಯಕ್ಕೆ ಕೋರಿಕೆ ಸಲ್ಲಿಸುದು ಖಚಿತವಾಗಿದೆ. ರಾ- ಚ ಪ್ರಾಧಿಕಾರದ ಆಯುಕ್ತ ಚಿದಾನಂದ, ವಂಚಕರ ಜಾಲದ ಸದಸ್ಯ ಶೇಖರ ಈಗಾಗಲೇ ರಾಮನಗರ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.
ಕೈ ತಲುಪದ ಆದೇಶ: ಬಹುಕೋಟಿ ಹಗರಣದಲ್ಲಿ ಸಿಕ್ಕಿಬಿದ್ದಿರುವ ರಾ- ಚ ಪ್ರಾಧಿಕಾರದ ಆಯುಕ್ತ ಚಿದಾನಂದ ಅವರು ಪೊಲೀಸ್ ಕಸ್ಟಡಿಗೆ ಒಳಪಟ್ಟು 3 ದಿನ ಕಳೆದಿದೆ. ಅವರ ಅಮಾನತಿಗೆ ಜಿಲ್ಲಾಧಿಕಾರಿ ಸರ್ಕಾರಕ್ಕೆ ಶಿಫಾರಸು ಪತ್ರವನ್ನೂ ರವಾನಿಸಿದ್ದಾರೆ. ಅಮಾನತು ಆದೇಶ ಈವರೆಗೆ ಜಿಲ್ಲಾಡಳಿತಕ್ಕೆ ತಲುಪಿಲ್ಲ.
ಜಿಲ್ಲಾಧಿಕಾರಿ ವಿ. ಶ್ರೀರಾಮರೆಡ್ಡಿ ಅವರು ರಾ- ಚ ಪ್ರಾಧಿಕಾರಕ್ಕೆ ತಾತ್ಕಾಲಿಕ ಆಯುಕ್ತರನ್ನಾಗಿ ವಿಶೇಷ ಭೂಸ್ವಾಧೀನ ಅಧಿಕಾರಿ ಜಯಮಾಧವ ಅವರನ್ನು ಮೊನ್ನೆಯೇ ನೇಮಿಸಿದ್ದು, ಜಯಮಾಧವ ಅವರು ಸೋಮವಾರವಷ್ಟೇ ಅಧಿಕಾರ ಸ್ವೀಕರಿಸಿದ್ದಾರೆ.

ಮುಡಾ ಮತ್ತು ರಾ- ಚ ಪ್ರಾಧಿಕಾರದ ಹಗರಣ ಸಂಬಂಧ ಪ್ರಾಧಿಕಾರಗಳು, ಬ್ಯಾಂಕುಗಳಿಂದ ವಶಪಡಿಸಿಕೊಳ್ಳಲಾಗಿರುವ ಕಡತಗಳ ಪರಿಶೀಲನೆ ಮುಂದುವರಿದಿದೆ. ಮಂಡ್ಯ ಪೊಲೀಸರ ಕಸ್ಟಡಿಯಲ್ಲಿರುವ ಆರೋಪಿಗಳನ್ನು ವಶಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ಕೋರಿಕೆ ಸಲ್ಲಿಸಲಾಗುವುದು.
 ಅನುಪಮ್ ಅಗ್ರವಾಲ್, ಎಸ್ಪಿ, ರಾಮನಗರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.